ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌: ಮೊಬೈಲ್‌ ಫೋನ್‌ ಸ್ಯಾನಿಟೈಸ್‌ ಮಾಡುವುದು ಹೇಗೆ? 

Last Updated 23 ಮಾರ್ಚ್ 2020, 10:26 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು:ಸೋಪ್‌, ಸೋಪ್‌ ವಾಶ್‌ ಬಳಸಿ ಪದೇ ಪದೇ ಕೈಗಳನ್ನು ತೊಳೆಯುವುದು, ಸ್ಯಾನಿಟೈಸರ್‌ ಬಳಸುವುದು ಸಾಮಾನ್ಯವಾಗಿದೆ. ಅರೆ ಕ್ಷಣವೂ ಫೋನ್‌ನಿಂದ ದೂರ ಉಳಿಯಲು ಚಡಪಡಿಸುವ ಜನರಿಗೆ ಅದೇ ಫೋನ್‌ ವೈರಸ್‌ ಸೋಂಕು ತಗುಲಲು ಕಾರಣವಾದರೆ?!

ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಡಿಜಿಟಲ್ ಉಪಕರಣಗಳ ಕುರಿತಾದ ಅಂಶಗಳು ಬಹುತೇಕ ನಿರ್ಲರ್ಕ್ಷ್ಯಕ್ಕೆ ಒಳಗಾಗಿವೆ. ಪ್ಲಾಸ್ಟಿಕ್‌, ಸ್ಟೀಲ್‌ನಂತಹ ವಸ್ತುಗಳ ಮೇಲೂ ವೈರಾಣುಗಳು ನಿರ್ದಿಷ್ಟ ಸಮಯದವರೆಗೂ ಸೋಂಕ ವ್ಯಾಪಿಸುವಷ್ಟು ಪರಿಣಾಮಕಾರಿಯಾಗಿರುತ್ತವೆ ಎಂದು ವಿಜ್ಞಾನಿಗಳು ಸಂಶೋಧನೆಗಳಿಂದ ಕಂಡುಕೊಂಡಿದ್ದಾರೆ. ಹಾಗಾದರೆ, ನಿತ್ಯ ಬಳಕೆಯಲ್ಲಿರುವ ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌, ಟ್ಯಾಬ್‌ಗಳನ್ನು ಸ್ಯಾನಿಟೈಸ್‌ ಮಾಡುವುದು ಹೇಗೆ?

ಹೆಚ್ಚು ಬಳಸುವ, ಮುಟ್ಟುವ ವಸ್ತುಗಳನ್ನು ನಿತ್ಯವೂ ಶುಚಿಗೊಳಿಸುವಂತೆ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರಗಳು ಸಲಹೆ ನೀಡಿವೆ. ಫೋನ್‌ಗಳು, ಕಿಬೋರ್ಡ್‌ಗಳು, ಕಂಪ್ಯೂಟರ್, ಟ್ಯಾಬ್ಲೆಟ್‌ಗಳನ್ನು ಶುಚಿ ಮಾಡುವುದೂ ಅಗತ್ಯವಾಗಿದೆ. ವೈರಸ್‌ಗಳ ಪರಿಣಾಮ ತಗ್ಗಿಸಲು ಆಲ್ಕೊಹಾಲ್‌ ಅಂಶಗಳಿರುವ ಸ್ಯಾನಿಟೈಸರ್ ಸಹಕಾರಿ ಎನ್ನಲಾಗುತ್ತಿದೆ. ಆದರೆ, ಕೈತೊಳೆಯಲು ಬಳಸುವ ಸೋಪ್‌ ಅಥವಾ ಸ್ಯಾನಿಟೈಸರ್‌ ಬಳಸಿ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಉಜ್ಜಿ ತೊಳೆದರೆ; ಆ ವಸ್ತುಗಳ ಕಾರ್ಯಾಚರಣೆಯೇ ಸ್ಥಗಿತಗೊಳ್ಳತ್ತದೆ. ಹಾಗಾಗಿ, ಆಲ್ಕೊ ಸ್ವಾಬ್ಸ್‌ ಅಥವಾ ಆಲ್ಕೊಹಾಲ್‌ ವೈಪ್ಸ್‌ ಬಳಸುವುದು ಸೂಕ್ತ ಎಂದು ಹಲವು ಟೆಕ್‌ ವೆಬ್‌ಸೈಟ್‌ಗಳು ವರದಿ ಮಾಡಿವೆ.

ಮೊಬೈಲ್‌ ಫೋನ್‌ ಶುಚಿಗೊಳಿಸಲು...

* ನೀರಿನ ಅಥವಾ ಆಲ್ಕೊಹಾಲ್‌ ಅಂಶ ಫೋನ್‌ ಒಳಗೆ ಇಳಿಯದಂತೆ ಎಚ್ಚರವಹಿಸಬೇಕು. ಕ್ಲೀನರ್‌ಗಳನ್ನು ಫೋನ್‌ ಮೇಲೆ ನೇರವಾಗಿ ಸಿಂಪಡಿಸುವುದು ಅಥವಾ ಸೋಪು ಮಿಶ್ರಣದಲ್ಲಿ ಮೊಬೈಲ್‌ ಒರೆಸಬಾರದು.

* ಸ್ಯಾನಿಟೈಸ್‌ ಮಾಡುವ ಮೊದಲು ಫೋನ್‌ ಸ್ವಿಚ್ಡ್‌ ಆಫ್‌ ಮಾಡಿ. ಶುಚಿಗೊಳಿಸುವಾಗ ಫೋನ್‌ ಚಾರ್ಜ್‌ ಮಾಡಬಾರದು; ಚಾರ್ಜಿಂಗ್‌ ಕೇಬಲ್‌, ಇಯರ್‌ಫೋನ್‌ ಯಾವುದೂ ಫೋನ್‌ಗೆ ಸಂಪರ್ಕಿಸ ಬೇಡಿ.

*ಮೈಕ್ರೋಫೈಬರ್‌ ಬಟ್ಟೆ ಇಲ್ಲವೇಟಿಶ್ಯೂ ರೀತಿಯಲ್ಲಿರುವ ನಯವಾದ ಬಟ್ಟೆ ಅಥವಾ ತೆಳುವಾದ ಕಾಗದವನ್ನುಫೋನ್‌ ಒರಸಲು ಬಳಸಬೇಕು.

* ಔಷಧಿ ಅಂಗಡಿಗಳಲ್ಲಿ ಶೇ 70ರಷ್ಟು ಐಸೊಪ್ರೊಪೈಲ್‌ ಆಲ್ಕೊಹಾಲ್‌ (isopropyl alcohol) ಹೊಂದಿರುವ ವೈಪ್ಸ್‌ (ಒರಸುವ ಕಾಗದ) ದೊರೆಯುತ್ತವೆ. ಅದನ್ನು ಬಳಸಿ ಫೋನ್‌ ಒರಸಬಹುದು. ಆದರೆ, ಹೆಚ್ಚು ತೇವಾಂಶವಿದ್ದರೆ ಅದನ್ನು ಹಿಂಡಿದ ನಂತರವೇ ಬಳಸುವುದು ಉತ್ತಮ.

* ಕ್ಲೊರಾಕ್ಸ್‌ ಅಥವಾ ಲೈಸಾಲ್‌ ರೀತಿಯ ಹಲವು ಕಂಪನಿಗಳ ಆಲ್ಕೊ ವೈಪ್ಸ್‌ ಲಭ್ಯವಿದೆ. ಇದರೊಂದಿಗೆ ಒಂದೇ ವೈಪ್‌ ಒಳಗೊಂಡಿರುವ ಆಲ್ಕೊ ಸ್ವಾಬ್‌ಗಳೂ ಸಿಗುತ್ತದೆ. ಒಂದು ಸ್ವಾಬ್‌ 2.50 ರೂಪಾಯಿಗೆ ಸಿಗುತ್ತದೆ. 100 ಸ್ವಾಬ್‌ಗಳನ್ನು ಹೊಂದಿರುವ ಬಾಕ್ಸ್‌ಗೆ ಅಂದಾಜು ₹200 ಇದೆ. ಆಲ್ಕೊಹಾಲ್‌ ವೈಪ್ಸ್‌ ಆದರೆ, ಕನಿಷ್ಠ 9ರಿಂದ 35 ವೈಪ್‌ಗಳನ್ನು ಒಳಗೊಂಡಿರುವ ಪ್ಯಾಕೆಟ್‌ಗಳು ಲಭ್ಯವಿರುತ್ತದೆ. ಹಾಗೂ ಬೆಲೆಯಲ್ಲಿ ವ್ಯತ್ಯಾಸವಿದೆ.

* ಆಲ್ಕೊಹಾಲ್‌ ಅಂಶಗಳಿರುವ ವೈಪ್‌ಗಳನ್ನು ಮೊಬೈಲ್‌ ಸ್ಕ್ರೀನ್‌ ಒರೆಸಲು ಹೆಚ್ಚೆಚ್ಚು ಬಳಸಿದರೆ, ಪರದೆಯ ಮೇಲಿನ ಆಲಿಯೊಫೋಬಿಕ್‌ ಕೋಟಿಂಗ್‌ (Oleophobic coating) ನಾಶವಾಗುತ್ತದೆ. ಆ ಕೋಟಿಂಗ್‌ನಿಂದಾಗಿ ಪರದೆಗೆ ನೀರಿನ ಹನಿ, ಎಣ್ಣೆ ಜಿಡ್ಡಿನಿಂದ ರಕ್ಷಣೆ ಸಿಗುತ್ತದೆ.

* ಕನ್ನಡಕದ ಗಾಜು ಅಥವಾ ಕ್ಯಾಮೆರಾ ಲೆನ್ಸ್‌ ಒರಸಲು ಬಳಸುವ ಮೃದುವಾದ ಬಟ್ಟೆಗಳನ್ನೂ ಬಳಸಬಹುದು.

* ಸ್ಯಾಮ್‌ಸಂಗ್‌ ಕೆಲವು ದೇಶಗಳಲ್ಲಿ ತನ್ನ ಕೇಂದ್ರಗಳು ಹಾಗೂ ಮಳಿಗೆಗಳಲ್ಲಿ ಉಚಿತವಾಗಿ ಫೋನ್‌ಗಳನ್ನು ಶುಚಿಗೊಳಿಸಿ ಕೊಡುವ ಸೇವೆ ನೀಡುತ್ತಿದೆ. ಯುವಿ ಲೈಟ್‌ (Ultraviolet light) ಬಳಸಿ ಮೊಬೈಲ್ ಶುಚಿಗೊಳಿಸಲಾಗುತ್ತಿದೆ.

ಭಾರತದಲ್ಲಿ ಕೊರೊನಾ ವೈರಸ್‌ ಸೊಂಕಿತರ ಸಂಖ್ಯೆ 400 ದಾಟಿದ್ದು, ಸಾವಿಗೀಡಾದವರ ಸಂಖ್ಯೆ 8 ಮುಟ್ಟಿದೆ. ಜಗತ್ತಿನಾದ್ಯಂತ 3,41,560 ಕೋವಿಡ್‌–19 ಪ್ರಕರಣಗಳು ದಾಖಲಾಗಿವೆ ಹಾಗೂ 14,700ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT