ಗುರುವಾರ , ಏಪ್ರಿಲ್ 2, 2020
19 °C

‘ಕೊರೊನಾ’ ಕಾಮಿಕ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಸ್‌ ಬಗ್ಗೆ ಮಕ್ಕಳ ಮುಗ್ಧ ಮನಸ್ಸುಗಳಲ್ಲಿ ಮೂಡಿರುವ ಅವ್ಯಕ್ತ ಭಯವನ್ನು ದೂರ ಮಾಡಲು ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಪ್ರಯೋಗವೊಂದಕ್ಕೆ ಕೈ ಹಾಕಿದೆ. 

‘ಕಿಡ್ಸ್‌, ವಾಯು ಆ್ಯಂಡ್‌ ಕೊರೊನಾ’ ಮತ್ತು ‘ಕಿಡ್ಸ್‌, ವಾಯು ಆ್ಯಂಡ್‌ ಕೊರೊನಾ–2’ ಹೂ ವಿನ್ಸ್‌ ದ ವಾರ್‌... ಎಂಬ ಅಡಿ ಬರಹದಲ್ಲಿ ಎರಡು ಕಾಮಿಕ್‌ ಸರಣಿ ಪುಸ್ತಕಗಳನ್ನು ಹೊರತಂದಿದೆ.  

ಇಡೀ ವಿಶ್ವವನ್ನು ಕಾಡುತ್ತಿರುವ ಕೋವಿಡ್‌–19 ತಡೆಗಟ್ಟಲು ಸೂಪರ್‌ಮ್ಯಾನ್‌, ಸ್ಪೈಡರ್‌ಮ್ಯಾನ್‌ ರೀತಿಯಲ್ಲಿಯೇ ‘ವಾಯು’ ಎಂಬ ಕಾಲ್ಪನಿಕ ಪಾತ್ರವನ್ನು ಸೃಷ್ಟಿಸಲಾಗಿದೆ. 

ಹಿಮಾಲಯದ ಪರ್ವತಶ್ರೇಣಿಯಲ್ಲಿ ವಾಸಿಸುವ ‘ವಾಯು’ ಎಂಬ ಯುವಕ ಈ ಕತೆಯ  ಸೂಪರ್ ಹೀರೊ. ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್‌ ಮುಖ್ಯ ವಿಲನ್‌. ವಾಯುವಿನ ಸ್ನೇಹಿತರಾದ ಪುಟ್ಟ ಮಕ್ಕಳು ಸಹ ಪಾತ್ರಧಾರಿಗಳು. 

ಸದಾ ದೇಶದ ಜನರ ಆರೋಗ್ಯ ಮತ್ತು ಪರಿಸರ ರಕ್ಷಣೆಗೆ ಹೋರಾಡುವ ಹೀರೊ ‘ವಾಯು’ ಹೊಸ ರೋಗದ ವಿರುದ್ಧ ಹೇಗೆ ಹೋರಾಡಿ ಗೆಲ್ಲುತ್ತಾನೆ. ಪುಟ್ಟ ಮಕ್ಕಳನ್ನು ಅವರ ಸ್ನೇಹಿತರು, ಕುಟುಂಬವನ್ನು ಹೇಗೆ ಕಾಪಾಡುತ್ತಾನೆ ಎಂಬ ಎಳೆಯನ್ನು ಇಟ್ಟುಕೊಂಡು ಕತೆ ಹೆಣೆಯಲಾಗಿದೆ. 

ಕೊರೊನಾ ವೈರಾಣುವಿನ ವಿರುದ್ಧ ಮಕ್ಕಳ ಜತೆ ಸೇರಿ ವಾಯು ನಡೆಸುವ ದಿಟ್ಟ ಹೋರಾಟವನ್ನು ಕುತೂಹಲಕಾರಿಯಾಗಿ ಮಕ್ಕಳ ಮನಮುಟ್ಟುವಂತೆ ಕಾಮಿಕ್‌ ರೂಪದಲ್ಲಿ ಕಟ್ಟಿ ಕೊಡಲಾಗಿದೆ. ಅದರ ಜತೆಯಲ್ಲಿಯೇ ಇಂಥ ಸಂದಿಗ್ಧ ಸಮಯದಲ್ಲಿ ನಮ್ಮ ಆರೋಗ್ಯ, ಸ್ವಚ್ಛತೆ ಹೇಗೆ ಕಾಪಾಡಿಕೊಳ್ಳಬೇಕು ಎಂಬ ನೀತಿ ಬೋಧನೆ ಕೂಡ ಇದೆ.  

14 ವರ್ಷದೊಳಗಿನ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕಾಮಿಕ್‌ ಸರಣಿ ರೂಪಿಸಲಾಗಿದೆ. ಮಕ್ಕಳಲ್ಲಿ ಕೊರೊನಾ ಸೋಂಕಿನ ಬಗ್ಗೆ ಇರುವ ಭಯವನ್ನು ಹೋಗಲಾಡಿಸಿ, ಅರಿವು ಮೂಡಿಸುವ ಉದ್ದೇಶ ಈ ಎರಡು ಕಾಮಿಕ್‌ ಸಿರೀಸ್‌ನದ್ದು ಎನ್ನುತ್ತಾರೆ ಇದನ್ನು ರೂಪಿಸಿರುವ ಪಂಜಾಬ್ ವಿಶ್ವವಿದ್ಯಾಲಯ ಮತ್ತು ಚಂಡಿಗಡದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ.  

ಮಕ್ಕಳ ಅನೇಕ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸುವ ವ್ಯವಧಾನ ಸದ್ಯ ಪೋಷಕರಿಗೆ ಇಲ್ಲ. ಮುಗ್ಧ ಮನಸ್ಸುಗಳಲ್ಲಿ ಮನೆ ಮಾಡಿರುವ ಭಯ, ಸಂದೇಹ, ಗೊಂದಲಗಳಿಗೆ ಈ ಕಾಮಿಕ್‌ ತೆರೆ ಎಳೆಯುತ್ತದೆ. ಮಕ್ಕಳ ಅನೇಕ ಪ್ರಶ್ನೆಗಳಿಗೆ ಅತ್ಯಂತ ಸರಳವಾಗಿ ಉತ್ತರ ನಿಡುವ ಮೂಲಕ ‘ವಾಯು‘ ಅವರ ಸೂಪರ್‌ ಹೀರೊ ಆಗುತ್ತಾನೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು