ಭಾನುವಾರದ ಬೆಳಿಗ್ಗೆ, ಬಿಸಿ ಕಾಫಿಯ ಕಪ್ ಹಿಡಿದು ಬಾಲ್ಕನಿಯಲ್ಲಿ ಕೂರುತ್ತೇವೆ. "ಇದು ನನ್ನ ಸಮಯ, ಇಡೀ ವಾರದ ಜಂಜಾಟದ ನಂತರ ಸಿಕ್ಕಿರುವ ಪ್ರಶಾಂತವಾದ 'ಮಿ ಟೈಮ್' (Me Time)" ಎಂದು ನಮ್ಮಷ್ಟಕ್ಕೆ ನಾವೇ ನಿಟ್ಟುಸಿರು ಬಿಡುತ್ತೇವೆ. ಆದರೆ, ಕಾಫಿ ಹೀರಲು ಶುರುಮಾಡಿದ ಮರುಕ್ಷಣವೇ ನಮ್ಮ ಕೈಗಳು ತಾನಾಗಿಯೇ ಸ್ಮಾರ್ಟ್ಫೋನ್ನತ್ತ ಜಾರುತ್ತವೆ. ಫೋನ್ ಅನ್ಲಾಕ್ ಮಾಡಿ, ಇನ್ಸ್ಟಾಗ್ರಾಮ್ ಅಥವಾ ಫೇಸ್ಬುಕ್ ತೆರೆದು ಸ್ಕ್ರೋಲ್ ಮಾಡಲು ಶುರುಮಾಡುತ್ತೇವೆ. ನೋಡನೋಡುತ್ತಿದ್ದಂತೆ ಅರ್ಧ ಗಂಟೆ ಕಳೆದುಹೋಗುತ್ತದೆ, ಕೈಯಲ್ಲಿದ್ದ ಕಾಫಿ ತಣ್ಣಗಾಗುತ್ತದೆ, ಮತ್ತು ನಮ್ಮ ಆ 'ಮಿ ಟೈಮ್' ಯಾವುದೋ ಅನಾಮಧೇಯ ವ್ಯಕ್ತಿಗಳ ರೀಲ್ಸ್ ಮತ್ತು ಪೋಸ್ಟ್ಗಳ ನಡುವೆ ಕರಗಿಹೋಗುತ್ತದೆ. ಇದು ಕೇವಲ ಒಬ್ಬರ ಕಥೆಯಲ್ಲ, ಬದಲಿಗೆ ಇಂದಿನ ಡಿಜಿಟಲ್ ಯುಗದಲ್ಲಿ ಬದುಕುತ್ತಿರುವ ಪ್ರತಿಯೊಬ್ಬರ ದೈನಂದಿನ ವಾಸ್ತವ.

ಈಗಿನ ದಿನಗಳಲ್ಲಿ 'ಮಿ ಟೈಮ್' ಎಂಬ ಪದದ ಅರ್ಥವೇ ಸಂಪೂರ್ಣವಾಗಿ ಬದಲಾಗಿಹೋಗಿದೆ. ನಮ್ಮೊಂದಿಗೆ ನಾವು ಕಳೆಯುವ ಸಮಯ, ನಮ್ಮ ಆಲೋಚನೆಗಳನ್ನು ವಿಮರ್ಶಿಸಿಕೊಳ್ಳುವ ಗಳಿಗೆ, ಅಥವಾ ಕೇವಲ ಸುಮ್ಮನೆ ಕುಳಿತು ಪ್ರಕೃತಿಯನ್ನು ಆಸ್ವಾದಿಸುವ ಏಕಾಂತ—ಇದೆಲ್ಲವೂ ಈಗ ಕೇವಲ 'ಸ್ಕ್ರೀನ್ ಟೈಮ್' ಆಗಿ ರೂಪಾಂತರಗೊಂಡಿದೆ. ನಾವು ಬಿಡುವಾಗಿದ್ದೇವೆ ಎಂದರೆ, ನಾವು ಪರದೆಯ ಮುಂದೆ ಕುಳಿತಿದ್ದೇವೆ ಎಂದೇ ಅರ್ಥಬರುವ ಹಂತಕ್ಕೆ ನಾವು ತಲುಪಿದ್ದೇವೆ. ನಾವು ಬಹಳ ಮುಗ್ಧರಾಗಿ, "ಸ್ವಲ್ಪ ರಿಲ್ಯಾಕ್ಸ್ ಆಗೋಣ" ಎಂದು ಫೋನ್ ಕೈಗೆತ್ತಿಕೊಳ್ಳುತ್ತೇವೆ. ಆದರೆ ನಿಜವಾಗಿಯೂ ನಾವು ರಿಲ್ಯಾಕ್ಸ್ ಆಗುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾದ ಅನಿವಾರ್ಯತೆ ಇಂದಿದೆ.

ಇಡೀ ದಿನ ಆಫೀಸ್, ಮನೆ, ಓಡಾಟ ಎಂದು ದುಡಿದು ಸುಸ್ತಾದ ನಮಗೆ, ದಿನದ ಯಾವುದೇ ಭಾಗದ ಮೇಲೂ ನಮ್ಮ ನಿಯಂತ್ರಣವಿಲ್ಲ ಎನಿಸಲು ಶುರುವಾಗುತ್ತದೆ. ಹೀಗಾಗಿ ರಾತ್ರಿ ಮಲಗುವಾಗ, "ಈ ಸಮಯವಾದರೂ ನನ್ನದು" ಎಂಬ ಹಠಕ್ಕೆ ಬಿದ್ದು, ನಿದ್ರೆಯನ್ನು ಮುಂದೂಡುತ್ತಾ ಫೋನ್ ನೋಡುತ್ತಾ ಕೂರುತ್ತೇವೆ. ಮನಃಶಾಸ್ತ್ರಜ್ಞರು ಇದನ್ನು 'ರಿವೆಂಜ್ ಬೆಡ್ಟೈಮ್ ಪ್ರೊಕ್ರಾಸ್ಟಿನೇಷನ್' (ಸೇಡಿನ ನಿದ್ರಾಹೀನತೆ) ಎಂದು ಕರೆಯುತ್ತಾರೆ. ನಮ್ಮದೇ ದೇಹಕ್ಕೆ, ನಿದ್ರೆಗೆ ವಂಚಿಸಿ ನಾವು ಪಡೆಯುತ್ತಿರುವ ಈ ಡಿಜಿಟಲ್ ರಿಲ್ಯಾಕ್ಸೇಷನ್ ಮರುದಿನ ನಮ್ಮನ್ನು ಇನ್ನಷ್ಟು ಹೈರಾಣಾಗಿಸುತ್ತದೆ.

ಮೊಬೈಲ್ ನೋಡಬಾರದು ಎಂದು ಎಷ್ಟೇ ನಿರ್ಧರಿಸಿದರೂ, ಮತ್ತೆ ಮತ್ತೆ ಫೋನ್ ಕೈಗೆತ್ತಿಕೊಳ್ಳುವ ಬಗ್ಗೆ ನಮ್ಮನ್ನು ನಾವೇ ಅತಿಯಾಗಿ ದೂಷಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ, ಇಲ್ಲಿ ಸೋಲುತ್ತಿರುವುದು ನಮ್ಮ ಇಚ್ಛಾಶಕ್ತಿಯಲ್ಲ. ಇಂದಿನ ಟೆಕ್ ಜಗತ್ತು ನಡೆಯುತ್ತಿರುವುದೇ 'ಅಟೆನ್ಷನ್ ಎಕಾನಮಿ' ಅಥವಾ ಗಮನದ ಆರ್ಥಿಕತೆಯ ಮೇಲೆ. ನಮ್ಮ ಕಣ್ಣುಗಳು ಎಷ್ಟು ಹೊತ್ತು ಆ ಪರದೆಯ ಮೇಲೆ ಅಂಟಿಕೊಂಡಿರುತ್ತವೆಯೋ, ಅಷ್ಟು ಜಾಹೀರಾತುಗಳನ್ನು ಅವರು ನಮಗೆ ತೋರಿಸಬಹುದು. ನಮ್ಮ ಗಮನವನ್ನು ಹಿಡಿದಿಟ್ಟುಕೊಳ್ಳಲೆಂದೇ ವಿಶ್ವದ ಅತ್ಯುತ್ತಮ ನರವಿಜ್ಞಾನಿಗಳನ್ನು ನೇಮಿಸಿಕೊಂಡು ಈ ಆ್ಯಪ್ಗಳನ್ನು ವಿನ್ಯಾಸಗೊಳಿಸಲಾಗಿದೆ.

ಉದಾಹರಣೆಗೆ, 'ಇನ್ಫೈನೈಟ್ ಸ್ಕ್ರೋಲಿಂಗ್' ತಂತ್ರಜ್ಞಾನವನ್ನೇ ಗಮನಿಸಿ. ಮುಂಚೆ ಒಂದು ಪೇಜ್ ಓದಿದ ನಂತರ 'ನೆಕ್ಸ್ಟ್' ಎಂದು ಒತ್ತಬೇಕಿತ್ತು. ಆ ಸಣ್ಣ ವಿರಾಮದಲ್ಲಿ "ಸಾಕು, ಫೋನ್ ಇಡೋಣ" ಎಂಬ ಎಚ್ಚರ ನಮ್ಮ ಮೆದುಳಿಗೆ ಸಿಗುತ್ತಿತ್ತು. ಆದರೆ ಈಗ ಪೇಜ್ ಮುಗಿಯುವುದೇ ಇಲ್ಲ. ಸ್ಕ್ರೀನ್ ಅನ್ನು ಕೆಳಗೆ ಎಳೆದಾಗಲೆಲ್ಲಾ ಹೊಸದೇನೋ ಸಿಗುತ್ತದೆ ಎಂಬ ನಿರೀಕ್ಷೆ ನಮ್ಮ ಮೆದುಳಿನಲ್ಲಿ 'ಡೋಪಮೈನ್' ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ನಾವು ರಿಲ್ಯಾಕ್ಸ್ ಆಗುತ್ತಿದ್ದೇವೆ ಎಂದು ಅಂದುಕೊಳ್ಳುವ ಹೊತ್ತಿಗೆ, ನಮ್ಮ ಮೆದುಳು ಈ ಡೋಪಮೈನ್ ಲೂಪ್ನಲ್ಲಿ ಸಿಲುಕಿರುತ್ತದೆ.

ಒಂದು ಕಾಲದಲ್ಲಿ ಬಸ್ ಸ್ಟ್ಯಾಂಡ್ನಲ್ಲಿ ಕಾಯುವಾಗ, ಬ್ಯಾಂಕ್ ಕ್ಯೂನಲ್ಲಿ ನಿಂತಾಗ ಅಥವಾ ಸುಮ್ಮನೆ ಕೂತಾಗ ನಮಗೆ ಬೋರಾಗುತ್ತಿತ್ತು. ಮನುಷ್ಯನ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಈ ಬೋರ್ಡಮ್ ಅತ್ಯಗತ್ಯ. ಹೊಸ ಐಡಿಯಾಗಳು, ಸೃಜನಶೀಲ ಆಲೋಚನೆಗಳು ಹುಟ್ಟುವುದು ಇಂತಹ ಖಾಲಿ ಕ್ಷಣಗಳಲ್ಲೇ. ಆದರೆ ತಂತ್ರಜ್ಞಾನವು ನಮ್ಮಿಂದ ಈ ಬೋರಾಗುವ ಹಕ್ಕನ್ನೇ ಕಸಿದುಕೊಂಡಿದೆ. ಈಗ ಎರಡು ನಿಮಿಷ ಬಿಡುವು ಸಿಕ್ಕರೂ ಮೆದುಳು ಅಸ್ವಸ್ಥಗೊಂಡು, ಕೈಗಳು ತಾನಾಗಿಯೇ ಜೇಬಿನತ್ತ ಹೋಗುತ್ತವೆ. ನಾವು ನಮ್ಮ ಆಲೋಚನೆಗಳೊಂದಿಗೆ ಒಂಟಿಯಾಗಿರುವುದಕ್ಕೆ ಹೆದರುತ್ತಿದ್ದೇವೆಯೇ ಎಂಬ ಅನುಮಾನ ಕಾಡಲು ಶುರುವಾಗುತ್ತದೆ.
.ಟೆಕ್ ಥೆರಪಿ: ಅಲ್ಗಾರಿದಮ್ಗಳ ಮಾಯಾಜಾಲಕ್ಕೆ ಸಿಲುಕುವ ಮುನ್ನ ಇದನ್ನೋದಿ!.ಟೆಕ್ ಥೆರಪಿ: ಮಲ್ಟಿ ಟಾಸ್ಕಿಂಗ್ ದೌರ್ಜನ್ಯಕ್ಕೆ ಮುಕ್ತಿ ಎಂದು?.
ಭಾನುವಾರ ಇಡೀ ದಿನ ಸೋಫಾ ಮೇಲೆ ಮಲಗಿ ಫೋನ್ ನೋಡಿದರೂ, ಸೋಮವಾರ ಬೆಳಿಗ್ಗೆ ನಮಗೆ ಫ್ರೆಶ್ ಅನ್ನಿಸುವುದಿಲ್ಲ. ಬದಲಾಗಿ ತೀವ್ರವಾದ ಸುಸ್ತು ಆವರಿಸಿರುತ್ತದೆ. ದೈಹಿಕವಾಗಿ ನಾವು ವಿಶ್ರಾಂತಿ ಪಡೆದಿರಬಹುದು, ಆದರೆ ನಮ್ಮ ಮೆದುಳು ಆ ಪರದೆಯ ಮೇಲಿನ ನೂರಾರು ಬಣ್ಣಗಳು, ಬೇರೆ ಬೇರೆ ದೇಶಗಳ ಸುದ್ದಿಗಳು, ದುರಂತಗಳು, ಕಾಮಿಡಿ ವಿಡಿಯೋಗಳು ಎಲ್ಲವನ್ನೂ ಒಟ್ಟೊಟ್ಟಿಗೆ ಪ್ರೊಸೆಸ್ ಮಾಡಲು ಹಗಲಿರುಳು ದುಡಿದು ದಣಿದಿರುತ್ತದೆ. ಇದರ ಜೊತೆಗೆ 'ಫೋಮೋ' (Fear Of Missing Out) ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತದೆ. ಬೇರೆಯವರ ಎಡಿಟ್ ಮಾಡಿದ, ಫಿಲ್ಟರ್ ಹಾಕಿದ ಸುಂದರ ಫೋಟೋಗಳನ್ನು ನೋಡಿ ನಮ್ಮ ನೈಜ ಬದುಕಿನ ಬಗ್ಗೆ ನಮಗೇ ಒಂದು ಅಸಮಾಧಾನ ಮೂಡಲು ಶುರುವಾಗುತ್ತದೆ. ನಮ್ಮ 'ಮಿ ಟೈಮ್' ಅನ್ನು ನಮ್ಮ ಏಳಿಗೆಗೆ ಬಳಸಿಕೊಳ್ಳುವ ಬದಲು, ಬೇರೆಯವರ ವರ್ಚುವಲ್ ಬದುಕನ್ನು ನೋಡಿ ನಿಟ್ಟುಸಿರು ಬಿಡುವುದರಲ್ಲೇ ಕಳೆಯುತ್ತಿದ್ದೇವೆ.

ನಾವು ವಾಟ್ಸಾಪ್, ಇನ್ಸ್ಟಾಗ್ರಾಮ್ಗಳಲ್ಲಿ ನೂರಾರು ಜನರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಭಾವಿಸುತ್ತೇವೆ. ಆದರೆ ಇದು ಕೇವಲ ಸಂಪರ್ಕದ ಭ್ರಮೆಯಷ್ಟೇ. ನಮ್ಮ ಪಕ್ಕದಲ್ಲೇ ಕೂತಿರುವ ನಮ್ಮ ಪ್ರೀತಿಪಾತ್ರರ ಮುಖ ನೋಡಿ ಮಾತನಾಡುವ ಬದಲು, ಸಾವಿರ ಮೈಲಿ ದೂರದಲ್ಲಿರುವ ಪರಿಚಯವೇ ಇಲ್ಲದ ಇನ್ಫ್ಲುಯೆನ್ಸರ್ ಒಬ್ಬರ ವ್ಲಾಗ್ ನೋಡುತ್ತಾ ಕೂರುತ್ತೇವೆ. ಈ ನಿರಂತರ ಡಿಜಿಟಲ್ ಗದ್ದಲ ನಮ್ಮ ನೈಜ ಸಂಬಂಧಗಳ ಆಳವನ್ನು ಕಡಿಮೆ ಮಾಡುತ್ತಿದೆ. ತಂತ್ರಜ್ಞಾನ ನಮ್ಮ ಶತ್ರುವಲ್ಲ, ಅದು ನಮ್ಮ ಬದುಕನ್ನು ಸುಲಭಗೊಳಿಸಿದ ಅದ್ಭುತ ಉಪಕರಣ. ಆದರೆ ನಮ್ಮ ಮತ್ತು ತಂತ್ರಜ್ಞಾನದ ನಡುವಿನ ಸಂಬಂಧ ಎಲ್ಲೋ ಹದಗೆಟ್ಟಿದೆ.

ಈ ಗುಲಾಮಗಿರಿಯಿಂದ ಹೊರಬರಲು ನಮ್ಮ ಮೇಲೆ ನಾವು ಕಠಿಣ ನಿಯಮಗಳನ್ನು ಹೇರಿಕೊಂಡು ಶಿಕ್ಷಿಸಿಕೊಳ್ಳುವ ಅಗತ್ಯವಿಲ್ಲ. ಬದಲಾಗಿ, ಅತ್ಯಂತ ಪ್ರೀತಿಯಿಂದಲೇ ಕೆಲವು ಆರೋಗ್ಯಕರ ಡಿಜಿಟಲ್ ಬೌಂಡರಿಗಳನ್ನು ರೂಪಿಸಿಕೊಳ್ಳಬೇಕಿದೆ. ಮನೆಯೊಳಗೆ ಕೆಲವು ಜಾಗಗಳನ್ನು ಸ್ಕ್ರೀನ್ಗಳಿಂದ ಮುಕ್ತವಾಗಿಡುವುದು ಬಹಳ ಮುಖ್ಯ. ಮಲಗುವ ಕೋಣೆ ಕೇವಲ ನಿದ್ರೆಗೆ ಮಾತ್ರ ಸೀಮಿತವಾಗಿರಲಿ. ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುನ್ನ ಕನಿಷ್ಠ ಮುಕ್ಕಾಲು ಗಂಟೆ ಸ್ಕ್ರೀನ್ ನೋಡದಿರುವ ಸಣ್ಣ ಅಭ್ಯಾಸ ನಮ್ಮ ಇಡೀ ದಿನದ ಮೂಡ್ ಅನ್ನು ಬದಲಾಯಿಸಬಲ್ಲದು. ಹಾಗೆಯೇ, ಫೋನ್ ಒಂದು ಸಣ್ಣ ಬೀಪ್ ಶಬ್ದ ಮಾಡಿದ ತಕ್ಷಣ ನಾವು ಅದರತ್ತ ಓಡುವ ಅಗತ್ಯವಿಲ್ಲ. ಅತ್ಯಗತ್ಯವಾದ ಕರೆಗಳು ಮತ್ತು ಮೆಸೇಜ್ಗಳನ್ನು ಹೊರತುಪಡಿಸಿ, ಉಳಿದ ಆ್ಯಪ್ಗಳ ನೋಟಿಫಿಕೇಶನ್ ಆಫ್ ಮಾಡುವುದರಿಂದ ನಮಗೆ ಬಿಡುವು ಸಿಕ್ಕಾಗ ನಾವು ಆ್ಯಪ್ ತೆರೆಯಬಹುದೇ ಹೊರತು, ಆ್ಯಪ್ಗಳು ನಮ್ಮನ್ನು ಕರೆಯುವುದಿಲ್ಲ.

ರಿಲ್ಯಾಕ್ಸ್ ಆಗುವುದು ಎಂದರೆ ಸ್ಕ್ರೀನ್ ನೋಡುವುದಲ್ಲ ಎಂಬುದನ್ನು ನಮ್ಮ ಮೆದುಳಿಗೆ ಮರು-ಕಲಿಸಬೇಕಿದೆ. ಪುಸ್ತಕ ಓದುವುದು, ಗಿಡಗಳಿಗೆ ನೀರು ಹಾಕುವುದು, ಇಯರ್ಫೋನ್ ಇಲ್ಲದೆ ವಾಕಿಂಗ್ ಮಾಡುವುದು, ಅಥವಾ ಸುಮ್ಮನೆ ಆಕಾಶ ನೋಡುತ್ತಾ ಕೂರುವುದು—ಇವೆಲ್ಲವೂ ನಮ್ಮ ಮೆದುಳಿನ ತರಂಗಗಳನ್ನು ಶಾಂತಗೊಳಿಸುವ ನೈಜ ಥೆರಪಿಗಳು. ವಾರದಲ್ಲಿ ಕನಿಷ್ಠ ಒಂದು ಭಾನುವಾರದ ಅರ್ಧ ದಿನವಾದರೂ ಸ್ಕ್ರೀನ್ಗಳಿಂದ ಸಂಪೂರ್ಣವಾಗಿ ದೂರವಿರುವ ಪ್ರಯತ್ನ ಮಾಡಬಹುದು. ಆರಂಭದಲ್ಲಿ ಇದು ವಿಚಿತ್ರ ಎನಿಸಿದರೂ, ಆ ನಂತರ ಸಿಗುವ ಆಂತರಿಕ ಶಾಂತಿ, ಆ ನಿಜವಾದ 'ಮಿ ಟೈಮ್' ಯಾವುದೇ ಡಿಜಿಟಲ್ ಲೈಕ್ಗಳಿಗಿಂತ ಹೆಚ್ಚು ನೆಮ್ಮದಿ ನೀಡುತ್ತದೆ. ನಮ್ಮ 'ಮಿ ಟೈಮ್' ಕೇವಲ ಬಿಡುವಿನ ವೇಳೆಯಲ್ಲ; ಅದು ನಮ್ಮ ಬದುಕಿನ, ನಮ್ಮ ಮಾನಸಿಕ ಸ್ವಾಸ್ಥ್ಯದ ಜೀವಾಳ. ಆ ಸಮಯವನ್ನು ಅಲ್ಗಾರಿದಮ್ಗಳ ಪಾಶದಿಂದ ಬಿಡಿಸಿ, ಮರಳಿ ನಮ್ಮದಾಗಿಸಿಕೊಳ್ಳುವುದು ಇಂದಿನ ದಿನಮಾನದ ಅತಿದೊಡ್ಡ ಅವಶ್ಯಕತೆ. ಫೋನ್ ಪಕ್ಕಕ್ಕಿಟ್ಟು, ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡು ನಮ್ಮ ಸುತ್ತಲಿನ ನೈಜ ಜಗತ್ತನ್ನು ಗಮನಿಸೋಣ; ಪರದೆಯಾಚೆಗಿನ ಬದುಕು ನಿಜಕ್ಕೂ ಹೆಚ್ಚು ಸುಂದರವಾಗಿದೆ ಮತ್ತು ಜೀವಂತವಾಗಿದೆ.
.ಟೆಕ್ ಥೆರಪಿ: ಎಐ ಬುದ್ಧಿವಂತಿಕೆಗೆ ಬರವಿಲ್ಲ, ಆದರೆ ಬಿಲ್ ಕಟ್ಟುವವರಾರು?.ಟೆಕ್ ಥೆರಪಿ: ಹುಡುಕಾಟದ ಹೊಸ ಹಾದಿಯಲ್ಲಿ ಸಿಕ್ಕ ಎಐ ಗೆಳೆಯ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.