ವಿದ್ಯಾರ್ಥಿಗಳ ಮೆಚ್ಚಿನ ಮೇಷ್ಟ್ರು ‘ಹುಲ್ಲೂರ ಕಾಕಾ’

7
ಊರ ಜನರಿಗೂ ಅಚ್ಚುಮೆಚ್ಚು; ಶಾಲೆಯಲ್ಲಿ ಎಲ್ಲವೂ ಕಟ್ಟುನಿಟ್ಟು

ವಿದ್ಯಾರ್ಥಿಗಳ ಮೆಚ್ಚಿನ ಮೇಷ್ಟ್ರು ‘ಹುಲ್ಲೂರ ಕಾಕಾ’

Published:
Updated:
Deccan Herald

ತಾಳಿಕೋಟೆ: ಮಗುವಿನೆಡೆ ಹೆತ್ತ ತಾಯಿಯ ಹಂಬಲ, ಶಾಲೆಯೆಡೆ ಕುಟುಂಬದ ಯಜಮಾನನ ಹಂಬಲ, ಸಮಾಜದೆಡೆ ಸೇವಕನ ಹಂಬಲ. ಕೆಲಸ ಯಾವುದಾದರೇನು..? ಇವರಿಗೆ 24 ಗಂಟೆಯೂ ಸಾಲದು ಎಂಬಂಥ ದುಡಿತ. ಶಿಕ್ಷಕರ ವಲಯದಲ್ಲಿ ‘ಹುಲ್ಲೂರ ಕಾಕಾ’ ಎಂದೇ ಚಿರಪರಿಚಿತರಾಗಿರುವ ಮಹಾದೇವಪ್ಪ ಸಂಗಪ್ಪ ಹುಲ್ಲೂರ ಮಿಣಜಗಿ ಗ್ರಾಮದ ಜನತಾ ಕಾಲೊನಿಯಲ್ಲಿನ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ.

ಗಡಿಸೋಮನಾಳ ಗ್ರಾಮದಲ್ಲಿ 1981ರಲ್ಲಿ ಶಿಕ್ಷಕರಾಗಿ ವೃತ್ತಿ ಜೀವನಕ್ಕೆ ಚಾಲನೆ. ಅಲ್ಲಿಯೇ 17 ವರ್ಷ ಸತತ ಸೇವೆ. ಬೊಮ್ಮನಹಳ್ಳಿಯಲ್ಲಿ ಐದು ವರ್ಷ ಸೇವೆ ಸಲ್ಲಿಕೆ. ನಂತರ ಮುಖ್ಯಶಿಕ್ಷಕರಾಗಿ ತಮದಡ್ಡಿ (2002-2009) ಶಾಲೆಗೆ ಬಡ್ತಿ, ಗೊಟಗುಣಕಿ (2009-2015). 2015ರಿಂದ ಮಿಣಜಗಿಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ. ಈ ಮೂರು ಶಾಲೆಗಳು ಸಹ ತಾಲ್ಲೂಕು ಹಾಗೂ ಜಿಲ್ಲಾ ಹಂತದ ಅತ್ಯುತ್ತಮ ಶಾಲೆ, ಪರಿಸರ ಮಿತ್ರ (ಹಳದಿ ಮಿತ್ರ) ಪ್ರಶಸ್ತಿ ಪಡೆದಿರುವುದು ಇವರು ಮುಖ್ಯೋಪಾಧ್ಯಾಯರಿದ್ದಾಗಲೇ ಎಂಬುದು ವಿಶೇಷ.

ವೃತ್ತಿ ಜೀವನದಲ್ಲಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕ ರಂಗದಲ್ಲಿ ಜನರಿಗೆ ‘ಹುಲ್ಲೂರ ಕಾಕಾ’ ಅಚ್ಚುಮೆಚ್ಚು. ವಾಹನ ಸೌಕರ್ಯಗಳಿಲ್ಲದ ಅಂದಿನ ದಿನಗಳಲ್ಲಿ 12 ಕಿ.ಮೀ. ನಡೆದು ಶಾಲೆ ಕಲಿಸಿ ಬಂದವರು. ಗ್ರಾಮದಲ್ಲಿಯೇ ವಾಸ್ತವ್ಯ. ಸಂಜೆ ಮಕ್ಕಳಿಗೆ ಚಿಮಣಿ ಬುಡ್ಡಿಯಲ್ಲಿ ವಿಶೇಷ ವರ್ಗ ನಡೆಸಿದವರು ಇವರು.

1985ರಲ್ಲಿ ವೈಯಕ್ತಿಕ ಅನುಕೂಲಕ್ಕೆ ಖರೀದಿಸಿದ ಬೈಸಿಕಲ್ ಸಾರ್ವಜನಿಕರಿಗೆ ಮುಡಿಪಾಯಿತು. ಗ್ರಾಮದ ಅನಾರೋಗ್ಯ ಪೀಡಿತ ಮಕ್ಕಳು, ವೃದ್ಧರು, ಮಹಿಳೆಯರಿಗೆ ಇಂದಿನ 108 ಆಂಬುಲೆನ್ಸ್‌ನಂತೆ ಕೆಲಸ ಮಾಡುತ್ತಿತ್ತು ಎಂಬುದನ್ನು ಗ್ರಾಮಸ್ಥರು ಇಂದಿಗೂ ಸ್ಮರಿಸುತ್ತಾರೆ.

ಖ್ಯಾತನಾಳ(ನಿಯೋಜನೆ ಶಾಲೆ)ದಲ್ಲಿದ್ದಾಗ, ಬಾವಿಗೆ ಬಿದ್ದು ಸತ್ತೇ ಹೋಗಿದೆ ಎಂದು ಭಾವಿಸಲಾಗಿದ್ದ ಮೂರು ವರ್ಷದ ಮಗುವನ್ನು ಸೈಕಲ್‌ನಲ್ಲಿ ತಾಳಿಕೋಟೆ ಆಸ್ಪತ್ರೆಗೆ ಹೊತ್ತು ತಂದು ಜೀವ ಉಳಿಸಿದವರು.

ಶಾಲೆಯಲ್ಲಿ ಅಚ್ಚುಕಟ್ಟು. ಕಟ್ಟುನಿಟ್ಟು. ಅಕ್ಷರದಾಸೋಹ, ಹಾಲು, ವಾಚನಾಲಯ ಹೀಗೆ ಎಲ್ಲ ಸೌಕರ್ಯ ಮಕ್ಕಳಿಗೆ ಮುಟ್ಟಲೇಬೇಕು. ಶಾಲೆಯ ಪ್ರತಿ ದಾಖಲೆಯೂ ಮಾದರಿಯಾಗಿ ಲಭ್ಯ. ಸರ್ಕಾರದ ಯಾವುದೇ ಹೊಸ ಕಾರ್ಯಕ್ರಮಗಳಿರಲಿ, ಅವು ಇಲ್ಲಿ ಅದ್ಧೂರಿಯ ಆರಂಭದಂತೆ ಅನುಷ್ಠಾನದಲ್ಲೂ ಪ್ರಾಮಾಣಿಕತೆ. ಪ್ರತಿಭಾ ಕಾರಂಜಿ, ಆಟೋಟಗಳಲ್ಲಿ ಪ್ರತಿ ವರ್ಷ ಜಿಲ್ಲಾ ಮಟ್ಟದವರೆಗೆ ಸ್ಪರ್ಧೆ. ಶಾಲೆಗೆ ಮೂಲ ಸೌಕರ್ಯ ಪಡೆದುಕೊಳ್ಳುವಲ್ಲಿ ಅವರದು ಬೇತಾಳ ಚಾಳಿ.

ಗೊಟಗುಣಕಿ, ಮಿಣಜಗಿಯಲ್ಲಿ ಶಾಲಾ ಮುಖ್ಯ ಬಾಗಿಲು, ಆವರಣ ಗೋಡೆ ನಿರ್ಮಿಸಿಕೊಂಡಿರುವುದಲ್ಲದೇ ದಾನಿಗಳಿಂದ 40 ಕುರ್ಚಿ, ಡಯಾಸ್, ಸ್ಕೌಟ್ಸ್ ಮಕ್ಕಳಿಗೆ ₹ 10000 ಮೌಲ್ಯದ ಬಟ್ಟೆ, ಬೋರ್ ಹಾಕಿಸಿಕೊಂಡಿದ್ದು, ಅದೀಗ ಶಾಲೆಯೊಂದಿಗೆ ಊರ ಜನರಿಗೂ ಸಹ ಶುದ್ಧ ನೀರು ಕೊಡುತ್ತಿದೆ.

ಅರಣ್ಯ ಇಲಾಖೆಯವರನ್ನು ಸಂಪರ್ಕಿಸಿ 60ಕ್ಕೂ ಅಧಿಕ ಸಸಿಗಳನ್ನು ನೆಟ್ಟಿದ್ದಾರೆ. ಹುಲ್ಲೂರ ಕಾಕಾ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದ ಪ್ರತಿ ಶಾಲೆಗಳ ತರಗತಿ ಕೋಣೆಗಳು, ಬಾಹ್ಯ ಗೋಡೆಗಳು ಅಂದ ಚೆಂದ ಪಡೆದರೆ, ಕುಡಿಯುವ ನೀರು, ಸುಸಜ್ಜಿತ ಶೌಚಾಲಯ ಇರಲೇ ಬೇಕು. ಹೀಗೆ ವೃತ್ತಿ ಬದುಕಿನ ಕೊನೆಯ ವರ್ಷದಲ್ಲಿದ್ದರೂ; ದಣಿವರಿಯದ ಸೇವೆ ಅವರದ್ದು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !