ನಿದ್ರೆ ತರಿಸಲೊಂದು ಗ್ಯಾಜೆಟ್‌!

7

ನಿದ್ರೆ ತರಿಸಲೊಂದು ಗ್ಯಾಜೆಟ್‌!

Published:
Updated:
Deccan Herald

ಇನ್‌ಸ್ಟಾಗ್ರಾಂ ಅಥವಾ ಫೇಸ್‌ಬುಕ್‌ನಲ್ಲಿ ಹಾಕಿದ ಚಿತ್ರಗಳಿಗೆ ಎಷ್ಟು ಕಮೆಂಟ್‌ ಬಂದವು ಎಂದು ನೋಡಲು ರಾತ್ರಿಯೂ ಆಗಾಗ ಸ್ಮಾರ್ಟ್‌ಫೋನ್‌ ಮೇಲೆ ಕಣ್ಣಾಡಿಸುವಷ್ಟು ನೀವು ಗ್ಯಾಜೆಟ್‌ಪ್ರಿಯರೆ? ಹಾಗಾದರೆ ಇದು ಯೋಚಿಸಬೇಕಾದ ಗಂಭೀರ ಸಂಗತಿ. 

ನಮ್ಮ ಚಟುವಟಿಕೆಗಳನ್ನು ಹೆಚ್ಚು ಅಚ್ಚುಕಟ್ಟಾಗಿ ನಿರ್ವಹಿಸಲು ಗ್ಯಾಜೆಟ್‌ಗಳ ಬಳಕೆ ನೆರವಾಗುತ್ತದೆ. ಆದರೆ ಅವುಗಳ ಅತಿಯಾದ ಬಳಕೆ ನಿದ್ರಾಹೀನತೆಗೂ ಕಾರಣವಾಗಬಲ್ಲದು.

ರಾತ್ರಿ ವೇಳೆ ಮಲಗುವ ಕೋಣೆಯಲ್ಲಿ ಸಣ್ಣ ಪ್ರಮಾಣದಲ್ಲಿ ಬೆಳಕಿದ್ದರೂ, ಅಥವಾ ಗದ್ದಲ ಕೇಳಿಬಂದರೂ ಅದು ನಿದ್ರೆಗೆ ಅಡ್ಡಿ ಉಂಟುಮಾಡಬಹುದು. ಅಂತಹದ್ದರಲ್ಲಿ ಆಗಾಗ ಗ್ಯಾಜೆಟ್‌ಗಳಿಂದ ಹೊರಹೊಮ್ಮುವ ಪ್ರಖರ ಬೆಳಕು ಕಣ್ಣುಕುಕ್ಕುತ್ತಿದ್ದರೆ, ನೋಟಿಫಿಕೇಷನ್ಸ್‌ಗಳ ಸದ್ದಾಗುತ್ತಿದ್ದರೆ ನಿದ್ರಾಭಂಗ ಆಗದೆ ಇರುತ್ತದೆಯೆ? ಕ್ರಮೇಣ ಇದು ನಿದ್ರಾಹೀನತೆಯಾಗಿ ಮಾರ್ಪಾಡಾಗಬಹುದು.

ನಿದ್ರಾಹೀನತೆ ಒಂದು ಸಾರ್ವಜನಿಕ ಆರೋಗ್ಯ ಪಿಡುಗು ಎಂದು ಅಮೆರಿಕದಲ್ಲಿ ಕೆಲವು ಸಂಶೋಧನೆಗಳು ಘೋಷಿಸಿವೆ. ಮಲಗುವ ಕೋಣೆಯಲ್ಲಿ ಟಿವಿ, ಕಂಪ್ಯೂಟರ್‌, ಮೊಬೈಲ್‌ನಂತಹ ಗ್ಯಾಜೆಟ್‌ಗಳನ್ನು ಇರಿಸಿಕೊಳ್ಳಬಾರದು ಎನ್ನುವುದು ತಜ್ಞರ ಸಲಹೆ. ನಮ್ಮ ದೇಶದಲ್ಲಿಯೂ ಪರಿಸ್ಥಿತಿ ಭಿನ್ನವಾಗೇನಿಲ್ಲ.
ಆದರೆ ಗ್ಯಾಜೆಟ್‌ಗಳಿಂದಾಗುವ ನಿದ್ರಾಹೀನತೆ ತಡೆಗಟ್ಟಲು ಮತ್ತೊಂದು ಗ್ಯಾಜೆಟ್‌ ಬಳಸಲು ಸಾಧ್ಯವಿದ್ದರೆ ಎನಿಸುತ್ತಿದೆಯೇ? ಅಂತಹ ಗ್ಯಾಜೆಟ್‌ಗಳು ಸಹ ಮಾರುಕಟ್ಟೆ ಪ್ರವೇಶಿಸಿವೆ. ಭವಿಷ್ಯದಲ್ಲಿ ಇವುಗಳ ಬಳಕೆ ಹೆಚ್ಚುವ ಲಕ್ಷಣಗಳೂ ಇವೆ.

ಆಡಿಯೊ ಉಪಕರಣಗಳ ಪ್ರಸಿದ್ಧ ಬ್ರ್ಯಾಂಡ್‌ ‘ಬೋಸ್‌’ ನಿದ್ರೆ ತರಿಸಲೆಂದೇ ಒಂದು ಗ್ಯಾಜೆಟ್‌ ರೂಪಿಸಿದೆ. ಕಿವಿಯೊಳಗೆ ಅಚ್ಚುಕಟ್ಟಾಗಿ ಕೂರುವ ಈ ಪುಟ್ಟ ವೈರ್‌ಲೆಸ್‌ ಇಯರ್‌ಫೋನ್‌ ‘ಸ್ಲೀಪ್‌ಬಡ್ಸ್‌’ನಲ್ಲಿ ಮನಸ್ಸಿಗೆ ಮುದನೀಡುವಂತಹ ಮೆಲುವಾದ ಸಾಂತ್ವನ ನೀಡುವಂತಹ ಸದ್ದುಗಳನ್ನು ಕೇಳಬಹುದು. ರಾತ್ರಿ ಈ ಧ್ವನಿಗಳನ್ನು ಕೇಳುತ್ತಾ ಹಾಯಾಗಿ ನಿದ್ರೆಗೆ ಜಾರಬಹುದು ಎನ್ನುವುದು ಕಂಪನಿಯ ಅಂಬೋಣ.

ನಿದ್ರೆಗೆ ಸಂಬಂಧಿಸಿದ ವಿವಿಧ ಕಂಪನಿಗಳ ಗ್ಯಾಜೆಟ್‌ಗಳ ಸಾಲಿನಲ್ಲಿ ‘ನಿದ್ರೆ ಮೇಲೆ ನಿಗಾ ಇಡುವ Fitbit ಕಂಪನಿಯ ರಿಸ್ಟ್‌ ಬ್ಯಾಂಡ್‌, Withings ಕಂಪನಿಯ ಹಾಸಿಗೆ, Philips ಹಾಗೂ Verilux ಕಂಪನಿಯ ವಿಶೇಷ ದೀಪಗಳು ಇವೆ. ‘ಸ್ಲೀಪ್‌ಬಡ್ಸ್‌’ ಈ ಸಾಲಿಗೆ ಮತ್ತೊಂದು ಸೇರ್ಪಡೆ.  ಇಯರ್‌ಫೋನ್‌ನ ಕೇಸ್‌ ಲೋಹದ್ದಾಗಿದ್ದು, ಇಯರ್‌ಪೀಸ್‌ ಇಡುವ ಜಾಗದಲ್ಲಿ ಆಯಸ್ಕಾಂತ ಅಳವಡಿಸಲಾಗಿದೆ. ಇಯರ್‌ಫೋನ್‌ ಕೇಸ್‌ನ ಒಳಗಿದ್ದಾಗ ಆಯಸ್ಕಾಂತದಿಂದ ಬ್ಯಾಟರಿ ಚಾರ್ಜ್‌ ಆಗುತ್ತದೆ. ಈ ವಿನ್ಯಾಸ ಆ್ಯಪಲ್‌ನ AirPods ನೆನಪಿಸುತ್ತದೆ. AirPods ಕೇಸ್ ಸಹ ಬ್ಯಾಟರಿ ಚಾರ್ಜರ್ ಆಗಿ ಕಾರ್ಯನಿರ್ವಹಿಸುತ್ತದೆ. ಆದರೆ ‘ಬೋಸ್‌’ನ ವಿನ್ಯಾಸ ಮತ್ತಷ್ಟು ಉತ್ತಮಗೊಳಿಸಬಹುದಿತ್ತು.

‘ಸ್ಲೀಪ್‌ಬಡ್ಸ್‌’ ಚಾರ್ಜ್‌ ಆಗುತ್ತಿದೆ ಎನ್ನುವುದನ್ನು ತೋರಿಸಲು, ಕೇಸ್‌ ತೆರೆದ ತಕ್ಷಣ ಎಲ್‌ಇಡಿ ಬೆಳಗುತ್ತದೆ. ಆದರೆ ಇಯರ್ ಫೋನ್‌ಗಳನ್ನು ವಾಪಸ್‌ ಕೇಸ್‌ನಲ್ಲಿ ಇರಿಸುವಾಗ ಎಲ್‌ಇಡಿ ಬೆಳಗುವುದಿಲ್ಲ. ಹಾಗಾಗಿ ಕತ್ತಲಿನಲ್ಲಿ ಈ ಸಣ್ಣ ಇಯರ್‌ಫೋನ್‌ಅನ್ನು ಕೇಸ್‌ನಿಂದ ಹೊರತೆಗೆಯಲು ಮಾತ್ರ ಎಲ್‌ಇಡಿ ಸಹಾಯ ಮಾಡುತ್ತದೆ. ಕಿರುಬೆರಳ ತುದಿಯಷ್ಟು ಸಣ್ಣದಾಗಿರುವ ಈ ಇಯರ್‌ಬಡ್‌ಗಳು ಮೂರು ಗಾತ್ರಗಳಲ್ಲಿ ಲಭ್ಯವಿವೆ.

ಗದ್ದಲದಿಂದ ಗಮನ ಬೇರೆಡೆ ಹರಿಸಲು ನೆರವಾಗುವಂತಹ ಹಾಗೂ ಗದ್ದಲ ಕೇಳಿಸದೆ ಇರುವಂತಹ ಎರಡು ರೀತಿಯ ಇಯರ್‌ಬಡ್‌ಗಳು ಇರುತ್ತವೆ. ಈ ‘ಸ್ಲೀಪ್‌ಬಡ್ಸ್‌’ ಮೊದಲನೆ ರೀತಿಯದ್ದು. ಇವುಗಳು ಗದ್ದಲದಿಂದ ಸಂಪೂರ್ಣ ಮುಕ್ತಿ ನೀಡುವುದಿಲ್ಲ. ಬದಲಿಗೆ ಬೇಡದ ಸದ್ದುಗಳಿಂದ ಗಮನ ಬೇರೆಡೆ ಹರಿಸಲು ಇವು ನೆರವಾಗುತ್ತದೆ.

ಗದ್ದಲ ಕೇಳಿಸದೆ ಇರುವಂತಹ ಇಯರ್‌ಬಡ್‌ಗಳು ವಿಮಾನದ ಎಂಜಿನ್‌ನಿಂದ ಹೊರಹೊಮ್ಮುವ ರೀತಿಯ ಕಡಿಮೆ ಫ್ರೀಕ್ವೆನ್ಸಿ ಸದ್ದುಗಳನ್ನು ತಡೆಹಿಡಿಯುತ್ತವೆ. ಆದರೆ ಪಕ್ಕದಲ್ಲಿರುವ ವ್ಯಕ್ತಿ ಗೊರಕೆ ಹೊಡೆಯುತ್ತಿದ್ದರೆ ಅಥವಾ ಮಗುವೊಂದು ಗಟ್ಟಿಯಾಗಿ ಕಿರಿಚುತ್ತಿದ್ದರೆ ಅಂತಹ ಸದ್ದುಗಳನ್ನು ತಡೆಯಲು ಈ ಇಯರ್‌ಬಡ್ ನೆರವಾಗುವುದಿಲ್ಲ.

ಸೀಮಿತ ಆಯ್ಕೆ: ಮಳೆಹನಿಗಳು, ಜಲಪಾತ ಸೇರಿದಂತೆ ಇಯರ್‌ಬಡ್‌ನಲ್ಲಿ ಕೇವಲ 10 ರೀತಿಯ ಮೆಲುವಾದ ಸದ್ದುಗಳನ್ನು ಕೇಳಬಹುದು. ಆದರೆ ಕೊಂಚ ದುಬಾರಿಯೇ ಇರುವ ಈ ಗ್ಯಾಜೆಟ್‌ನಲ್ಲಿ ಇನ್ನೂ ಹೆಚ್ಚಿನ ಆಯ್ಕೆಗಳು ಇರುವಂತೆ ವಿನ್ಯಾಸಗೊಳಿಸಬಹುದಿತ್ತು.

‘ಇಯರ್‌ಬಡ್‌ನ ಬ್ಯಾಟರಿಯ ಉತ್ತಮ ಬಾಳಿಕೆಗಾಗಿ ಸಂಗ್ರಹ ಸಾಮರ್ಥ್ಯ ಮಿತಿ ಕಡಿಮೆ ಇರಿಸಲಾಗಿದೆ. ಜತೆಗೆ ಬೇಕಾದ ಸ್ಮಾರ್ಟ್‌ಫೋನ್‌ಗೂ ಇದಕ್ಕೂ ಸಂಪರ್ಕ ಕಲ್ಪಿಸುವ ಆಯ್ಕೆ ಇರಿಸಿಲ್ಲ’ ಎನ್ನುತ್ತಾರೆ ‘ಬೋಸ್’ನ ಆರೋಗ್ಯ ಸಂಬಂಧಿ ಗ್ಯಾಜೆಟ್ ಉತ್ಪನ್ನಗಳ ನಿರ್ದೇಶಕ ಬ್ರಯಾನ್ ಮುಲ್ಕಹಿ ಅವರು.

ಹೆಚ್ಚಿನ ಸದ್ದುಗಳ ಸೇರ್ಪಡೆ: ‘ಸ್ಲೀಪ್ ಬಡ್ಸ್’ಗೆ ಅಪ್ ಲೋಡ್ ಮಾಡುವಂತೆ ಹೆಚ್ಚಿನ ಸದ್ದುಗಳನ್ನು ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಾಗುತ್ತದೆ. ಅಲ್ಲದೆ ಜನರು ತಮ್ಮ ಉದ್ವೇಗ ತಗ್ಗಿಸಿಕೊಳ್ಳಲು, ಅರೆನಿದ್ರಾವಸ್ಥೆಯಿಂದ ಬಿಡುಗಡೆ ಹೊಂದಲು ಸಹಾಯ ಮಾಡುವಂತೆ ವಿನ್ಯಾಸಗೊಳಿಸಿರುವ ಸದ್ದುಗಳನ್ನು ಸಹ ಇವುಗಳಲ್ಲಿ ಸೇರಿಸಲಾಗುತ್ತದೆ ಎನ್ನುತ್ತಾರೆ ಬ್ರಯಾನ್. 

ಬಳಕೆಗೂ ಮುನ್ನ ಗಮನಿಸಿ
ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಸ್ಲೀಪ್‌ಬಡ್ಸ್‌ ಬಳಸಬಹುದು. ಆದರೆ ಅದಕ್ಕೂ ಮುನ್ನ ಗಮನಿಸಿಕೊಳ್ಳಬೇಕಾದ ಹಲವು ಅಂಶಗಳಿವೆ. ನಿದ್ರಾಹೀನತೆಗೆ ಕಾರಣಗಳೇನು ಎಂದು ಮೊದಲಿಗೆ ತಿಳಿದುಕೊಳ್ಳಬೇಕು. ಗದ್ದಲ, ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು, ಆಹಾರ ಪದ್ಧತಿಗಳು ಸೇರಿದಂತೆ ಹಲವು ಕಾರಣಗಳಿರುತ್ತವೆ ಎನ್ನುವುದು ತಜ್ಞರ ಅಭಿಪ್ರಾಯ.

ಗದ್ದಲವೇ ನಿದ್ರಾಹೀನತೆಯ ಮೂಲವಾಗಿದ್ದಲ್ಲಿ ಇಂತಹ ಗ್ಯಾಜೆಟ್ ಬಳಸಬಹುದು. ಆದರೆ ಬಳಸಲು ಆರಂಭಿಸಿದ ನಂತರ ನಿದ್ರೆಯ ಸಮಸ್ಯೆ ಸುಧಾರಿಸಿದೆಯೇ ಎಂದು ಗಮನಿಸಿಕೊಳ್ಳಬೇಕು. ವ್ಯಕ್ತಿಗತವಾಗಿ ಒಬ್ಬರಿಂದೊಬ್ಬರಿಗೆ ಇವುಗಳ ಬಳಕೆಯ ಅನುಭವ ಭಿನ್ನವಾಗಿಯೇ ಇರುತ್ತದೆ. ಸಾಕಷ್ಟು ಜನರಿಗೆ ಕಿವಿಯಲ್ಲಿ ಉಪಕರಣಗಳು ಇದ್ದರೆ ಆರಾಮಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ. ಹಾಗೇನಾದರೂ0 ಇವುಗಳ ಬಳಕೆ ಕಿರಿಕಿರಿ ಎನಿಸಿದರೆ 30 ದಿನಗಳ ರಿಟರ್ನ್‌ ಪಾಲಿಸಿ ಬಳಸಿಕೊಂಡು ಇವುಗಳನ್ನು ಹಿಂದಿರುಗಿಸುವ ಆಯ್ಕೆಯೂ ಇರುತ್ತದೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !