ಬುಧವಾರ, ಮೇ 12, 2021
27 °C
ಟ್ಯಾಕ್ಸಿ ವಹಿವಾಟಿನಲ್ಲಿ ಇಳಿಮುಖ, ಆ್ಯಪ್‌ ಆಧರಿತ ಕಂಪನಿಗಳ ಪ್ರಾಬಲ್ಯ

ಏರುಮುಖದ ಬಳಿಕ ಪಾತಾಳಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ನಗರದಲ್ಲಿ ಎರಡು ವರ್ಷಗಳ ಕಾಲ ಏರುಮುಖದ ಲ್ಲಿದ್ದ ಟ್ಯಾಕ್ಸಿಗಳ ನೋಂದಣಿ ಏಕಾಏಕಿ ಇಳಿಮುಖವಾಗಿದೆ.

ಟ್ಯಾಕ್ಸಿ ವಹಿವಾಟಿನಲ್ಲಿ ಆದಾಯ ತೀರಾ ಇಳಿಮುಖವಾಗಿರುವುದು, ಅಗ್ಗದ ದರದಲ್ಲಿ ಆ್ಯಪ್‌ ಆಧರಿತ (ಓಲಾ, ಉಬರ್‌) ಟ್ಯಾಕ್ಸಿಗಳು ಪ್ರಯಾಣಿಕರಿಗೆ ಸಿಗುತ್ತಿರುವುದು ಇತರ ಟ್ಯಾಕ್ಸಿ ಮಾಲೀಕರ ಆದಾಯಕ್ಕೆ ತೀರಾ ಹೊಡೆತ ನೀಡಿದೆ. ಹೀಗಾಗಿ ನಿಧಾನಗತಿಯಲ್ಲಿ ಅವರು ಈ ವಹಿವಾಟಿನಿಂದ ಹಿಂದಕ್ಕೆ ಸರಿಯುತ್ತಿದ್ದಾರೆ.

‘ಟ್ಯಾಕ್ಸಿ ಮಾರುಕಟ್ಟೆಯನ್ನು ಆ್ಯಪ್‌ ಆಧರಿತ ಕಂಪನಿಗಳು ಆಳುತ್ತಿವೆ. ನಮಗೆ ಅವರು ವಿಧಿಸುವ ಬಾಡಿಗೆ ದರ ಹೊಂದಾಣಿಕೆ ಆಗುತ್ತಿಲ್ಲ. ಆದರೆ, ಜನರು ಅವುಗಳನ್ನೇ ಆಯ್ಕೆ ಮಾಡುತ್ತಿದ್ದಾರೆ. ಹೆಚ್ಚಿರುವ ವಾಹನ ದಟ್ಟಣೆ, ನಿರ್ವಹಣಾ ವೆಚ್ಚ, ಇಂಧನ ದರದಿಂದ ವಾಹನ ನಿರ್ವಹಿಸಲಾಗದೆ ಹಿಂದಕ್ಕೆ ಸರಿಯಲೇಬೇಕಾಗಿದೆ’ ಎಂದು ಟ್ಯಾಕ್ಸಿ ಮಾಲೀಕರ ಯೂನಿಯನ್‌ ಅಧ್ಯಕ್ಷ ತನ್ವೀರ್‌ ಪಾಷಾ ಹೇಳಿದರು.

‘ನಗರದಲ್ಲಿ ಸುಮಾರು 1.25 ಲಕ್ಷ ಟ್ಯಾಕ್ಸಿಗಳಿದ್ದವು. ಅವು ಈಗ 60 ಸಾವಿರಕ್ಕೆ ಇಳಿದಿವೆ. ಹಲವರು ವಾಹನಗಳನ್ನು ರಸ್ತೆಗಿಳಿಸುತ್ತಿಲ್ಲ. ನಾಲ್ಕರಿಂದ ಐದು ಸಾವಿರ ಟ್ಯಾಕ್ಸಿಗಳು ಸೆಕೆಂಡ್‌ಹ್ಯಾಂಡ್‌ ವಾಹನ ಶೋರೂಂ ಸೇರಿವೆ. ಸುಮಾರು 16 ಸಾವಿರದಷ್ಟು ವಾಹನಗಳನ್ನು ಹಣಕಾಸು ಸಂಸ್ಥೆಗಳು ಜಪ್ತಿ ಮಾಡಿವೆ. ಉಳಿದ ಗಾಡಿಗಳು ಗ್ಯಾರೇಜ್‌ ಸೇರಿವೆ. ಅವುಗಳನ್ನು ದುರಸ್ತಿ ಮಾಡಲಾಗದ ಸ್ಥಿತಿಯಲ್ಲಿ ಮಾಲೀಕರು ಇದ್ದಾರೆ’ ಎಂದರು.

‘ಸಂಚಾರ ದಟ್ಟಣೆ ಗಮನಿಸಿದ ಮಂದಿ ಹೊಸ ಕಾರು ಕೊಳ್ಳಲು ಮುಂದಾಗುವುದಿಲ್ಲ. ಟ್ಯಾಕ್ಸಿ ಆಪರೇಟರ್‌ಗಳಿಗೂ ಜಿಎಸ್‌ಟಿ ಅನ್ವಯಿಸಲು ಕೇಂದ್ರ ಸರ್ಕಾರ ಮುಂದಾಯಿತು. ಮೊದಲೇ ಆದಾಯ ತೆರಿಗೆ ಕಟ್ಟುವ ನಾವು ಜಿಎಸ್ಟಿಯನ್ನೂ ಕಟ್ಟಬೇಕೆಂದರೆ ಹೇಗೆ? ಸ್ವಂತ ಉದ್ಯೋಗ ಮಾಡಿಕೊಂಡು ಅಲ್ಪ ಆದಾಯದಲ್ಲಿ ಬದುಕುವ ಟ್ಯಾಕ್ಸಿ ಚಾಲಕ/ ಮಾಲೀಕರು ಈ ಹೆಚ್ಚುವರಿ ತೆರಿಗೆ ಹೇಗೆ ಭರಿಸಬೇಕು’ ಎಂದು ಅವರು ಪ್ರಶ್ನಿಸಿದರು. 

‘ನೋಟುಗಳ ಅಪಮೌಲ್ಯ ಆದ ಮೇಲೆ ಎಲ್ಲ ವಹಿವಾಟುಗಳು ಇಳಿಮುಖವಾಗಿವೆ. ಅದರ ಪರಿಣಾಮ ವಾಹನ ಮಾರುಕಟ್ಟೆಗೂ ಬಲವಾಗಿ ತಟ್ಟಿದೆ. ಹೀಗಾಗಿ ಹೊಸ ವಾಹನ ಖರೀದಿಗೆ ಯಾರೂ ಮುಂದಾಗುವುದಿಲ್ಲ’ ಎಂದು ಅವರು ಹೇಳಿದರು.

‘ಸ್ವಂತ ಟ್ಯಾಕ್ಸಿ ಕೊಳ್ಳಲು ಆರ್ಥಿಕ ಸಾಮರ್ಥ್ಯ ಇಲ್ಲ. ಇದ್ದರೂ ಈಗಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಉಳಿಗಾಲ ಇಲ್ಲ. ಹೀಗಾಗಿ ಸಂಸ್ಥೆಯ ವಾಹನದಲ್ಲಿ ದುಡಿಯುತ್ತಿದ್ದೇನೆ. ಪ್ರತಿದಿನ 12 ಗಂಟೆ ದುಡಿಯಲೇಬೇಕು. ಪ್ರತಿದಿನ ಸಾವಿರ ರೂಪಾಯಿ ಕಂಪೆನಿಗೆ ಕೊಡಬೇಕು. ಎಲ್ಲವೂ ಸರಿಯಾಗಿದ್ದರೆ (ಗ್ರಾಹಕರ ರೇಟಿಂಗ್‌, ಸಮಯಪಾಲನೆ, ಸೇವಾ ಗುಣಮಟ್ಟ, ಇಂಧನ ಉಳಿತಾಯ) ದಿನಕ್ಕೆ ₹400ರಿಂದ 500ರಷ್ಟು ಮೊತ್ತ ಕೈಗೆ ಬರುತ್ತದೆ. ಕೆಲವೊಮ್ಮೆ ಗಳಿಸಿದ್ದನ್ನೂ ಕಳೆದುಕೊಳ್ಳಬೇಕಾಗುತ್ತದೆ. ಐದು ವರ್ಷಗಳ ಬಳಿಕ ವಾಹನ ನಮ್ಮ ಸ್ವಂತದ್ದಾಗುತ್ತದೆ ಎಂದು ಕಂಪನಿ ಹೇಳುತ್ತದೆ. ಆದರೆ ಅಷ್ಟೇ ಹಳೆಯದೂ ಆಗಿರುತ್ತದೆಯಲ್ಲವೇ’ ಎಂದು ಆ್ಯಪ್‌ ಆಧರಿತ ಟ್ಯಾಕ್ಸಿ ಚಾಲಕ ಹೊಸಕೋಟೆಯ ರಮೇಶ ಹೇಳಿದರು.

‘ಸಾಲ ಮಾಡಿ ವಾಹನ ಕೊಂಡು ಅದರಿಂದ ದುಡಿಮೆ ಮಾಡುವ ದಿನಗಳು ಹೋದವು. ಈಗಿನ ಗಳಿಕೆಯಲ್ಲಿ ಸಾಲದ ಬಡ್ಡಿ ಕಟ್ಟುವುದೂ ಕಷ್ಟ’ ಎಂದು ಚಾಲಕರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು