ಆಸ್ತಿ ತೆರಿಗೆ ಪರಿಷ್ಕರಣೆ ಪ್ರಸ್ತಾವ ಮತ್ತೆ ಮುನ್ನೆಲೆಗೆ ?

ಬುಧವಾರ, ಜೂನ್ 19, 2019
28 °C
ಜೂನ್‌ ತಿಂಗಳ ಕೌನ್ಸಿಲ್‌ ಸಭೆಯಲ್ಲಿ ಚರ್ಚೆ ಸಾಧ್ಯತೆ

ಆಸ್ತಿ ತೆರಿಗೆ ಪರಿಷ್ಕರಣೆ ಪ್ರಸ್ತಾವ ಮತ್ತೆ ಮುನ್ನೆಲೆಗೆ ?

Published:
Updated:

ಬೆಂಗಳೂರು: ನಗರದಲ್ಲಿ ಆಸ್ತಿ ತೆರಿಗೆಯನ್ನು ಪರಿಷ್ಕರಿಸುವ ಪ್ರಸ್ತಾವ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಮತ್ತೆ ಮುನ್ನಲೆಗೆ ಬಂದಿದೆ.

ಜೂನ್‌ ತಿಂಗಳ ಬಿಬಿಎಂಪಿ ಕೌನ್ಸಿಲ್‌ ಸಭೆಯ ಕಾರ್ಯಸೂಚಿಯಲ್ಲಿ ಈ ವಿಚಾರ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

1976ರ ಕೆಎಂಸಿ ಕಾಯ್ದೆ ಹಾಗೂ ಅದರಡಿ ರಚಿಸಲಾದ ನಿಯಮಾವಳಿಗಳ ಪ್ರಕಾರ ಆಸ್ತಿ ತೆರಿಗೆಯನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಚಾಲ್ತಿಯಲ್ಲಿರುವ ಪ್ರದೇಶವಾರು ಯೂನಿಟ್‌ ದರಗಳ ಮೇಲೆ ಕನಿಷ್ಠ ಶೇ 15ರಷ್ಟು ಹಾಗೂ ಗರಿಷ್ಠ ಶೇ 30ರಷ್ಟು ಹೆಚ್ಚಳ ಮಾಡಲು ಅವಕಾಶ ಇದೆ. ಈ ಹಿಂದೆ 2016ರ ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ತೆರಿಗೆ ಪರಿಷ್ಕರಣೆ ಮಾಡಲಾಗಿತ್ತು. ಆಗ ವಸತಿ ಸ್ವತ್ತುಗಳಿಗೆ ಹಿಂದಿನ ದರಕ್ಕಿಂತ ಶೇ 15ರಷ್ಟು ಹಾಗೂ ವಸತಿಯೇತರ ಸ್ವತ್ತುಗಳಿಗೆ ಶೇ 30ರಷ್ಟು ತೆರಿಗೆ ಹೆಚ್ಚಿಸಲಾಗಿತ್ತು. ಆ ಬಳಿಕ ತೆರಿಗೆ ಬದಲಾಗಿಲ್ಲ.

ಬಿಬಿಎಂಪಿಯು 2019–20ನೇ ಸಾಲಿನಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆ ಪರಿಷ್ಕರಿಸುವ ಕುರಿತು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು 2018ರ ನವೆಂಬರ್‌ನಲ್ಲಿ ಟಿಪ್ಪಣಿ ಸಿದ್ಧಪಡಿಸಿದ್ದರು. ವಸತಿ ಸ್ವತ್ತುಗಳಿಗೆ ಶೇ 25ರಷ್ಟು ಹಾಗೂ ವಸತಿಯೇತರ ಸ್ವತ್ತುಗಳಿಗೆ ಶೇ 30ರಷ್ಟು ಹೆಚ್ಚಿಸುವ ಕುರಿತು ಪ್ರಸ್ತಾಪಿಸಿದ್ದರು. ಆಗಿನ್ನೂ ಹಣಕಾಸು ಮತ್ತು ಆರ್ಥಿಕ ಸ್ಥಾಯಿ ಸಮಿತಿ ರಚನೆ ಆಗಿರಲಿಲ್ಲ. ಕೌನ್ಸಿಲ್‌ ಸಭೆಯಲ್ಲೂ ಈ ವಿಚಾರ ಚರ್ಚೆಗೆ ಬಂದಿರಲಿಲ್ಲ

‘ತೆರಿಗೆ ಪರಿಷ್ಕರಣೆ ಪ್ರಸ್ತಾವವನ್ನು ನಾವು ಈ ಹಿಂದೆಯೇ ಸಿದ್ಧಪಡಿಸಿದ್ದೇವೆ. ಆ ಬಳಿಕ ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಗೆ ಬಂತು. ಹಾಗಾಗಿ ಈ ಪ್ರಸ್ತಾವ ಕೌನ್ಸಿಲ್‌ನಲ್ಲಿ ಚರ್ಚೆ ಆಗಿರಲಿಲ್ಲ. ಹಾಗಾಗಿ ಮುಂದಿನ ಕೌನ್ಸಿಲ್‌ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಲೂಬಹುದು’ ಎಂದು ಆಯುಕ್ತರು ‘ಪ್ರಜಾವಾಣಿ’ಗೆ ತಿಳಿಸಿದರು.

ತೆರಿಗೆ ಪರಿಷ್ಕರಣೆ ಪ್ರಸ್ತಾಪಕ್ಕೆ ಕೌನ್ಸಿಲ್‌ ಅನುಮೋದನೆ ಸಿಗಬೇಕು. ಬಳಿಕ ಆ ನಿರ್ಣಯಕ್ಕೆ ನಗರಾಭಿವೃದ್ಧಿ ಇಲಾಖೆಯ ಅನುಮೋದನೆ ಪಡೆಯಬೇಕಾಗುತ್ತದೆ. ಆ ಬಳಿಕವಷ್ಟೇ ಪರಿಷ್ಕೃತ ತೆರಿಗೆ ದರ ಜಾರಿಗೆ ಬರಲಿದೆ. 

‘ತೆರಿಗೆ ಪರಿಷ್ಕರಣೆ ಬಗ್ಗೆ ಸದ್ಯಕ್ಕಂತೂ ನನ್ನ ಬಳಿ ಅಧಿಕಾರಿಗಳು ಯಾರೂ ಚರ್ಚಿಸಿಲ್ಲ. ಅಧಿಕಾರಿಗಳ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆದಿರಬಹುದು. ಈ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಮೇಯರ್‌ ಗಂಗಾಂಬಿಕೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಆರ್ಥಿಕ ವರ್ಷದಲ್ಲಿ ಈಗಾಗಲೇ ಎರಡು ತಿಂಗಳು ತೆರಿಗೆ ಕಟ್ಟಿಸಿಕೊಂಡಿದ್ದೇವೆ. ಏಪ್ರಿಲ್‌ ತಿಂಗಳಿನಲ್ಲಿ ತೆರಿಗೆ ಕಟ್ಟಿದವರಿಗೆ ಶೇ 5ರಷ್ಟು ರಿಯಾಯಿತಿ ಕೂಡಾ ನೀಡಿದ್ದೇವೆ. ಈ ಹಂತದಲ್ಲಿ ತೆರಿಗೆ ಪರಿಷ್ಕರಣೆ ಮಾಡುವುದು ಸೂಕ್ತ ಅಲ್ಲ ಎಂಬುದು ನನ್ನ ಅಭಿಪ್ರಾಯ’ ಎಂದರು.

ಬಿಬಿಎಂಪಿಯ 2019–20ನೇ ಸಾಲಿನಲ್ಲಿ ₹ 12,958 ಕೋಟಿ ಗಾತ್ರದ ಬಜೆಟ್‌ಗೆ ಅನುಮೋದನೆ ನೀಡಿತ್ತು. ಆದರೆ, ನಗರಾಭಿವೃದ್ಧಿ ಇಲಾಖೆ ಬಜೆಟ್‌ ಗಾತ್ರವನ್ನು ₹ 11,648.90 ಕೋಟಿಗೆ ಮಿತಗೊಳಿಸಿತ್ತು.

ಮೊದಲೇ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಣ ಹೊಂದಿಸುವುದು ಸುಲಭದ ಮಾತಲ್ಲ. ಸದ್ಯದ ಸ್ಥಿತಿಯಲ್ಲಿ ತೆರಿಗೆ ಸಂಗ್ರಹ ಗುರಿ ತಲುಪುವುದೂ ಅನುಮಾನ. ಪೂರ್ಣಗೊಂಡ ಅನೇಕ ಕಾಮಗಾರಿಗಳಿಗೆ ಸಂಬಂಧಿಸಿ ಗುತ್ತಿಗೆದಾರರಿಗೆ ಹಣ ಪಾವತಿಯೂ ಬಾಕಿ ಇದೆ. ಹಾಗಾಗಿ ತೆರಿಗೆ ಪರಿಷ್ಕರಣೆ ಅನಿವಾರ್ಯ ಎಂಬ ಸ್ಥಿತಿಯಲ್ಲಿ ಪಾಲಿಕೆ ಇದೆ.

‘ಆರ್ಥಿಕ ವರ್ಷದ ಮಧ್ಯದಲ್ಲಿ ತೆರಿಗೆ ಪರಿಷ್ಕರಣೆ ಮಾಡಬಾರದು ಎಂದೇನೂ ಇಲ್ಲ. ಈಗಾಗಲೇ ತೆರಿಗೆ ಕಟ್ಟಿದವರಿಂದ ಹೆಚ್ಚುವರಿ ತೆರಿಗೆಯನ್ನು ಮುಂದಿನ ವರ್ಷ ಕಟ್ಟಿಸಿಕೊಳ್ಳಬಹುದು. ಆದರೆ, 2020ರಲ್ಲಿ ಪಾಲಿಕೆ ಚುನಾವಣೆ ಎದುರಿಸಬೇಕಾಗಿರುವುದರಿಂದ ತೆರಿಗೆ ಪರಿಷ್ಕರಣೆಗೆ ಯಾವ ಪಕ್ಷಗಳೂ ಒಪ್ಪಿಗೆ ನೀಡಲಾರವು’ ಎಂದು ಆಡಳಿತ ಪಕ್ಷದ ಪ್ರಮುಖರೊಬ್ಬರು ತಿಳಿಸಿದರು.

–0–

ತೆರಿಗೆ ಪರಿಷ್ಕರಣೆ ಬಗ್ಗೆ ಎಲ್ಲ ಪಕ್ಷಗಳು ಒಮ್ಮತದ ತೀರ್ಮಾನ ಕೈಗೊಂಡರೆ ಅದನ್ನು ಜಾರಿಗೊಳಿಸಲು ನನ್ನ ಆಕ್ಷೇಪ ಇಲ್ಲ. ಆರ್ಥಿಕ ವರ್ಷದ ಆರಂಭದಿಂದಲೇ ತೆರಿಗೆ ಪರಿಷ್ಕರಣೆ ಜಾರಿಯಾದರೆ ಒಳ್ಳೆಯದು
- ಗಂಗಾಂಬಿಕೆ, ಮೇಯರ್‌

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !