ರೈತರಿಗಾಗಿ ‘ಐಮಂಡಿ’ ಆ್ಯಪ್‌

7

ರೈತರಿಗಾಗಿ ‘ಐಮಂಡಿ’ ಆ್ಯಪ್‌

Published:
Updated:

ರಸಗೊಬ್ಬರ ಸಂಸ್ಕರಣಾ ಮತ್ತು ಸಹಕಾರ ಸಂಸ್ಥೆ ಇಫ್ಕೊ, ಸಾಮಾಜಿಕ ಇ-ಕಾಮರ್ಸ್ ಆ್ಯಪ್‌ ಮತ್ತು ವೆಬ್ ಪೋರ್ಟಲ್ ಅನ್ನು ಬಿಡುಗಡೆ ಮಾಡಿದೆ. ಇದಕ್ಕೆ ‘ಇಫ್ಕೊ ಐಮಂಡಿ’ (iMandi) ಎಂದು ಹೆಸರಿಡಲಾಗಿದೆ. ಈ ಮೂಲಕ ರೈತರಿಗೆ ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಸೇವೆ ನೀಡುವ ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದೆ.

ಇದು ಕೇಂದ್ರ ಸರ್ಕಾರದ ‘ಡಿಜಿಟಲ್ ಇಂಡಿಯಾ’ ಯೋಜನೆಯ ಧ್ಯೇಯಗಳಿಗೆ ಅನುಗುಣವಾಗಿದ್ದು ಕಂಪನಿಯ ಎಲ್ಲಾ ಸೇವೆಗಳು ಇಫ್ಕೊ ಐಮಂಡಿ ಅಂತರ್ಜಾಲ ತಾಣದಲ್ಲಿ ಲಭ್ಯವಿರುತ್ತವೆ. ಪ್ರತಿ ರೈತರಿಗೆ ಡಿಜಿಟಲ್ ತಂತ್ರಜ್ಞಾನದ ಪ್ರಯೋಜನಗಳನ್ನು ಒದಗಿಸುವುದು ಮತ್ತು ಡಿಜಿಟಲ್ ಕ್ರಾಂತಿಯನ್ನು ಗ್ರಾಮೀಣ ಭಾರತಕ್ಕೆ ತಲುಪಿಸುವುದು ‘ಇಫ್ಕೊ’ದ ಮುಖ್ಯ ಉದ್ದೇಶವಾಗಿದೆ.

‘ಆನ್‌ಲೈನ್ ಬಳಕೆ ಮತ್ತು ಡಿಜಿಟಲ್ ವಹಿವಾಟುಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲು ದೇಶದಾದ್ಯಂತ ಪ್ರಚಾರ ನಡೆಸಿದ ನಂತರ, ಇಫ್ಕೊ ಐಮಂಡಿ ಎಂಬ ಆ್ಯಪ್ ಬಿಡುಗಡೆ ಮಾಡಲಾಗಿದೆ.  ಇಲ್ಲಿ ಕೃಷಿ ಮಾಹಿತಿಗಳು ಮತ್ತು ಉತ್ಪಾದನೆ ವಿವರದ ಜತೆಗೆ ಎಫ್ಎಂಸಿಜಿ, ಎಲೆಕ್ಟ್ರಾನಿಕ್ಸ್, ಸಾಲ, ವಿಮೆ, ಇತ್ಯಾದಿ ಮಾಹಿತಿ ಒಂದೇ ವೇದಿಕೆಯಲ್ಲಿ ದೊರೆಯಲಿದೆ. ‘ಐಮಂಡಿ’ ಕೃಷಿ ಸಮುದಾಯದ ಎಲ್ಲ ಅಗತ್ಯಗಳನ್ನು ಪೂರೈಸುವ ಮತ್ತು ರೈತರ ಬೇಡಿಕೆಯನ್ನು ಈಡೇರಿಸುವ ಉದ್ದೇಶದಿಂದ 5 ಕೋಟಿ ಬಳಕೆದಾರರನ್ನು ಸೇರಿಸಿಕೊಳ್ಳುವ ಮಹಾತ್ವಾಕಾಂಕ್ಷೆ ಹೊಂದಿದೆ’ ಎಂದು ಇಫ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ. ಅವಸ್ಥಿ ಹೇಳಿದ್ದಾರೆ.

ದೇಶದಲ್ಲಿ ಇಫ್ಕೊ 55,000 ಮಾರಾಟ ಕೇಂದ್ರಗಳು, 36,000 ಸಹಕಾರಿ ಸಂಘಗಳು, 30,000 ಕ್ಕೂ ಹೆಚ್ಚು ಉಗ್ರಾಣಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಅತಿದೊಡ್ಡ ಗ್ರಾಮೀಣ ಸಾಮಾಜಿಕ ಇ-ಕಾಮರ್ಸ್‌ ಸಂಸ್ಥೆ ಆಗಿದೆ. ದೇಶದ ವಿವಿಧ ಮಾರುಕಟ್ಟೆಗಳ ಮಾಹಿತಿ, ಸಂವಹನ (ಚಾಟ್ ಮತ್ತು ಕರೆ), ಮನರಂಜನೆ ಮತ್ತು ಇತರೆ ಮಾಹಿತಿ/ಸಲಹಾ ವಿಷಯಗಳು ಇದರಲ್ಲಿ ಲಭ್ಯ. ಅಲ್ಲದೇ ವಿಭಿನ್ನ ಪ್ರದೇಶಗಳ ಜನರನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸಲು ಇದು ಅನುವು ಮಾಡಿಕೊಡುತ್ತದೆ. ಬಳಕೆದಾರರು ತಮ್ಮ ವಿವಿಧ ಆಸಕ್ತಿಯ ವಿಷಯಗಳ ಆಧಾರದ ಮೇಲೆ ವಿವಿಧ ವೇದಿಕೆಗಳನ್ನು ಸೇರಬಹುದು. ಆ ವಿಷಯದಲ್ಲಿ ತಜ್ಞರಾಗಿರುವವರ ಜತೆ ಮಾತನಾಡಬಹುದು ಮತ್ತು ವಿವಿಧ ಸಮಸ್ಯೆಗಳ ಕುರಿತು ಸಲಹೆ ಪಡೆಯಬಹುದು. ಅಲ್ಲದೇ, ಅವರು ತಮ್ಮ ಯಶಸ್ಸಿನ ಕಥೆಗಳನ್ನು ಇತರರೊಂದಿಗೆ  ಹಂಚಿಕೊಳ್ಳಬಹುದು!

ರೈತರು ಎಲ್ಲಾ ಇಫ್ಕೊ ಉತ್ಪನ್ನಗಳನ್ನು ಅಂದರೆ ರಸಗೊಬ್ಬರಗಳು (ರಾಸಾಯನಿಕ, ಡಬ್ಲುಎಸ್ಎಫ್, ಸಾವಯವ, ಜೈವಿಕ, ಇತ್ಯಾದಿ), ಕೃಷಿ ರಾಸಾಯನಿಕಗಳು ಮತ್ತು ಬೀಜಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು ಮತ್ತು ತಮ್ಮ ಮನೆಬಾಗಿಲಿಗೆ ಉಚಿತವಾಗಿ ತರಿಸಿಕೊಳ್ಳಬಹುದು. ಹವಾಮಾನ, ಮಾರುಕಟ್ಟೆ ಬೆಲೆಗಳು ಮತ್ತು ದಿನನಿತ್ಯದ ಸುದ್ದಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯಬಹುದು. ಅಷ್ಟೇ ಅಲ್ಲದೆ, ಬಳಕೆದಾರರು ತಮ್ಮ ನೆಚ್ಚಿನ ಸ್ಥಳೀಯ ಮತ್ತು ರಾಷ್ಟ್ರೀಯ ರೇಡಿಯೋ ಕೇಂದ್ರಗಳಿಗೆ ಟ್ಯೂನ್-ಇನ್ ಮಾಡಬಹುದು.

ಐಮಂಡಿ ಆ್ಯಪ್ 2ಜಿ, ಫೀಚರ್ ಫೋನುಗಳು, 3ಜಿ, ಸ್ಮಾರ್ಟ್‌‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈಗ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ 10 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಲಿದೆ. ಐಮಂಡಿ ಆ್ಯಪ್ ಆಂಡ್ರಾಯ್ಡ್ ಮತ್ತು ಐಒಎಸ್ ಮಾದರಿಯಲ್ಲಿ ಲಭ್ಯವಿದೆ.

ವಾಟ್ಸ್ಆ್ಯಪ್‌ನಲ್ಲಿ ಹೊಸ ವೈಶಿಷ್ಟ್ಯ
ಜನಪ್ರಿಯ ಮೆಸೆಜಿಂಗ್ ಸಾಮಾಜಿಕ ಜಾಲತಾಣ ವಾಟ್ಸ್ಆ್ಯಪ್‌ ಭಾರತದ ಬಳಕೆದಾರರಿಗೆ ಫಾರ್ವರ್ಡ್ ಸಂದೇಶ ಗುರುತಿಸುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಮೂಲಕ ನಕಲಿ ಸುದ್ದಿ ಹಾಗೂ ತಪ್ಪು ಸಂದೇಶಗಳ ರವಾನೆಗೆ ಕಡಿವಾಣ ಹಾಕಲು ಮುಂದಾಗಿದೆ.

ಅಮಾಯಕರ ಮೇಲೆ ಹೆಚ್ಚುತ್ತಿರುವ ಗುಂಪು ದಾಳಿಗಳಿಗೆ ಪ್ರಚೋದನೆ ನೀಡುವ ಸುಳ್ಳುಸುದ್ದಿಗಳ ಪ್ರಸರಣಕ್ಕೆ ವಾಟ್ಸ್ಆ್ಯಪ್‌ ದುರ್ಬಳಕೆಯಾಗುತ್ತಿದೆ ಎಂಬ ಟೀಕೆಗಳು ವ್ಯಾಪಕವಾದ ಹಿನ್ನೆಲೆಯಲ್ಲಿ ಸಂಸ್ಥೆ ಈ ಕ್ರಮ ಕೈಗೊಂಡಿದೆ. ಸುಳ್ಳುಸುದ್ದಿಗಳ ಪ್ರಸರಣಕ್ಕೆ ಕಡಿವಾಣ ಹಾಕಲು ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿ ಸರ್ಕಾರ ನೋಟಿಸ್ ನೀಡಿದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.

ಈ ನೂತನ ವೈಶಿಷ್ಟ್ಯದ ಮೂಲಕ ಬಳಕೆದಾರರು ತಮಗೆ ಬಂದಿರುವ ಸಂದೇಶ ಫಾರ್ವರ್ಡ್ ಎಂಬುದನ್ನು ತೋರಿಸಲಿದೆ. ಬಳಕೆದಾರರು ಬಂದಿರುವ ಸಂದೇಶದ ಮೇಲೆ ಫಾರ್ವರ್ಡ್ ಎಂಬ ಲೇಬಲ್ ಅನ್ನು ಸುಲಭವಾಗಿ ಗುರುತಿಸಬಹುದು. ಭಾರತದಲ್ಲಿ 20 ಕೋಟಿಗೂ ಅಧಿಕ ಬಳಕೆದಾರರಿದ್ದಾರೆ. ಗೋ ರಕ್ಷಣೆ, ಮಕ್ಕಳ ಕಳ್ಳರು ಇತ್ಯಾದಿ ತರಹೇವಾರಿ ಸುಳ್ಳು ಸಂದೇಶಗಳು ವಾಟ್ಸ್‌ಆ್ಯಪ್‌ ಮೂಲಕ ಹರಿದಾಡುತ್ತಿವೆ. ಇದರಿಂದ ದೇಶದಾದ್ಯಂತ ಹಲವು ನಿರಾಪರಾಧಿಗಳು ಸಾವನ್ನಪ್ಪಿದ್ದಾರೆ. ಈ ಕುರಿತು ವದಂತಿಗಳನ್ನು ತಡೆಯಲು ಶೀಘ್ರ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ವಾಟ್ಸ್ಆ್ಯಪ್‌ ಕಂಪನಿಗೆ ಸೂಚಿಸಿತ್ತು. ವಾಟ್ಸ್ಆ್ಯಪ್‌ ಸುಳ್ಳು ಸುದ್ದಿಗಳನ್ನು ತಡೆಯಲು ಮೊದಲ ಹೆಜ್ಜೆಯಾಗಿ  ದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಗಮನ ಸೆಳೆದಿತ್ತು.

ಸಣ್ಣ ಉದ್ಯಮಗಳಿಗೆ ‘ವ್ಯಾಪಾರಿ’ ಆ್ಯಪ್‌
ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ (ಎಂಎಸ್‌ಎಂಇ) ಲೆಕ್ಕಪತ್ರಗಳ ವಹಿವಾಟು ನಡೆಸಲು ಮತ್ತು ದಾಖಲೆಗಳನ್ನು ಇಡಲು ಅನುಕೂಲ ಆಗುವಂತಹ ‘ವ್ಯಾಪಾರಿ’ ಆ್ಯಪ್‌ ಅನ್ನು ಲೋಗೊ ಇನ್ಫೊಸಾಫ್ಟ್‌ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಸಣ್ಣ ಉದ್ಯಮಗಳಿಗೆ ಜಿಎಸ್‌ಟಿಗೆ ಪೂರಕವಾದ ಆ್ಯಪ್‌ ಇದಾಗಿದೆ. ಆಂಡ್ರಾಯ್ಡ್‌, ಆ್ಯಪಲ್‌ ಫೋನ್‌ಗಳಲ್ಲಿ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಬಳಕೆದಾರರು ತಮ್ಮ ಜಿಎಸ್‌ಟಿ ಸಂಖ್ಯೆ ನಮೂದಿಸಿ ಮಾರಾಟ ಮತ್ತು ಖರೀದಿಯ ಎಲ್ಲಾ ದಾಖಲೆಗಳನ್ನು ಇಡಬಹುದು. ಜಿಎಸ್‍ಟಿಆರ್ ಫೈಲ್ ಮಾಡಲು ಇದು ಕಾನೂನಾತ್ಮಕ ವರದಿಯ ಅನುಸಾರವಾಗಿ ಸಿದ್ಧಪಡಿಸುತ್ತದೆ.

‘ಬಾರ್‌ಕೋಡ್‌ ಸ್ಕ್ಯಾನಿಂಗ್ ವ್ಯವಸ್ಥೆಯೂ ಇರುವುದರಿಂದ ಕರಾರುವಾಕ್ಕಾದ ದಾಖಲೆಗಳನ್ನು ಸಂಗ್ರಹಿಸಬಹುದು. ಇದರಲ್ಲಿನ ಮಾಹಿತಿಗಳನ್ನು ಅಧಿಕೃತ ಬಳಕೆದಾರರು ಮತ್ತು ಚಾರ್ಟೆಡ್ ಅಕೌಂಟೆಂಟ್‍ಗಳು ಮಾತ್ರ ಪಡೆಯಲು ಸಾಧ್ಯ. ಸುಲಭವಾಗಿ ಅಧಿಕೃತ ಬಳಕೆದಾರರ ಪಟ್ಟಿಯನ್ನು ಬದಲಾಯಿಸಬಹುದು’ ಎಂದು ಲೋಗೊ ಇನ್ಫೊಸಾಫ್ಟ್‌ ಬಿಸಿನೆಸ್‌ ಟೆಕ್ನಾಲಜಿ ಪ್ರೈವೇಟ‌ ಲಿಮಿಟೆಡ್‌ನ ಸಿಇಒ ವಿನೋದ್‌ ಸುಬ್ರಮಣ್ಯನ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !