ಮಡಚುವ ಮೊಬೈಲ್‌ ತಯಾರಿಕೆಗೆ ಸ್ಪರ್ಧೆ

7
Foldable Smartphone

ಮಡಚುವ ಮೊಬೈಲ್‌ ತಯಾರಿಕೆಗೆ ಸ್ಪರ್ಧೆ

Published:
Updated:
Deccan Herald

ವಿಶ್ವದ ಮೊದಲ ಮಡಚುವ ಮೊಬೈಲ್‌ ತಯಾರಿಗೆ ಸ್ಪರ್ಧೆ ಶುರುವಾಗಿದೆ. ಸ್ಯಾಮ್ಸಂಗ್‌ ಕಂಪನಿ ಮಡಚುವ ಫೋನ್‌ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಎರಡು ವರ್ಷಗಳಿಂದ ಹರಿದಾಡುತ್ತಲೇ ಇತ್ತು. ಮುಂದಿನ ವರ್ಷ  ಈ ಫೋನ್‌ ಗ್ರಾಹಕರ ಕೈ ಸೇರಲಿದೆ ಎಂದು ದಕ್ಷಿಣ ಕೊರಿಯಾದ ಸ್ಯಾಮ್ಸಂಗ್‌ ಹೇಳಿಕೊಂಡಿದೆ. ಗ್ಯಾಲಕ್ಸಿ ಎಫ್‌ ಬ್ರ್ಯಾಂಡ್‌ ಹೆಸರಿನಲ್ಲಿ ಮಡಚುವ ಫೋನ್‌ ಅನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ಸುದ್ದಿಗಳು ದಟ್ಟವಾಗಿ ಹರಿದಾಡುತ್ತಿವೆ.

ಇದಕ್ಕೆ ಪ್ರತಿಸ್ಪರ್ಧಿಯಾಗಿ ಇದೀಗ ಚೀನಾದ ಮೊಬೈಲ್‌ ತಯಾರಕ ಕಂಪನಿ ಹುವಾವೆ ಸಹ ಇದೇ ಬಗೆಯ ಫೋನ್‌ ಮಾರುಕಟ್ಟೆಗೆ ತರಲಿದೆ ಎಂದು ಹೇಳಿಕೊಂಡಿದೆ. ಇದು ಸುಳ್ಳು ಸುದ್ದಿಯಲ್ಲ ಎಂಬುದನ್ನೂ ತಿಳಿಸಿದೆ. ಅಂತೂ ಯಾವುದು ಮಾರುಕಟ್ಟೆಗೆ ಮೊದಲು ಬರಲಿದೆ ಎಂದು ಕಾಯುವ ಸರದಿ ಗ್ರಾಹಕರದ್ದು.

ಪ್ರೀಮಿಯಂ ಮಡಚುವ ಫೋನ್‌ಗಳಿಗೆ ಒಎಲ್‌ಇಡಿ (organic light-emitting diode) ಡಿಸ್‌ಪ್ಲೆ ಅಗತ್ಯವಿದೆ. ಇದಕ್ಕಾಗಿ ಹುವಾವೆ ಚೀನಾದ ಬಿಒಇ ಟೆಕ್ನಾಲಜಿ ಗ್ರೂಪ್‌ ಜತೆ ಸಹಭಾಗಿತ್ವಕ್ಕೆ ಮುಂದಾಗಿದೆ.ಸ್ಯಾಮ್ಸಂಗ್‌ ಕಂಪನಿಯನ್ನು ಹಿಂದಿಕ್ಕಲೆಂದೇ ಹುವಾವೆ ಕಂಪನಿ ಒಂದಷ್ಟು ಫೋನ್‌ಗಳನ್ನು ಮಾತ್ರವೇ ಮೊದಲ ಬಾರಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇದರೊಂದಿಗೆ ತಂತ್ರಜ್ಞಾನ ಲೋಕದಲ್ಲಿ ಹೆಸರು ಗಳಿಸಲು ಕಂಪನಿ ಮುಂದಾಗಿದೆ.

ತಂತ್ರಜ್ಞಾನ ಸಾಮರ್ಥ್ಯವನ್ನು ಪ್ರದರ್ಶನ ಮಾಡುವ ಮತ್ತು ಉದ್ಯಮದ ಗಮನವನ್ನು ಸೆಳೆದು ಮಾಧ್ಯಮಗಳಲ್ಲಿ ಸುದ್ದಿಯಾಗುವ ಉದ್ದೇಶವೇ ಇದರಲ್ಲಿ ಅಡಗಿದೆ.

 ‘ಹುವಾವೆ ಕಂಪನಿಯ ಮಡಚುವ ಫೋನ್ 2019ರ ಆರಂಭದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ’ ಎಂದು ಯಾಂಟಾ ಇನ್ವೆಸ್ಟ್‌ಮೆಂಟ್‌ ಕನ್ಸಲ್ಟಿಂಗ್‌ನ ವಿಶ್ಲೇಷಣಾಕಾರ ಜೆಫ್‌ ಪು ಹೇಳಿದ್ದಾರೆ. ಈ ಮೊಬೈಲ್‌ನ ತಂತ್ರಜ್ಞಾನದಲ್ಲಿನ ಬೆಳವಣಿಗೆಗಳ ಮೇಲೆ ಬಿಡುಗಡೆ ದಿನಾಂಕ ನಿಗದಿಯಾಗಲಿದೆ ಎಂದೂ ಅವರು ತಿಳಿಸಿದ್ದಾರೆ.

ಬಿಒಇ ಕಂಪನಿಗೆ ಸಾಕಷ್ಟು ಪ್ರಮಾಣದಲ್ಲಿ ಸರ್ಕಾರದಿಂದಲೂ ಸಹಾಯ ಧನ ಸಿಗುತ್ತಿದೆ. ಟಿವಿ ಸ್ಕ್ರೀನ್‌ಗಳಿಗೆ ದೊಡ್ಡದೊಡ್ಡ ಪ್ಯಾನಲ್‌ಗಳನ್ನು ತಯಾರಿಸಿ ಕೊಡುವುದರಲ್ಲಿ ಇದು ವಿಶ್ವಮಟ್ಟದಲ್ಲೇ ಹೆಸರು ಮಾಡಿದೆ. ಇದರಿಂದಾಗಿ ಹುವಾವೆ ಬೇಡಿಕೆಯನ್ನು ಸಾಕಷ್ಟು ಮುಂಚೆಯೇ ಒದಗಿಸಲಿದೆ ಎಂಬುದು ತಂತ್ರಜ್ಞಾನ ಪರಿಣತರ ಅಭಿಪ್ರಾಯವಾಗಿದೆ.

ಇನ್ನೂ ನಿಗದಿಯಾಗದ ಬೆಲೆ

ಮಡಚುವ ಫೋನ್‌ ಬೆಲೆ ಇನ್ನೂ ನಿಗದಿಯಾಗಿಲ್ಲ. ಇಲ್ಲಿ ಲಾಭವೇ ಪ್ರಮುಖವಾಗುವುದಿಲ್ಲ. ಎರಡೂ ಕಂಪನಿಗಳಿಗೆ ಲಾಭ ಮಾಡಿಕೊಳ್ಳುವ ಉದ್ದೇಶಕ್ಕಿಂತ ಮಾರುಕಟ್ಟೆಯಲ್ಲಿ ಹೆಸರು ಮಾಡಿಕೊಳ್ಳುವುದೇ ಪ್ರಮುಖವಾಗಿದೆ ಎಂದು ವಿಟ್ಸ್‌ ವ್ಯೂ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಸ್ಯಾಮ್ಸಂಗ್‌ ಕಂಪನಿ 7.3 ಇಂಚಿನ ಸ್ಕ್ರೀನ್‌ ಹೊಂದಿರುವ ಮಡಚುವ ಫೋನ್‌ ಅನ್ನು ಬಿಡುಗಡೆ ಮಾಡಲಿದೆ. ಇದರ ಬೆಲೆ ₹ 1 ಲಕ್ಷದಿಂದ ₹ 1.30 ಲಕ್ಷದಷ್ಟು ಆಗಿರಲಿದೆ ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿತ್ತು. ಮಡಚುವ ಫೋನ್‌ ತಯಾರಿಕೆಯಲ್ಲಿ ಎಲ್‌ಜಿ ಎಲೆಕ್ಟ್ರಾನಿಕ್ಸ್‌ ಪಾಲುದಾರಿಕೆ ಬಗ್ಗೆಯೂ ಹುವಾವೆ ಸಂಸ್ಥೆಯು ಮಾತುಕತೆ ನಡೆಸುತ್ತಿದೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !