ಗುರುವಾರ , ನವೆಂಬರ್ 26, 2020
19 °C

PV Web Exclusive | ಮೊಬೈಲ್‌ನಲ್ಲಿ ಕಳೆಯಿತೇ ಮೆಮೊರಿ ಪವರ್!?

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

‘ಬೆಡ್‌ರೂಮ್ನಲ್ಲಿ ಹೆಗ್ಣ ಬಂದ್ರೆ ಇಂಟರ್‌ನೆಟ್ಟಲಿ ದೊಣ್ಣೆ ಹುಡ್ಕಿ...’ ಅದೆಷ್ಟು ಅರ್ಥಪೂರ್ಣವಾಗಿದೆ ಅಲ್ವಾ ಈ ಸಾಲು!? ನಾವು ಇಂದು ಅಗತ್ಯಕ್ಕಿಂತ ತುಸು ಹೆಚ್ಚೇ ಮೊಬೈಲ್ ಒಳಹೊಕ್ಕಿದ್ದೇವೆ. ಮೊಬೈಲ್ ಎಂದರೆ ಇಂಟರ್ ನೆಟ್ ಸೌಲಭ್ಯ ಸಹಿತವಾಗಿಯೇ ಇರುವುದು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪ್ರತಿಯೊಂದು ಸಣ್ಣಪುಟ್ಟ ವಿಷಯಕ್ಕೂ ಗೂಗಲಿಸುವ ಚಾಳಿ ಬೆಳೆಸಿಕೊಂಡಿದ್ದೇವೆ. ಅಂತರ್ಜಾಲದ ಮೇಲಿನ ಅತಿಯಾದ ಅವಲಂಬನೆಯಿಂದ ಹೊರಬರದೇ ಇದ್ದರೆ ಒಂದಲ್ಲಾ ಒಂದು ದಿನ ಅದರಿಂದ ತೊಂದರೆ ಅನುಭವಿಸಬೇಕಾಗುತ್ತದೆ.

ಸಿದ್ದಾಪುರದಲ್ಲಿ ಆದ ರಸ್ತೆ ಅಪಘಾತದಲ್ಲಿ ಸ್ನೇಹಿತನ ಮೊಬೈಲ್‌ ಸಂಪೂರ್ಣ ಹಾಳಾಯಿತು. ಬರುವುದು ತಡವಾಗುತ್ತದೆ ಎಂದು ಮನೆಯವರಿಗೆ ತಿಳಿಸೋಣ ಅಂದುಕೊಂಡ. ರಸ್ತೆಯಲ್ಲಿ ಓಡಾಡುತ್ತಿದ್ದವರ ಬಳಿ ಮೊಬೈಲ್‌ ಸಹ ಪಡೆದ. ಆದರೆ ನಂಬರ್‌ ನೆನಪಿರಬೇಕಲ್ಲಾ! ಮೊಬೈಲ್‌ ಮೆಮೊರಿಯಲ್ಲಿ ಎಲ್ಲವನ್ನೂ ಸೇವ್‌ ಮಾಡಿಡುತ್ತಾ ತನ್ನ ತಲೆಯೊಳಗಿನ ಮೆಮೊರಿಯಲ್ಲಿ ಎಲ್ಲವನ್ನೂ ಅಳಿಸಿಕೊಳ್ಳುತ್ತಾ ಬಂದಿದ್ದ. ಕೊನೆಗೆ ಪೇಚು ಮೋರೆ ಹಾಕಿಕೊಂಡು ಅವರ ಮೊಬೈಲ್‌ ವಾಪಸ್‌ ಕೊಟ್ಟ. ಇದು ಒಂದು ಉದಾಹರಣೆಯಷ್ಟೆ. ಅಷ್ಟಕ್ಕೂ ನಮ್ಮನ್ನೇ ನಾವು ಒಮ್ಮೆ ಪ್ರಶ್ನಿಸಿಕೊಳ್ಳೋಣ. ನಮಗೆ ತೀರಾ ಆಪ್ತರಾಗಿರುವವರಲ್ಲಿ ಎಷ್ಟು ಜನರ ಮೊಬೈಲ್‌ ನಂಬರ್ ನಮಗೆ ನೆನಪಿದೆ? ಬಹುತೇಕರಿಗೆ ಒಂದೂ ನೆನಪಿಲ್ಲದಿದ್ದರೆ ಕೆಲವೇ ಕೆಲವರಿಗೆ ಒಂದಿಬ್ಬರ ನಂಬರ್‌ ನೆನಪಿರಬಹುದಷ್ಟೆ ಅಲ್ಲವೇ?

ಹಾಗಿದ್ದರೆ, ಮೊಬೈಲ್‌ ಬರುವುದಕ್ಕೂ ಮುನ್ನ ಅಂದರೆ ಲ್ಯಾಂಡ್‌ಲೈನ್‌ ಇದ್ದ ಕಾಲದಲ್ಲಿ ಡೈರಿಯಲ್ಲಿ ಫೋನ್‌ ನಂಬರ್‌ ಬರೆದಿಡುವ ರೂಢಿ ಇತ್ತು. ಆಗಾಗ್ಗೆ ಕಾಲ್‌ ಮಾಡುವ ನಂಬರ್‌ಗಳಿಗಾಗಿ ಡೈರಿ ನೋಡಬೇಕಾಗಿರಲಿಲ್ಲ. ಕೆಲವರಂತೂ ಬಹಳ ಮುಖ್ಯವಾದ ಒಂದಷ್ಟು ನಂಬರ್‌ಗಳನ್ನು ಒಂದು ಹಾಳೆಯಲ್ಲಿ ಬರೆದು ಸದಾ ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು. ಕನಿಷ್ಠ 5–10 ನಂಬರ್‌ಗಳು ನೆನಪಿನಲ್ಲಿ ಇರುತ್ತಿತ್ತು. ಈಗ ಹಾಗಿಲ್ಲ, ದಿನಕ್ಕೆ ಹತ್ತು ಬಾರಿ ಒಬ್ಬರಿಗೇ ಕರೆ ಮಾಡುವುದಿದ್ದರೂ ಕಾಲ್‌ ಲಾಗ್‌ಗೆ ಹೋಗಿ ಅಲ್ಲಿಂದಲೇ ಕಾಲ್‌ ಮಾಡುತ್ತೇವೆ.

ನೆನಪಿಟ್ಟುಕೊಳ್ಳಲು ಪುರಸೊತ್ತಿಲ್ಲ ಎಂತಲೋ ಅಥವಾ ಎಲ್ಲವೂ ಬೆರಳ ತುದಿಯಲ್ಲಿಯೇ ಸಿಗುತ್ತಿರುವಾಗ ತಲೆಗೇಕೆ ಕೆಲಸ ಕೊಡುವುದು ಎಂತಲೋ ನಮಗೆ ಬೇಕಾದಂತೆ ನಮ್ಮ ವಾದ ಮಂಡಿಸುತ್ತೇವೆ. ಇನ್ನೂ ಕೆಲವರಿದ್ದಾರೆ, ಮೊಬೈಲ್‌ ಕಾಂಟ್ಯಾಕ್ಟ್‌ ಕಳೆದುಕೊಳ್ಳುವ ಭಯವೇ? ಹಾಗಿದ್ದರೆ ಮೇಲ್‌ ಜತೆ, ಗೂಗಲ್‌ ಡ್ರೈವ್‌ಗೆ ಸಿಂಕ್‌ ಮಾಡಿ ಎನ್ನುವ ಪುಕ್ಕಟೆ ಸಲಹೆ ನೀಡುತ್ತಾರೆ. ಹಾಗೆ ಮಾಡುವುದರಿಂದ ನಮ್ಮ ಬಳಿ ಇರುವ ಕಾಂಟ್ಯಾಕ್ಟ್‌ಗಳನ್ನು ನಾವೇ ಬಹಳ ಸುಲಭವಾಗಿ ಗೂಗಲ್‌ಗೆ ಮಾರಿಕೊಳ್ಳಲು ನೀಡುತ್ತೇವೆ ಎನ್ನುವ ಅಂಶವನ್ನು ಸದ್ಯಕ್ಕೆ ಬಿಟ್ಟುಬಿಡೋಣ. ಆ ರೀತಿ ಸಿಂಕ್‌ ಮಾಡಿದರೆ ಅಲ್ಲಿಗೆ ಎಲ್ಲವೂ ಸುಲಭ ಆಗುವುದಿಲ್ಲ. ಏಕೆಂದರೆ ಮೊಬೈಲ್‌ ಕಳೆದುಹೋದರೆ ಅಥವಾ ಹಾಳಾದರೆ ಅದರಲ್ಲಿ ಸೇವ್ ಮಾಡಿ ಇಟ್ಟಿರುವ ಮೇಲ್‌ ಪಾಸ್‌ವರ್ಡ್‌, ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಪಾಸ್‌ವರ್ಡ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ ಪಾಸ್ವರ್ಡ್‌ ಎಲ್ಲವು ಕಳೆದುಹೋದಂತೆಯೆ. ಒಂದು ವೇಳೆ ತಕ್ಷಣಕ್ಕೆ ಕಂಪ್ಯೂಟರ್‌ ಸಿಕ್ಕರೂ ಅದರಲ್ಲಿ ಜಿಮೇಲ್‌ಗೆ ಲಾಗಿನ್‌ ಆಗಲು ಪಾಸ್‌ವರ್ಡ್‌ ನೆನಪಾಗಬೇಕಲ್ಲಾ!

2X2 ಎಷ್ಟು ಅನ್ನುವುದನ್ನು ತಿಳಿದುಕೊಳ್ಳಲೂ ಮೊಬೈಲ್‌ ಕ್ಯಾಲ್ಕ್ಯುಲೇಟರ್‌ ಬಳಸುವಷ್ಟರ ಮಟ್ಟಿಗೆ ನಮ್ಮ ತಲೆಯನ್ನು ಕಟ್ಟಿಟ್ಟುಬಿಟ್ಟಿದ್ದೇವೆ!

ಮನೆಯಲ್ಲಿ ಒಟ್ಟಿಗೇ ಕೂತು ಊಟ ಮಾಡುವಾಗ ಸಿಗುವ ನೆಮ್ಮದಿ, ಸಂಭ್ರಮವನ್ನೂ ಕಳೆದುಕೊಳ್ಳುತ್ತಿದ್ದೇವೆ. ಒಬ್ಬರು ಟಿವಿ ನೋಡುತ್ತಾ ಊಟ ಮಾಡಿದರೆ, ಇನ್ನೊಬ್ಬರು ಒಂದು ಕೈಯಲ್ಲಿ ತಟ್ಟೆ ಇನ್ನೊಂದು ಕೈಯಲ್ಲಿ ಮೊಬೈಲ್‌ ಹಿಡಿದಿರುತ್ತಾರೆ. ಏನು ತಿಂದೆವು? ಎಷ್ಟು ತಿಂದೆವು ಎನ್ನುವ ಪರಿವೇ ಇರುವುದಿಲ್ಲ. ಎಲ್ಲವೂ ಒಂದು ರೀತಿಯಲ್ಲಿ ಯಾಂತ್ರಿಕವಾಗಿ ನಡೆಯುತ್ತಿರುತ್ತದೆ. ಹಬ್ಬದ ಸಂಭ್ರಮವೂ ಅಷ್ಟಕ್ಕಷ್ಟೆ ಎನ್ನುವಂತಾಗಿದೆ. ಹಬ್ಬದ ದಿನ ನನ್ನಿಷ್ಟದ ಮೂವಿ ಇದೆ ಅಂತ ಟಿವಿ ಮುಂದೆ ಒಬ್ಬರು ಕೂತರೆ, ಇನ್ನೊಬ್ಬರು ಹೊಸ ಬಟ್ಟೆ ಹಾಕಿ ಸೆಲ್ಫಿ ತೆಗೆದು ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡುವುದರಲ್ಲಿಯೇ ಕಾಲ ಕಳೆಯುತ್ತಾರೆ.

ಬೆಳಿಗ್ಗೆ ಜಾಗಿಂಗ್‌ ಮಾಡುವಾಗಲೂ ಕಿವಿಗೆ ಇಯರ್‌ಫೋನ್‌ ಸಿಕ್ಕಿಸಿರುತ್ತೇವೆ. ಕೇಳಿದರೆ ಏಕಾಗ್ರತೆ, ಮನಸ್ಸಿಗೆ ಮುದ ನೀಡುವ ಹಾಡು ಬೇಕು ಅನ್ನೋ ವಾದ. ಇಷ್ಟೇ ಅಲ್ಲ, ಬಸ್ಸು, ರೈಲಿನಲ್ಲಿ ಪ್ರಯಾಣಿಸುವಾಗ, ಪ್ರವಾಸದ ವೇಳೆ, ದೇವಸ್ಥಾನದಲ್ಲಿ ಹೀಗೆ ಎಲ್ಲಾ ಕಡೆಯೂ ನಮ್ಮ ಕೈ ಮೊಬೈಲಿನಿಂದ ದೂರ ಇರುವುದೇ ಇಲ್ಲ.

ವಿವಿಧ ಸಂಸ್ಥೆಗಳು ನಡೆಸಿರುವ ಸಮೀಕ್ಷೆಯ ಪ್ರಕಾರ ನಾವು ದಿನಕ್ಕೆ ಸರಾಸರಿ 4 ರಿಂದ 5 ಗಂಟೆ ಮೊಬೈಲ್‌ ಬಳಸುತ್ತೇವೆ. ಇದರಲ್ಲಿ ಬಹುಪಾಲು ಸಮಯ ಗೇಮ್‌ ಆಡುವುದರಲ್ಲಿ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿಯೇ ಕಳೆಯುತ್ತಿದ್ದೇವೆ.

ಯಂತ್ರಗಳು ನಮ್ಮ ಕೆಲಸವನ್ನು ಸುಲಭಗೊಳಿಸುತ್ತವೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಇರುವವರೊಂದಿಗೆ ಥಟ್ಟನೆ ಸಂಪರ್ಕ ಸಾಧಿಸಲು ನೆರವಾಗುತ್ತವೆ. ದಿನಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದ ಕೆಲಸ ಕೆಲವೇ ಗಂಟೆಗಳಲ್ಲಿ ಮುಗಿಸಬಹುದು. ಅವಶ್ಯಕತೆಗಳನ್ನು, ತುರ್ತುಗಳನ್ನು ಪೂರೈಸಿಕೊಳ್ಳಲು ಬಳಸಬಹುದಾದ ಮೊಬೈಲ್ ಅನ್ನು ನಾವು ಗೀಳಾಗಿ ಮಾಡಿಕೊಂಡಿದ್ದೇವೆ. ಅದಿಲ್ಲದೆ ಜೀವನವೇ ಸಾಗದು ಎನ್ನುವಷ್ಟರ ಮಟ್ಟಿಗೆ ಅಂಟಿಸಿಕೊಂಡಿದ್ದೇವೆ.

ಮಾನಸಿಕ ಹಾಗೂ ದೈಹಿಕ ಸ್ವಸ್ಥ ಜೀವನಕ್ಕಾಗಿ ಈ ಗೀಳಿಂದ ನಮ್ಮನ್ನು ನಾವು ಬಿಡಿಸಿಕೊಳ್ಳಬೇಕಿದೆ. ಪ್ರಕೃತಿದತ್ತ ಪರಿಸರದಲ್ಲಿ ವ್ಯಕ್ತಿತ್ವ ವಿಕಸನಗೊಳ್ಳುವ ಸಾಧ್ಯತೆಗಳತ್ತ ಗಮನವಹಿಸಿದರೆ ವ್ಯಕ್ತಿಗತ ಮಾತ್ರವಲ್ಲದೆ ಸ್ವಸ್ಥ ಸಮಾಜದ ಬೆಳವಣಿಗೆಯನ್ನು ಆಗುಮಾಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು