ಸೋಮವಾರ, ಸೆಪ್ಟೆಂಬರ್ 16, 2019
21 °C

ಟೇಬಲ್ ಟೆನ್ನಿಸ್‌ನಲ್ಲಿ ನಾನಾಗೌಡ ಸಾಧನೆ;ಗ್ರಾಮೀಣ ಪರಿಸರದಲ್ಲಿ ನಗರ ಕ್ರೀಡೆ ಸದ್ದು

Published:
Updated:
Prajavani

ನಿಡಗುಂದಿ: ಹಳ್ಳಿ ಹೈದರಿಗೆ ಟೆನ್ನಿಸ್, ಬ್ಯಾಡ್ಮಿಂಟನ್ ಎಂದರೇ ಅಷ್ಟಕಷ್ಟೇ. ಹೆಚ್ಚಾಗಿ ಕ್ರಿಕೆಟ್‌, ಕಬ್ಬಡಿ, ಕೊಕ್ಕೊ ಆಟಗಳದ್ದೇ ಸದ್ದು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ತಾಲ್ಲೂಕಿನ ವಂದಾಲ ಗ್ರಾಮದ ಹಲವು ವಿದ್ಯಾರ್ಥಿಗಳು, ಟೇಬಲ್ ಟೆನ್ನಿಸ್ ಆಟದತ್ತ ಆಕರ್ಷಿತರಾಗಿರುವುದು ವಿಶೇಷ.

ವಂದಾಲ ಗ್ರಾಮದ ಶಾಕಂಬರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ ಗಲಗಲಿ ಹಾಗೂ ಪಕ್ಕದ ಗಣಿ ಗ್ರಾಮದ ದೈಹಿಕ ಶಿಕ್ಷಣ ಶಿಕ್ಷಕ ಉದಯ ಶೆಲವಡಿ ಮಾರ್ಗದರ್ಶನದಲ್ಲಿ ಪ್ರತಿ ವರ್ಷವೂ ಐದು ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವುದು ವಿಶೇಷ.

ಪ್ರೌಢಶಾಲೆಯಲ್ಲಿಯೇ ಟೇಬಲ್ ಟೆನ್ನಿಸ್ ಬಗ್ಗೆ ಆಸಕ್ತಿ ಬೆಳೆಸಿಕೊಂಡು, ಪ್ರೌಢಶಾಲೆಯ ಮೂರು ವರ್ಷವೂ ರಾಜ್ಯ ಮಟ್ಟದವರೆಗೂ ಉತ್ತಮ ಪ್ರದರ್ಶನ ನೀಡಿ, ಕಾಲೇಜ್‌ನಲ್ಲಿಯೂ ಇದೇ ಸಾಧನೆಯನ್ನು ಮುಂದುವರೆಸಿದವ ವಂದಾಲ ಗ್ರಾಮದ ನಾನಾಗೌಡ ರುದ್ರಗೌಡ ಪಾಟೀಲ.

ವಂದಾಲದಲ್ಲಿ 8ನೇ ವರ್ಗ ಕಲಿಯುವಾಗಲೇ ಟೇಬಲ್ ಟೆನ್ನಿಸ್ ಕಲಿಯಲು 8 ಕಿ.ಮೀ ದೂರದ ಗಣಿ ಗ್ರಾಮಕ್ಕೆ ನಿತ್ಯ ಸೈಕಲ್‌ನಲ್ಲಿ ಐದು ಜನ ತಂಡದ ಸದಸ್ಯರೊಂದಿಗೆ ತೆರಳಿ, ಅಲ್ಲಿದ್ದ ಶಿಕ್ಷಕ ಉದಯ ಶೆಲವಡಿ ಮಾರ್ಗದರ್ಶನದಲ್ಲಿ ಪಳಗಿದ. ಮುಂದೆ ವಂದಾಲದಲ್ಲಿ ಶಿಕ್ಷಕ ಸುರೇಶ ಗಲಗಲಿ ಮಾರ್ಗದರ್ಶನದಲ್ಲಿ ಸತತ ಪರಿಶ್ರಮ ಪಟ್ಟು ವಿಶೇಷ ಸಾಧನೆ ಮಾಡಿದವ ನಾನಾಗೌಡ.

ಇದೇ ಶಾಲೆಯ ರಾಜು ಮಾದರ, ಮೇಲಪ್ಪ ಕುಂಬಾರ, ಶ್ರೀನಿವಾಸ ಕಮತಗಿ, ಪ್ರಶಾಂತ ಹೆಬ್ಬಾಳ ಜತೆ ಸೇರಿ ಈ ತಂಡದೊಂದಿಗೆ ರಾಜ್ಯ ಮಟ್ಟದವರೆಗೂ ಸೆಣೆಸಾಡಿದ್ದು ವಿಶೇಷ.

2009-10ನೇ ಸಾಲಿನಿಂದ ಸತತ ಮೂರು ವರ್ಷ ಪ್ರೌಢಶಾಲಾ ಹಂತದ ಕ್ರೀಡಾಕೂಟದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ, 2010-11ನೇ ಸಾಲಿನಲ್ಲಿ ರಾಜ್ಯ ಮಟ್ಟದಲ್ಲಿ ಸೆಮಿಫೈನಲ್‌ವರೆಗೂ ಸೆಣೆಸಿದ್ದು ವಿಶೇಷ. ಅದೇ ವರ್ಷ ನೆಹರು ಯುವ ಸಂಘ ಯುವಜನ ಕ್ರೀಡಾ ಇಲಾಖೆಯ ಪೈಕಾ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಶಿವಮೊಗ್ಗದಲ್ಲಿನ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿಯೂ ಭಾಗಿಯಾಗಿದ್ದ ನಾನಾಗೌಡ ಇದೇ ಸಾಧನೆಯನ್ನು ಮುಂದೆ ಕಾಲೇಜು ಹಂತದಲ್ಲಿಯೂ ಮುಂದುವರೆಸಿದ.

2011-12ನೇ ಸಾಲಿನಲ್ಲಿ ಬಾಗಲಕೋಟೆಯಲ್ಲಿ ಪಿಯುಸಿ ಪ್ರಥಮ ವರ್ಷ ಕಲಿಯುವಾಗ ಅಲ್ಲಿಯೂ ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ. ಮುಂದೆ 2014-15ರಿಂದ ಎಂಜಿನಿಯರಿಂಗ್ ಕಲಿಯುತ್ತಲೇ, ಟೇಬಲ್‌ ಟೆನ್ನಿಸ್‌ನ ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆಗೈದಿದ್ದಾನೆ ನಾನಾಗೌಡ.

2018-19ನೇ ಸಾಲಿನಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರ್ಗಿ ಜೋನಲ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು, ವಿಶ್ವವಿದ್ಯಾಲಯ ಮಟ್ಟಕ್ಕೆ ಆಯ್ಕೆಯಾಗಿ, ಅಲ್ಲಿಯೂ ಸೆಮಿಫೈನಲ್ ಹಂತದವರೆಗೂ ಸ್ಪರ್ಧಿಸಿದ್ದಾನೆ.

ಒಂದೆಡೆ ಕ್ರೀಡಾ ಬದುಕು, ಇನ್ನೊಂದೆಡೆ ಬದುಕಿಗಾಗಿ ಶಿಕ್ಷಣ. ಹೀಗಾಗಿ ಶಿಕ್ಷಣ ಹಾಗೂ ಕ್ರೀಡೆ ಎರಡನ್ನು ಸಮತೂಕಗೊಳಿಸಿ ಸದ್ಯ ಎಂಜಿನಿಯರಿಂಗ್ ಅಂತಿಮ ವರ್ಷವನ್ನು ವಿಜಯಪುರದಲ್ಲಿ ಕಲಿಯುತ್ತಿದ್ದಾನೆ ನಾನಾಗೌಡ.

ಬೆಂಗಳೂರಿನಲ್ಲಿ ವೃತ್ತಿಯ ಜತೆಗೆ ಟೇಬಲ್ ಟೆನ್ನಿಸ್‌ನ ವಿಶೇಷ ಪರಿಣಿತರ ಕೋಚಿಂಗ್‌ ಪಡೆಯಬೇಕೆಂಬ ಆಸೆ ಇದೆ. ಇವನ ಕ್ರೀಡಾ ಬದುಕಿಗೆ ಸಹೋದರರಾದ ಸೋಮನಗೌಡ ಬೆಂಬಲ ಹೆಚ್ಚು.
ಸಂಪರ್ಕ ಸಂಖ್ಯೆ: 7204005424

Post Comments (+)