ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Amazfit T-Rex ಸ್ಮಾರ್ಟ್‌ವಾಚ್, ಫಿಟ್ನೆಸ್ ಟ್ರ್ಯಾಕರ್ ಬೆಲೆ ₹9999

Last Updated 8 ಜೂನ್ 2020, 13:07 IST
ಅಕ್ಷರ ಗಾತ್ರ

ಸ್ಪೋರ್ಟ್ಸ್ ಮತ್ತು ಫಿಟ್ನೆಸ್ ಬಗ್ಗೆ ಕಾಳಜಿಯುಳ್ಳವರಿಗಾಗಿ ಬಿಡುಗಡೆ ಮಾಡಲಾಗಿರುವ ಅಮೇಜ್‌ಫಿಟ್ ಟಿ-ರೆಕ್ಸ್ ಎಂಬ ಸ್ಮಾರ್ಟ್ ವಾಚ್ ಜೂ.12ರಂದು ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆಯಾಗಲಿದೆ. 9999 ರೂ.ಗೆ ಲಭ್ಯವಿರುವ ಈ ಬಜೆಟ್ ಸ್ಮಾರ್ಟ್ ವಾಚ್‌ನ ಪ್ರಿ-ಆರ್ಡರ್ ಆರಂಭವಾಗಿದ್ದು, ಅಮೆಜಾನ್ ಹಾಗೂ in.amazfit.com ತಾಣಗಳಲ್ಲಿ ಲಭ್ಯವಿದೆ ಎಂದು ಹುವಾಮಿ ಕಾರ್ಪೊರೇಶನ್ ತಿಳಿಸಿದೆ.

ಹೊರಾಂಗಣಕ್ಕಾಗಿ ವಿಶೇಷವಾಗಿ ವಿನ್ಯಾಸಪಡಿಸಲಾಗಿರುವ ಈ ಸ್ಮಾರ್ಟ್ ವಾಚ್, ಮಿಲಿಟರಿ ಮಾನದಂಡ ಪರೀಕ್ಷೆಯ 12 ಹಂತಗಳನ್ನು ಪೂರೈಸಿದ್ದು, ಯಾವುದೇ ಹವಾಮಾನವನ್ನೂ ತಾಳಿಕೊಳ್ಳುವ ಗುಣಮಟ್ಟದ್ದಾಗಿದೆ ಎಂಬ ಮಾನ್ಯತೆ ಪಡೆದಿದೆ. ಮಳೆ, ಮಂಜು, ಹಿಮಪಾತ, ತೀವ್ರ ಉಷ್ಣತೆಯ ಪರಿಸ್ಥಿತಿಗಳಲ್ಲಿಯೂ ಅಂದರೆ 40ರಿಂದ 70 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲೂ ಇದು ಕೆಲಸ ಮಾಡಬಲ್ಲಷ್ಟು ದೃಢತೆ ಹೊಂದಿದೆ ಎಂದು ಕಂಪನಿ ಹೇಳಿದೆ.

ಈ ಸ್ಮಾರ್ಟ್ ವಾಚ್‌ನಲ್ಲಿ 14 ಸ್ಪೋರ್ಟ್ಸ್ ಮೋಡ್‌ಗಳಿದ್ದು, ಸೈಕ್ಲಿಂಗ್, ಸ್ಕೀಯಿಂಗ್ ಮುಂತಾದ ಚಟುವಟಿಕೆಗಳಲ್ಲಿ ದೇಹದ ಶ್ರಮವನ್ನು ಟ್ರ್ಯಾಕ್ ಮಾಡುತ್ತದೆ. 1.3 ಇಂಚಿನ ಉತ್ತಮ ಸ್ಪಷ್ಟತೆಯ AMOLED ಸ್ಕ್ರೀನ್, ಜಿಪಿಎಸ್, ಗ್ಲೋನಾಸ್, ಹೃದಯ ಬಡಿತ ಅಳೆಯುವ ಸಂವೇದಕವುಳ್ಳ ಬಯೋಟ್ರ್ಯಾಕರ್, ನಿದ್ದೆಯ ಜಾಡುಹಿಡಿಯುವ ಸೆನ್ಸರ್ ಕೂಡ ಇದರಲ್ಲಿದೆ. 20 ದಿನಗಳ ಬ್ಯಾಟರಿ ಸಾಮರ್ಥ್ಯವು ಇದರ ವಿಶೇಷಗಳಲ್ಲೊಂದು.

ಪ್ರತಿಕೂಲ ವಾತಾವರಣಗಳನ್ನು ಇಷ್ಟಪಡುವ ಸಾಹಸಪ್ರವೃತ್ತಿಯ ಯುವಪೀಳಿಗೆಗೆ ಅಮೆಜ್‌ಫಿಟ್ ಟಿ-ರೆಕ್ಸ್ ಸೂಕ್ತವಾಗಿದ್ದು, ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಹರ್ಷವಾಗುತ್ತಿದೆ ಎಂದು ಹುವಾಮಿ ವಿದೇಶೀ ವ್ಯವಹಾರದ ಉಪಾಧ್ಯಕ್ಷ ಮಾರ್ಕ್ ಮಾವೊ ತಿಳಿಸಿದ್ದಾರೆ.

ಸೋನಿ ಜಿಪಿಎಸ್ ಚಿಪ್ ಇದರಲ್ಲಿದ್ದು, 20 ಗಂಟೆ ನಿರಂತರವಾಗಿ ಕೆಲಸ ಮಾಡಬಲ್ಲುದು. ಸಾಗಿದ ದೂರ, ಕ್ರಿಯಾಶೀಲವಾಗಿದ್ದ ಸಮಯ, ಕ್ಯಾಲೊರಿಗಳು, ಹೆಜ್ಜೆಗಳು, ನಿದ್ದೆ ಮುಂತಾದವುಗಳ ಜಾಡು ಇರಿಸಿಕೊಳ್ಳುವ ಇದು, ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವವರಿಗೆ ಸೂಕ್ತ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT