ಇಂದಿನ ತಾಂತ್ರಿಕ ಕ್ರಾಂತಿಯ ಯುಗದಲ್ಲಿ ಕೃತಕ ಬುದ್ಧಿಮತ್ತೆ ಅಥವಾ ‘ಎಐ’ ಎಂಬುದು ಕೇವಲ ಒಂದು ಶಬ್ದವಾಗಿ ಉಳಿದಿಲ್ಲ, ಅದು ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ನಾವು ಬಳಸುವ ಸ್ಮಾರ್ಟ್ಫೋನ್ನಿಂದ ಹಿಡಿದು ಕಚೇರಿಯ ಸಂಕೀರ್ಣ ಕೆಲಸಗಳವರೆಗೆ ಎಲ್ಲದರಲ್ಲೂ ಯಂತ್ರದ ಮೆದುಳು ಕೆಲಸ ಮಾಡುತ್ತಿದೆ. ಆದರೆ, ಈ ತಾಂತ್ರಿಕ ಬೆಳವಣಿಗೆಯ ಹಾದಿಯಲ್ಲಿ ನಾವು ಎದುರಿಸುತ್ತಿರುವ ಅತಿದೊಡ್ಡ ಅಪಾಯವೆಂದರೆ ನಮ್ಮ ಸ್ವಂತ ವಿವೇಚನಾ ಶಕ್ತಿಯನ್ನು ಯಂತ್ರಕ್ಕೆ ಅಡವಿಡುತ್ತಿರುವುದು. ಯಾವಾಗ ನಾವು ಎಐ ನೀಡುವ ಪ್ರತಿಯೊಂದು ಉತ್ತರವನ್ನು, ಸಲಹೆಯನ್ನು ಅಥವಾ ಸೃಷ್ಟಿಯನ್ನು ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲು ಆರಂಭಿಸುತ್ತೇವೆಯೋ, ಆ ಕ್ಷಣದಿಂದಲೇ ನಮ್ಮ ಪತನ ಆರಂಭವಾಗುತ್ತದೆ. ಇದು ಕೇವಲ ಕೆಲಸದ ಬದಲಾವಣೆಯಲ್ಲ, ಬದಲಿಗೆ ನಮ್ಮ ಮಾನವೀಯ ಅಸ್ತಿತ್ವದ ಬದಲಾವಣೆ ಎನ್ನುವುದನ್ನು ನಾವು ಅರಿಯಬೇಕಿದೆ.

ಕಳೆದ ವಾರ ಶಿರಸಿಯಲ್ಲಿ ಎಐ ಸಾಧಕ ಬಾಧಕಗಳ ಬಗ್ಗೆ ಒಂದು ಸಂವಾದ ಇತ್ತು. ಅಲ್ಲಿ ಎಐ ಒಳಹೊರಗನ್ನು ಅತ್ಯಂತ ಹತ್ತಿರದಿಂದ ನೋಡುತ್ತಿರುವ ನಾನು ಕೆಲವು ವಿಚಾರಗಳನ್ನು ಹಂಚಿಕೊಳ್ಳಬೇಕಿತ್ತು. ಆ ಸಂದರ್ಭದಲ್ಲಿ ಹಿರಿಯ ಸಾಹಿತಿಯೊಬ್ಬರು ಅತ್ಯಂತ ದಿಗಿಲಿನಿಂದ ಒಂದು ಪ್ರಶ್ನೆ ಕೇಳಿದರು: "ನಾನು ಒಂದೆರಡು ಸಾಲು ಕವಿತೆಯನ್ನು ಬರೆದು ಚಾಟ್ ಜಿಪಿಟಿಗೆ ಹಾಕಿದೆ. ಅದು ಕ್ಷಣಾರ್ಧದಲ್ಲಿ ಮುಂದಿನ ಎಲ್ಲ ಸಾಲುಗಳನ್ನು ಬರೆದು ಮುಗಿಸಿತು. ಹಾಗಾದರೆ ಅದು ನನ್ನನ್ನು ರಿಪ್ಲೇಸ್ ಮಾಡಿತೇ?" ಎಂದು ಅವರು ಆತಂಕ ವ್ಯಕ್ತಪಡಿಸಿದರು. ಒಬ್ಬ ಅನುಭವಿ ಸಾಹಿತಿಗೆ ತನ್ನ ಸೃಜನಶೀಲತೆಯ ಬಗ್ಗೆಯೇ ಅನುಮಾನ ಮೂಡುವಂತೆ ಮಾಡಿದ್ದು ಈ ತಂತ್ರಜ್ಞಾನದ ವೇಗ. ಅವರ ಪ್ರಶ್ನೆಯಲ್ಲಿದ್ದ ದಿಗಿಲು ಕೇವಲ ಅವರೊಬ್ಬರದಲ್ಲ, ಇಡೀ ಸೃಜನಶೀಲ ಲೋಕದ್ದು.
.ಎ.ಐ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಕೊಲ್ಲಿ ಸಂಘರ್ಷ.ಎ.ಐ ಬಳಸಿ ಸಿದ್ಧಪಡಿಸಿದ ತೀರ್ಪು ಉಲ್ಲೇಖ ಹೆಚ್ಚಳ: ಸುಪ್ರೀಂ ಕೋರ್ಟ್ ಕಳವಳ.
ಆಗ ನಾನು ಅವರಿಗೆ ಒಂದು ಸರಳವಾದ ಪ್ರಶ್ನೆ ಕೇಳಿದೆ: "ಚಾಟ್ ಜಿಪಿಟಿ ಕೊಟ್ಟಿದ್ದನ್ನು ನೀವು ಒಪ್ಪಿಕೊಂಡ್ರಾ?". ಈ ಪ್ರಶ್ನೆಯಲ್ಲೇ ಎಲ್ಲದಕ್ಕೂ ಉತ್ತರ ಅಡಗಿದೆ. ಚಾಟ್ ಜಿಪಿಟಿ ಅಥವಾ ಯಾವುದೇ ಎಐ ಏಜೆಂಟ್ಗಳು ಕೊಟ್ಟಿದ್ದನ್ನೆಲ್ಲ ಇದೇ ‘ಪಂಚಾಮೃತ’ ಅಂತ ನಾವು ಒಪ್ಪಿಕೊಂಡರೆ, ಖಂಡಿತವಾಗಿಯೂ ಅದು ನಮ್ಮನ್ನು ರಿಪ್ಲೇಸ್ ಮಾಡಿದಂತೆ. ಆದರೆ, ಯಂತ್ರ ಕೊಟ್ಟ ಸಾಲುಗಳನ್ನು ನೋಡಿದಾಗ ನಿಮ್ಮ ಮನಸ್ಸಿನಲ್ಲಿ ಒಂದು ಬಗೆಯ ಅತೃಪ್ತಿ ಮೂಡಿದರೆ ಅದು ನಮ್ಮ ವಿಜಯದ ಸಂಕೇತ. "ಈ ಪದ ಇಲ್ಲಿ ಸರಿಯಾಗಿ ಕುಳಿತಿಲ್ಲ", "ಈ ವಾಕ್ಯದಲ್ಲಿ ಅರ್ಥದ ಹೊಳಪಿಲ್ಲ", "ಇದರ ಲಯ ತಪ್ಪುತ್ತಿದೆ" ಅಥವಾ "ಇದರಲ್ಲಿ ಗೇಯತೆ ಇಲ್ಲ" ಎಂಬ ವಿಮರ್ಶಾತ್ಮಕ ದೃಷ್ಟಿಕೋನ ನಿಮ್ಮಲ್ಲಿ ಜಾಗೃತವಾಗಿದ್ದರೆ, ಖಂಡಿತವಾಗಿಯೂ ಎಐ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ.

ಸೃಜನಶೀಲ ಕೆಲಸ ಎಂಬುದು ಇಂದಿಗೂ ಮಾನವನ ಸ್ವತ್ತಾಗಿಯೇ ಉಳಿದಿದೆ. ಏಕೆಂದರೆ ಮನುಷ್ಯ ಮತ್ತು ಯಂತ್ರದ ನಡುವಿರುವ ಏಕೈಕ ವ್ಯತ್ಯಾಸವೆಂದರೆ 'ವಿವೇಚನಾ ಶಕ್ತಿ'. ಎಐ ನಮಗೆ ಮಾಹಿತಿಯನ್ನು ನೀಡಬಲ್ಲದು, ಆದರೆ ಆ ಮಾಹಿತಿಯ ಹಿಂದಿರುವ ಸತ್ಯಾಸತ್ಯತೆ, ಸಂದರ್ಭ ಮತ್ತು ಸಂವೇದನೆಯನ್ನು ಒರೆಹಚ್ಚಿ ನೋಡುವ ಜವಾಬ್ದಾರಿ ನಮ್ಮದು. ಯಂತ್ರಗಳು ದತ್ತಾಂಶಗಳ ಆಧಾರದ ಮೇಲೆ ಕೆಲಸ ಮಾಡುತ್ತವೆ; ಅವುಗಳ ಬಳಿ ಕೋಟ್ಯಂತರ ಮಾಹಿತಿಗಳಿರಬಹುದು, ಆದರೆ ಆ ಮಾಹಿತಿಯ ಹಿಂದೆ ಇರುವ ಭಾವನೆ ಅಥವಾ ಸಂವೇದನೆ ಅವುಗಳಿಗೆ ತಿಳಿಯುವುದಿಲ್ಲ. ಯಾವಾಗ ನಾವು ನಮ್ಮ ವಿವೇಚನೆಯನ್ನು ಯಂತ್ರಕ್ಕೆ ಬಿಟ್ಟುಕೊಡುತ್ತೇವೆಯೋ, ಅಂದು ನಾವು ಯಂತ್ರದ 'ಪ್ರತಿರೂಪ'ಗಳಾಗಿ ಬದಲಾಗುತ್ತೇವೆ.

ಜಾಗತಿಕ ಮಟ್ಟದಲ್ಲಿ ಗಮನಿಸಿದರೆ, ಎಐ ಮತ್ತು ಮಾನವ ಸೃಜನಶೀಲತೆಯ ಈ ಸಂಘರ್ಷ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹಾಲಿವುಡ್ನ ಲೇಖಕರು ತಿಂಗಳುಗಟ್ಟಲೆ ಮುಷ್ಕರ ನಡೆಸಿದ್ದು ಕೇವಲ ಹಣಕ್ಕಾಗಿ ಅಲ್ಲ, ಬದಲಿಗೆ ಎಐ ಎಂಬ ಯಂತ್ರವು ಕಥೆಗಾರನ ಸ್ಥಾನವನ್ನು ಕಿತ್ತುಕೊಳ್ಳಬಾರದು ಎಂಬ ಕಾರಣಕ್ಕೆ. ಅಲ್ಲಿಯೂ ಕೇಳಿಬಂದ ಮಾತು ಒಂದೇ- ಎಐ ಒಂದು ಕರಡು ಪ್ರತಿಯನ್ನು ನೀಡಬಲ್ಲದು, ಆದರೆ ಆ ಕಥೆಗೆ ಪ್ರಾಣತುಂಬುವ ಕೆಲಸ ಮನುಷ್ಯನಿಂದಲೇ ಆಗಬೇಕು. ಜಗತ್ತಿನ ಪ್ರಸಿದ್ಧ ಕಲಾವಿದರು ಎಐ ಸೃಷ್ಟಿಸುವ ಚಿತ್ರಗಳನ್ನು ನೋಡಿದಾಗ ಅವುಗಳಲ್ಲಿ 'ಆತ್ಮ' ಇಲ್ಲದಿರುವುದನ್ನು ಗುರುತಿಸುತ್ತಾರೆ. ಯಂತ್ರವು ಲಕ್ಷಾಂತರ ಚಿತ್ರಗಳನ್ನು ನೋಡಿ ಒಂದು ಚಿತ್ರವನ್ನು ಸೃಷ್ಟಿಸಬಹುದು, ಆದರೆ ಆ ಚಿತ್ರದ ಹಿಂದಿರುವ 'ವಿಷನ್' ಅದರ ಬಳಿ ಇರುವುದಿಲ್ಲ.

ಶಿಕ್ಷಣ ಕ್ಷೇತ್ರದಲ್ಲಿಯೂ ಇದರ ಪ್ರಭಾವ ಆತಂಕಕಾರಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರಬಂಧಗಳಿಗೆ, ಮನೆಕೆಲಸಗಳಿಗೆ ಎಐ ಮೊರೆ ಹೋಗುತ್ತಿದ್ದಾರೆ. ಇದರಿಂದ ಅವರಿಗೆ ತಾತ್ಕಾಲಿಕವಾಗಿ ಅಂಕಗಳು ಸಿಗಬಹುದು, ಆದರೆ ವಿಷಯದ ಆಳವಾದ ಅರಿವು ಮೂಡುವುದಿಲ್ಲ. ಕಲಿಯುವ ಪ್ರಕ್ರಿಯೆಯಲ್ಲಿ ಮನುಷ್ಯ ಎಡವುತ್ತಾನೆ, ತಪ್ಪು ಮಾಡುತ್ತಾನೆ ಮತ್ತು ಆ ತಪ್ಪುಗಳಿಂದ ಪಾಠ ಕಲಿಯುತ್ತಾನೆ. ಆದರೆ ಎಐ ನಮಗೆ ತಪ್ಪು ಮಾಡಲು ಅವಕಾಶವನ್ನೇ ನೀಡುವುದಿಲ್ಲ, ಅದು ನೇರವಾಗಿ ‘ಪರಿಪೂರ್ಣ’ ಎನ್ನಿಸುವ ಉತ್ತರವನ್ನು ನೀಡುತ್ತದೆ. ತಪ್ಪುಗಳಿಲ್ಲದ ಕಲಿಕೆ ಮನುಷ್ಯನನ್ನು ಪರಿಪೂರ್ಣನನ್ನಾಗಿ ಮಾಡಲಾರದು, ಬದಲಿಗೆ ಕಲಿಕೆಯ ಹಸಿವನ್ನೇ ಇಂಗಿಸಿಬಿಡುತ್ತದೆ.

ಸೃಜನಶೀಲ ವೃತ್ತಿಗಳಲ್ಲಿರುವವರು ಇಂದು ಎಐ ತಮ್ಮನ್ನು ರೀಪ್ಲೇಸ್ ಮಾಡಬಹುದು ಎಂಬ ಭೀತಿಯಲ್ಲಿದ್ದಾರೆ. ಈ ಭೀತಿ ನಿಜವಾಗುವುದು ನಾವು ಎಐ ನೀಡುವ ಶೈಲಿಯನ್ನು ಅನುಕರಿಸಲು ಶುರು ಮಾಡಿದಾಗ ಮಾತ್ರ. ಯಂತ್ರವು ಹಳೆಯ ದತ್ತಾಂಶಗಳನ್ನು ಮರುಸೃಷ್ಟಿ ಮಾಡಬಲ್ಲದೇ ಹೊರತು, ಸಂಪೂರ್ಣವಾಗಿ ಹೊಸತಾದ ಮತ್ತು ಕ್ರಾಂತಿಕಾರಿಯಾದದ್ದನ್ನು ಹುಟ್ಟುಹಾಕಲಾರದು. ಮನುಷ್ಯನ ಕಲ್ಪನಾ ಶಕ್ತಿಗೆ ಮಿತಿಯಿಲ್ಲ. ನಾವು ನಮ್ಮ ಕಲ್ಪನಾ ಲಹರಿಯನ್ನು ವಿಸ್ತರಿಸುವ ಬದಲು ಎಐ ನೀಡುವ ಸಿದ್ಧ ಚೌಕಟ್ಟಿನೊಳಗೆ ಬಂಧಿಯಾದರೆ, ಆಗ ಖಂಡಿತವಾಗಿಯೂ ನಾವು ಯಂತ್ರಕ್ಕೆ ಬದಲಿಯಾಗಿ ಹೋಗುತ್ತೇವೆ. ನಮ್ಮ ವಿಶಿಷ್ಟತೆಯೇ ನಮ್ಮ ರಕ್ಷಾಕವಚವಾಗಬೇಕು.

ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ನೋಡುವುದಾದರೆ, ನಮ್ಮ ಭಾಷೆಯ ಸೊಗಡು, ಅದರ ಪ್ರಾದೇಶಿಕ ಭಿನ್ನತೆಗಳು ಮತ್ತು ಶಬ್ದಗಳ ನಡುವಿನ ಸೂಕ್ಷ್ಮ ಭಾವಾರ್ಥಗಳು ಎಐಗೆ ಲಭ್ಯವಿರುವ ದತ್ತಾಂಶಗಳಿಗಿಂತಲೂ ವಿಸ್ತಾರವಾದವು. ಎಐ ಸೃಷ್ಟಿಸಿದ ಸಾಹಿತ್ಯವು ಪ್ರಾರಂಭದಲ್ಲಿ ವಿಸ್ಮಯ ಮೂಡಿಸಬಹುದು, ಆದರೆ ಸ್ವಲ್ಪ ಸಮಯದ ನಂತರ ಅದರಲ್ಲಿ ಏಕತಾನತೆ ಕಂಡುಬರುತ್ತದೆ. ಏಕೆಂದರೆ ಅದಕ್ಕೆ 'ಅನಿರೀಕ್ಷಿತ' ಎಂಬುದನ್ನು ಸೃಷ್ಟಿಸಲು ಬರುವುದಿಲ್ಲ. ಕವಿತೆಯೊಂದರ ಮಧ್ಯದಲ್ಲಿ ಲಯವನ್ನು ಮುರಿಯುವುದು ಅಥವಾ ಹಠಾತ್ತಾಗಿ ಬೇರೆಯದೇ ದಿಕ್ಕಿಗೆ ಕವಿತೆಯನ್ನು ಕೊಂಡೊಯ್ಯುವುದು ಕವಿಯ ಚಾತುರ್ಯ. ಈ ಹಠಾತ್ ತಿರುವುಗಳು ಯಂತ್ರದ ಲೆಕ್ಕಾಚಾರಕ್ಕೆ ಸಿಗುವುದಿಲ್ಲ.

ನಾವು ಎಐ ಅನ್ನು ಎದುರಿಸಬೇಕಾದ ರೀತಿ ಅದು ನೀಡುವ ಸುಲಭ ಸಾಧ್ಯತೆಗಳಿಗೆ ಮಾರುಹೋಗುವುದಲ್ಲ. ಎಐ ಅತ್ಯಂತ ವೇಗವಾಗಿ ಬರೆಯಬಲ್ಲದು ಎಂಬುದು ನಿಜ, ಆದರೆ ಅದು ಬರೆದದ್ದೆಲ್ಲವೂ ಶ್ರೇಷ್ಠವಾಗಿರುವುದಿಲ್ಲ. ಅದು ಕೇವಲ ಈಗಾಗಲೇ ಅಸ್ತಿತ್ವದಲ್ಲಿರುವ ಮಾಹಿತಿಯನ್ನು ಮರುಜೋಡಣೆ ಮಾಡುತ್ತದೆ. ಹೊಸತನ್ನು ಸೃಷ್ಟಿಸುವುದು ಎಂದರೆ ಶೂನ್ಯದಿಂದ ಒಂದು ಕಲ್ಪನೆಯನ್ನು ಹುಟ್ಟುಹಾಕುವುದು. ಈ ಕೆಲಸ ಮಾಡಲು ಮನುಷ್ಯನಿಗೆ ಮಾತ್ರ ಸಾಧ್ಯ. ಒಂದು ಕವಿತೆಯ ಲಯ ತಪ್ಪಿದೆ ಎಂದು ನಮಗೆ ಅನಿಸಿದಾಗ, ನಾವು ಯಂತ್ರಕ್ಕಿಂತ ಒಂದು ಹೆಜ್ಜೆ ಮುಂದಿದ್ದೇವೆ ಎಂದು ಅರ್ಥ. ಆ ವ್ಯತ್ಯಾಸವನ್ನು ಕಂಡುಹಿಡಿಯುವ ಸಾಮರ್ಥ್ಯವೇ ನಮ್ಮನ್ನು ಜೀವಂತವಾಗಿರಿಸಿದೆ.

ಇಂದು ನಾವು ಎಐ ನೀಡುವ ಪ್ರತಿಯೊಂದು ಶಿಫಾರಸನ್ನು ಕಣ್ಣುಮುಚ್ಚಿ ಪಾಲಿಸುತ್ತಿದ್ದೇವೆ. ನಾವು ಯಾವ ಸಿನೆಮಾ ನೋಡಬೇಕು, ಏನು ತಿನ್ನಬೇಕು ಎಂಬುದನ್ನೂ ಅಲ್ಗಾರಿದಮ್ಗಳೇ ನಿರ್ಧರಿಸುತ್ತಿವೆ. ಈ ಯಾಂತ್ರಿಕ ಮಾರ್ಗದರ್ಶನದಲ್ಲಿ ನಮ್ಮ ವೈಯಕ್ತಿಕ ಆಯ್ಕೆಗಳು ಮತ್ತು ಆಸಕ್ತಿಗಳು ಬಲಿಯಾಗುತ್ತಿವೆ. ನಮ್ಮ ಜೀವನದ ನಾಯಕತ್ವವನ್ನು ನಾವೇ ವಹಿಸಿಕೊಳ್ಳುವ ಬದಲು ಯಂತ್ರದ ನಿರ್ದೇಶನದಂತೆ ನಡೆಯುವ ಪಾತ್ರಗಳಾಗುತ್ತಿದ್ದೇವೆ. ಇದು ನಮ್ಮ ವ್ಯಕ್ತಿತ್ವದ ಹರಣಕ್ಕೆ ದಾರಿ ಮಾಡಿಕೊಡುತ್ತಿದೆ. ಯಂತ್ರಕ್ಕೆ ಬೇಡಿಕೆ ಹೆಚ್ಚಾದಷ್ಟೂ ಮನುಷ್ಯನ ಮೌಲ್ಯ ಕುಸಿಯುತ್ತಾ ಹೋಗುತ್ತದೆ. ಇದು ಕೇವಲ ಆರ್ಥಿಕತೆಯ ಪ್ರಶ್ನೆಯಲ್ಲ, ಇದು ಆತ್ಮಗೌರವದ ಪ್ರಶ್ನೆಯೂ ಹೌದು.

ತಾಂತ್ರಿಕ ಸೌಲಭ್ಯಗಳು ನಮ್ಮ ಬದುಕನ್ನು ಸುಲಭಗೊಳಿಸಬೇಕೇ ಹೊರತು ನಮ್ಮ ಬದುಕಿನ ಅರ್ಥವನ್ನು ಕಸಿದುಕೊಳ್ಳಬಾರದು. ಎಐ ಎನ್ನುವುದು ನಮಗೆ ಸಹಾಯಕನಾಗಿರಬೇಕಾದ ಅನಿವಾರ್ಯ ಸಾಧನವಾಗಲಿ. ಆದರೆ ಅದು ನಮ್ಮ ಆಲೋಚನೆಗಳ ಯಜಮಾನನಾಗಲು ಬಿಡಬಾರದು. ಯಾವಾಗ ಒಬ್ಬ ಮನುಷ್ಯ ತನ್ನ ತಲೆಯನ್ನು ಉಪಯೋಗಿಸುವುದನ್ನು ನಿಲ್ಲಿಸಿ ಪೂರ್ಣವಾಗಿ ಯಂತ್ರದ ಮೇಲೆ ಅವಲಂಬಿತನಾಗುತ್ತಾನೋ, ಆಗ ಆತನ ಪ್ರಾಮುಖ್ಯತೆ ಇಲ್ಲದಂತಾಗುತ್ತದೆ. ಎಐ ಮಾಹಿತಿಯ ಮಹಾಪೂರವನ್ನೇ ಹರಿಸಬಹುದು, ಆದರೆ ಅದು ಎಂದಿಗೂ 'ಜ್ಞಾನ'ವಾಗಲಾರದು. ಜ್ಞಾನವು ಅನುಭವ, ಅಧ್ಯಯನ ಮತ್ತು ಆಂತರಿಕ ಮಥನದಿಂದ ಮೂಡಿಬರುವಂಥದ್ದು.

ತಂತ್ರಜ್ಞಾನ ಎಂಬುದು ಮಾನವನ ಸೇವಕನಾಗಿರಬೇಕು. ನಾವು ಎಐ ನೀಡುವ ಪ್ರತಿಯೊಂದು ವಿಚಾರವನ್ನು ವಿಮರ್ಶಾತ್ಮಕವಾಗಿ ನೋಡುವುದನ್ನು ರೂಢಿಸಿಕೊಳ್ಳಬೇಕು. "ಇದು ಏಕೆ ಹೀಗಿದೆ?", "ಇದು ಸರಿಯೇ?" ಎಂದು ಪ್ರಶ್ನಿಸುವ ಗುಣವೇ ನಮ್ಮನ್ನು ಯಂತ್ರಗಳಿಗಿಂತ ಭಿನ್ನವಾಗಿರಿಸುತ್ತದೆ. ಯಾವಾಗ ನಾವು ಪ್ರಶ್ನಿಸುವುದನ್ನು ನಿಲ್ಲಿಸಿ ಎಲ್ಲವನ್ನೂ ಒಪ್ಪಿಕೊಳ್ಳುತ್ತೇವೆಯೋ, ಅಂದು ನಾವು ತಾಂತ್ರಿಕವಾಗಿ ಮುಂದುವರಿದಿರಬಹುದು, ಆದರೆ ಸಾಂಸ್ಕೃತಿಕವಾಗಿ ಮೃತರಾಗಿರುತ್ತೇವೆ. ನಮ್ಮ ಸ್ಥಾನವನ್ನು ಎಐ ತುಂಬಬಾರದು ಎಂದರೆ, ನಾವು ಮೊದಲು ಮನುಷ್ಯರಾಗಿ ಯೋಚಿಸುವುದನ್ನು ಮುಂದುವರಿಸಬೇಕು. ನಮ್ಮ ಪ್ರಜ್ಞೆಯೇ ನಮಗೆ ದಾರಿದೀಪವಾಗಲಿ, ಯಂತ್ರದ ಅಲ್ಗಾರಿದಮ್ಗಳಲ್ಲ. ಎಐ ಕೊಟ್ಟದ್ದನ್ನೆಲ್ಲ ಒಪ್ಪಿಕೊಂಡರೆ ಮಾತ್ರ ನಮಗೆ ಅಪಾಯ, ಅದನ್ನು ಒಪ್ಪದಷ್ಟು ಕಾಲ ನಮ್ಮ ಸೃಜನಶೀಲತೆ ಅಜೇಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.