ಮಂಗಳವಾರ, ಜನವರಿ 31, 2023
26 °C

OnePlus | ಒನ್‌ಪ್ಲಸ್‌ 10ಟಿ ಚಾರ್ಜಿಂಗ್‌ನಲ್ಲೂ ವೇಗ!

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ಒನ್‌ಪ್ಲಸ್‌ ಕಂಪನಿಯ ಈಚೆಗೆ ಬಿಡುಗಡೆ ಮಾಡಿರುವ ಒನ್‌ಪ್ಲಸ್‌ 10ಟಿ ಸ್ಮಾರ್ಟ್‌ಫೋನ್‌ ಕಾರ್ಯಾಚರಣೆ, ಚಾರ್ಜಿಂಗ್, ಗೇಮಿಂಗ್‌ - ಹೀಗೆ ಹಲವು ದೃಷ್ಟಿಕೋನಗಳಿಂದ ಉತ್ತಮವಾಗಿದೆ. ಆದರೆ, ಕೆಲವು ಪ್ರೀಮಿಯಂ ವೈಶಿಷ್ಟ್ಯಗಳ ಕೊರತೆ ಕಾಡುತ್ತದೆ.

ಕಂಪನಿಯು ತನ್ನ ಫ್ಲ್ಯಾಗ್‌ಶಿಪ್‌ ಫೋನ್‌ಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದೆ ಎನ್ನುವುದಕ್ಕೆ ಒನ್‌ಪ್ಲಸ್‌ 10ಟಿ ಉತ್ತಮ ನಿದರ್ಶನ. ಕಂಪನಿಯ ಫ್ಲ್ಯಾಗ್‌ಶಿಪ್‌ ಫೋನ್‌ಗಳಿಗೆ ಮತ್ತು  ಒನ್‌ಪ್ಲಸ್‌ 10 ಮತ್ತು 10ಪ್ರೊಗೆ ಹೋಲಿಸಿದರೆ ಇದರಲ್ಲಿ ಕೆಲವೊಂದು ಅಂಶಗಳ ಕೊರತೆ ಕಾಣಿಸುತ್ತದೆ. ವೃತ್ತಿಪರವಾದ ಹ್ಯಾಸಲ್‌ಬ್ಲಾಡ್‌ ಕ್ಯಾಮೆರಾ ಇದರಲ್ಲಿ ಇಲ್ಲ. ಆದಾಗ್ಯೂ ಚಿತ್ರದ ಗುಣಮಟ್ಟ ಚೆನ್ನಾಗಿಯೇ ಇದೆ. ಇನ್ನು, ಅತ್ಯಂತ ಉಪಯುಕ್ತ ಆಗಿರುವ ಅಲರ್ಟ್‌ ಸ್ಲೈಡರ್‌ ಬಟನ್‌ ಸಹ ಇದರಲ್ಲಿ ಇಲ್ಲ. ಈ ಬಟನ್‌ ಸಹ ಜನರು ಒನ್‌ಪ್ಲಸ್‌ ಇಷ್ಟಪಡಲು ಒಂದು ಕಾರಣ. ಹೀಗಿರುವಾಗ ಇದನ್ನು ಬಿಟ್ಟಿರುವುದು ಅಚ್ಚರಿ ಎನಿಸಿದೆ. 3, 5, 7 ಜಿಬಿವರೆಗೆ ರ‍್ಯಾಮ್‌ ವಿಸ್ತರಣೆ ಸೌಲಭ್ಯ ಇದೆಯಾದರೂ ಫೋನ್‌ ಪ್ರತಿ ಬಾರಿಯೂ ರಿಸ್ಟಾರ್ಟ್‌ ಆಗಬೇಕು. ಈ ಸೌಲಭ್ಯ ಉಪಯುಕ್ತವಾಗಿದ್ದರೂ ಪದೇ ಪದೇ ರಿಸ್ಟಾರ್ಟ್‌ ಆಗುವುದು ಕಿರಿಕಿರಿ ಎನ್ನಿಸುತ್ತದೆ. 

ಪ್ರೊಸೆಸರ್‌ ಮತ್ತು ಚಾರ್ಜಿಂಗ್‌ ವೇಗದ ದೃಷ್ಟಿಯಿಂದ ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ಗಿಂತಲೂ ಇದು ಉತ್ತಮವಾಗಿದೆ. 10ಟಿನಲ್ಲಿ ಸ್ನ್ಯಾಪ್‌ಡ್ರ್ಯಾಗನ್‌ 8 ಜೆನ್‌ 1 ಪ್ರೊಸೆಸರ್‌ ಇದೆ. ಹೀಗಾಗಿ ಯಾವುದೇ ಹಂತದಲ್ಲಿಯೂ ಫೋನ್‌ ಹ್ಯಾಂಗ್‌ ಆಗುವುದಿಲ್ಲ. ಗರಿಷ್ಠ ರೆಸಲ್ಯೂಷನ್‌ ಇರುವ ವಿಡಿಯೊ ನೋಡುವಾಗ, ಗೇಮ್‌ ಆಡುವಾಗ ಯಾವುದೇ ಸಮಸ್ಯೆ ಆಗಿಲ್ಲ.

ಕ್ಯಾಮೆರಾ ವಿಷಯದಲ್ಲಿ ಒನ್‌ಪ್ಲಸ್‌ 10 ಪ್ರೊಗೆ ಹೋಲಿಸಿದರೆ ಹಲವು ಅಂಶಗಳ ಕೊರತೆ ಇದರಲ್ಲಿದೆ. ಪ್ರಮುಖ ಕ್ಯಾಮೆರಾ 50 ಎಂಪಿ ಸೋನಿ ಐಮ್ಯಾಕ್ಸ್‌766 ಸೆನ್ಸರ್‌ ಹೊಂದಿದೆ. ಜೂಮ್‌ ಆಯ್ಕೆ ಇಲ್ಲ. ಚಿತ್ರದ ಗುಣಮಟ್ಟವನ್ನು 10 ಪ್ರೊಗೆ ಹೋಲಿಸಲು ಆಗದೇ ಇದ್ದರೂ ಕಳಪೆ ಏನಲ್ಲ, ಉತ್ತಮವಾಗಿಯೇ ಇದೆ. ಲ್ಯಾಂಡ್‌ಸ್ಕೇಪ್‌ ಚಿತ್ರಗಳ ಚೆನ್ನಾಗಿ ಸೆರೆಯಾಗುತ್ತವೆ. ಮಂದಬೆಳಕಿನಲ್ಲಿಯೂ ಉತ್ತಮ ಚಿತ್ರ ತೆಗೆಯಬಹುದು. ಆದರೆ, ಚಿತ್ರ ತೆಗೆದ ಬಳಿಕ ಜೂಮ್‌ ಮಾಡಿದರೆ ಪಿಕ್ಸಲ್‌ ಔಟ್‌ ಆಗಿರುವುದು ಗಮನಕ್ಕೆ ಬರುತ್ತದೆ. 8ಎಂಪಿ ಅಲ್ಟ್ರಾವೈಡ್‌ ಆಯ್ಕೆಯಲ್ಲಿ ನೆರಳು ಮತ್ತು ಬೆಳಕಿನ ಸಂಯೋಜನೆ ಚೆನ್ನಾಗಿ ಸೆರೆಯಾಗುತ್ತದೆ. ಆದರೆ, ಕೆಲವೊಂದು ಸೂಕ್ಷ್ಮ ಅಂಶಗಳ ಕೊರತೆ ಕಾಣಿಸುತ್ತದೆ. 2ಎಂಪಿ ಮ್ಯಾಕ್ರೊ ಸೆನ್ಸರ್‌ ಅಷ್ಟೇನೂ ಚೆನ್ನಾಗಿಲ್ಲ. ಮಧ್ಯಮ ಬೆಲೆಯ ಫೋನ್‌ನ ಮ್ಯಾಕ್ರೊ ಸೆನ್ಸರ್‌ ಗುಣಮಟ್ಟವೇ ಇದಕ್ಕಿಂತ ಉತ್ತಮವಾಗಿದೆ. ಮುಂಬದಿ 16 ಎಂಪಿ ವೈಡ್‌ ಕ್ಯಾಮೆರಾ ಇದ್ದು, ಸೆಲ್ಫಿ ಚೆನ್ನಾಗಿ ಮೂಡಿಬರುತ್ತದೆ. ಕೆಲವೊಮ್ಮೆ ಹೆಚ್ಚು ಶಾರ್ಪ್‌ ಎಂದು ಅನ್ನಿಸುತ್ತದೆ. ಸಹಜ ಮೈಬಣ್ಣದಲ್ಲಿ ಚಿತ್ರ ಸೆರೆಯಾಗುತ್ತದೆ. 

ಬ್ಯಾಟರಿ: 4,800 ಎಂಎಎಚ್‌ ಬ್ಯಾಟರಿ ಇದ್ದು, 20 ನಿಮಿಷದಲ್ಲಿಯೇ ಶೇ. 100ರಷ್ಟು ಪೂರ್ತಿ ಚಾರ್ಜ್‌ ಆಗುತ್ತದೆ. 160ಡಬ್ಲ್ಯು ಅತಿ ವೇಗದ ಚಾರ್ಜಿಂಗ್‌ ಸೌಲಭ್ಯ ಹೊಂದಿದೆ. ಆದರೆ, ಬ್ಯಾಟರಿ ಬಾಳಿಕ ಅವಧಿ ಕಡಿಮೆ ಇದೆ. ಸಾಮಾನ್ಯ ಬಳಕೆಯಲ್ಲಿ ಒಂದು ದಿನವೂ ಚಾರ್ಜ್‌ ನಿಲ್ಲುವುದಿಲ್ಲ. ಇನ್ನು ಲೈವ್‌ ವಿಡಿಯೊ ನೋಡುವುದು, ಗೇಮ್‌ ಆಡಿದರೆ ಬ್ಯಾಟರಿ ಇನ್ನಷ್ಟು ಬೇಗ ಖಾಲಿಯಾಗುತ್ತದೆ. ಎಲ್ಲಾ ಕಡೆಗೂ ನಾವು ಚಾರ್ಜರ್‌ ಇಟ್ಟುಕೊಂಡು ಹೋಗಿರುವುದಿಲ್ಲ. ಹೀಗಾಗಿ, ಅತಿ ವೇಗವಾಗಿ ಚಾರ್ಜ್ ಆಗುವುದಕ್ಕೆ ಗಮನ ನೀಡುವಷ್ಟೇ ಆದ್ಯತೆಯನ್ನು ಚಾರ್ಜ್‌ ಹಿಡಿದಿಟ್ಟುಕೊಳ್ಳುವ ಕಡೆಗೂ ನೀಡಿದರೆ ಅದರಿಂದ, ಪದೇ ಪದೇ ಬ್ಯಾಟರಿ ಚಾರ್ಚ್‌ ಮಾಡಿ, ಅದರ ಬಾಳಿಕೆ ಅವಧಿ ಬೇಗನೆ ಕಡಿಮೆ ಆಗುವುದನ್ನು ತಪ್ಪಿಸಬಹುದು. ವಯರ್‌ಲೆಸ್‌ ಚಾರ್ಜರ್ ನೀಡಿಲ್ಲ. ಬೆಲೆಯ ದೃಷ್ಟಿಯಿಂದ ನೋಡುವುದಾದರೆ ಇದು ಸಹ ಒಂದು ಕೊರತೆಯೇ ಸರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು