ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್‌: ಗ್ಯಾಲಕ್ಸಿ ಎಸ್‌22 ಸರಣಿಯ ಮೂರು ಮಾದರಿಯ ಫೋನ್‌ಗಳು ಬಿಡುಗಡೆ

Last Updated 10 ಫೆಬ್ರುವರಿ 2022, 8:51 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಆ್ಯಪಲ್‌ ಮತ್ತು ಶಓಮಿ ಉತ್ಪನ್ನಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಸ್ಯಾಮ್‌ಸಂಗ್‌ ಬುಧವಾರ 'ಗ್ಯಾಲಕ್ಸಿ ಎಸ್‌22' ಸರಣಿಯ ಫೋನ್‌ಗಳನ್ನು ಅನಾವರಣ ಮಾಡಿದೆ.

ಹಲವು ವೈಶಿಷ್ಟ್ಯಗಳನ್ನು ಒಳಗೊಂಡ ಪ್ರೀಮಿಯಮ್‌ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ ಎಸ್‌22 ಅಲ್ಟ್ರಾ, ಎಸ್‌22+ ಹಾಗೂ ಎಸ್‌22 ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಗ್ಯಾಲಕ್ಸಿ ಟ್ಯಾಬ್‌ ಎಸ್‌ 8 ಸಹ ಮಾರುಕಟ್ಟೆ ಪ್ರವೇಶಿಸಿದೆ.

ಇದೇ ಮೊದಲ ಬಾರಿಗೆ ನೋಟ್‌ ಬಳಕೆದಾರರ ನೆಚ್ಚಿನ ಬಿಲ್ಟ್‌ ಇನ್‌ 'ಎಸ್‌ ಪೆನ್‌' ಈಗ ಗ್ಯಾಲಕ್ಸಿ ಎಸ್‌ ಸರಣಿಯ ಫೋನ್‌ಗಳೊಂದಿಗೆ ಬರಲಿದೆ. ಸ್ಕ್ರೀನ್‌ ಮೇಲೆ ಬರಹ, ಚಿತ್ತಾರಗಳು ಮೂಡಿಸಬಹುದು ಹಾಗೂ ಆ್ಯಪ್‌ಗಳ ಹುಡುಕಾಟದಲ್ಲೂ ಭಿನ್ನ ಅನುಭವ ಸಿಗಲಿದೆ. ರಾತ್ರಿ ಅಥವಾ ಬೆಳಕು, ಯಾವುದೇ ಸಮಯದಲ್ಲಿ ಹಿಂದಿನ ಮತ್ತು ಸೆಲ್ಫಿ ಎರಡೂ ಕ್ಯಾಮೆರಾಗಳಲ್ಲಿ ಸ್ಪಷ್ಟವಾದ, ಉತ್ತಮ ಗುಣಮಟ್ಟದ ವಿಡಿಯೊ ಹಾಗೂ ಫೋಟೊಗಳನ್ನು ಸೆರೆ ಹಿಡಿಯಲು ಅತ್ಯಾಧುನಿಕ ನೈಟೊಗ್ರಫಿ ಫೀಚರ್‌ ಅವಕಾಶ ನೀಡಲಿದೆ. 2.4 ಮೈಕ್ರೊಮೀಟರ್‌ ಪಿಕ್ಸೆಲ್‌ ಸೆನ್ಸರ್‌ ಇದಕ್ಕೆ ಪೂರಕವಾಗಿದೆ.

ಗ್ಯಾಲಕ್ಸಿ ಎಸ್‌22 ಸರಣಿಯ ಮೂರೂ ಮಾದರಿಗಳಲ್ಲಿ ರಾ (RAW) ಆ್ಯಪ್‌ ಬಳಕೆ ಮಾಡಬಹುದಾಗಿದ್ದು, ಇದರಿಂದಾಗಿ ಇನ್‌–ಕ್ಯಾಮೆರಾ ಎಡಿಟಿಂಗ್‌ಗೆ ಅವಕಾಶ ಸಿಗಲಿದೆ. ಈ ಮೂಲಕ ಡಿಎಸ್‌ಎಲ್‌ಆರ್‌ ರೀತಿಯ ಗುಣಮಟ್ಟವನ್ನು ದೃಶ್ಯಗಳಲ್ಲಿ ಕಾಣಬಹುದಾಗಿದೆ. ಇದರೊಂದಿಗೆ 100X ಸ್ಪೇಸ್‌ ಜೂಮ್‌, 10x ಆಪ್ಟಿಕಲ್‌ ಜೂಮ್‌ ಮತ್ತು 10x ಡಿಜಿಟಲ್‌ ಜೂಮ್‌ ಜೊತೆಗೆ ಎಐ ಸೂಪರ್‌ ರೆಸಲ್ಯೂಷನ್‌ ತಂತ್ರಜ್ಞಾನ ನೀಡಲಾಗಿದೆ. ಹೊಸ ಫ್ರೇಮಿಂಗ್‌ ಫೀಚರ್‌, ಫ್ರೇಮ್‌ನಲ್ಲಿ ಕಾಣುವ 10 ಜನರನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ ಹಾಗೂ ತಾನಾಗಿಯೇ ಕ್ಯಾಮೆರಾ ಫೋಕಸ್‌ ಸರಿ ಪಡಿಸಿಕೊಳ್ಳುತ್ತದೆ. ವಿಡಿಐಎಸ್‌ (VDIS) ತಂತ್ರಜ್ಞಾನದಿಂದಾಗಿ ಚಲಿಸುವಾಗಲೂ ಉತ್ತಮ ದೃಶ್ಯಗಳನ್ನು ಸೆರೆ ಹಿಡಿಯಲು ಸಾಧ್ಯವಾಗಲಿದೆ.

ಗ್ಯಾಲಕ್ಸಿ ಎಸ್‌22 ಸರಣಿಯ ಫೋನ್‌ಗಳು ನಾಲ್ಕು ಜನರೇಷನ್‌ ವರೆಗೂ ಆ್ಯಂಡ್ರಾಯ್ಡ್‌ ಒಎಸ್‌ ಅಪ್‌ಗ್ರೇಡ್‌ ಆಗಿದೆ.

ಗ್ಯಾಲಕ್ಸಿ ಎಸ್‌22 ಅಲ್ಟ್ರಾ ಫೋನ್‌ ಗ್ಯಾಲಕ್ಸಿ ನೋಟ್‌ನಲ್ಲಿರುವ ರೀತಿಯ ಕಾರ್ಯಾಚರಣೆ ಹಾಗೂ ಎಸ್‌ ಸರಣಿಯ ಫೋನ್‌ಗಳಲ್ಲಿರುವ ವಿಶೇಷ ಗುಣಲಕ್ಷಣಗಳನ್ನು ವಿಲೀನಗೊಳಿಸಲಾಗಿದ್ದು, ಬಳಕೆದಾರರಿಗೆ ಹೊಸ ಅನುಭವ ಸಿಗಲಿದೆ ಎಂದು ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌ ಎಂಎಕ್ಸ್‌ ಬಿಸಿನೆಸ್‌ನ ಅಧ್ಯಕ್ಷ ಟಿಎಂ ರೋಹ್‌ ಹೇಳಿದ್ದಾರೆ.

ಗ್ಯಾಲಕ್ಸಿ ಎಸ್‌22 ಅಲ್ಟ್ರಾ: 6.8 ಇಂಚು ಅಮೊಲೆಡ್‌ 2X ಡಿಸ್‌ಪ್ಲೇ, 5,000ಎಂಎಎಚ್‌ ಬ್ಯಾಟರಿ, ಆ್ಯಂಡ್ರಾಯ್ಡ್‌ 12 ಮತ್ತು ಒನ್‌ ಯುಐ 4.0 ಕಾರ್ಯಾಚರಣೆ ವ್ಯವಸ್ಥೆ ಇದೆ. 128ಜಿಬಿ, 256ಜಿಬಿ, 512ಜಿಬಿ ಹಾಗೂ 1ಟಿಬಿ ಸಂಗ್ರಹ ಸಾಮರ್ಥ್ಯ, 8ಜಿಬಿ ರ್‍ಯಾಮ್‌ ಮತ್ತು 12ಜಿಬಿ ರ್‍ಯಾಮ್‌ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಈ ಮಾದರಿಯ ಫೋನ್‌ ಆರಂಭಿಕ ಬೆಲೆ 1,200 ಡಾಲರ್‌ ನಿಗದಿಯಾಗಿದೆ.

ಫೋನ್‌ ಹಿಂಬದಿಯಲ್ಲಿ 12ಎಂಪಿ ಅಲ್ಟ್ರಾ–ವೈಡ್‌ ಕ್ಯಾಮೆರಾ, 108ಎಂಪಿ ವೈಡ್‌ ಕ್ಯಾಮೆರಾ, 10ಎಂಪಿ ಟೆಲಿಫೋಟೊ ಕ್ಯಾಮೆರಾ (3xಆಪ್ಟಿಕಲ್‌ ಜೂಮ್‌) ಹಾಗೂ 10ಎಂಪಿ ಟೆಲಿಫೋಟೊ ಕ್ಯಾಮೆರಾ ಇದೆ. ವಿಡಿಯೊ ಆಟೊ ಫ್ರೇಮಿಂಗ್‌ ಟೂಲ್‌ಗಳ ಜೊತೆಗೆ ಸೆಲ್ಫಿಗಾಗಿ 40ಎಂಪಿ ಕ್ಯಾಮೆರಾ ಅಳವಡಿಸಲಾಗಿದೆ. 45ವ್ಯಾಟ್‌ ಸೂಪರ್‌ ಫಾಸ್ಟ್‌ ಚಾರ್ಜಿಂಗ್‌ಗೆ ಅವಕಾಶವಿದ್ದು, 10 ನಿಮಿಷ ಜಾರ್ಜ್‌ ಮಾಡುವ ಮೂಲಕ 50 ನಿಮಿಷಗಳ ವರೆಗೂ ವಿಡಿಯೊ ರೆಕಾರ್ಡ್‌ ಮಾಡಬಹುದಾಗಿದೆ.

ಗ್ಯಾಲಕ್ಸಿ ಎಸ್‌22 ಮತ್ತು ಎಸ್‌22+: ಎಸ್‌22 ಫೋನ್‌ 6.1 ಇಂಚು ಡಿಸ್‌ಪ್ಲೇ, ಎಸ್‌22+ ಫೋನ್‌ 6.6 ಇಂಚು ಡಿಸ್‌ಪ್ಲೇ ಹೊಂದಿದೆ. 128ಜಿಬಿ ಮತ್ತು 256ಜಿಬಿ ಸಂಗ್ರಹ ಸಾಮರ್ಥ್ಯದೊಂದಿಗೆ 8ಜಿಬಿ ರ್‍ಯಾಮ್‌ ಆಯ್ಕೆಗಳನ್ನು ನೀಡಲಾಗಿದೆ. ಹಿಂಬದಿಯಲ್ಲಿ 50ಎಂಪಿ ಮುಖ್ಯ ಕ್ಯಾಮೆರಾ, 10ಎಂಪಿ ಟೆಲಿ ಲೆನ್ಸ್‌ ಹಾಗೂ 12ಎಂಪಿ ಅಲ್ಟ್ರಾ ವೈಡ್‌ ಲೆನ್ಸ್‌ಗಳಿಗೆ. ಸೆಲ್ಫಿಗಾಗಿ 10ಎಂಪಿ ಕ್ಯಾಮೆರಾ ಅಳವಡಿಸಲಾಗಿದೆ.

ಎಸ್‌22 ಮಾದರಿಯ ಫೋನ್‌ ಆರಂಭಿಕ ಬೆಲೆ 800 ಡಾಲರ್‌ ಹಾಗೂ ಎಸ್‌22+ ಮಾದರಿಯ ಫೋನ್‌ ಆರಂಭಿಕ ಬೆಲೆ 1,000 ಡಾಲರ್‌ ನಿಗದಿಯಾಗಿದೆ.

ಫ್ಯಾಂಟಮ್‌ ಬ್ಲ್ಯಾಕ್‌, ಫ್ಯಾಂಟಮ್‌ ವೈಟ್‌, ಗ್ರೀನ್‌, ಬರ್ಗಂಡಿ, ಪಿಂಕ್‌ ಗೋಲ್ಡ್‌ ಬಣ್ಣಗಳಲ್ಲಿ ಫೋನ್‌ಗಳು ಲಭ್ಯವಿರಲಿವೆ. ಇದೇ 25ರಿಂದ ಫೋನ್‌ಗಳು ಖರೀದಿಗೆ ಸಿಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT