ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್ಸಂಗ್‌ ಒಪೆರಾ ಹೌಸ್‌ನ ಜನಾಕರ್ಷಣೆ

Last Updated 26 ಜುಲೈ 2019, 15:54 IST
ಅಕ್ಷರ ಗಾತ್ರ

ಪಾರಂಪರಿಕ ಮೂಲ ರಚನೆ ಉಳಿಸಿಕೊಂಡೇ ಸುಸಜ್ಜಿತ ರೀತಿಯಲ್ಲಿ ನವೀಕರಣಗೊಂಡು ಬ್ರಿಗೇಡ್‌ ರಸ್ತೆಯ ಆಕರ್ಷಣೆ ಹೆಚ್ಚಿಸಿರುವ ‘ಸ್ಯಾಮ್ಸಂಗ್‌ ಒಪೆರಾ ಹೌಸ್‌’, ಕಳೆದ ಕೆಲ ತಿಂಗಳುಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಗಮನ ಸೆಳೆಯುತ್ತಿದೆ. ಸ್ಯಾಮ್ಸಂಗ್‌ ಇಂಡಿಯಾದ ವೈವಿಧ್ಯಮಯ ಸ್ಮಾರ್ಟ್‌ ಉತ್ಪನ್ನಗಳ ನೇರ ಅನುಭವ ಪಡೆಯಲು ಜಗತ್ತಿನ ಅತಿದೊಡ್ಡದಾದ ಷೋರೂಂ ಆಗಿ ಅಭಿವೃದ್ಧಿಪಡಿಸಿರುವ ಈ ತಾಣದ ಆಕರ್ಷಣೆ ಅಷ್ಟಕ್ಕೆ ಸೀಮಿತವಾಗಿಲ್ಲ. ಸಂಸ್ಕೃತಿ ಮತ್ತು ತಂತ್ರಜ್ಞಾನಗಳ ಸಂಗಮ ಸ್ಥಳವಾಗಿ ಕೈಬೀಸಿ ಕರೆಯುತ್ತಿದೆ.

1930ರಲ್ಲಿ ನಿರ್ಮಿಸಲಾಗಿದ್ದ ಈ ಪಾರಂಪರಿಕ ಕಟ್ಟಡವು ಒಂಬತ್ತು ದಶಕಗಳಲ್ಲಿ ಹಲವಾರು ಅವತಾರಗಳನ್ನು ಕಂಡಿದೆ. ಸ್ವಾತಂತ್ರ್ಯಪೂರ್ವದ ಮತ್ತು ನಂತರದ ದಿನಗಳಲ್ಲಿ ಸಂಗೀತ, ನೃತ್ಯ ಪ್ರದರ್ಶನದ ತಾಣವಾಗಿದ್ದ ಕಟ್ಟಡವು ಆನಂತರ ಚಿತ್ರ ಪ್ರದರ್ಶನದ ಥೇಟರ್‌ ಆಗಿತ್ತು. ಹಲವಾರು ವರ್ಷಗಳವರೆಗೆ ಕೋರ್ಟ ವ್ಯಾಜ್ಯದಲ್ಲಿ ಸಿಲುಕಿದ್ದ ಕಟ್ಟಡವನ್ನು 2018ರಲ್ಲಿ ಸ್ಯಾಮ್ಸಂಗ್‌ ಸಂಸ್ಥೆಯು ಮಾಲೀಕರಿಂದ ದೀರ್ಘಾವಧಿಯ ಲೀಸ್‌ಗೆ ಪಡೆದುಕೊಂಡು ಅದಕ್ಕೊಂದು ಹೊಸ ಸ್ವರೂಪ ನೀಡಿದೆ.

ಈ ಪಾರಂಪರಿಕ ಕಟ್ಟಡವು ಈಗ ವಿಶ್ವದ ಅತಿದೊಡ್ಡ ಮೊಬೈಲ್‌ ಎಕ್ಸ್‌ಪಿರಿಯನ್ಸ್‌ ಕೇಂದ್ರವಾಗಿ ಮಾರ್ಪಟ್ಟಿದೆ. ಮನರಂಜನೆಯ ಹೊಸ ತಾಣವಾಗಿರುವುದು ಅದರ ಹೊಸ ಹೆಗ್ಗಳಿಕೆಯಾಗಿದೆ. ಇಲ್ಲಿಗೆ ಭೇಟಿ ನೀಡುವ ಗ್ರಾಹಕರು ಇಲ್ಲಿರುವ ವೈವಿಧ್ಯಮಯ ಉತ್ಪನ್ನಗಳನ್ನು ಬಳಸಿ ಅವುಗಳ ಪ್ರಯೋಜನಗಳ ಸ್ವಾನುಭವ ಪಡೆಯಬಹುದಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತಿಳಿವಳಿಕೆ ಪಡೆಯಲು ಶಾಲಾ ವಿದ್ಯಾರ್ಥಿಗಳ ಪಾಲಿಗೂ ಇದೊಂದು ಅಪೂರ್ವ ತಾಣವಾಗಿಯೂ ಮಾರ್ಪಟ್ಟಿದೆ. ನಿಯಮಿತವಾಗಿ ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆಯಿಸಿಕೊಂಡು ಅವರಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿನ ವಿದ್ಯಮಾ ಪರಿಚಯಿಸಲಾಗುತ್ತಿದೆ. ಸೈಕ್ಲಿಂಗ್‌, ಫಿಟ್ನೆಸ್‌, ಗೇಮಿಂಗ್‌ನ ಅತ್ಯಾಧುನಿಕ ಸ್ಮಾರ್ಟ್‌ ಸಾಧನಗಳ ಕಾರ್ಯವೈಖರಿಯನ್ನು ಇಲ್ಲಿ ಸ್ವತಃ ಮನದಟ್ಟು ಮಾಡಿಕೊಳ್ಳಬಹುದು.

ಪಾರಂಪರಿಕ ಕಟ್ಟಡವನ್ನು ಬಲಗೊಳಿಸಿ ಬಳಕೆಗೆ ಸುರಕ್ಷಿತಗೊಳಿಸಿ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿಶಿಷ್ಟ ವೇದಿಕೆಯನ್ನಾಗಿ ಬಳಕೆಗೆ ತರಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಪ್ರದರ್ಶನಕ್ಕೆ ವಿಶೇಷ ಕಾಳಜಿ ವಹಿಸಲಾಗಿದೆ.

ಬ್ಯಾಂಡ್‌ ಪ್ರದರ್ಶನ, ಫ್ಯಾಷನ್‌ ಷೋ, ಕಳರಿಪಯಟ್ಟು ನೃತ್ಯ, ಮಲ್ಲಕಂಬ, ಬಾಣಸಿಗರು ನಡೆಸಿಕೊಡುವ ಪಾಕ ವಿಧಾನಗಳ ಕಾರ್ಯಾಗಾರ, ಶಾಲಾ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಪ್ರವಾಸ ಕೇಂದ್ರ, ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಉಪನ್ಯಾಸ, ಅಮೆಜಾನ್‌ ಪ್ರೈಮ್‌ ಸರಣಿ ಕಾರ್ಯಕ್ರಮಗಳ ಪ್ರದರ್ಶನ, ಸೈನ್ಸ್‌ ಕೆಫೆ, ಸ್ಟ್ಯಾಂಡ್‌ಅಪ್‌ ಕಾಮೆಡಿ, ಥೇಟರ್‌ ಗ್ರೂಪ್‌ಗಳ ನಾಟಕ ಪ್ರದರ್ಶನ, ಫಿಟ್ನೆಸ್‌ ತರಬೇತಿ – ಹೀಗೆ ಈ ತಾಣವು ವೈವಿಧ್ಯಮಯ ಕಾರ್ಯಕ್ರಮಗಳ ಹೊಸ ವೇದಿಕೆಯಾಗಿ ಮಾರ್ಪಟ್ಟಿದೆ.

ಕಾರ್ಯಕ್ರಮಗಳ ನೆಪದಲ್ಲಿ ಸಮಾನ ಮನಸ್ಕರು ಒಂದೆಡೆ ಸೇರುವ ಅವಕಾಶವನ್ನೂ ಒದಗಿಸುತ್ತಿದೆ. ವಾರಾಂತ್ಯದ ಸಂತಸದ ಕ್ಷಣಗಳ ಕಳೆಯುವ ತಾಣವಾಗಿ ಬದಲಾಗಿದೆ.

ಡಾನ್ಸ್‌, ಫ್ಯಾಷನ್‌ ಷೋ, ಅತ್ಯಾಧುನಿಕ ಅಡುಗೆ ಪರಿಕರ ಬಳಸಿ ವೈವಿಧ್ಯಮಯ ಪಾಕ ವಿಧಾನಗಳನ್ನು ಪರಿಚಯಿಸುವ ಪ್ರತಿಷ್ಠಿತ ಬಾಣಸಿಗರ ಕಾರ್ಯಾಗಾರಗಳು ಗೃಹಿಣಿಯರ ಗಮನವನ್ನೂ ಸೆಳೆಯುತ್ತಿವೆ. ‘ಒಪೆರಾ ಹೌಸ್‌’ ಅನ್ನು ಎಲ್ಲ ವಯೋಮಾನದ, ವಿಭಿನ್ನ ಅಭಿರುಚಿಯ ಗ್ರಾಹಕರ ಅಚ್ಚುಮೆಚ್ಚಿನ ತಾಣವನ್ನಾಗಿ ಅಭಿವೃದ್ಧಿಪಡಿಸುವಲ್ಲಿ ಸ್ಯಾಮ್ಸಂಗ್‌ ಯಶಸ್ವಿಯಾಗಿದೆ.

‘ಇಲ್ಲಿಯ ಕಾರ್ಯಕ್ರಮಗಳಿಗೆ ಆಕರ್ಷಿತರಾಗುವ ವಿಭಿನ್ನ ವಯೋಮಾನದ ಗ್ರಾಹಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಸೀಮಿತ ಸ್ಥಳಾವಕಾಶ ಇರುವುದರಿಂದ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಆಹ್ವಾನ ಇರಲಿದೆ’ ಎಂದು ಸ್ಯಾಮ್ಸಂಗ್‌ ಮೊಬೈಲ್‌ ವಹಿವಾಟಿನ ಹಿರಿಯ ಉಪಾಧ್ಯಕ್ಷ ಮೋಹನ್‌ದೀಪ್‌ ಸಿಂಗ್‌ ಹೇಳುತ್ತಾರೆ.

‘ತಂತ್ರಜ್ಞಾನ ಕಾರ್ಯಾಗಾರ ಮತ್ತಿತರ ಕಾರ್ಯಕ್ರಮಗಳು ನಿಯಮಿತವಾಗಿ ನಡೆಯುತ್ತಿರುತ್ತವೆ. ಸಂಸ್ಥೆಯ ಹೊಸ ಉತ್ಪನ್ನ ಪರಿಚಯಿಸುವ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅನೇಕರು ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಗ್ರಾಹಕರಲ್ಲಿ ನವೋಲ್ಲಾಸ ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ವಾರಾಂತ್ಯದಲ್ಲಿನ ಕಾರ್ಯಕ್ರಮಗಳು ಗುಣಮಟ್ಟದ ಕಾರಣಕ್ಕೆ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗುತ್ತಿವೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT