ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಲ್ಡಿಂಗ್‌ ಸ್ಮಾರ್ಟ್‌ಫೋನ್‌

Last Updated 23 ಜನವರಿ 2019, 19:30 IST
ಅಕ್ಷರ ಗಾತ್ರ

ಸ್ಯಾಮ್‌ಸಂಗ್‌ ಮೊಬೈಲ್‌ ಫೋನ್ ಕಂಪನಿ ಸದಾ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತದೆ. ವೈಫಲ್ಯ ಮತ್ತು ಯಶಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಹೊಸ ವೈಶಿಷ್ಟ್ಯಗಳೊಂದಿಗೆ ಸಿದ್ಧಪಡಿಸಿದ ಹ್ಯಾಂಡ್‌ಸೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇದೆ. ₹ 5 ಸಾವಿರ ಬೆಲೆಯ ಫೋನ್‌ ಇರಲಿ ₹ 30 ಸಾವಿರದ ಫೋನ್‌ ಇರಲಿ ಹ್ಯಾಂಗ್‌ ಆಗುವುದು ತಪ್ಪುವುದಿಲ್ಲ ಎಂದು ಸ್ಯಾಮ್‌ಸಂಗ್‌ ಫೋನ್‌ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸುತ್ತಾರಾದರೂ, ಬ್ರ್ಯಾಂಡ್‌ ಬಗೆಗಿನ ಅವರ ಪ್ರೀತಿ, ಕಾಳಜಿ ಕಡಿಮೆಯಂತೂ ಆಗಿಲ್ಲ.

ಈಗಂತೂ ಗ್ರಾಹಕರು ವರ್ಷಕ್ಕೊಂದೇ ಮೊಬೈಲ್ ಫೋನ್‌ ಎನ್ನುವ ಮನೋಭಾವಕ್ಕೆ ಅಂಟಿಕೊಂಡಿದ್ದಾರೆ. ಹಾಗಾಗಿ ಹೊಸ‌ ಫೋನ್ ಖರೀದಿಸುವಾಗ ಹೊಸತೇನಿದೆ ಎನ್ನುವುದರ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ‘ಸ್ಮಾರ್ಟ್‌ಫೋನ್‌ ಖರೀದಿಸುವಾಗ ಅದು ಹೇಗೆ ಕಾಣುತ್ತದೆ, ಅದರ ವಿನ್ಯಾಸ ಹೇಗಿದೆ’ ಎನ್ನುವುದಕ್ಕೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ‘ತಾಂತ್ರಿಕ ಅಂಶಗಳು ಎರಡನೇ ಮುಖ್ಯ ವಿಷಯ’ ಎನ್ನುವುದು ಸೆವಿಲ್ಲೆ ವಿಶ್ವವಿದ್ಯಾಲಯದ ತಜ್ಞರು ನಡೆಸಿದ ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿದೆ.

ಸ್ಯಾಮ್‌ಸಂಗ್‌ ತಯಾರಿಸಿರುವ ಫೋಲ್ಡಿಂಗ್‌ ಫೋನ್‌ ಗೆಲಕ್ಸಿ ಎಕ್ಸ್‌ ಫೆಬ್ರುವರಿ 20ರಂದು ಮಾರುಕಟ್ಟೆಗೆ ಬಿಡುಗಡೆ ಆಗುವ ಸಾಧ್ಯತೆ ದಟ್ಟವಾಗಿದೆ.

ಎರಡು ಒಎಲ್‌ಇಡಿ ಪರದೆ ಹೊಂದಿರಲಿದ್ದು, ಒಂದು ಪರದೆಯನ್ನು ಮಾತ್ರವೇ ಮಡಚುವಂತೆ ರೂಪಿಸಲಾಗಿದೆ. ಒಂದು ಪರದೆ 4.5 ಇಂಚು ಇರಲಿದ್ದು, ಫೋಲ್ಡಿಂಗ್ ಪರದೆ ಗಾತ್ರ 7.3 ಇಂಚು ಇರಲಿದೆ. ಮಲ್ಟಿ ಆಕ್ಟಿವ್‌ ವಿಂಡೊ ಸಿನಿಮಾ ನೋಡಲು, ಆಟವಾಡಲು ಅಥವಾ ಏಕಕಾಲಕ್ಕೆ ಎರಡರಿಂದ ಮೂರು ಆ್ಯಪ್‌ಗಳನ್ನು ತೆರೆಯಲು ಈ ದೊಡ್ಡ ಪರದೆ ಅನುಕೂಲಕರವಾಗಿದೆ.

ಸದ್ಯ ಫೋನ್‌ಗಳ ಗಾತ್ರದಷ್ಟೇ ಅದರ ಪರದೆ ಇದೆ. ಆದರೆ, ನಾವು ಹೊಸ ಆಯಾಮವೊಂದನ್ನು ಸೇರಿಸಿದ್ದೇವೆ. ಇನ್ಫಿನಿಟಿ ಫ್ಲೆಕ್ಸಿ ಡಿಸ್‌ಪ್ಲೆ ಭವಿಷ್ಯದ ಸ್ಮಾರ್ಟ್‌ಫೋನ್‌ಗಳನ್ನು ಆವರಿಸಿಕೊಳ್ಳಲಿದೆ. ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಫೋನ್‌ ಅನ್ನು ಎಷ್ಟು ಬಾರಿಯಾದರೂ ಮಡಚುವಂತೆ ಸಿದ್ಧಪಡಿಸಲಾಗಿದೆ ಎಂದು ಕಂಪನಿಯ ಹಿರಿಯ ಉಪಾಧ್ಯಕ್ಷ ಡೆನಿಸನ್‌ ತಿಳಿಸಿದ್ದಾರೆ.

ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌ ಆಂಡ್ರಾಯ್ಡ್‌ ಆಧಾರಿತ ಮೊಬೈಲ್ ಒಎಸ್‌ ಬಳಸಿಕೊಂಡು ತನ್ನದೇ ಆದ One UI ಅಭಿವೃದ್ಧಿಪಡಿಸಿದೆ. ಇದನ್ನೇ ಫೋಲ್ಡಿಂಗ್‌ ಫೋನ್‌ನಲ್ಲೂ ನೀಡಲಿದೆ. ಗೆಲಕ್ಸಿ ಎಕ್ಸ್‌ ಬಿಡುಗಡೆಯನ್ನು ಘೋಷಿಸುತ್ತಿದ್ದಂತೆಯೇ ತನ್ನ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂನಲ್ಲಿ ಫೋಲ್ಡಬಲ್‌ ಡಿಸ್‌ಪ್ಲೇಗೆ ಅಗತ್ಯವಾದ ಬೆಂಬಲ ಒದಗಿಸುವುದಾಗಿ ಗೂಗಲ್‌ ಖಾತರಿಪಡಿಸಿದೆ. ಹುವಾವೆ, ಎಲ್‌ಜಿ ಮತ್ತು ಮೈಕ್ರೊಸಾಫ್ಟ್‌ ಕಂಪನಿಗಳು ಸಹ ಫೋಲ್ಡಿಂಗ್‌ ಹ್ಯಾಂಡ್‌ಸೆಟ್‌ ತಯಾರಿಕೆಯಲ್ಲಿ ಮಗ್ನವಾಗಿವೆ.

ಸ್ಟ್ರೆಚ್ಚಿಂಗ್‌ ಫೋನ್‌!

ಫೋಲ್ಡಿಂಗ್‌ ಮೊಬೈಲ್ ಫೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಕ್ಕೂ ಮೊದಲೇ ಸ್ಯಾಮ್‌ಸಂಗ್‌ ಕಂಪನಿ ಸ್ಟ್ರೆಚಿಂಗ್‌ ಪೋನ್‌ ತಯಾರಿಕೆಯ ಸಿದ್ಧತೆಯಲ್ಲಿ ತೊಡಗಿಕೊಂಡಿದೆಯಂತೆ.

ಸ್ಯಾಮ್‌ಸಂಗ್‌ ತನ್ನ ಫೋಲ್ಡಿಂಗ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ತರಲು 5 ವರ್ಷ ತೆಗೆದುಕೊಂಡಿತು. ಸ್ಯಾಮ್‌ಸಂಗ್‌ ಗೆಲಕ್ಸಿ ಎಫ್‌ ಎನ್ನುವ ಫೋಲ್ಡಿಂಗ್‌ ಸ್ಮಾರ್ಟ್‌ಫೋನ್‌ ಫೆಬ್ರುವರಿ 20ರಂದು ಬಿಡುಗಡೆ ಮಾಡಲಿದೆ. ಹೀಗಿರುವಾಗಲೇ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಆಧುನಿಕ ತಂತ್ರಜ್ಞಾನದ ನೆರವಿನಿಂದ ಸ್ಟ್ರೆಚಬಲ್‌ ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.

ಸ್ಯಾಮ್‌ಸಂಗ್‌ನ ಹಿರಿಯ ಉಪಾಧ್ಯಕ್ಷ ಮತ್ತು ವಿಶ್ಯುವಲ್‌ ಆರ್‌ ಅಂಡ್ ಡಿ ಟೀಮ್‌ನ ಮುಖ್ಯಸ್ಥ ಹಾರ್ಕ್‌ ಸ್ಯಾಂಗ್‌ ಕಿಮ್ ಅವರು ತಮ್ಮ ಬ್ಲಾಗ್‌ನಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ.

‘ಸದ್ಯ, ಸ್ಮಾರ್ಟ್‌ಫೋನ್‌ಗಳ ಪರದೆಯು ಫೋನ್‌ ಪರದೆಯಷ್ಟೇ ಗಾತ್ರದ್ದಾಗಿದೆ. ಈ ಮಿತಿಯಿಂದ ಹೊರಬರುವುದು ಹೇಗೆ ಮತ್ತು ಪರದೆ ವಿಸ್ತರಿಸಲು ಇರುವ ಸಾಧ್ಯತೆಗಳ ಬಗ್ಗೆ ಪ್ರಶ್ನೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.ಮುಂದಿನ ವರ್ಷಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಗುರುತರ ಬದಲಾವಣೆಗಳನ್ನು ನೋಡಲಿದ್ದೇವೆ.

ರೋಲೆಬಲ್‌ನಿಂದ ಸ್ಟ್ರೆಚೆಬಲ್‌ ಸಾಧನಗಳು ಬರಲಿವೆ. ಅವುಗಳನ್ನು ಯಾವ ರೀತಿಯಲ್ಲಿ ಬೇಕಿದ್ದರೂ ಫೋಲ್ಡ್‌ ಮಾಡಲು ಸಾಧ್ಯವಾಗಲಿದೆ. ಗ್ರಾಹಕರಿಗೆ ಈ ಅನುಭವಗಳನ್ನು ಕೊಟ್ಟಿಕೊಡಲು ಸ್ಯಾಮ್‌ಸಂಗ್‌ ಸಿದ್ಧವಾಗಿದೆ. ಫ್ಲೆಕ್ಸಿಬಲ್‌ ಡಿಸ್‌ಪ್ಲೆ (ಬಾಗುವಂತಹ) ಸ್ಮಾರ್ಟ್‌ಫೋನ್‌ಗಳ ವಿನ್ಯಾಸ ಮತ್ತುಗಾತ್ರದಲ್ಲಿ ಹಲವು ರೀತಿಯ ಬದಲಾವಣೆಗಳನ್ನು ತರಲಿದೆ.

2013ರಲ್ಲಿ ಸ್ಯಾಮ್‌ಸಂಗ್‌ ಕಂಪನಿ ಪೋಲ್ಡಿಂಗ್‌ ಫೋನ್‌ ಪರಿಕಲ್ಪನೆಯ ಬಗ್ಗೆ ಪ್ರಸ್ತಾಪಿಸಿದ್ದಾಗ ಟೀಕೆ ವ್ಯಕ್ತವಾಗಿತ್ತು. ಆದರೆ, ಈಗ ಅದು ಸಾಕಾರಗೊಂಡಿದೆ. ಹಾಗೆಯೇ ಸ್ಟ್ರೆಚೆಬಲ್ ಪೋನ್‌ ಸಹ ಗ್ರಾಹಕರಕೈಸೇರುವ ನಿರೀಕ್ಷೆ ಇದೆ ಎನ್ನುತ್ತಿದ್ದಾರೆ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT