ಶುಕ್ರವಾರ, ನವೆಂಬರ್ 15, 2019
27 °C
ಟೀಚರ್ಸ್‌ ಡೇ

‘ಗೂಗಲ್‌ ಟೀಚರ್‌’ ಜಮಾನಾದಲ್ಲಿ...

Published:
Updated:

ದೇಶದ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಗುರುತರ ಹೊಣೆ ಹೊತ್ತ ಶಿಕ್ಷಕರಿಗೆ ನಮನ ಸಲ್ಲಿಸಲು ‘ಶಿಕ್ಷಕರ ದಿನಾಚರಣೆ’ ಒಂದು ನೆಪ ಮಾತ್ರ. ವಿದ್ಯಾರ್ಥಿಗಳನ್ನು ತಿದ್ದಿ, ತೀಡಿ ಜವಾಬ್ದಾರಿಯುತ ನಾಗರಿಕರನ್ನಾಗಿ ಬದಲಾಯಿಸುವ ಶಿಕ್ಷಕ ಸಮುದಾಯ ಎದುರಿಸುತ್ತಿರುವ ಸವಾಲುಗಳು, ಮರೆಯಾಗುತ್ತಿರುವ ಶಿಕ್ಷಕ–ವಿದ್ಯಾರ್ಥಿ ಸಂಬಂಧ, ಬದಲಾಗುತ್ತಿರುವ ಇಂದಿನ ಶಿಕ್ಷಣ ಪದ್ಧತಿ ಕುರಿತು ಶಿಕ್ಷಕರಲ್ಲಿ ಭಿನ್ನ ಅಭಿಪ್ರಾಯಗಳಿವೆ.

ಮೊಬೈಲ್‌ಗಳಲ್ಲಿ ಕಳೆದು ಹೋಗುತ್ತಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ತಂತ್ರಜ್ಞಾನ ಮಾರಕವಾಗುತ್ತಿದೆ. ಇಂದಿನ ದಿನಮಾನಗಳಲ್ಲಿ ಶಿಕ್ಷಕರ ಬದಲು ತಂತ್ರಜ್ಞಾನವೇ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದೆ. ಶಿಕ್ಷಕರ ಪಾತ್ರ ಸೀಮಿತವಾಗುತ್ತಿದೆ ಎಂಬ ಕೊರಗು ಶಿಕ್ಷಕ ಸಮುದಾಯವನ್ನು ಕಾಡುತ್ತಿದೆ. ವಿದ್ಯಾರ್ಥಿಗಳು ತಂತ್ರಜ್ಞಾನದಲ್ಲಿ ಮೇಲುಗೈ ಸಾಧಿಸಿದರೂ ನೈತಿಕ ಶಿಕ್ಷಣದ ಕೊರತೆಯಿಂದ ಅವರಲ್ಲಿ ಮಾನವೀಯ ಮೌಲ್ಯಗಳು ಕಾಣೆಯಾಗುತ್ತಿವೆ ಎನ್ನುವುದು ಶಿಕ್ಷಕರ ಆತಂಕಕ್ಕೆ ಕಾರಣವಾಗಿದೆ.   

ಶಿಕ್ಷಕರ ಸ್ಥಾನ ಆಕ್ರಮಿಸಿಕೊಂಡ ಗೂಗಲ್‌ 

ಹಿಂದಿನ ಕಾಲದ ಶಿಕ್ಷಕರಲ್ಲಿದ್ದ ಶ್ರದ್ಧೆ, ಸಮರ್ಪಣಾ ಮನೋಭಾವ ಇಂದಿನ ಶಿಕ್ಷಕರಲ್ಲಿ ಕಾಣುತ್ತಿಲ್ಲ. ಸಂಬಳಕ್ಕಾಗಿ ಕೆಲಸ ಮಾಡುವ ಶಿಕ್ಷಕ ಸಂಖ್ಯೆಯೇ ಹೆಚ್ಚಾಗುತ್ತಿದೆ. ಹಿಂದಿನ ಶಿಕ್ಷಕರ ಒಳಗೆ ಸದಾ ಶಿಕ್ಷಕ ಜಾಗೃತನಾಗಿರುತ್ತಿದ್ದ. ಅವರಿಗೆ ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ, ಮಮಕಾರ ಇರುತ್ತಿತ್ತು. ಇಂದಿನ ಮೇಷ್ಟ್ರುಗಳಲ್ಲಿ ಅದು ಕಾಣುತ್ತಿಲ್ಲ. ಅದಕ್ಕೆ ಶಿಕ್ಷಕರು ಮಾತ್ರ ಹೊಣೆಯಲ್ಲ. ಇಂದಿನ ಶಿಕ್ಷಣ ಪದ್ಧತಿ, ಶಿಕ್ಷಣದ ವ್ಯಾಪಾರೀಕರಣ, ಶಿಕ್ಷಣ ಸಂಸ್ಥೆ ಮತ್ತು ಸರ್ಕಾರದ ನೀತಿಗಳೂ ಕಾರಣ. ಹಿಂದೆ ಶಿಕ್ಷಣ ರಂಗ ಸೇವಾ ಕ್ಷೇತ್ರ ಎಂಬ ಮನೋಭಾವವಿತ್ತು. ಈಗ ದುಡ್ಡು ಮಾಡುವ ವಾಣಿಜ್ಯ ಉದ್ಯಮವಾಗಿ ಬದಲಾಗಿದೆ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ನಡುವೆ ಹಾಗೂ ಶಿಕ್ಷಕ–ವಿದ್ಯಾರ್ಥಿ ನಡುವೆ ದೊಡ್ಡ ಕಂದಕ ನಿರ್ಮಾಣವಾಗಿದೆ. ಮೊಬೈಲ್‌, ಇಂಟರ್‌ನೆಟ್‌ ಬಂದ ನಂತರ ವಿದ್ಯಾರ್ಥಿಗಳನ್ನು ಸಂಭಾಳಿಸುವುದೇ ದೊಡ್ಡ ಸವಾಲಾಗಿದೆ. ಗೂಗಲ್‌ ಈಗ ಶಿಕ್ಷಕನ ಪಾತ್ರ ನಿರ್ವಹಿಸುತ್ತಿದೆ. ಇದರಿಂದ ಗುರು–ಶಿಷ್ಯ ಪರಂಪರೆ ಮಾಯವಾಗಿದೆ. ಆನ್‌ಲೈನ್‌ ಶಿಕ್ಷಣದಿಂದ ಶಿಕ್ಷಕರ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ. ಮುಂದಿನ ದಿನಗಳಲ್ಲಿ ತರಗತಿಗಳ ಚಿತ್ರಣ ಸಂಪೂರ್ಣ ಬದಲಾಗಲಿದೆ. ರೋಬೊ ಶಿಕ್ಷಕರು ಬರಲಿದ್ದಾರೆ. ಆ ಮೇಲೆ ಮಾನವೀಯ ಸಂಬಂಧ ಕಡಿದು ಹೋಗಲಿದೆ. ಮುಂಬರುವ ಪೀಳಿಗೆಯ ಶಿಕ್ಷಣದಲ್ಲಿ ಮಾನವೀಯ ಸ್ಪರ್ಷ, ನೈತಿಕ ಮೌಲ್ಯಗಳು ಕಳೆದು ಹೋಗಲಿವೆ.

– ಡಾ.ಮಾಥ್ಯೂ ಕೆ.ಎಂ., ಸಹ ಪ್ರಾಧ್ಯಾಪಕರು, ಸೇಂಟ್‌ ಜೋಸೆಫ್‌ ಸಂಜೆ ಕಾಲೇಜು

ಸೇವಾದಾತ ಶಿಕ್ಷಕರು, ಗ್ರಾಹಕ ವಿದ್ಯಾರ್ಥಿಗಳು 

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. ಅದರೊಂದಿಗೆ ಶಿಕ್ಷಕರ ಪಾತ್ರವೂ ಗಣನೀಯವಾಗಿ ಬದಲಾಗುತ್ತಿದೆ. ಗುರು ಕೇಂದ್ರೀತ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿ ಕೇಂದ್ರೀತ ಶಿಕ್ಷಣ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. ಶಿಕ್ಷಣ ವ್ಯಾಪರೀಕರಣದ ನಂತರ ಶಿಕ್ಷಕರು ಸೇವಾದಾತರಾಗಿದ್ದಾರೆ. ವಿದ್ಯಾರ್ಥಿಗಳು ಗ್ರಾಹಕರಾಗುತ್ತಿದ್ದಾರೆ. ಪೈಪೋಟಿಯಿಂದ ಕೂಡಿರುವ ಜಗತ್ತಿನಲ್ಲಿ ತಂತ್ರಜ್ಞಾನ ಮೇಲುಗೈ ಸಾಧಿಸುತ್ತಿದ್ದು ಶಿಕ್ಷಕನ ಪಾತ್ರ ಸೀಮಿತವಾಗುತ್ತಿದೆ. ಹಿಂದೆ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರು ಬಹುಮುಖ್ಯ ಪಾತ್ರ ವಹಿಸುತ್ತಿದ್ದರು. ಈಗ ಗುರು–ಶಿಷ್ಯರ ಸಂಬಂಧ ಕೂಡ ಕಳೆದು ಹೋಗಿದೆ. ಮಕ್ಕಳ ಶಿಕ್ಷಣ, ಭವಿಷ್ಯವನ್ನು ತಂತ್ರಜ್ಞಾನ ನಿರ್ಧರಿಸುತ್ತಿದೆ.

– ಪ್ರೊ.ಮಾಧವಿ ಆರ್‌., ಪ್ರಾಂಶುಪಾಲರು, ಎಂಎಲ್‌ಎ ಕಾಲೇಜು

ಮೇಷ್ಟ್ರುಗಳಲ್ಲಿ ವೃತ್ತಿಪರತೆ ಕೊರತೆ

ಮೇಷ್ಟ್ರು ಆದವರು ಮೊದಲು ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸಗಳಿಸಬೇಕು. ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸಬೇಕು. ಆಕರ್ಷಕವಾಗಿ ಪಾಠ ಮಾಡುವ ಕಲೆ ಸಿದ್ಧಿಸಿಕೊಂಡಾಗ ಯಶಸ್ವಿ ಶಿಕ್ಷಕರಾಗಲು ಸಾಧ್ಯ. ಇಂದಿನ ಶಿಕ್ಷಕರಲ್ಲಿ ವೃತ್ತಿಪರತೆ ಕೊರತೆ ಎದ್ದು ಕಾಣುತ್ತದೆ. ಪಾಠ, ಪ್ರವಚನಗಳಿಗೆ ಪೂರ್ವ ಸಿದ್ಧತೆ ಇರುವುದಿಲ್ಲ. ಸಮಯ ಪ್ರಜ್ಞೆ ಕೊರತೆ, ವಿದ್ಯಾರ್ಥಿಗಳ ಜತೆ ಉತ್ತಮ ಬಾಂಧವ್ಯ ಇಲ್ಲದ ಕಾರಣ ಪವಿತ್ರ ವೃತ್ತಿಗೆ ಕಳಂಕ ತಟ್ಟುತ್ತಿದೆ. ಶಿಕ್ಷಕರ ಮೇಲೆ ಸಮಾಜ ಇಟ್ಟುಕೊಂಡಿದ್ದ ಗೌರವ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಶಿಕ್ಷಕರು ಸ್ಪಂದಿಸಬೇಕು. ಅವರೊಂದಿಗೆ ನಿರಂತರ ಸಮಾಲೋಚನೆ ನಡೆಸಬೇಕು.

– ಪ್ರೊ. ಜಿ. ಅಬ್ದುಲ್‌ ಬಷೀರ್‌, ನಿವೃತ್ತ ಕನ್ನಡ ಉಪನ್ಯಾಸಕರು

ಶಿಕ್ಷಕರು ಮೊದಲು ವಿದ್ಯಾರ್ಥಿಗಳಾಗಿರಬೇಕು

ಶಿಕ್ಷಕರಾದವರು ಮೊದಲು ವಿದ್ಯಾರ್ಥಿಗಳಾಗಿರಬೇಕು. ಜ್ಞಾನಾರ್ಜನೆಗೆ ಒತ್ತು ಕೊಡಬೇಕು. ಕಾಲಕ್ಕೆ ತಕ್ಕಂತೆ ಜ್ಞಾನವನ್ನು ಅಪ್‌ಡೇಟ್‌ ಮಾಡಿಕೊಳ್ಳಬೇಕು. ಶಿಕ್ಷಣ ಕ್ಷೇತ್ರ ಸೇರಿದಂತೆ ನಮ್ಮ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನ, ಬೆಳವಣಿಗೆಗಳ ಬಗ್ಗೆ ಅರಿವು ಇರಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳಿಗೆ ಅದನ್ನು ಸಾಗಿಸುವುದು ಸಾಧ್ಯ. ಇಂದಿನ ಯುವ ಸಮೂಹವನ್ನು ಪ್ರೀತಿ, ಕಳಕಳಿಯಿಂದ ಗೆಲ್ಲಬಹುದು. ಸದಾ ವಿದ್ಯಾರ್ಥಿಗಳು, ಯುವ ಸಮೂಹದ ಜತೆ ಕಾಲ ಕಳೆಯುವುದರಿಂದ ಚೈತನ್ಯ, ಉತ್ಸಾಹದಿಂದ ಕೆಲಸ ಮಾಡುತ್ತೇವೆ. ವಯಸ್ಸು ನಮ್ಮನ್ನು ಬಾಧಿಸುವುದಿಲ್ಲ.

– ಡಾ. ಬೀನಾ ಡಾಲಿಯಾ, ಪ್ರಾಧ್ಯಾಪಕಿ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈಕಾಲಜಿ ಅಂಡ್‌ ರಿಸರ್ಚ್‌

ಸರ್ಕಾರಿ ಶಾಲೆ ಉಳಿಸಿಕೊಳ್ಳಬೇಕಿದೆ

ಸರ್ಕಾರವು ಶಿಕ್ಷಕರನ್ನು ಪಾಠ, ಬೋಧನಾ ಕೆಲಸಗಳಿಗಿಂತ ಅನ್ಯ ಕೆಲಸಗಳಿಗೆ ಹೆಚ್ಚಾಗಿ ನಿಯೋಜಿಸುತ್ತಿದೆ. ಇದರಿಂದ ಸಹಜವಾಗಿ ಶಿಕ್ಷಣ ಗುಣಮಟ್ಟ ಕುಸಿಯುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸದ ಬೋಧಕೇತರ ಕೆಲಸಗಳನ್ನು ಹಚ್ಚುವ ಪ್ರವೃತ್ತಿಯನ್ನು ಸರ್ಕಾರ ಮೊದಲು ಬಿಡಬೇಕು. ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರಿಗೆ ಸಮಾನ ವೇತನ, ಸೇವಾ ಮತ್ತು ಸಾಮಾಜಿಕ ಭದ್ರತೆ ಒದಗಿಸುವ ಜವಾಬ್ದಾರಿ ಸರ್ಕಾರದ ಮುಂದಿದೆ. ಮಕ್ಕಳ ಸಂಖ್ಯೆ ಕುಸಿಯುತ್ತಿರುವ ಕಾರಣ ಮುಚ್ಚುವ ಭೀತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಸರ್ಕಾರಿ ಶಾಲೆಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಕಡಿಮೆಯಾಗುತ್ತಿರುವ ವಿಶ್ವಾಸವನ್ನು ಮರುಸ್ಥಾಪಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕಿದೆ. ಶಿಕ್ಷಣ ಗುಣಮಟ್ಟ ಕುಸಿಯದಂತೆ ಎಚ್ಚರಿಕೆ ವಹಿಸುವ ದೊಡ್ಡ ಜವಾಬ್ದಾರಿ ಕೂಡ ಶಿಕ್ಷಕ ವರ್ಗದ ಮೇಲಿದೆ. ಈ ನಿಟ್ಟಿನಲ್ಲಿ ಸರ್ಕಾರ, ಶಿಕ್ಷಣ ಸಂಸ್ಥೆಗಳು, ಪೋಷಕರು ಮತ್ತು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ.

- ಡಾ. ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞರು

ಪ್ರತಿಕ್ರಿಯಿಸಿ (+)