7

ಸುರಕ್ಷಿತ ಪ್ರಯಾಣಕ್ಕೆ ಸ್ಮಾರ್ಟ್ ಸಾಧನಗಳು

Published:
Updated:

ಪ್ರಯಾಣ ಎಂದರೆ ಪ್ರಯಾಸದ ಕೆಲಸ ಎಂಬ ಭಾವನೆ ಹಲವರಲ್ಲಿ ಇದೆ. ವಾಹನದ ಸ್ಥಿತಿಗತಿ, ಚಾಲಕನ ಮನಸ್ಥಿತಿ, ಪಾರ್ಕಿಂಗ್‌ ಸಮಸ್ಯೆ, ಮಳೆ, ಹೊಂಜು, ಮಂಜಿನ ಕಿರಿಕಿರಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ರಸ್ತೆ ಅಫಘಾತಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಎಷ್ಟು ಜಾಗರೂಕರಾಗಿದ್ದರೂ ಪ್ರಯಾಣದ ಸಂದರ್ಭಗಳಲ್ಲಿ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಸುಖಕರ ಪ್ರಯಾಣಕ್ಕೆ ನೆರವಾಗುವ ಕೆಲವು ಸ್ಮಾರ್ಟ್‌ ಸಾಧನಗಳ ಮಾಹಿತಿ ಇಲ್ಲಿದೆ.

ಪಾರ್ಕಿಂಗ್ ಕೈಪಿಡಿ

ವಾಹನವನ್ನು ಚಲಾಯಿಸುವುದಕ್ಕಿಂತ ಕಿರಿದಾದ ಅಥವಾ ರದ್ದಿ ಪ್ರದೇಶಗಳಲ್ಲಿ ಪಾರ್ಕ್ ಮಾಡುವುದು ಕಷ್ಟ. ಹಿಂದೆ, ಮುಂದೆ ಇರುವಂತಹ ವಾಹನಗಳಿಗೆ ಅಥವಾ ವಸ್ತುಗಳಿಗೆ ತಾಕದಂತೆ ಪಾರ್ಕ್ ಮಾಡಲು ತುಂಬಾ ಸಹನೆ ಮತ್ತು ನೈಪುಣ್ಯ ಬೇಕು. ‘ಫೆನ್ಸೆನ್ಸ್‌ ಪಾರ್ಕಿಂಗ್ ಸೆನ್ಸರ್’ ಸಾಧನವನ್ನು ವಾಹನಕ್ಕೆ ಅಳವಡಿಸಿದರೆ, ಪಾರ್ಕ್‌ ಮಾಡುವುದು ಸುಲಭ. ಇದನ್ನು ವಾಹನದ ಹಿಂಬದಿಯಲ್ಲಿ ಅಳವಡಿಸಿ, ತಂತ್ರಾಂಶದ ಮೂಲಕ ಸ್ಮಾರ್ಟ್‌ಫೋನ್‌ಗೆ ಜೋಡಿಸಿದರೆ, ಹಿಂದೆ ಮತ್ತು ಮುಂದೆ ಇರುವ ವಾಹನಗಳು ಎಷ್ಟು ಅಂತರದಲ್ಲಿವೆ ಎಂಬುದನ್ನು ತೋರಿಸುತ್ತದೆ. ತೀರಾ ಸನಿಹಕ್ಕೆ ಹೋಗಿ ಡಿಕ್ಕಿಯಾಗುವ ಸಾಧ್ಯತೆಗಳಿದ್ದರೆ, ಕೂಡಲೇ ಅಲರಾಂ ಸದ್ದು ಮಾಡಿ ಎಚ್ಚರಿಸುತ್ತದೆ. 

ಕ್ಯಾಮೆರಾದಲ್ಲಿ ನೋಡಬಹುದು

ವಾಹನ ಓಡಿಸುವಾಗ ಹಿಂದೆ ಬರುತ್ತಿರುವ ಮತ್ತು ಮುಂದೆ ಹೋಗುತ್ತಿರುವ ಎಲ್ಲ ವಾಹನಗಳನ್ನು ‘ಪಾಸ್‌ಪೋರ್ಟ್ ಮ್ಯಾಕ್ಸ್ ಎಸ್ಕಾರ್ಟ್’ ಸಾಧನ ಎಚ್‌ಡಿ ಗುಣಮಟ್ಟದ ವಿಡಿಯೊ ರೂಪದಲ್ಲಿ ತೋರಿಸುತ್ತದೆ. ಮಂಜು ಸುರಿಯುತ್ತಿದ್ದರೂ, ಹೊಂಜು ಆವರಿಸಿದ್ದರೂ, ಜೋರಾಗಿ ಮಳೆ ಸುರಿದರೂ ಹಿಂದೆ ಬರುತ್ತಿರುವ ಮತ್ತು ಮುಂದೆ ಹೋಗುತ್ತಿರುವ ವಾಹನಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ ವಾಹನದ ಹಿಂದೆ–ಮುಂದಿನ ದೃಶ್ಯಗಳನ್ನು ಸ್ಪಷ್ಟವಾಗಿ ನೋಡಲು ಈ ಸಾಧನ ನೆರವಾಗುತ್ತದೆ. ಅಷ್ಟೇ ಅಲ್ಲದೇ, ನಿರ್ದಿಷ್ಟ ರಸ್ತೆ ರಾಷ್ಟ್ರೀಯ ಹೆದ್ದಾರಿಯೇ, ರಾಜ್ಯ ಹೆದ್ದಾರಿಯೇ, ವೆಗದ ಮಿತಿ ಎಷ್ಟಿರಬೇಕು ಎಂಬುದನ್ನೂ ಈ ಸ್ಮಾರ್ಟ್ ಸಾಧನ ಸೂಚಿಸುತ್ತದೆ.

ನಿದ್ರಿಸದಂತೆ ನೋಡಿಕೊಳ್ಳುತ್ತದೆ

ಶೇ 40ರಷ್ಟು ಅಪಘಾತಗಳು, ಚಾಲಕರು ನಿದ್ರೆಯ ಮತ್ತಲ್ಲಿ ಮುಳುಗುತ್ತಿರುವುದರಿಂದಲೇ ಸಂಭವಿಸುತ್ತಿವೆ ಎಂದು ಕೆಲವು ವರದಿಗಳು ತಿಳಿಸಿವೆ. ‘ಆ್ಯಂಟಿ ಸ್ಲೀಪ್‌ ಪೈಲಟ್‌’ ಸಾಧನವನ್ನು ವಾಹನದಲ್ಲಿ ಅಳವಡಿಸಿದರೆ, ಚಾಲಕ ನಿದ್ರಿಸದಂತೆ ಎಚ್ಚರಿಸುತ್ತದೆ. ಚಾಲಕನ ಶಾರೀರಿಕ ಪರಿಸ್ಥಿತಿ ಅರಿತು ಆತ ನಿದ್ರಿಸುವ ಸ್ಥಿತಿಯಲ್ಲಿದ್ದರೆ ಅಲರಾಂ ಸದ್ದು ಮಾಡಿ ಜಾಗೃತರಾಗುವಂತೆ ಮಾಡುತ್ತದೆ. ಮೊದಲು ಕೆಲವು ಪ್ರಶ್ನೆಗಳನ್ನು ಕೇಳುವ ಮೂಲಕ ಚಾಲಕನ ಶಾರೀರಿಕ ಮತ್ತು ಮಾನಸಿಕ ಪರಿಸ್ಥಿತಿಯನ್ನು ಈ ಸಾಧನ ತಿಳಿದುಕೊಳ್ಳುತ್ತದೆ. ಇದರ ಎಚ್ಚರಿಕೆ ಹೊರತಾಗಿಯೂ ಚಾಲಕ ವಾಹನ ಓಡಿಸುತ್ತಿದ್ದರೆ, ನಿಲ್ಲಿಸುವವರೆಗೂ ಪದೇ ಪದೇ ಸದ್ದು ಮಾಡುತ್ತಿರುತ್ತದೆ. ಅಗತ್ಯವಿದ್ದರೆ ಹತ್ತು ನಿಮಿಷ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡುತ್ತದೆ. 

ವಾಹನ ಎಲ್ಲಿದೆ ಎಂಬುದನ್ನು ಸೂಚಿಸುತ್ತದೆ

ದೊಡ್ಡ ಪಾರ್ಕಿಂಗ್ ಪ್ರದೇಶದಲ್ಲಿ ವಾಹನವನ್ನು ಪಾರ್ಕ್‌ ಮಾಡಿದರೆ, ಪಾರ್ಕಿಂಗ್ ಸ್ಥಳದ ನಿರ್ವಾಹಕರು ಮರಳಿ ಬರುವ ಹೊತ್ತಿಗೆ ನಾವು ನಿಲ್ಲಿಸಿದ ಸ್ಥಳದಲ್ಲದೇ ಬೇರೊಂದು ಸ್ಥಳದಲ್ಲಿ ನಿಲ್ಲಿಸಿರುತ್ತಾರೆ. ಅಂತಹ ಸಮಯಗಳಲ್ಲಿ ವಾಹನ ಎಲ್ಲಿದೆ ಎಂಬುದನ್ನು ಸುಲಭವಾಗಿ ಗುರುತಿಸುವುದು ಕಷ್ಟ. ಈ ಸಮಸ್ಯೆಗೆ ‘ಬ್ಲೂ ಜೇ ಸ್ಮಾರ್ಟ್ ಮೌಂಟ್’ ಮೊಬೈಲ್‌ ತಂತ್ರಾಂಶ ಪರಿಹಾರ ಸೂಚಿಸುತ್ತದೆ.  ವಾಹನ ಇರುವಂತಹ ಸ್ಥಳವನ್ನು ಅಲರಾಂ ಮೂಲಕ ತೋರಿಸುತ್ತದೆ. ಒಂದು ವೇಳೆ ವಾಹನ ಕಳವಿಗೆ ಗುರಿಯಾಗಿದ್ದರೂ, ಎಲ್ಲಿದೆ ಎಂಬುದನ್ನು ಇದರ ಮೂಲಕ ಪತ್ತೆ ಮಾಡಬಹುದು. ವಾಹನದಲ್ಲಿ ಮೊಬೈಲ್ ಸ್ಟ್ಯಾಂಡ್‌ನಂತೆ ಅಳವಡಿಸಬಹುದಾದ ಈ ಸಾಧನ ಮೂಲಕ ತಲುಪಬೇಕಾದ ಸ್ಥಳವನ್ನೂ ಸುರಕ್ಷಿತವಾಗಿ ತಲುಪಬಹುದು.

ಟೈರ್‌ಗಳ ಮೇಲೆ ನಿಗಾ ಇಡಲು

ವಾಹನದ ಗಾಲಿಗಳ ಮೇಲೆ ಪ್ರತಿಕ್ಷಣ ನಿಗಾ ಇಡಲು ‘ಫೋಬೊ ಟೈರ್‌’ ಎಂಬ ಸಾಧನವನ್ನು ತಯಾರಿಸಲಾಗಿದೆ. ಮುಖ್ಯವಾದ ಕೆಲಸಗಳಿಗಳಿಗಾಗಿ ತುರ್ತಾಗಿ ಹೊರಡಲು ಮುಂದಾದಾಗ, ಕೆಲವೊಮ್ಮೆ ವಾಹನದ ಗಾಲಿಗಳಲ್ಲಿ ಗಾಳಿ ಇರುವುದಿಲ್ಲ. ಇನ್ನೂ ಕೆಲವೊಮ್ಮೆ ಪಂಕ್ಚರ್ ಕೂಡ ಆಗಿರುತ್ತವೆ. ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕು ಎಂದು ತೋಚುವುದಿಲ್ಲ. ಇಂತಹ ಸಮಸ್ಯೆಗಳ ಮುನ್ಸೂಚನೆ ಸಿಕ್ಕರೆ ಎಚ್ಚರಿಕೆ ವಹಿಸಬಹುದು. ಫೊಬೊ ಟೈರ್ ಸಾಧನವನ್ನು ಗಾಲಿಗಳಿಗೆ ಅಳವಡಿಸಿದರೆ, ಗಾಲಿಗಳಲ್ಲಿ ಎಷ್ಟು ಪ್ರಮಾಣದಲ್ಲಿ ಗಾಳಿ ಇದೆ, ಉಷ್ಣಾಂಶ ಎಷ್ಟಿದೆ? ಮೊಬೈಲ್‌ಗೆ ಜೋಡಣೆಯಾಗಿರುವ ತಂತ್ರಾಂಶದಲ್ಲಿ ಕಾಣಿಸುತ್ತದೆ. ಗಾಳಿ ಕಡಿಮೆ ಆಗುತ್ತಿದ್ದರೆ, ಉಷ್ಣಾಂಶ ಹೆಚ್ಚಾಗಿ ಟೈರ್‌ ಸಿಡಿಯುವ ಸಾಧ್ಯತೆ ಇದ್ದರೂ ಎಚ್ಚರಿಸುತ್ತದೆ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !