‘ಟಿಡಿಆರ್‌’: ಶರಣಾದ ಆರೋಪಿಗಳು

ಸೋಮವಾರ, ಜೂನ್ 17, 2019
31 °C

‘ಟಿಡಿಆರ್‌’: ಶರಣಾದ ಆರೋಪಿಗಳು

Published:
Updated:

ಬೆಂಗಳೂರು: ‘ಅಭಿವೃದ್ಧಿ ಹಕ್ಕು ವರ್ಗಾವಣೆ ಪ್ರಕರಣ’ದಲ್ಲಿ (ಟಿಡಿಆರ್‌) ಮಧ್ಯಂತರ ಜಾಮೀನು ಪಡೆದಿರುವ ‘ವಾಲ್‌ಮಾರ್ಕ್‌ ಕಂಪನಿ’ ವ್ಯವಸ್ಥಾಪಕ ನಿರ್ದೇಶಕ ರತನ್‌ ಲಾತ್‌, ನೌಕರ ಅಮಿತ್ ಬೋಳಾರ್‌, ಮಧ್ಯವರ್ತಿಗಳಾದ ಗೌತಮ್‌ ಮತ್ತು ದೀಪಕ್‌ ಕುಮಾರ್‌ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳ ಮುಂದೆ ಶನಿವಾರ ಶರಣಾದರು.

ಜಾಮೀನು ಷರತ್ತುಗಳನ್ನು ಪೂರೈಸಿದ ಬಳಿಕ ಬಿಡುಗಡೆ ಮಾಡಲಾಯಿತು. ಈ ಐವರಿಗೂ ಜಾಮೀನು ನೀಡುವಾಗ ಜೂನ್‌ 3ರ ಒಳಗಾಗಿ ತನಿಖಾಧಿಕಾರಿಗಳ ಮುಂದೆ ಶರಣಾಗುವಂತೆ ಕೋರ್ಟ್‌ ಆದೇಶಿಸಿತ್ತು. ಅದರಂತೆ ನಾಲ್ವರು ಹಾಜರಾದರು. ಮತ್ತೊಬ್ಬ ಆರೋಪಿ ಸುರೇಂದ್ರನಾಥ್‌ ಇನ್ನೂ ಪ್ರಕ್ರಿಯೆಗಳನ್ನು ಪೂರೈಸಬೇಕಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಪ್ರತಿಯೊಬ್ಬರು ₹2 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್‌ ನೀಡಬೇಕು. ಇಬ್ಬರಿಂದ ಅಷ್ಟೇ ಮೊತ್ತದ ಶ್ಯೂರಿಟಿ ಕೊಡಿಸಬೇಕು. ಯಾವುದೇ ವಿಧದಲ್ಲೂ ತನಿಖೆಗೆ ಅಡ್ಡಿಪಡಿಸಬಾರದು. ಸಾಕ್ಷಿಗಳನ್ನು ಬೆದರಿಸುವ ಅಥವಾ ಸಾಕ್ಷ್ಯಗಳನ್ನು ನಾಶಪಡಿಸುವ ಕೃತ್ಯಕ್ಕೆ ಕೈಹಾಕಬಾರದು.

ತನಿಖೆ ಪೂರ್ಣಗೊಂಡು ಸಮಗ್ರ ವರದಿ ಸಿದ್ಧಪಡಿಸುವವರೆಗೂ ಪ್ರತಿ ತಿಂಗಳು ಎರಡನೇ ಮತ್ತು ನಾಲ್ಕನೇ ಸೋಮವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು.

ಪ್ರಕ್ರಿಯೆ ಮುಗಿಯುವವರೆಗೂ ದೇಶ ಬಿಟ್ಟು ಹೊರಗೆ ಹೋಗಬಾರದು ಎಂಬ ಷರತ್ತುಗಳನ್ನು ಕೋರ್ಟ್‌ ಹಾಕಿದೆ.

ವಿಶೇಷ ಲೋಕಾಯುಕ್ತ ಕೋರ್ಟ್‌ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಈ ತಿಂಗಳ 27ರಂದು ಐವರಿಗೂ ಮಧ್ಯಂತರ ಜಾಮೀನು ನೀಡಿದ್ದರು. ರತನ್‌ ಲಾತ್‌ ಹಾಗೂ ಇತರರ ಪರವಾಗಿ ಹಿರಿಯ ವಕೀಲ ಶಶಿಕಿರಣ್‌ ಶೆಟ್ಟಿ ಹಾಜರಾಗಿದ್ದರು.

ಪ್ರಕರಣವೇನು?: ಭಟ್ಟರಹಳ್ಳಿ ಮತ್ತು ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆಗೆ ಬಿಬಿಎಂಪಿ ವಶಪಡಿಸಿಕೊಂಡಿದ್ದ ಕವಡೇನಹಳ್ಳಿ ಜಮೀನೊಂದಕ್ಕೆ ನೀಡಿರುವ ಟಿಡಿಆರ್‌ ವರ್ಗಾವಣೆ ಪ್ರಕರಣದಲ್ಲಿ ಐವರೂ ಭಾಗಿಯಾಗಿದ್ದಾರೆ ಎಂದು ಎಸಿಬಿ ಎಫ್‌ಐಆರ್‌ ದಾಖಲಿಸಿದೆ.

ಮುಂದುವರಿದ ವಿಚಾರಣೆ
ಟಿಡಿಆರ್‌ ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಎಸಿಬಿ ಅಧಿಕಾರಿಗಳು ಶುಕ್ರವಾರದಿಂದ ಎರಡನೇ ಸಲ ಕಬ್ಬನ್‌ ಪೇಟೆಯ ಬನಶಂಕರಿ ಮಹಿಳಾ ಸಹಕಾರಿ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸುತ್ತಿದ್ದಾರೆ.

ಬಿಬಿಎಂಪಿ ಕೆಲವು ಅಧಿಕಾರಿಗಳು ಹಾಗೂ ಬ್ಯಾಂಕ್‌ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ ಎನ್ನಲಾದ ರಾಜಸ್ಥಾನ ಮೂಲದ ರಾಜೇಶ್‌ ಕುಮಾರ್‌ ಅಲಿಯಾಸ್‌ ರಾಕೇಶ್‌ ಕುಮಾರ್‌ ಕೆಲವರ ಜೊತೆಗೂಡಿ ಸ್ಥಾಪಿಸಿದ್ದಾರೆ ಎನ್ನಲಾದ 174 ಖಾತೆಗಳಲ್ಲಿ ನಡೆದಿರುವ ವಹಿವಾಟನ್ನು ಎಸಿಬಿ ಅಧಿಕಾರಿಗಳು ಜಾಲಾಡಿದರು.

ಒಬ್ಬರ ಹೆಸರಿಗೆ ಬಂದಿರುವ ಚೆಕ್‌ಗಳನ್ನು ಮತ್ತೊಬ್ಬರ ಖಾತೆಗೆ ಜಮಾ ಮಾಡಿ ಹಣ ಪಡೆಯಲಾಗಿದೆ. ಇದು ಹೇಗೆ ಸಾಧ್ಯವಾಯಿತು ಎಂಬ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂಧ ರಾಜೇಶ್‌ ಕುಮಾರ್‌ ಮತ್ತು ಬ್ಯಾಂಕ್‌ ಅಧಿಕಾರಿಗಳನ್ನು ಪ್ರಶ್ನಿಸಲಾಗುತ್ತಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಕೆಲವು ಖಾಸಗಿ ಬ್ಯಾಂಕ್‌ಗಳು ಚೆಕ್‌ಗಳನ್ನು ಈ ಸಹಕಾರಿ ಬ್ಯಾಂಕ್‌ಗೆ ಹಾಕಿ ಹಣ ಡ್ರಾ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. ಎಸಿಬಿ ಐಜಿಪಿ ಚಂದ್ರಶೇಖರ್‌ ಮತ್ತು ಎಸ್‌ಪಿ ಡಾ. ಸಂಜೀವ ಪಾಟೀಲರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ರವಿಕುಮಾರ್‌ ನೇತೃತ್ವದ ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !