ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

HP Smart Tank 580: ಮನೆ, ಸಣ್ಣ ವ್ಯಾಪಾರಸ್ಥರ ದೈನಂದಿನ ಅಗತ್ಯಕ್ಕೆ ಉಪಯುಕ್ತ

Last Updated 2 ಮಾರ್ಚ್ 2023, 10:33 IST
ಅಕ್ಷರ ಗಾತ್ರ

ಕೋವಿಡ್‌ ನಿಯಂತ್ರಿಸಲು ಲಾಕ್‌ಡೌನ್‌ ಜಾರಿಗೆ ಬಂದು, ಡಿಜಿಟಲ್‌ ಕಲಿಕೆ, ಹೈಬ್ರಿಡ್‌, ವರ್ಕ್‌ ಫ್ರಂ ಹೋಮ್‌ ಸೌಲಭ್ಯಗಳು ಬಳಕೆಗೆ ಬಂದಾಗಿನಿಂದ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಪ್ರಿಂಟರ್‌ ತರಹದ ಸ್ಮಾರ್ಟ್‌ ಸಾಧನಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಈ ಹಾದಿಯಲ್ಲಿ ಎಚ್‌ಪಿ ಕಂಪನಿಯು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ, ಲ್ಯಾಪ್‌ಟಾಪ್‌, ಪ್ರಿಂಟರ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಸದ್ಯ, ಮನೆ ಬಳಕೆಗೆ ಮತ್ತು ಸಣ್ಣ ಉದ್ದಿಮೆಗಳಿಗೆ ಸೂಕ್ತವಾದ ‘ಎಚ್‌ಪಿ ಸ್ಮಾರ್ಟ್‌ ಟ್ಯಾಂಕ್‌ 580’ ಪ್ರಿಂಟರ್‌ ಬಿಡುಗಡೆ ಮಾಡಿದೆ.

ಪ್ರಿಂಟ್‌, ಸ್ಕ್ಯಾನ್‌, ಕಾಪಿ ಮತ್ತು ಫ್ಯಾಕ್ಸ್‌ ಆಯ್ಕೆಗಳನ್ನು ಇದು ಒಳಗೊಂಡಿದೆ. ಐ.ಡಿ. ಕಾರ್ಡ್‌ಗಳನ್ನು ಕಾಪಿ ಮಾಡಲು ಪ್ರತ್ಯೇಕವಾದ ಬಟನ್‌ ಹೊಂದಿದೆ. ಇದು, ಐ.ಡಿ. ಕಾರ್ಡ್‌ನ ಎರಡೂ ಬದಿಯನ್ನು ಸ್ಕ್ಯಾನ್‌ ಮಾಡಿ ಹಾಳೆಯ ಒಂದೇ ಬದಿಯಲ್ಲಿ ಪ್ರಿಂಟ್ ಆಗುವಂತೆ ಮಾಡುತ್ತದೆ. ಕಾರ್ಡ್‌ನ ಒಂದು ಬದಿ ಸ್ಕ್ಯಾನ್‌ ಆಗಿ ಸೇವ್‌ ಆಗಿರುತ್ತದೆ. ನಂತರ ಎರಡನೇ ಬದಿಯನ್ನು ಸ್ಕ್ಯಾನ್‌ ಮಾಡಿದರೆ ಆಗ ಎರಡೂ ಬದಿಯು ಹಾಳೆಯ ಒಂದೇ ಕಡೆ ಪ್ರಿಂಟ್‌ ಆಗುತ್ತದೆ.

ವಯರ್‌ಲೆಸ್‌ ಅಥವಾ ಯುಎಸ್‌ಬಿ ಕೇಬಲ್‌ ಮೂಲಕ ಪ್ರಿಂಟರ್‌ ಅನ್ನು ಸಂಪರ್ಕಿಸಬಹುದು. ಸ್ಮಾರ್ಟ್‌ಫೋನ್‌ ಮೂಲಕ ಪ್ರಿಂಟ್‌ ತೆಗೆಯುವ ಸೌಲಭ್ಯ ಇರುವುದು ಇಂದಿನ ಸ್ಮಾರ್ಟ್‌ ಕಲ್ಪನೆಗೆ ಪೂರಕವಾಗಿದೆ. ಎಚ್‌ಪಿ ಸ್ಮಾರ್ಟ್‌ ಆ್ಯಪ್‌ ಅನ್ನು ಮೊಬೈಲ್‌ಗೆ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ವೈ–ಫೈ ಸಂಪರ್ಕ ಕಲ್ಪಿಸಿ ಅದರ ಮೂಲಕ ಸ್ಕ್ಯಾನ್‌, ಕಾಪಿ, ಪ್ರಿಂಟ್‌ ತೆಗೆಯಬಹುದು. ಆದರೆ, ಈ ಪ್ರಿಂಟರ್‌ ಅನ್ನು ಆ್ಯಪ್‌ಗೆ ಸಂಪರ್ಕಿಸಲು ಹರಸಾಹಸ ಪಡಬೇಕು. ಆ್ಯಪ್‌ ಸರಿಯಾಗಿ ಬೆಂಬಲ ನೀಡುತ್ತಿಲ್ಲ ಎಂದು ಪ್ಲೆಸ್ಟೋರ್‌ನಲ್ಲಿ ಹಲವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಎಲ್ಲಾ ಎಚ್‌ಪಿ ಸಾಧನಗಳಿಗೂ ಬೆಂಬಲ ನೀಡುವಂತೆ ಆ್ಯಪ್‌ ಅನ್ನು ಅಭಿವೃದ್ಧಿಪಡಿಸುವ ಕಡೆಗೆ ಕಂಪನಿ ಹೆಚ್ಚಿನ ಗಮನ ಹರಿಸುವ ಅಗತ್ಯ ಇದೆ. ಲ್ಯಾಪ್‌ಟ್ಯಾಪ್‌ ಅಥವಾ ಡೆಸ್ಕ್‌ಟಾಪ್‌ ಜೊತೆ ಸಂಪರ್ಕಿಸಿ ಪ್ರಿಂಟ್‌ ತೆಗೆಯಬಹುದಾದರೂ, ಈಗ ಮೊಬೈಲ್‌ ಮೂಲಕವೇ ನಮ್ಮ ಬಹುತೇಕ ವ್ಯವಹಾರಗಳು ನಡೆಯುತ್ತಿವೆ. ಹೀಗಾಗಿ ಇ–ಮೇಲ್‌ಗೆ, ವಾಟ್ಸ್‌ಆ್ಯಪ್‌ಗೆ ಬಂದ ಡಾಕ್ಯುಮೆಂಟ್‌ಗಳನ್ನು ತಕ್ಷಣಕ್ಕೆ ಪ್ರಿಂಟ್‌ ನೀಡಲು ಆಗುವಂತೆ ಆ್ಯಪ್‌ ಅನ್ನು ಎಚ್‌ಪಿ ಕಂಪನಿ ಸಜ್ಜುಗೊಳಿಸಬೇಕಿದೆ.

ಈ ಪ್ರಿಂಟರ್‌ನಲ್ಲಿ ಭರ್ತಿ ಮಾಡಿರುವ ಇಂಕ್‌ಗಳ ಮೂಲಕ 18 ಸಾವಿರ ಪೇಜ್‌ವರೆಗೆ ಬ್ಲಾಕ್‌ ಮತ್ತು 6 ಸಾವಿರ ಪೇಜ್‌ವರೆಗೆ ಕಲರ್‌ ಪ್ರಿಂಟ್‌ ಮಾಡಬಹುದು. ಈ ಪ್ರಿಂಟರ್‌ ಆಟೊ ಆನ್‌/ಆಫ್‌ ವ್ಯವಸ್ಥೆ ಹೊಂದಿದೆ. ಸೈಬರ್ ದಾಳಿಯನ್ನು ತಡೆಯುವ ಸೆಲ್ಫ್‌ ಹೀಲಿಂಗ್‌ ವೈ–ಫೈ ವ್ಯವಸ್ಥೆಯನ್ನು ಈ ಪ್ರಿಂಟರ್‌ನಲ್ಲಿ ಕಲ್ಪಿಸಲಾಗಿದೆ. ಎಂಬೆಡ್‌ ಮಾಡಿದ ಭದ್ರತಾ ವೈಶಿಷ್ಟ್ಯಗಳ ಮೂಲಕ ಪ್ರಿಂಟರ್‌ಗೆ ಹಾನಿ ಆಗುವುದನ್ನು ತಡೆಯಲು ಈ ವ್ಯವಸ್ಥೆ ನೆರವಾಗುತ್ತದೆ.

ವೆಚ್ಚದ ದೃಷ್ಟಿಯಿಂದ ಇಂಕ್‌ಟ್ಯಾಂಕ್‌ ಪ್ರಿಂಟರ್ ಹೆಚ್ಚು ಸೂಕ್ತ. ಕಡಿಮೆ ಖರ್ಚಿನಲ್ಲಿ ಹೆಚ್ಚು ಪ್ರಿಂಟ್‌ ತೆಗೆಯಬಹುದು. ಪ್ರಿಂಟರ್‌ನ ಮುಂಭಾಗದಲ್ಲಿಯೇ ಇಂಕ್ ಟ್ಯಾಂಕ್‌ ಅಳವಡಿಸಲಾಗಿದೆ. ಹೀಗಾಗಿ, ಅದರಲ್ಲಿ ಎಷ್ಟು ಇಂಕ್‌ ಇದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ. ಇಂಕ್‌ ಭರ್ತಿ ಮಾಡುವುದು ಸಹ ಸುಲಭ. ಇಂಕ್‌ ಟ್ಯಾಂಕ್‌ನ ಮುಚ್ಚಳ ತೆಗೆದು ಅದರ ಮೇಲೆ ಇಂಕ್‌ ಬಾಟಲ್‌ ಅನ್ನು ಇಟ್ಟು ರಿ–ಫಿಲ್‌ ಮಾಡಬಹುದು. ಒಂದು ನಿಮಿಷಕ್ಕೆ 10–12 ಪೇಜ್‌ (ಬ್ಲಾಕ್‌) ಮತ್ತು 4–5 ಪೇಜ್‌ ಕಲರ್‌ ಪ್ರಿಂಟ್‌ ತೆಗೆಯಬಹುದು.

ಕಡಿಮೆ ಬೆಲೆಗೆ ಗುಣಮಟ್ಟದ ಪ್ರಿಂಟ್‌ ತೆಗೆಯಲು, ನಿರ್ವಹಣೆಯ ದೃಷ್ಟಿಯಿಂದ ಮನೆ ಬಳಕೆ ಮತ್ತು ಸಣ್ಣ ಉದ್ದಿಮೆಗಳಿಗೆ ಈ ಪ್ರಿಂಟರ್‌ ಪರಿಗಣಿಸಬಹುದು. ಬೆಲೆ ₹18,840.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT