ಶನಿವಾರ, ಡಿಸೆಂಬರ್ 4, 2021
26 °C

ಪ್ರೀಮಿಯಂ ಪ್ರಿಯರಿಗೆ ‘ಒನ್‌ಪ್ಲಸ್‌ ಬಡ್ಸ್‌ ಪ್ರೊ’

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

ಒಎನ್‌ಪ್ಲಸ್‌ ಬಡ್ಸ್‌ ಪ್ರೊ

ಹೊರಗಿನ ಶಬ್ದವು ಕೇಳಿಸದಂತೆ ತಡೆಯುವುದು, ವೇಗದ ಚಾರ್ಜಿಂಗ್‌, ದೀರ್ಘ ಬ್ಯಾಟರಿ ಬಾಳಿಕೆ ಹಾಗೂ ಉತ್ತಮ ಗುಣಮಟ್ಟದ ಧ್ವನಿಯಿಂದ ‘ಒನ್‌ಪ್ಲಸ್‌ ಬಡ್ಸ್‌ ಪ್ರೊ’ ಗಮನ ಸೆಳೆಯುತ್ತದೆ.

ಒನ್‌ಪ್ಲಸ್‌ ಕಂಪನಿಯು ಪ್ರೀಮಿಯಂ ವಿಭಾಗವನ್ನು ಗಮನದಲ್ಲಿ ಇಟ್ಟುಕೊಂಡು ‘ಒನ್‌ಪ್ಲಸ್‌ ಬಡ್ಸ್‌ ಪ್ರೊ' ಬಿಡುಗಡೆ ಮಾಡಿದೆ. ಈ ಮೊದಲು ಕಡಿಮೆ ಬೆಲೆಯ ವಿಭಾಗದಲ್ಲಿ ಒನ್‌ಪ್ಲಸ್‌ ಬಡ್ಸ್‌ ಮತ್ತು ಬಡ್ಸ್‌ ಜೆಡ್‌ ನೀಡಿತ್ತು. ಈ ಹೊಸ 'ಬಡ್ಸ್‌ ಪ್ರೊ'ದಲ್ಲಿ ಹೊರಗಿನ ಶಬ್ದವು ಕೇಳಿಸದಂತೆ ತಡೆಯುವುದು (ಆ್ಯಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಷನ್‌–ಎಎನ್‌ಸಿ), ವೇಗದ ಚಾರ್ಜಿಂಗ್‌ ಹಾಗೂ ಉತ್ತಮ ಗುಣಮಟ್ಟದ ಧ್ವನಿ ಪ್ರಮುಖ ಆಕರ್ಷಣೆ ಆಗಿವೆ. ಇದರ ಬೆಲೆ ₹ 9,990.

ಆಕರ್ಷಕ ವಿನ್ಯಾಸ ಹೊಂದಿದೆ. ಪ್ಲಾಸ್ಟಿಕ್‌ನಿಂದ ಬಡ್ಸ್‌ ತಯಾರಿಸಲಾಗಿದೆ. ಹೀಗಿದ್ದರೂ ಗಟ್ಟಿಮುಟ್ಟಾಗಿವೆ. ದೂಳು ಮತ್ತು ನೀರಿನಿಂದ ರಕ್ಷಿಸಲು ಐಪಿ55 ರೇಟಿಂಗ್ಸ್‌ ಹೊಂದಿದೆ. ಇದರ ಚಾರ್ಜಿಂಗ್‌ ಕೇಸ್‌ ಐಪಿಎಕ್ಸ್‌4 ನೀರು ನಿರೋಧಕವಾಗಿದೆ. ಕಿವಿಯ ಗಾತ್ರಕ್ಕೆ ಅನುಗುಣವಾಗಿ ಮೂರು ರೀತಿಯ ಇಯರ್‌ ಟಿಪ್‌ಗಳನ್ನು ನೀಡಲಾಗಿದೆ. ಯುಎಸ್‌ಬಿ ಟೈಪ್–ಸಿ ಚಾರ್ಜಿಂಗ್‌ ಕೇಬಲ್‌ ಹೊಂದಿದೆ.

ಇಯರ್‌ ಕೇಸ್‌ನಿಂದ ಬಡ್ಸ್‌ಗಳನ್ನು ಹೊರತೆಗೆದಾಗ ಅವು ಆನ್ ಆಗಿ ಸಂಪರ್ಕಕ್ಕೆ ಬರುತ್ತವೆ. ಫೋನ್‌ನ ಬ್ಲೂಟೂತ್‌ ಆನ್‌ ಮಾಡಿ ಬಡ್ಸ್ ಪ್ರೊ ಎಂದು ಹುಡುಕಿ ಪರಸ್ಪರ ಸಂಪರ್ಕಿಸಬಹುದು. ಏಕಕಾಲಕ್ಕೆ ಎರಡು ಸಾಧನಗಳೊಂದಿಗೆ ಸಂಪರ್ಕಿಸಬಹುದಾಗಿದೆ. ಚಾರ್ಜಿಂಗ್‌ ಕೇಸ್‌ 520ಎಂಎಎಚ್‌ ಬ್ಯಾಟರಿ ಹೊಂದಿದ್ದರೆ, ಇಯರ್‌ ಬಡ್‌ ತಲಾ 40ಎಂಎಎಚ್‌ ಬ್ಯಾಟರಿ ಹೊಂದಿವೆ. 10 ನಿಮಿಷ ಚಾರ್ಜ್‌ ಮಾಡಿದರೆ 10 ಗಂಟೆ ಬಳಸಬಹುದು. ಒಮ್ಮೆ ಚಾರ್ಜಿಂಗ್ ಕೇಸ್‌ ಪೂರ್ತಿ ಚಾರ್ಜ್‌ ಆದರೆ, ಅದರಿಂದ ಬಡ್ಸ್‌ ಅನ್ನು ಮೂರು ಬಾರಿ ಚಾರ್ಜ್‌ ಮಾಡಬಹುದು. ಎಎನ್‌ಸಿ ಆನ್‌ ಆಗಿದ್ದಾಗ 20 ಗಂಟೆಗಳವರೆಗೆ ಹಾಗೂ ಎಎನ್‌ಸಿ ಆಫ್‌ ಆಗಿದ್ದಾಗ 24 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ.

ಬಡ್ಸ್‌ ಅನ್ನು ಕಿವಿಯಲ್ಲಿ ಇಟ್ಟುಕೊಂಡಿದ್ದಾಗ ಹೊರಗಿನ ಶಬ್ದ ಕೇಳದಂತೆ ತಡೆಯುವ (ಎಎನ್‌ಸಿ) ವ್ಯವಸ್ಥೆಯು ಉತ್ತಮವಾಗಿದೆ. ಮನೆಯಿಂದ ಹೊರಗಡೆ ಓಡಾಡುವಾಗಲೂ ಫೋನಿನಲ್ಲಿ ನಮ್ಮೊಂದಿಗೆ ಮಾತನಾಡುತ್ತಿರುವವರಿಗೆ ನಮ್ಮ ಧ್ವನಿ ಸ್ವಷ್ಟವಾಗಿ ಕೇಳುವುದಷ್ಟೇ ಅಲ್ಲದೆ, ಅವರ ಧ್ವನಿಯೂ ನಮಗೆ ಸ್ಪಷ್ಟವಾಗಿ ಕೇಳುತ್ತದೆ. ಹಾಡು ಕೇಳುವಾಗ, ವಿಡಿಯೊ ನೋಡುವಾಗಲೂ ಹೊರಗಿನ ಶಬ್ದವು ನಮಗೆ ಕೇಳಿಸದಷ್ಟು ಸ್ಪಷ್ಟವಾಗಿತ್ತು.

ಹೇ-ಮೆಲೋಡಿ (HeyMelody) ಆ್ಯಪ್‌ ಮೂಲಕ ಆಂಡ್ರಾಯ್ಡ್‌ ಮತ್ತು ಐಒಎಸ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಸೆಟ್ಟಿಂಗ್ಸ್‌ ಮಾಡಬಹುದು. ಬಡ್ಸ್‌ ಅನ್ನು ನಿಯಂತ್ರಿಸುವುದು ತುಸು ರಗಳೆಯೇ ಸರಿ. ಹಾಡನ್ನು ಪ್ಲೇ ಅಥವಾ ಪಸ್‌ ಮಾಡಲು ಬಡ್ಸ್‌ನಲ್ಲಿ ಅಡಗಿರುವ ಬಟನ್‌ ಅನ್ನು ಒಂದು ಬಾರಿ ಒತ್ತಬೇಕು. ಮುಂದಿನ ಹಾಡು ಕೇಳಲು ಎರಡು ಬಾರಿ ಒತ್ತಬೇಕು. ತಕ್ಷಣಕ್ಕೆ ಇದು ಕೆಲಸ ಮಾಡುವುದಿಲ್ಲ. ದ್ವಿಚಕ್ರ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸುವುದರಿಂದ, ಕಿವಿಯೊಳಗೆ ಕೂರುವ ಇಯರ್‌ಬಡ್ಸ್ ಮೂಲಕ ಕರೆ ಸ್ವೀಕರಿಸಲು ಬಟನ್ ಅದುಮುವುದು ಕಷ್ಟ. ಒಟ್ಟಾರೆಯಾಗಿ ಸ್ಪಷ್ಟ ಧ್ವನಿ, ಉತ್ತಮ ಬ್ಯಾಟರಿ ಬಾಳಿಕೆ ದೃಷ್ಟಿಯಿಂದ ಹಾಗೂ ಒನ್‌ಪ್ಲಸ್‌ ಸಾಧನಗಳ ಪ್ರೀಮಿಯಂ ವೈಶಿಷ್ಟ್ಯಗಳ ಅರಿವು ಇರುವವರಿಗೆ ಒನ್‌ಪ್ಲಸ್‌ ಬಡ್ಸ್‌ ಪ್ರೊ ಹೆಚ್ಚು ಇಷ್ಟವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು