ಭಾನುವಾರ, ಆಗಸ್ಟ್ 1, 2021
25 °C

ರೋಗದ ಮುನ್ಸೂಚನೆಗೆ ಸ್ಮಾರ್ಟ್ ವಾಚ್‌ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕೋವಿಡ್‌–19’ ವಿರುದ್ಧದ ಹೋರಾಟದಲ್ಲಿ ಸ್ಮಾರ್ಟ್‌ವಾಚ್‌ಗಳನ್ನು ಅಸ್ತ್ರಗಳನ್ನಾಗಿ ಬಳಸಿಕೊಳ್ಳಲು ಅಮೆರಿಕದ ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ಮುಂದಾಗಿದ್ದಾರೆ.

ಫಿಟ್‌ನೆಸ್‌ ಟ್ರ್ಯಾಕ್‌ ಬ್ಯಾಂಡ್‌ ಮತ್ತು ಸ್ಮಾರ್ಟ್‌ ವಾಚ್‌ ಡೇಟಾ ಬಳಸಿಕೊಂಡು ಕೋವಿಡ್‌–19 ಹಾಗಿ ಇನ್ನಿತರ ರೋಗಲಕ್ಷಣಗಳನ್ನು ಮುಂಚಿತವಾಗಿ ಪತ್ತೆಹಚ್ಚಿ, ಸೂಚನೆ ನೀಡುವ ವ್ಯವಸ್ಥೆ ರೂಪಿಸುವುದು ಸಂಶೋಧಕರ ಉದ್ದೇಶ.

ಒಂದು ವೇಳೆ ಇದರಲ್ಲಿ ಅವರು ಯಶಸ್ವಿಯಾದರೆ, ಮುಂದಿನ ದಿನಮಾನಗಳಲ್ಲಿ ಕೊರೊನಾ ಸೋಂಕು ತಗುಲಿದ ತಕ್ಷಣ ನಮಗೆ ಸ್ಮಾರ್ಟ್‌ವಾಚ್‌ಗಳ ಮೂಲಕ ಮಾಹಿತಿ ರವಾನೆಯಾಗುತ್ತದೆ. 

ಫಿಟ್‌ಬಿಟ್‌ ಫಿಟ್‌ನೆಸ್ ಟ್ರ್ಯಾಕರ್ ಮತ್ತು ಆ್ಯಪಲ್‌ ಫಿಟ್‌ನೆಸ್‌ ವಾಚ್‌ಗಳನ್ನು ಕೋವಿಡ್‌–19 ರೋಗ ಲಕ್ಷಣಗಳನ್ನು ಮುಂಚಿತವಾಗಿ ಪತ್ತೆಹಚ್ಚಲು ಬಳಸಬಹುದಾದ ಸಾಧ್ಯತೆಗಳ ಕುರಿತು ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಔಷಧ ಸಂಶೋಧನಾ ಪ್ರಯೋಗಾಲಯ ಈ ವರ್ಷದ ಆರಂಭದಲ್ಲಿಯೇ ಅಧ್ಯಯನ ಆರಂಭಿಸಿದೆ. 

ಸಂಶೋಧಕರು ಕೈಗೊಂಡಿರುವ ಆರೋಗ್ಯ ಸಮೀಕ್ಷೆಗೆ ಫಿಟ್‌ನೆಸ್ ಟ್ರ್ಯಾಕರ್‌ ಮತ್ತು ಆ್ಯಪಲ್‌ ವಾಚ್ ಬಳಕೆದಾರರ ವ್ಯಕ್ತಿಗತ ಆರೋಗ್ಯ ಮಾಹಿತಿ ಸಂಗ್ರಹಿಸುತ್ತಿ ದ್ದಾರೆ. ಫಿಟ್‌ನೆಸ್ ಟ್ರ್ಯಾಕರ್‌ ಬಳಕೆದಾರರ ಹೃದಯ ಬಡಿತ, ದೇಹದ ಉಷ್ಣತೆ, ರಕ್ತದಲ್ಲಿಯ ಆಮ್ಲಜನಕ ಪ್ರಮಾಣ ಮುಂತಾದ ದೈನಂದಿನ ಆರೋಗ್ಯ ‌ಮಾಹಿತಿಯನ್ನು ಸಂಶೋಧಕರು ಕಲೆಹಾಕಿದ್ದಾರೆ. ಜತೆಗೆ ಅವರ ವೈದ್ಯಕೀಯ ದಾಖಲೆ ಮತ್ತು ಇತಿಹಾಸವನ್ನೂ ಪರಿಶೀಲಿಸುತ್ತಿದ್ದಾರೆ. ಎಲ್ಲವನ್ನೂ ಒಟ್ಟುಗೂಡಿಸಿ ಮುಂದಿನ ಹಂತಕ್ಕೆ ಸಜ್ಜಾಗುತ್ತಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಮೊದಲ ಹಂತದ ಅಧ್ಯಯನ ಹೆಚ್ಚಿನಾಂಶ ಮುಗಿದಿದೆ.

ಬಳಕೆದಾರರ ಸಂಪೂರ್ಣ ಆರೋಗ್ಯ ಡೇಟಾ ಟ್ರ್ಯಾಕ್‌ ಹೊಂದಿರುವ ಈ ಫಿಟ್‌ನೆಸ್‌ ಆ್ಯಪ್‌ಗಳು, ಆ ವ್ಯಕ್ತಿಗಳ ದೇಹದಲ್ಲಿನ ಚಿಕ್ಕಪುಟ್ಟ ಮತ್ತು ಅಸಹಜ ಬದಲಾವಣೆಗಳನ್ನು ತಕ್ಷಣ ಪತ್ತೆ ಹಚ್ಚುತ್ತವೆ. ಅದೇ ರೀತಿ ಕೊರೊನಾ ಸೋಂಕು ತಗುಲಿದ ತಕ್ಷಣ ದೇಹದಲ್ಲಾಗುವ ಬದಲಾವಣೆ, ರೋಗ ಲಕ್ಷಣಗಳನ್ನೂ ಮುಂಚಿತವಾಗಿ ಗುರುತಿಸುವಂತಾಗಬೇಕು. ಆ ದಿಸೆಯಲ್ಲಿ ಸಂಶೋಧಕರು ಕೆಲಸ ಮಾಡುತ್ತಿದ್ದಾರೆ. 

ಫಿಟ್‌ನೆಸ್ ಟ್ರ್ಯಾಕ್‌ ಮತ್ತು ವಾಚ್‌ ಧರಿಸಿದ ವ್ಯಕ್ತಿಗಳು ವಾಕ್‌ ಮಾಡುವಾಗ, ಓಡುವಾಗ, ವ್ಯಾಯಾಮ ಮಾಡುವಾಗ ಹೃದಯ ಬಡಿತ, ರಕ್ತದೊತ್ತಡ, ದೇಹದ ತಾಪಮಾನ ಬದಲಾಗುತ್ತದೆ. ಅದೇ ರೀತಿ ಸಾಮಾನ್ಯ ಜ್ವರ, ಶೀತ ಬಂದಾಗಲೂ ವ್ಯತ್ಯಾಸಗಳಾಗುತ್ತವೆ. ಆದರೆ, ಕೊರೊನಾ ಸೋಂಕು ತಗುಲಿದಾಗ ಆಗುವ ನಿರ್ದಿಷ್ಟ ಬದಲಾವಣೆಗಳನ್ನು ಫಿಟ್‌ನೆಸ್‌ ಟ್ರ್ಯಾಕರ್‌ ಹೇಗೆ ಕರಾರುವಾಕ್ಕಾಗಿ ಗುರುತಿಸುತ್ತವೆ ಎನ್ನುವುದೇ ಸವಾಲಿನ ಪ್ರಶ್ನೆ. 

‘ಕೊರೊನಾ ಸೋಂಕು ಮತ್ತು ನ್ಯುಮೋನಿಯಾ ಉಲ್ಬಣಿಸಿದಾಗ ಕಾಣಿಸಿಕೊಳ್ಳುವ ಉಸಿರಾಟ ಸಮಸ್ಯೆ ಮತ್ತು ಶ್ವಾಸಕೋಶ ಸೋಂಕು ಲಕ್ಷಣಗಳು ಒಂದೇ ರೀತಿಯಾಗಿರುತ್ತವೆ. ಇಂತಹ ಸಂದರ್ಭದಲ್ಲಿ ಫಿಟ್‌ನೆಸ್ ಟ್ರ್ಯಾಕ್‌ ಹೇಗೆ ಸಮರ್ಪಕವಾಗಿ ಕೆಲಸ ಮಾಡುತ್ತವೆ ಎನ್ನುವುದೇ ನಮ್ಮ ಮುಂದಿರುವ ದೊಡ್ಡ ಸವಾಲು’ ಎಂದು ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಸಂಶೋಧಕ ತಂಡದ ಸದಸ್ಯ ಮೈಕೆಲ್‌ ಸಿಂಡರ್‌ ಹೇಳಿದ್ದಾರೆ. 

ಎರಡನೇ ಹಂತದ ಪ್ರಾಯೋಗಿಕ ಅಧ್ಯಯನದಲ್ಲಿ ಈ ಸವಾಲಿಗೆ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ಅವರು ಹೊಂದಿದ್ದಾರೆ. ಸೋಂಕು ತಗುಲಿದ ತಕ್ಷಣ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಫಿಟ್‌ನೆಸ್‌ ಟ್ರ್ಯಾಕರ್‌ ಅಥವಾ ವಾಚ್‌ಗೆ‌ ಅಲರ್ಟ್‌ ಮೆಸೇಜ್ ಹೋಗುತ್ತದೆ. ಆಗ ಬಳಕೆದಾರರು ಎಚ್ಚೆತ್ತುಕೊಳ್ಳಬೇಕು.

ಒಂದು ವೇಳೆ ಎರಡನೇ ಹಂತದಲ್ಲಿ ನಿರೀಕ್ಷಿತ ಮತ್ತು ಸಕಾರಾತ್ಮಕ ಫಲಿತಾಂಶ ದೊರೆತರೆ ಮುಕ್ತ ಮಾರುಕಟ್ಟೆಗೆ ಈ ಸಾಫ್ಟ್‌ವೇರ್‌ ಬಿಡುಗಡೆ ಮಾಡುವ ಆಲೋಚನೆ ಸಂಶೋಧಕರಿಗೆ ಇದೆ.

ಕೇವಲ ಕೊರೊನಾ ಮಾತ್ರವಲ್ಲ, ಎಲ್ಲ ಬಗೆಯ ಆರೋಗ್ಯ ಸಮಸ್ಯೆಗಳನ್ನು ಮುಂಚಿತವಾಗಿ ತಿಳಿಸುವ ನಿಟ್ಟಿನಲ್ಲಿ ಈ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿ ಫಿಟ್‌ನೆಸ್‌ ವಾಚ್‌ ಮತ್ತು ಟ್ರ್ಯಾಕರ್‌ಗಳಲ್ಲಿ ಶಾಶ್ವತವಾಗಿ ಅಳವಡಿಸುವ ಯೋಚನೆ ಇದೆ ಎಂದು ಸಿಂಡರ್‌ ಹೇಳಿದ್ದಾರೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು