ಮಂಗಳವಾರ, ಅಕ್ಟೋಬರ್ 27, 2020
22 °C

ಆ್ಯಪಲ್ ಐಫೋನ್ 12, 12 ಪ್ರೊ ಮಾದರಿಯ 5ಜಿ ಫೋನ್‌ಗಳ ಅನಾವರಣ; ಗಮನ ಸೆಳೆದ 'ಮಿನಿ‘

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಐಫೋನ್‌ 12 ಮಿನಿ–ಚಿತ್ರ ಕೃಪೆ: ಆ್ಯಪಲ್‌ ವೆಬ್‌ಸೈಟ್‌

ವಾಷಿಂಗ್ಟನ್‌: ಜಗತ್ತಿನಾದ್ಯಂತ ಬಳಕೆಗೆ ಸಿದ್ಧವಾಗಿರುವ 5ಜಿ ತಂತ್ರಜ್ಞಾನ ಆಧರಿತ ಹೊಸ ಐಫೋನ್‌ಗಳನ್ನು ಆ್ಯಪಲ್‌ ಕಂಪನಿ ಪರಿಚಯಿಸಿದೆ.

6.1 ಇಂಚು ಡಿಸ್‌ಪ್ಲೇ ಇರುವ 'ಐಫೋನ್‌ 12', ಗಾತ್ರದಲ್ಲಿ ಐಫೋನ್‌ 11 ಮಾದರಿಯಂತೆಯೇ ಕಂಡರೂ ಇನ್ನಷ್ಟು ಹಗುರ ಮತ್ತು ತೆಳುವಾಗಿದೆ, ಈ ಫೋನ್‌ ಆರಂಭಿಕ ಬೆಲೆ 800 ಡಾಲರ್‌ ಇದೆ. ಹೊಸ ಫೋನ್‌ಗಳ ಪೈಕಿ ಗಮನ ಸೆಳೆದಿರುವುದು 'ಐಫೋನ್‌ 12 ಮಿನಿ'. ಹೆಸರಿಗೆ ತಕ್ಕಂತೆ ಫೋನಿನ ಗಾತ್ರವೂ ಸಣ್ಣದಿದ್ದು, 5.4 ಇಂಚು ಡಿಸ್‌ಪ್ಲೇ ಹೊಂದಿದೆ. ಇದರ ಬೆಲೆ ಸುಮಾರು 700 ಡಾಲರ್.

ಅಧಿಕ ಸಾಮರ್ಥ್ಯದ ಕ್ಯಾಮೆರಾಗಳೊಂದಿಗೆ 'ಐಫೋನ್‌ 12 ಪ್ರೊ' ಮತ್ತು 'ಐಫೋನ್‌ 12 ಪ್ರೊ ಮ್ಯಾಕ್ಸ್‌' ಫೋನ್‌ಗಳು ಅನಾವರಣಗೊಂಡಿವೆ. 6.7 ಇಂಚು ಡಿಸ್‌ಪ್ಲೇ ಇರುವ ಐಫೋನ್‌ 12 ಪ್ರೊ ಮ್ಯಾಕ್ಸ್‌ಗೆ ಕನಿಷ್ಠ 1,100 ಡಾಲರ್‌ ಇರಬಹುದು, ಐಫೋನ್‌ 12 ಪ್ರೊ ಬೆಲೆ ಸುಮಾರು 1,000 ಡಾಲರ್‌ ಇರಲಿದೆ. ಐಫೋನ್‌ 12 ಪ್ರೊ ಫೋನ್‌ಗೆ 6.1 ಇಂಚು ಡಿಸ್‌ಪ್ಲೇ ಅಳವಡಿಸಲಾಗಿದೆ.

ಫೋನ್‌ಗಳು ದೀರ್ಘಕಾಲ ಬಾಳಿಕ ಬರುವಂತಿರಬೇಕು ಎಂದು ಆ್ಯಪಲ್‌ ಹೇಳಿದೆ. ಹೊಸ ಐಫೋನ್‌ಗಳೊಂದಿಗೆ ಕಂಪನಿಯು ಚಾರ್ಜಿಂಗ್‌ ಅಡಾಪ್ಟರ್‌ ನೀಡುತ್ತಿಲ್ಲ!

ಆ ಮೂಲಕ ಫೋನ್‌ ಬಾಕ್ಸ್‌ ಗಾತ್ರ ಮತ್ತು ತೂಕ ಕಡಿಮೆ ಮಾಡಬಹುದು ಹಾಗೂ ಇನ್ನಷ್ಟು ಪರಿಸರಸ್ನೇಹಿ ಮಾರ್ಗಗಳ ಮೂಲಕ ಫೋನ್‌ಗಳನ್ನು ಸಾಗಿಸಬಹುದಾಗಿದೆ ಎಂದು ಆ್ಯಪಲ್‌ ಹೇಳಿದೆ. ಪವರ್‌ ಅಡಾಪ್ಟರ್‌ಗಳನ್ನು ಗ್ರಾಹಕರು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ. ಫೋನ್‌ ಚಾರ್ಜ್‌ ಮಾಡುವ ವೇಗವನ್ನು ಆಧರಿಸಿ ಅಡಾಪ್ಟರ್‌ ಬೆಲೆ 20ರಿಂದ 50 ಡಾಲರ್‌ ಇರಲಿದೆ. ಇನ್ನೂ ಇಯರ್‌ಪಾಡ್‌ಗಳನ್ನೂ ಸಹ ಅಗತ್ಯಕ್ಕೆ ತಕ್ಕಂತೆ ಖರೀದಿಸಬಹುದು.


ಐಫೋನ್‌ 12 ಪ್ರೊ ಮತ್ತು 12 ಪ್ರೊ ಮ್ಯಾಕ್ಸ್‌

ವೇಗದ 5ಜಿ ಸಂಪರ್ಕ ವ್ಯವಸ್ಥೆಗೆ ಸಹಕಾರಿಯಾಗುವ ಹೊಸ ಫೋನ್‌ಗಳಲ್ಲಿ ಸಿನಿಮಾ, ಗೇಮ್‌ಗಳು ಮತ್ತಷ್ಟು ಕ್ಷಿಪ್ರವಾಗಿ ಡೌನ್‌ಲೋಡ್‌ ಆಗಲಿವೆ, ಗರಿಷ್ಠ 200ಎಂಬಿಪಿಎಸ್‌ ವರೆಗಿನ ಡೌನ್‌ಲೋಡ್‌ ವೇಗಕ್ಕೆ ಸಹಕಾರಿಯಾಗಿದೆ. ಮಂಗಳವಾರ ಅನಾವರಣವಾಗಿರುವ ಫೋನ್‌ಗಳ ಪೈಕಿ ಐಫೋನ್‌ 12 ಮತ್ತು 12 ಪ್ರೊ ಅಕ್ಟೋಬರ್‌ 23ರಿಂದ ಖರೀದಿಗೆ ಸಿಗಲಿದೆ. ಐಫೋನ್‌ 12 ಮಿನಿ ಮತ್ತು ಪ್ರೊ ಮ್ಯಾಕ್ಸ್‌ ಫೋನ್‌ಗಳಿಗಾಗಿ ನವೆಂಬರ್‌ 13ರ ವರೆಗೂ ಕಾಯಬೇಕಿದೆ.

ಫೋನ್‌ಗಳೊಂದಿಗೆ ಹೋಂ ಪಾಡ್‌ ಮಿನಿ ಸಹ ಬಿಡುಗಡೆಯಾಗಿದೆ.

* ಐಫೋನ್‌ 12 ಮತ್ತು 12 ಮಿನಿ

ಸ್ಮಾರ್ಟ್‌ಫೋನ್‌ ಉದ್ಯಮದಲ್ಲಿಯೇ ಅತ್ಯಂತ ಸಮರ್ಥ್ಯ ಚಿಪ್‌ ಎಂದು ಹೆಸರಾಗಿರುವ ಆ್ಯಪಲ್‌ನ 'ಎ14 ಬಯೋನಿಕ್‌' ಪ್ರೊಸೆಸರ್ ಇದೆ, ಫೋನ್‌ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳಿವೆ. ಈ ಫೋನ್‌ಗಳಲ್ಲಿರುವ 'ಸ್ಮಾರ್ಟ್‌ ಡೇಟಾ ಮೋಡ್‌' ಸೌಲಭ್ಯವು 5ಜಿ ವೇಗದ ಅಗತ್ಯಗಳನ್ನು ಸರಿದೂಗಿಸುತ್ತದೆ ಹಾಗೂ ಬ್ಯಾಟರಿ ಚಾರ್ಜ್‌ ಉಳಿಸುವತ್ತ ಗಮನಿಸುತ್ತದೆ. 'ಐಫೋನ್‌ 12 ಮಿನಿ ಜಗತ್ತಿನಲ್ಲೇ ಅತ್ಯಂತ ತೆಳುವಾದ, ಹಗುರವಾದ ಹಾಗೂ ಚಿಕ್ಕದಾದ ಸಮರ್ಥ 5ಜಿ ಸ್ಮಾರ್ಟ್‌ಫೋನ್‌ ಆಗಿದೆ' ಎಂದು ಕಂಪನಿ ಹೇಳಿಕೊಂಡಿದೆ.

ಸೂಪರ್‌ ರೆಟಿನಾ ಎಕ್ಸ್‌ಡಿಆರ್‌ ಡಿಸ್‌ಪ್ಲೇ ಇದೆ. ವೈರ್‌ಲೆಸ್‌ ಚಾರ್ಜಿಂಗ್ ಹಾಗೂ ನೀರು ಒಳ ಹೋಗುವುದನ್ನು ತಡೆಯುವ ತಂತ್ರಜ್ಞಾನವಿದೆ. ಸುಮಾರು 19 ಅಡಿ ನೀರಿನ ಆಳದಲ್ಲಿ 30 ನಿಮಿಷಗಳ ವರೆಗೂ ಫೋನ್‌ ಸುರಕ್ಷಿತವಾಗಿರುತ್ತದೆ. ಫೋನ್‌ ಹಿಂಬದಿಯಲ್ಲಿ 12ಎಂಪಿ ಎರಡು ಕ್ಯಾಮೆರಾಗಳಿವೆ ಹಾಗೂ ಸೆಲ್ಫಿಗಾಗಿ 12ಎಂಪಿ ಕ್ಯಾಮೆರಾ ನೀಡಲಾಗಿದೆ. 4ಕೆ ಗುಣಮಟ್ಟದ ವಿಡಿಯೊ ರೆಕಾರ್ಡಿಂಗ್‌, ರಾತ್ರಿ ಸಮಯದಲ್ಲಿಯೂ ಸ್ಪಷ್ಟವಾಗಿ ಫೋಟೊ ಸೆರೆಹಿಡಿಯುವ ಸಾಮರ್ಥ್ಯ, ಹಲವು ಎಫೆಕ್ಟ್‌ಗಳು, ಜೂಮ್‌, ಕ್ವಿಕ್‌ ಟೇಕ್‌ ವಿಡಿಯೊ ಸೇರಿದಂತೆ ಬಹಳಷ್ಟು ಕ್ಯಾಮೆರಾ ಸೌಲಭ್ಯಗಳಿವೆ.

ಎರಡೂ ಫೋನ್‌ಗಳಲ್ಲಿ ಬ್ಯಾಟರಿ ಒಮ್ಮೆ ಪೂರ್ಣ ಚಾರ್ಜ್‌ ಮಾಡಿ 11 ಗಂಟೆಗಳು ನಿರಂತರವಾಗಿ ಬಳಸಬಹುದಾಗಿದೆ. 10 ಗಂಟೆಗಳು ವೈಫೈನಿಂದ ವಿಡಿಯೊ ಸ್ಟ್ರೀಮಿಂಗ್‌ ಮಾಡುವಷ್ಟು ಚಾರ್ಜ್‌ ಇರಲಿದೆ ಎಂದು ಆ್ಯಪಲ್‌ ಹೇಳಿದೆ. 20 ವ್ಯಾಟ್‌ ಮತ್ತು ಹೆಚ್ಚಿನ ಸಾಮರ್ಥ್ಯ ಅಡಾಪ್ಟರ್‌ನೊಂದಿಗೆ ಚಾರ್ಜ್‌ ಮಾಡಬಹುದಾಗಿದ್ದು, 30 ನಿಮಿಷಗಳಲ್ಲಿ ಬ್ಯಾಟರಿ ಶೇ 50ರಷ್ಟು ಚಾರ್ಜ್‌ ಆಗುತ್ತದೆ. 'ಮ್ಯಾಗ್‌ ಸೇಫ್‌' ತಂತ್ರಜ್ಞಾನ ಪರಿಚಯಿಸಿದ್ದು, ಇದರಿಂದ ವೈರ್‌ಲೆಸ್‌ ಚಾರ್ಜಿಂಗ್‌ ಬಳಕೆ ಮತ್ತುಷ್ಟು ಸುಲಭ ಹಾಗೂ ಪರಿಣಾಮಕಾರಿಯಾಗಲಿದೆ.

ನೀಲಿ, ಹಸಿರು, ಬಿಳಿ, ಕಪ್ಪು ಹಾಗೂ ಕೆಂಪು ಬಣ್ಣಗಳಲ್ಲಿ ಫೋನ್‌ ಸಿಗಲಿದೆ. 64ಜಿಬಿ, 128ಜಿಬಿ ಹಾಗೂ 256ಜಿಬಿ ಸಂಗ್ರಹ ಸಾಮರ್ಥ್ಯಗಳಲ್ಲಿ ಫೋನ್‌ ಸಿಗಲಿದ್ದು, ಭಾರತದಲ್ಲಿ ಅಕ್ಟೋಬರ್‌ 30ರಿಂದ ಲಭ್ಯವಾಗಲಿದೆ. ಐಫೋನ್‌ 12 ಬೆಲೆ ಕ್ರಮವಾಗಿ ₹79,900, ₹84,900 ಹಾಗೂ ₹94,900 ಇರಲಿದೆ. ಐಫೋನ್‌ 12 ಮಿನಿ ಆರಂಭಿಕ ಬೆಲೆ ₹69,900.

* ಐಫೋನ್‌ 12 ಪ್ರೊ ಮತ್ತು ಪ್ರೊ ಮ್ಯಾಕ್ಸ್‌

ಈ ಫೋನ್‌ಗಳಲ್ಲಿ 12ಎಂಪಿ ಸೆನ್ಸರ್‌ನ ಮೂರು (ಅಲ್ಟ್ರಾ ವೈಡ್‌+ವೈಡ್‌+ಟೆಲಿಫೋಟೊ) ಕ್ಯಾಮೆರಾಗಳಿವೆ. 12 ಪ್ರೊ ಮಾದರಿಗಳಲ್ಲಿ ಎಲ್‌ಐಡಿಎಆರ್‌ ತಂತ್ರಜ್ಞಾನವಿದೆ, ನಾಸಾ ಸಹ ಲೈಟ್‌ ಡಿಟೆಕ್ಷನ್‌ ಆ್ಯಂಡ್ ರೇಂಜಿಂಗ್‌ ತಂತ್ರಜ್ಞಾನ ಬಳಕೆ ಮಾಡುತ್ತಿದೆ. ಇರುವ ಸ್ಥಳದ ಡೆಪ್ತ್‌ ಮ್ಯಾಪ್‌ ರೂಪಿಸಲು ಇದು ಸಹಕಾರಿಯಾಗಿದೆ.

ಒಮ್ಮೆ ಬ್ಯಾಟರಿ ಪೂರ್ಣ ಚಾರ್ಜ್‌ ಮಾಡಿದರೆ 12 ಗಂಟೆಗಳು ಫೋನ್‌ ಬಳಸಬಹುದಾಗಿದೆ. ಉಳಿದಂತೆ ಐಫೋನ್‌ 12ರ ಸೌಲಭ್ಯಗಳು ಈ ಫೋನ್‌ಗಳಲ್ಲಿಯೂ ಮುಂದುವರಿದಿದೆ.

ಪ್ರೊ ಮಾದರಿಗಳಲ್ಲಿ ಸಂಗ್ರಹ ಸಾಮರ್ಥ್ಯ 128ಜಿಬಿ, 256ಜಿಬಿ ಹಾಗೂ 512ಜಿಬಿ ಇದ್ದು, 12 ಪ್ರೊ ಫೋನ್‌ಗಳಿಗೆ ₹1,19,900ರಿಂದ ₹1,59,600ರ ವರೆಗೂ ಬೆಲೆ ಇದೆ. 12 ಪ್ರೊ ಮ್ಯಾಕ್ಸ್‌ ಫೋನ್‌ಗಳಿಗೆ ₹1,29,900ರಿಂದ ₹1,59,900 ಇದೆ. ಪೆಸಿಫಿಕ್‌ ಬ್ಲೂ, ಗೋಲ್ಡ್‌, ಸಿಲ್ವರ್‌ ಹಾಗೂ ಗ್ರಾಫೈಟ್‌ ಬಣ್ಣಗಳಲ್ಲಿ ಸಿಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು