ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಯ ರೋಗದ ಮಾಹಿತಿ ನೀಡುವ ‘ಪ್ಲಾಂಟಿಕ್ಸ್‌’ ಆ್ಯಪ್‌

ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಬಿಡುಗಡೆ
Last Updated 15 ಅಕ್ಟೋಬರ್ 2018, 19:35 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ಬೆಳೆ ರೋಗದ ಮಾಹಿತಿ ನೀಡುವ ‘ಪ್ಲಾಂಟಿಕ್ಸ್’ ಆ್ಯಪ್‌ ಅನ್ನು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಸೋಮವಾರ ಬಿಡುಗಡೆ ಮಾಡಿದರು.

ಈ ತಂತ್ರಾಂಶವನ್ನು ಜರ್ಮನಿಯ ಪೀಟ್‌ ಕಂಪನಿ ಅಭಿವೃದ್ಧಿಪಡಿಸಿದೆ. ಈ ಆ್ಯಪ್‌ ಇಂಗ್ಲಿಷ್‌ ಭಾಷೆಯಲ್ಲಿದ್ದು, ಆರು ಲಕ್ಷಕ್ಕೂ ಅಧಿಕ ಬಳಕೆದಾರರು ಇದ್ದಾರೆ. ಇದೀಗ ಕನ್ನಡದಲ್ಲಿ ತಂತ್ರಾಂಶ ಬಿಡುಗಡೆ ಮಾಡಲಾಗಿದೆ.

‘ಮುಸುಕಿನಜೋಳಕ್ಕೆ ಈ ಹಿಂದೆ ರೋಗ ಬಂದಿತ್ತು. ರೋಗ ಪತ್ತೆ ಹಚ್ಚುವ ಮುನ್ನವೇ ಲಕ್ಷ ಎಕರೆ ಬೆಳೆ ಹಾನಿಯಾಗಿತ್ತು. ನಾವು ರೋಗ ಪತ್ತೆ ಹಚ್ಚಲು ನಾಲ್ಕೈದು ದಿನಗಳನ್ನು ತೆಗೆದುಕೊಳ್ಳುತ್ತೇವೆ. ಇದರಿಂದ ರೋಗ ಮತ್ತಷ್ಟು ವ್ಯಾಪಕವಾಗಿ ಹರಡುತ್ತದೆ. ಆದರೆ, ಆ್ಯಪ್‌ ಮೂಲಕ ಕೂಡಲೇ ರೋಗ ಪತ್ತೆ ಹಚ್ಚಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬಹುದು’ ಎಂದರು.

‘ರೈತರು, ವಿಸ್ತರಣಾ ಕಾರ್ಯಕರ್ತರು ಹಾಗೂ ರೈತರಿಗೆ ಇದು ನೆರವಾಗಲಿದೆ. ತಾಲ್ಲೂಕು ಕೇಂದ್ರಗಳಲ್ಲಿ ಅಧಿಕಾರಿಗಳ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಿಕೊಂಡಿದ್ದೇವೆ. ಅವುಗಳ ಮೂಲಕ ಜಾಗೃತಿ ಮೂಡಿಸುತ್ತೇವೆ. ತಂತ್ರಾಂಶ ಬಳಕೆಯ ಬಗ್ಗೆ ರೈತರಿಗೆ ತರಬೇತಿ ನೀಡಲಿದ್ದೇವೆ’ ಎಂದರು.

ಆ್ಯಪ್‌ ಕಾರ್ಯನಿರ್ವಹಣೆ: ಆ್ಯಪ್‌ನ ಹೋಂ ಪೇಜ್‌ನಲ್ಲಿ ಕ್ಯಾಮರಾ, ಸಮುದಾಯ (ಕಮ್ಯೂನಿಟಿ), ವಾತಾವರಣ, ಗ್ರಂಥಾಲಯ ಆಯ್ಕೆಗಳು ಇವೆ. ಕ್ಯಾಮರಾ ಮೂಲಕ ಬೆಳೆಯನ್ನು ಬಾಧಿಸುವ ಕೀಟ, ಪೋಷಕಾಂಶಗಳ ಕೊರತೆಯ ಲಕ್ಷಣಗಳನ್ನು ಸೆರೆ ಹಿಡಿದು ಅಪ್‌ಲೋಡ್‌ ಮಾಡಬೇಕು. ಹೀಗೆ ಮಾಡಿದ 10 ಸೆಕೆಂಡ್‌ ಒಳಗಡೆ ರೈತರಿಗೆ ಸಮಸ್ಯೆಯ ವಿವರಣೆ, ಬಾಧಿಸುವ ಕೀಟ, ಪರಿಹಾರೋಪಾಯ, ಪೋಷಕಾಂಶಗಳ ಕೊರತೆಯನ್ನು ವಿವರಿಸಿ ಆ ಸಮಸ್ಯೆಗೂ ಸೂಕ್ತ ಸಲಹೆ ನೀಡುತ್ತದೆ. ತಂತ್ರಾಂಶವು ಒಂದು ವಾರದ ಮಳೆ, ತಾಪಮಾನ, ಆರ್ದ್ರತೆಗಳ ಮುನ್ಸೂಚನೆ ನೀಡುತ್ತದೆ.

ರೂಪುರೇಷೆ ಸಿದ್ಧ

ಇಸ್ರೇಲ್ ಮಾದರಿ ಕೃಷಿ ಪದ್ಧತಿಯ ರೂಪುರೇಷೆ ಸಿದ್ಧಪಡಿಸಲಾಗಿದ್ದು, 3–4 ದಿನಗಳಲ್ಲಿ ಮುಖ್ಯಮಂತ್ರಿ ಅವರಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಶಿವಶಂಕರ ರೆಡ್ಡಿ ತಿಳಿಸಿದರು.

ನಾಲ್ಕು ಮಾದರಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಒಂದು ತಿಂಗಳಲ್ಲಿ ಯೋಜನೆಗೆ ಚಾಲನೆ ನೀಡಲು ಉದ್ದೇಶಿಸಿದ್ದೇವೆ ಎಂದರು.

‘ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ಫಾರ್ಮ್‌ಗಳಲ್ಲಿ 500–600 ಎಕರೆ ಜಾಗಗಳು ಇವೆ. ಇಲ್ಲಿ ಈ ಮಾದರಿಯನ್ನು ಅಳವಡಿಸುವ ಚಿಂತನೆ ಇದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ, ಕೆರೆ ಆಶ್ರಿತ ಪ್ರದೇಶಗಳಲ್ಲಿ ಅನುಷ್ಠಾನ ಮಾಡಲಿದ್ದೇವೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಾಮೂಹಿಕ ಕೃಷಿ ಪದ್ಧತಿ ಅನುಸರಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT