ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಲಿಮ್ ದೇಹ ಮತ್ತು ಸ್ಟಾಕ್‌ ಆಂಡ್ರಾಯ್ಡ್‌!

Last Updated 7 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಫೋನ್‌ ಖರೀದಿಸಬೇಕು ಎಂದರೆ ಅದು ಸ್ಮಾರ್ಟ್‌ಫೋನೇ ಆಗಿರಬೇಕು. ಸ್ಮಾರ್ಟ್‌ ಫೋನ್‌ ಅಂದರೆ ಅದು ಆಂಡ್ರಾಯ್ಡ್‌! ಫೋನ್‌ ಆಗಿರಲೇಬೇಕು. ಏನೇ ಇದ್ದರೂ ಐಫೋನ್‌ ಎಂಬುದು ಉಳ್ಳವರದ್ದು. ಆಂಡ್ರಾಯ್ಡ್‌ ಅಂದರೆ ಎಲ್ಲರದ್ದು.

ಅದಿರಲಿ, ಖರೀದಿ ಮಾಡುವ ಫೋನ್‌ ಆಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆ ಹೊಂದಿದ್ದರೆ ಸಾಕೇ? ಯಾವ ಬಗೆಯ ಆಂಡ್ರಾಯ್ಡ್ ಹೊಂದಿದ್ದರೆ ಉತ್ತಮ?!

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ತಯಾರಿಸುವ ಹಲವು ಕಂಪನಿಗಳು, ಫೋನ್‌ಗೆ ತಮ್ಮದೇ ಆದ ಆಂಡ್ರಾಯ್ಡ್‌ ಆವೃತ್ತಿಯನ್ನು ಅಳವಡಿಸುತ್ತವೆ. ಅಂದರೆ, ಅವು ಗೂಗಲ್‌ ಕಂಪನಿ ಸಿದ್ಧಪಡಿಸಿದ ಆಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಒಂದಿಷ್ಟು ಬದಲಾವಣೆ ತರುತ್ತವೆ. ಬದಲಾಯಿಸಿದ ಕಾರ್ಯಾಚರಣೆ ವ್ಯವಸ್ಥೆಯನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸುತ್ತವೆ.

ಆದರೆ, ಆಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆ ಹೇಗಿದ್ದರೆ ಉತ್ತಮ ಎಂಬುದು ಗೂಗಲ್‌ಗೆ ಬಹಳ ಚೆನ್ನಾಗಿ ಗೊತ್ತಿದೆ – ಎಷ್ಟಿದ್ದರೂ ಆಂಡ್ರಾಯ್ಡ್‌ಗೆ ಅಪ್ಪ-ಅಮ್ಮ ಗೂಗಲ್‌ ಕಂಪನಿಯೇ ಅಲ್ಲವೇ? ಗೂಗಲ್‌ ಸಿದ್ಧಪಡಿಸಿದ ಆಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆ ಸ್ಟಾಕ್‌ ಆಂಡ್ರಾಯ್ಡ್‌. ಇದನ್ನು ವೆನಿಲ್ಲಾ ಆಂಡ್ರಾಯ್ಡ್‌, ಪ್ಯೂರ್‌ ಆಂಡ್ರಾಯ್ಡ್‌ ಎಂದೂ ಕರೆಯಲಾಗುತ್ತದೆ. ಇದು ಶುದ್ಧವಾದ ತಿಳಿನೀರು ಇದ್ದಂತೆ. ಇದಕ್ಕೆ ಬೇರೆ ಏನೂ ಬೆರಕೆ ಆಗಿರುವುದಿಲ್ಲ.

ಸ್ಟಾಕ್‌ ಆಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದರಲ್ಲಿ ಕೆಲವು ಲಾಭಗಳಿವೆ.

ಸ್ಟಾಕ್‌ ಆಂಡ್ರಾಯ್ಡ್‌ ವ್ಯವಸ್ಥೆ ಇದ್ದಲ್ಲಿ, ಸ್ಮಾರ್ಟ್‌ಫೋನ್‌ನ ಹೋಂ ಸ್ಕ್ರೀನ್‌ ಹೇಗಿರಬೇಕು, ಆ್ಯಪ್‌ ಡ್ರಾವರ್‌ ಹೇಗಿರಬೇಕು ಎಂಬುದನ್ನು ಬಳಕೆದಾರರೇ ನಿರ್ಧರಿಸಬಹುದು. ರೂಪಾಂತರಗೊಂಡ ಆಂಡ್ರಾಯ್ಡ್‌ ವ್ಯವಸ್ಥೆಯಲ್ಲಿ ಈ ಅವಕಾಶ ಇಲ್ಲ. ಉದಾಹರಣೆಗೆ, ಷಿಯೋಮಿ ಕಂಪನಿಯ ಬಹುತೇಕ ಫೋನ್‌ಗಳು. ಇದರಲ್ಲಿ ಆ್ಯಪ್‌ ಡ್ರಾವರ್‌ ವ್ಯವಸ್ಥೆಯೇ ಇಲ್ಲ. ಅದೇ ಸ್ಟಾಕ್‌ ಆಂಡ್ರಾಯ್ಡ್‌ ವ್ಯವಸ್ಥೆಯಲ್ಲಿ ಆ್ಯಪ್‌ ಡ್ರಾವರ್‌ ಇರುತ್ತದೆ. ಅದು ಬೇಡವೆಂದರೆ, ಗೂಗಲ್‌ ಪ್ಲೇ ಸ್ಟೋರ್‌ನಿಂದ ಯಾವುದಾದರೂ ಸ್ಕಿನ್‌ ಹಾಕಿಕೊಂಡು, ಬಳಕೆದಾರ ತನಗೆ ಬೇಕಾಗುವಂತೆ ಹೋಂ ಸ್ಕ್ರೀನ್‌ ಮರುವಿನ್ಯಾಸ ಮಾಡಿಕೊಳ್ಳಬಹುದು.

ಸ್ಟಾಕ್‌ ಆಂಡ್ರಾಯ್ಡ್‌ನಲ್ಲಿ ಇರುವುದು ಗೂಗಲ್‌ ಕ್ರೋಂ ವೆಬ್‌ ಬ್ರೌಸರ್‌ ಮಾತ್ರ. ಆದರೆ, ಆಂಡ್ರಾಯ್ಡ್‌ ಶುದ್ಧ ರೂಪ ಬಳಸದ ಸ್ಮಾರ್ಟ್‌ಫೋನ್‌ಗಳಲ್ಲಿ ಬೇರೆ ಬೇರೆ ವೆಬ್‌ ಬ್ರೌಸರ್‌ಗಳು ಇರುತ್ತದೆ. ಕೆಲವು ಫೋನ್‌ಗಳು ಈ ಬೇರೆ ಬ್ರೌಸರ್‌ಗಳನ್ನು ತೆಗೆದುಹಾಕಲು ಬಿಡುವುದಿಲ್ಲ. ವಿಷಯ ಇಷ್ಟೇ, ಬಳಕೆದಾರನಿಗೆ ಹೆಚ್ಚಿನ ಅಧಿಕಾರ ನೀಡುವುದು ಸ್ಟಾಕ್‌ ಆಂಡ್ರಾಯ್ಡ್‌ ಫೋನ್‌ಗಳು ಮಾತ್ರ.

ಸ್ಟಾಕ್‌ ಆಂಡ್ರಾಯ್ಡ್‌ನಲ್ಲಿ ಅನಗತ್ಯ ಎನ್ನುವ ಆ್ಯಪ್‌ಗಳು ಇರುವುದಿಲ್ಲ. ಗೂಗಲ್‌ ಕಂಪನಿ ನಿರ್ಧರಿಸಿದ ಅತ್ಯಗತ್ಯ ಆ್ಯಪ್‌ಗಳು ಮಾತ್ರ ಇರುತ್ತವೆ. ಬಳಕೆದಾರ ತನಗೆ ಬೇಕಿರುವ ಇತರ ಯಾವುದೇ ಆ್ಯಪ್‌ ಅನ್ನು ಪ್ಲೇಸ್ಟೋರ್‌ನಿಂದ ಪಡೆದುಕೊಳ್ಳಬಹುದು. ಇದರ ಲಾಭ ಅಂದರೆ, ಅನಗತ್ಯ ಆ್ಯಪ್‌ಗಳು ಇಲ್ಲದೆ, ಫೋನ್‌ನಲ್ಲಿ ಲಭ್ಯವಿರುವ ಸ್ಟೋರೇಜ್‌ನಲ್ಲಿ ಹೆಚ್ಚಿನ ಭಾಗ ಬಳಕೆದಾರನಿಗೆ ತನ್ನಿಷ್ಟದಂತೆ ಬಳಸಲು ದೊರೆಯುತ್ತದೆ.
ಅನಗತ್ಯ ಆ್ಯಪ್‌ಗಳು ಇಲ್ಲದಿರುವ ಕಾರಣ, ರ‍್ಯಾಮ್‌ನ ಬಳಕೆ ಕೂಡ ಚೆನ್ನಾಗಿರುತ್ತದೆ. ಇದರ ಪರಿಣಾಮವಾಗಿ, ಫೋನ್‌ ಹೆಚ್ಚು ಚುರುಕಾಗಿ ಕೆಲಸ ಮಾಡುತ್ತದೆ.

ಐಫೋನ್‌ ಪ್ರೇಮಿಗಳು ಆಂಡ್ರಾಯ್ಡ್‌ ಫೋನ್‌ಗಳ ಬಗ್ಗೆ ಆಗಾಗ ಒಂದು ವಿಷಯ ಇಟ್ಟುಕೊಂಡು ತಮಾಷೆ ಮಾಡುವುದುಂಟು. ಅದು ಆಂಡ್ರಾಯ್ಡ್‌ ಫೋನ್‌ಗಳಲ್ಲಿನ ಭದ್ರತೆ, ಕಾರ್ಯಕ್ಷಮತೆಗೆ ಸಂಬಂಧಿಸಿದ್ದು. ಗೂಗಲ್‌ ಕಂಪನಿ ಸರಿಸುಮಾರು ಪ್ರತಿ ತಿಂಗಳೂ ಅಪ್‌ಡೇಟ್‌ ಕೊಟ್ಟು, ಆಂಡ್ರಾಯ್ಡ್‌ ಫೋನ್‌ನ ಭದ್ರತೆಯನ್ನು, ಕಾರ್ಯಕ್ಷಮತೆಯನ್ನು ಉತ್ತಮಪಡಿಸುತ್ತ ಇರುತ್ತದೆ. ಈ ರೀತಿಯ ಅಪ್‌ಡೇಟ್‌ಗಳು ಮೊದಲು ಸಿಗುವುದು ಸ್ಟಾಕ್‌ ಆಂಡ್ರಾಯ್ಡ್‌ ಫೋನ್‌ಗಳಿಗೇ ವಿನಾ ಆಂಡ್ರಾಯ್ಡ್‌ನ ಮಾರ್ಪಾಟು ಆವೃತ್ತಿಗಳನ್ನು ಹೊಂದಿರುವ ಫೋನ್‌ಗಳಿಗೆ ಅಲ್ಲ.

ಒಂದು ಹಂತದಲ್ಲಿ ಮುಗಿದೇ ಹೋಯಿತು ಎಂಬಂತೆ ಆಗಿದ್ದ ನೋಕಿಯಾ ಕಂಪನಿ ಈಗ ಮತ್ತೆ ಮೊಬೈಲ್‌ ಫೋನ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದು ಹಳೆಯ ಸುದ್ದಿ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನೋಕಿಯಾ ಫೋನ್‌ಗಳಲ್ಲಿ ಸ್ಟಾಕ್‌ ಆಂಡ್ರಾಯ್ಡ್‌ ವ್ಯವಸ್ಥೆ ಅಳವಡಿಸಿರುವುದು. ಸ್ಟಾಕ್‌ ಆಂಡ್ರಾಯ್ಡ್‌ ವ್ಯವಸ್ಥೆ ಕೊಡುವ ಅನುಭವವನ್ನು ಜನ ಇಷ್ಟಪಡುತ್ತಿದ್ದಾರೆ ಎಂಬುದನ್ನು ಅರಿತೇ, ಕಂಪನಿ ಈ ತೀರ್ಮಾನ ಕೈಗೊಂಡಿದೆ ಎಂದು ಕೆಲವು ವರದಿಗಳು ಹೇಳಿವೆ.

ಲೆನೊವೊ ಕೂಡ ತನ್ನ ಫೋನ್‌ಗಳಿಗೆ ಸ್ಟಾಕ್‌ ಆಂಡ್ರಾಯ್ಡ್‌ ಅಳವಡಿಸುವುದನ್ನು ಶುರು ಮಾಡಿ ಕೆಲವು ಕಾಲ ಕಳೆದಿದೆ ಎಂಬುದು ಗಮನಾರ್ಹ.

ಸ್ಟಾಕ್‌ ಆಂಡ್ರಾಯ್ಡ್‌ ಅಂದರೆ ಸ್ಲಿಂ ಆಗಿರುವ ದೇಹ. ಬೇರೆ ಬೇರೆ ರೂಪ ಪಡೆದಿರುವ ಆಂಡ್ರಾಯ್ಡ್‌ ಅಂದರೆ ಸ್ವಲ್ಪ ಡುಮ್ಮಗಾಗಿರುವ ದೇಹ ಇದ್ದಂತೆ!

3 ಸ್ಟಾಕ್‌ ಆಂಡ್ರಾಯ್ಡ್‌ ಫೋನ್‌ಗಳು?

ಮಿ ಎ2: ಇದು ಷಿಯೋಮಿ ಕಂಪನಿಯವರ ಸ್ಟಾಕ್‌ ಆಂಡ್ರಾಯ್ಡ್‌ ಫೋನ್‌. 4 ಜಿ.ಬಿ. ರ್‍ಯಾಮ್‌, 64 ಜಿ.ಬಿ. ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಈ ಫೋನ್‌ನ ಬೆಲೆ ಆನ್‌ಲೈನ್‌ ಮಾರುಕಟ್ಟೆಗಳಲ್ಲಿ ₹ 16,000ರಿಂದ ₹ 17,000ದ ನಡುವೆ ಇದೆ. 5.99 ಇಂಚಿನ ಪರದೆ ಈ ಫೋನ್‌ಗೆ ಇದೆ.

ಮೊಟೊರೋಲಾ ಒನ್‌ ಪವರ್: ಲೆನೊವೊ ಮಾಲೀಕತ್ವದ ಮೊಟೊರೊಲಾ ಕಂಪನಿಯ ಹೊಸ ಸ್ಮಾರ್ಟ್‌ ಫೋನ್‌ ಇದು. 4 ಜಿ.ಬಿ. ರ‍್ಯಾಮ್‌, 64 ಜಿ.ಬಿ. ಸಂಗ್ರಹಣಾ ಸಾಮರ್ಥ್ಯ ಇದರಲ್ಲಿದೆ. ಟರ್ಬೊ ಚಾರ್ಜಿಂಗ್ ವ್ಯವಸ್ಥೆ ಹಾಗೂ 5000 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ ಈ ಫೋನ್‌ನಲ್ಲಿದೆ. ಇದರದ್ದು 6.2 ಇಂಚಿನ ಪರದೆ.

ನೋಕಿಯಾ 6.1 ಪ್ಲಸ್‌: 4 ಜಿ.ಬಿ. ರ‍್ಯಾಮ್‌ ಮತ್ತು 64 ಜಿ.ಬಿ. ಸಂಗ್ರಹಣಾ ಸಾಮರ್ಥ್ಯ ಇದರಲ್ಲಿ ಇದೆ. 3000 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ ಈ ಫೋನ್‌ನದ್ದು. ಇದರ ಬೆಲೆ ಅಂದಾಜು ₹ 14,999. 5.8 ಇಂಚಿನ ಪರದೆಯನ್ನು ಇದು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT