ಬುಧವಾರ, ನವೆಂಬರ್ 25, 2020
19 °C

ಆ್ಯಪಲ್‌ನಿಂದ ಹೊಸ ಮ್ಯಾಕ್‌ಬುಕ್ ಏರ್, ಮ್ಯಾಕ್‌ಬುಕ್‌ ಪ್ರೊ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಆ್ಯಪಲ್‌ ತನ್ನ ಮ್ಯಾಕ್‌ಬುಕ್‌ ಸರಣಿಯ ಮ್ಯಾಕ್‌ಬುಕ್‌ ಏರ್‌, ಮ್ಯಾಕ್‌ಬುಕ್‌ ಪ್ರೋ ಬಿಡುಗಡೆ ಮಾಡಿದೆ. ಜೊತೆಗೆ ‘ಮ್ಯಾಕ್‌ ಮಿನಿ’ ಹಾಗೂ ಬಿಗ್‌ ಸುರ್‌ ಮ್ಯಾಕ್‌ ಆಪರೇಟಿಂಗ್ ಸಿಸ್ಟಂ ಅನ್ನೂ ಮಾರುಕಟ್ಟೆಗೆ ಪರಿಚಯಿಸಿದೆ.

ಇದೇ ಮೊದಲ ಬಾರಿಗೆ ಮ್ಯಾಕ್‌ ಸಿಸ್ಟಂಗಳಿಗಾಗಿಯೇ ವಿನ್ಯಾಸಗೊಳಿಸಿರುವ ಎಂ1 ಚಿಪ್‌ ಅನ್ನು ಮ್ಯಾಕ್‌ಬುಕ್‌ ಏರ್‌, ಮ್ಯಾಕ್‌ಬುಕ್‌ ಪ್ರೋ ಮತ್ತು ಮ್ಯಾಕ್‌ ಮಿನಿಯಲ್ಲಿ ಅಳವಡಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಆ್ಯಪಲ್‌ ಸಿಇಒ ಟಿಮ್‌ ಕುಕ್‌, ‘ಹೊಸ ಉತ್ಪನ್ನಗಳ ಪರಿಚಯವು ಹಲವು ವರ್ಷಗಳ ನಮ್ಮ ಉತ್ಪಾದನೆಯಲ್ಲಿನ ದಿಟ್ಟ ಬದಲಾವಣೆಯ ಸಂಕೇತವಾಗಲಿದೆ. ಆ್ಯಪಲ್ ಮತ್ತು ಮ್ಯಾಕ್‌ ಪಾಲಿಗೆ ಇದು ಐತಿಹಾಸಿಕ ದಿನವಾಗಲಿದೆ. ಎಂ1 ಇದುವರೆಗೆ ನಾವು ನಿರ್ಮಿಸಿದ ಅತ್ಯಂತ ಶಕ್ತಿಶಾಲಿ ಚಿಪ್‌ ಆಗಿದೆ. ಮಾತ್ರವಲ್ಲದೆ ಬಿಗ್‌ ಸುರ್‌ ಆಪರೇಟಿಂಗ್ ಸಿಸ್ಟಂ ಜೊತೆಗೂಡಿ ಉತ್ತಮ ಕಾರ್ಯಕ್ಷಮತೆ, ಅಸಾಧಾರಣ ಬ್ಯಾಟರಿ ಬಾಳಿಕೆ ಹಾಗೂ ಮತ್ತಷ್ಟು ಅಪ್ಲಿಕೇಶನ್‌ಗಳು ಗ್ರಾಹಕರಿಗೆ ಲಭ್ಯವಾಗಲಿವೆ’ ಎಂದು ತಿಳಿಸಿದ್ದಾರೆ.

ವೈಶಿಷ್ಟ್ಯಗಳು
ಎಂ1 ಚಿಪ್‌ ಹಾಗೂ ಬಿಗ್‌ ಸುರ್‌ ಒಸ್‌ನೊಂದಿಗೆ ಮಾರುಕಟ್ಟೆಗೆ ಬಂದಿರುವ ಮ್ಯಾಕ್‌ಬುಕ್ ಏರ್‌ ಮತ್ತು ಮ್ಯಾಕ್‌ಬುಕ್‌ ಪ್ರೋ 13 ಇಂಚಿನ ಡಿಸ್‌ಪ್ಲೇ ಹೊಂದಿವೆ. ವಿಡಿಯೊ ಎಡಿಟಿಂಗ್‌ನಿಂದ, ಅಂತರ್ಜಾಲಕ್ಕೆ ಅಪ್‌ಲೋಡ್‌ ಮಾಡುವವರೆಗೆ ಹಿಂದಿನ ಆವೃತ್ತಿಗಿಂತಲೂ ಉತ್ಕೃಷ್ಠ ಕಾರ್ಯಕ್ಷಮತೆಯನ್ನು ಹೊಂದಿವೆ. ಇವುಗಳಲ್ಲಿ ಮೊಬೈಲ್‌ ಫೀಚರ್‌ ಮಾದರಿಯ ಟಚ್‌ ಹಾಗೂ ಫೇಸ್‌ ರೆಕಗ್ನಿಷನ್‌ ವೈಶಿಷ್ಟ್ಯಗಳೊಂದಿಗೆ ಸುರಕ್ಷತೆಗೆ ಒತ್ತು ನೀಡಲಾಗಿದೆ.

ವಿನೂತನ ತಂತ್ರಜ್ಞಾನದ ಇಮೇಜ್ ಸಿಗ್ನಲ್ ಪ್ರೊಸೆಸರ್ ಮತ್ತು ವೈಫೈ–6 ಕ್ಷಮತೆಯನ್ನು ಹೊಂದಿವೆ. ಹಿಂದಿನ ಸರಣಿಯ ಮ್ಯಾಕ್‌ಬುಕ್‌ಗಳಿಗಿಂತ ಮ್ಯಾಕ್‌ಬುಕ್ ಏರ್‌ನಲ್ಲಿ ವೇಗವಾಗಿ ಫೈಲ್‌ಗಳ ವರ್ಗಾವಣೆ, ವಿಡಿಯೊ ಎಡಿಟಿಂಗ್ ಮಾಡಲು ಸಾಧ್ಯವಿದ್ದು, ಅತ್ಯಂತ ದೀರ್ಘ ಬಾಳಿಕೆಯ (18 ಗಂಟೆ) ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಮ್ಯಾಕ್‌ಬುಕ್‌ ಪ್ರೋನಲ್ಲಿ ಬ್ಯಾಟರಿ 20 ಗಂಟೆವರೆಗೆ ಉಳಿಯಲಿದೆ.

ಮ್ಯಾಕ್‌ಬುಕ್ ಏರ್‌ ಬೆಲೆ ₹ 92,900. ಮ್ಯಾಕ್‌ಬುಕ್‌ ಪ್ರೋ ಬೆಲೆ ₹1,22,900. ಸದ್ಯ ಆನ್‌ಲೈನ್‌ ಮೂಲಕ ಖರೀದಿಸಬಹುದಾಗಿದ್ದು, ನವೆಂಬರ್‌ 17ರಂದು ಮಾರುಕಟ್ಟೆಗೆ ಬಂದಿದೆ.

ಮ್ಯಾಕ್‌ ಮಿನಿ
ಹಿಂದಿನ ಡೆಸ್ಕ್‌ಟಾಪ್‌ಗಳಿಗೆ ಹೋಲಿಸಿದರೆ ಮ್ಯಾಕ್‌ಮಿನಿ ಸಾಕಷ್ಟು ಹೊಸ ವೈಶಿಷ್ಟ್ಯ ಮತ್ತು ಉತ್ಕೃಷ್ಟ ಕಾರ್ಯಕ್ಷಮತೆಯನ್ನು ಹೊಂದಿದೆ. ಸೌಂಡ್‌, ಗ್ರಾಫಿಕ್ಸ್‌ ಡಿಸೈನ್‌, ವಿಡಿಯೊ ಎಡಿಟಿಂಗ್‌ಗಳನ್ನು ವೇಗವಾಗಿ ನಿರ್ವಹಿಸಬಹುದು. ಗಾತ್ರದಲ್ಲಿಯೂ ಸಣ್ಣದಿರುವ ಮ್ಯಾಕ್‌ ಮಿನಿ, ಅತಿಯಾದ ಕಾರ್ಯದೊತ್ತಡವಿದ್ದರೂ ಸಿಸ್ಟಂ ಬಿಸಿಯಾಗದಂತೆ ವಿನ್ಯಾಸಗೊಳಿಸಲಾಗಿದೆ. ಇದರ ಬೆಲೆ ₹ 64,900.

ಮ್ಯಾಕ್‌ ಓಎಸ್‌ ಬಿಗ್‌ ಸುರ್‌
ವಿಶ್ವದ ಅತ್ಯಾಧುನಿಕ ಡೆಸ್ಕ್‌ಟಾಪ್ ಆಪರೇಟಿಂಗ್ ಸಿಸ್ಟಂನ ಇತ್ತೀಚಿನ ಆವೃತ್ತಿಯಾದ ಬಿಗ್ ಸುರ್‌ ಅನ್ನು ಎಲ್ಲ ಹೊಸ ಮ್ಯಾಕ್‌ ಉತ್ಪನ್ನಗಳು ಹೊಂದಿರಲಿವೆ. ಮ್ಯಾಕ್‌ ಉತ್ಪನ್ನಗಳ ಕಾರ್ಯಕ್ಷಮತೆ ಹಾಗೂ ಬ್ಯಾಟರಿ ಬಾಳಿಕೆ ಜೊತೆಗೆ ಸುರಕ್ಷತೆಗೆ ಬಿಗ್‌ ಸುರ್‌ ಓಎಸ್‌ನಲ್ಲಿ ಒತ್ತು ನೀಡಲಾಗಿದೆ. ಅತ್ಯಂತ ವೇಗದ ವೆಬ್‌ ಬ್ರೌಸರ್‌ ಸಫಾರಿ, ಬಿಗ್‌ ಸುರ್‌ನೊಂದಿಗೆ ಮತ್ತಷ್ಟು ವೇಗವಾಗಿ ಕಾರ್ಯಾಚರಿಸಲಿದೆ.

ಮ್ಯಾಕ್‌ ಸಿಸ್ಟಂಗಳಲ್ಲಿ ಈ ಮೊದಲು ಲಭ್ಯವಿದ್ದದ್ದಕ್ಕಿಂತಲೂ ಹೆಚ್ಚಿನ ಆ್ಯಪ್‌ಗಳು ಇನ್ನು ಮುಂದೆ ಗ್ರಾಹಕರಿಗೆ ಸಿಗಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು