ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021 ರ ಟಾಪ್‌ ಸ್ಮಾರ್ಟ್‌ ಸಾಧನಗಳು: ಮೂರು ಸಾಧನಗಳ ಪುಟ್ಟ ಪರಿಚಯ

Last Updated 21 ಡಿಸೆಂಬರ್ 2021, 23:45 IST
ಅಕ್ಷರ ಗಾತ್ರ

ಡಿಸೆಂಬರ್‌ ಬಂತೆಂದರೆ ಸಾಕು, ಸಮೀಕ್ಷೆಗಳ ಮಹಾಪೂರವೇ ಹರಿದು ಬರುವುದು ಗ್ಯಾರಂಟಿ, ವರ್ಷದ ಟಾಪ್‌ ಟೆನ್‌ ಪುಸ್ತಕಗಳು, ವರ್ಷದ ಅತ್ಯುತ್ತಮ ನಟ-ನಟಿಯರು, ವರ್ಷದ ಹತ್ತು ಬೆಸ್ಟ್‌ ಸಿನೆಮಾ, ಅತ್ಯುತ್ತಮ ಶಾಲೆಗಳು - ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ತಂತ್ರಜ್ಞಾನ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಅದರಲ್ಲೂ ಸ್ಮಾರ್ಟ್‌ ಸಾಧನಗಳಲ್ಲಿ ಜನರು ಮೆಚ್ಚಿದ, ಜಗ ಮೆಚ್ಚಿದ ಪ್ರಮುಖ ಹೆಸರುಗಳ್ಯಾವುವು ಎಂದು ಗಮನಿಸೋಣ ಬನ್ನಿ. 2021ರಲ್ಲಿ ಬಿಡುಗಡೆಯಾಗಿ ಜನರನ್ನು ನಿಬ್ಬೆರಗಾಗಿಸಿದ ಟಾಪ್‌ ಮೂರು ಸ್ಮಾರ್ಟ್‌ ಸಾಧನಗಳ ಪುಟ್ಟ ಪರಿಚಯ ಇಲ್ಲಿದೆ.

ಆ್ಯಪಲ್‌ ಏರ್‌ಟ್ಯಾಗ್‌

ಮರೆಗುಳಿಗಳಿಗೆ ಆಪ್ತಮಿತ್ರ ಎನ್ನಬಹುದಾದ ಈ ಪುಟಾಣಿ ಸಾಧನವನ್ನು 2021ರಲ್ಲಿ ಅತಿ ಹೆಚ್ಚು ಇಷ್ಟಪಟ್ಟಿದ್ದಾರಂತೆ ಸ್ಮಾರ್ಟ್‌ಸಾಧನ ಪ್ರಿಯರು. ಆ್ಯಪಲ್‌ ಸಂಸ್ಥೆಯು ಐಫೋನ್‌ನ ಆಕ್ಸೆಸರಿಯಾಗಿ ಇದನ್ನು ಬಿಡುಗಡೆಮಾಡಿದ್ದು, ಇದು ದಿನನಿತ್ಯದ ಮರೆವಿನ ಜಂಜಡದಿಂದ ನಮ್ಮನ್ನು ಕಾಪಾಡಿದೆ ಎನ್ನುತ್ತಾರೆ ಐಫೋನ್‌ ಬಳಕೆದಾರರು. ಪರ್ಸು, ಬ್ಯಾಗು, ಕನ್ನಡಕ, ಬೆಲ್ಟ್‌, ಮುಖ್ಯ ದಾಖಲೆಗಳ ಫೈಲು – ಹೀಗೆ ಯಾವುದಕ್ಕೆ ಬೇಕಾದರೂ ಈ ಆ್ಯಪಲ್‌ ಏರ್‌ಟ್ಯಾಗ್‌ ಅನ್ನು ತಗಲಿಸಿದರೆ ಸಾಕು; ನಂತರ ಈ ವಸ್ತುಗಳೇನಾದರೂ ಕಳೆದುಹೋದರೆ ಅಥವಾ ಅವನ್ನು ಎಲ್ಲಿ ಜೋಪಾನ ಮಾಡಿದ್ದೀರೆಂದು ನೀವು ಮರೆತರೆ, ನಿಮ್ಮ ಫೋನಿನ ‘ಫೈಂಡ್‌ ಮೈ’ ಜಾಲಕ್ಕೆ ಹೋಗಿ ಟೈಪಿಸಿದರೆ ಸಾಕು! ನಿಮ್ಮ ಕಳೆದುಹೋದ ವಸ್ತುವಿನ ಲೊಕೇಶನ್‌ ನಿಮ್ಮ ಅಂಗೈಯಲ್ಲಿನ ಫೋನಿನಲ್ಲಿ ಹಾಜರ್‌! ಇದೊಂದು ಮಾಡರ್ನ್‌ ಕವಡೆಶಾಸ್ತ್ರದಂತೆ!

ನಥಿಂಗ್‌ ಇಯರ್‌(1) ಇಯರ್‌ಬಡ್ಸ್‌

ಹೆಡ್‌ಫೋನ್ಸ್‌, ಇಯರ್‌ಫೋನ್ಸ್‌ನ ಪ್ರಯಾಣ ಎಲ್ಲಿಂದೆಲ್ಲಿಗೆ ಬಂದು ತಲುಪಿದೆ ನೋಡಿ. ತಲೆಯ ಮೇಲೆ ಕಿರೀಟದಂತೆ ಧರಿಸುವ ಹೆಡ್‌ಫೋನ್‌ಗಳಿಂದ ಶುರುವಾಗಿ ಈಗ ಕಣ್ಣಿಗೇ ಕಾಣದ ಹಾಗೆ ವೈರ್‌ಲೆಸ್‌ ಇಯರ್‌ಫೋನ್ಸ್‌ನ ರೂಪ ತಳೆದಿದೆ. ‘ಇಯರ್‌ಫೋನ್‌/ಹೆಡ್‌ಫೋನ್‌ನಲ್ಲಿ ಹಾಯಾಗಿ ಹಾಡು ಕೇಳುತ್ತಾ, ಜಾಗಿಂಗ್‌ ಮಾಡೋಣ ಅಂದರೆ, ಹಾಳಾದ್ದು ವೈರ್‌ಗಳು ಅಡಿಗಡಿಗೂ ಕಾಡುತ್ತವೆ’ ಎನಿಸಿದಾಗ ಎದುರಿಗೆ ಬಂದದ್ದು ವೈರ್‌ಲೆಸ್‌ ಏರ್‌ಪಾಡ್ಸ್‌/ಇಯರ್‌ಬಡ್ಸ್‌. ಬಗೆಬಗೆಯ ವಿನ್ಯಾಸ, ಬಣ್ಣಗಳಲ್ಲಿ ಲಭ್ಯವಿರುವ ಈ ವೈರ್ಲೆಸ್‌ ಸಾಧನಗಳು, ಈಗ ಬಣ್ಣರಹಿತವಾಗಿ ಜನರನ್ನು ಮತ್ತಷ್ಟು ಸೆಳೆದಿವೆ. ಟಿಡಬ್ಲುಎಸ್‌ ಸಂಸ್ಥೆಯ ಕೊಡುಗೆಯಾದ ಈ ಪಾರದರ್ಶಕ ಇಯರ್‌ಬಡ್‌ಗಳನ್ನು ಅತ್ಯಂತ ಹೆಚ್ಚು ಜನರು ಇಷ್ಟಪಟ್ಟಿದ್ದು, ಮಾರುಕಟ್ಟೆಗೆ ಬಂದದ್ದೇ, ಬಿಸಿ ದೋಸೆಯಂತೆ ಖರ್ಚಾಗಿದೆಯಂತೆ. ಕಿವಿಗೆ ಏನೂ ಹಾಕಿಕೊಂಡಿಲ್ಲ ಎಂಬಂತೆ ಕಂಡುಬಂದರೂ, ಇದನ್ನು ಧರಿಸಿದಾಗ ನಿಮಗೆ ಗಂಧರ್ವಲೋಕದಲ್ಲಿ ಸಂಗೀತ ಕೇಳಿದಂತಹ ಅನುಭವ ಸಿಗುತ್ತದೆ ಎನ್ನುತ್ತದೆ ಸಂಸ್ಥೆ. ಅತ್ಯುತ್ಕೃಷ್ಟ ನಾಯ್ಸ್‌ ಕಾನ್ಸಲೇಶನ್‌ ವ್ಯವಸ್ಥೆಯಿಂದ ಕೂಡಿದ ಈ ಸಾಧನ, ಹೊರಗಿನ ಕಿರಿಕಿರಿಯ ಸದ್ದನ್ನು ನಿಮ್ಮವರೆಗೂ ತಲುಪಲು ಬಿಡದೇ, ನಿಮ್ಮಿಷ್ಟದ ಸಂಗೀತದಲ್ಲಿ ನಿಮ್ಮನ್ನು ತೇಲಿಸುತ್ತದೆ. ಜಾಗಿಂಗ್‌, ಜಿಮ್ಮಿಂಗ್‌ - ಹೀಗೆ ಯಾವುದೇ ಸಮಯದಲ್ಲಿ ನೀವು ಇದನ್ನು ಬಳಸಿದರೂ, ಬೆವರು ಅಥವಾ ನೀರಿನಿಂದ ಇದಕ್ಕೆ ಯಾವುದೇ ಹಾನಿಯಾಗದು. ಹಾಗಾಗಿಯೇ ಇದು ಎಲ್ಲರ ಫೇವರೆಟ್‌ ಎನ್ನುತ್ತಾರೆ ತಂತ್ರಜ್ಞಾನತಜ್ಞರು!

ಓಪ್ಪೊ ಏರ್‌ ಗ್ಲಾಸ್‌

ಲೇಟ್‌ ಆಗಿ ಬಂದರೂ, ಲೇಟೆಸ್ಟ್‌ ಆಗಿ ಬರುವುದು ಅನ್ನುವ ಆಡುಮಾತು ಇದಕ್ಕೆ ಹೇಳಿಮಾಡಿಸಿದ ಹಾಗಿದೆ. ಈ ವರ್ಷದ ಕೊನೆಗೆ ಮಾರುಕಟ್ಟೆಗೆ ಪರಿಚಯವಾದ ಈ ಸಾಧನ, ಅತ್ಯಂತ ಕಡಿಮೆ ಸಮಯದಲ್ಲಿ ಪ್ರಸಿದ್ಧಿ ಪಡೆದಿದೆ. ‘ಒಪ್ಪೋ’ ಸಂಸ್ಥೆಯೇ ಸಿದ್ಧಪಡಿಸಿದ ಸ್ಪಾರ್ಕ್‌ ಮೈಕ್ರೋಪ್ರೊಜೆಕ್ಟರನ್ನು ಒಳಗೊಂಡಿರುವ ಈ ಸಾಧನ, ನೋಡುವುದಕ್ಕೆ ಸಾಮಾನ್ಯ ಕನ್ನಡಕದಂತೆಯೇ ಕಾಣುತ್ತದೆ; ಆದರೆ ಇದು ಅಚ್ಚರಿಗಳ ಊಟೆ. ನಿಮ್ಮ ಫೋನು, ಟಿವಿ, ಅಥವಾ ಮತ್ಯಾವುದೇ ಸ್ಮಾರ್ಟ್‌ ಸಾಧನದೊಂದಿಗೆ ಸುಲಭವಾಗಿ ಸಂವಹನ ಸಾಧ್ಯವಾಗಿಸುವ ಈ ಕನ್ನಡಕ, ನಾಲ್ಕು ಬಗೆಯಲ್ಲಿ ನಿಮ್ಮ ಆಜ್ಞೆಗೆ ಓಗೊಡುತ್ತದೆ. ಸ್ಪರ್ಶ, ಧ್ವನಿ, ತಲೆಯ ಚಲನೆ ಮತ್ತು ಕೈಯ ಚಲನೆ – ಹೀಗೆ ನಾಲ್ಕು ಬಗೆಯಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಂಡು, ಅದರ ಮೂಲಕ ಈ ಏರ್‌ಗ್ಲಾಸ್‌ಗೆ ನಿಮ್ಮ ಮನದಿಂಗಿತವನ್ನು ತಿಳಿಸಿ; ಮರುಕ್ಷಣವೇ ನೀವು ತಿಳಿಸಿದವರಿಗೆ ಕರೆ ಮಾಡುವುದೋ, ನಿಮ್ಮ ಮನೆಯ ಸ್ಮಾರ್ಟ್‌ಲೈಟನ್ನು ಆನ್‌ ಮಾಡುವುದೋ, ನಿಮಗೆ ಬಂದ ವಾಯ್ಸ್‌ನೋಟನ್ನು ಪ್ಲೇಮಾಡುವುದೋ – ಹೀಗೆ ಎಲ್ಲವನ್ನೂ ಚಾಚು ತಪ್ಪದೇ ಮಾಡುತ್ತದೆಯಂತೆ. ಇದೇ ಕಾರಣಕ್ಕೇ ಇದು ಅಲ್ಪ ಸಮಯದಲ್ಲಿಯೇ ಜನರ ಮನಗೆದ್ದು, ಅವರ ಮುಖದ ಮೇಲೆ ರಾರಾಜಿಸುತ್ತಿದೆ ಎನ್ನುತ್ತವೆ ತಂತ್ರಜ್ಞಾನ ಸಮೀಕ್ಷೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT