ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

OnePlus Nord Ce 3 lite: ಪ್ಲಸ್‌, ಮೈನಸ್‌ನ ಮಿಶ್ರಣ

Published 6 ಮೇ 2023, 5:37 IST
Last Updated 6 ಮೇ 2023, 5:37 IST
ಅಕ್ಷರ ಗಾತ್ರ

ಒನ್‌ಪ್ಲಸ್ ಕಂಪನಿಯು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮಧ್ಯಮ ಬೆಲೆಯ ವಿಭಾಗದಲ್ಲಿ ಈಗಾಗಲೇ ಕೆಲವು ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ನೀಡಿದೆ. ಆದರೆ, ಈಚೆಗೆ ಬಿಡುಗಡೆ ಮಾಡಿರುವ ‘ಒನ್‌ಪ್ಲಸ್‌ ನಾರ್ಡ್‌ ಸಿಇ 3 ಲೈಟ್‌ 5ಜಿ’ (OnePlus Nord Ce 3 lite 5G) ಸ್ಮಾರ್ಟ್‌ಫೋನ್‌ ಹಲವು ಪ್ಲಸ್‌ ಮತ್ತು ಮೈನಸ್‌ ಅಂಶಗಳ ಮಿಶ್ರಣವಾಗಿದೆ.

ವಿನ್ಯಾಸದಲ್ಲಿ ನೋಡಲು ಆಕರ್ಷಕವಾಗಿದೆ. 6.72 ಇಂಚು ಎಲ್‌ಸಿಡಿ ಸ್ಕ್ರೀನ್‌ 120 ಹರ್ಟ್ಸ್‌ ರಿಫ್ರೆಷ್‌ ರೇಟ್‌ ಹೊಂದಿದೆ. ಮನೆಯೊಳಗೆ ಮತ್ತು ಮನೆಯಾಚೆ ಬಿಸಿಲಿನಲ್ಲಿ ಇದ್ದಾಗಲೂ ಮೊಬೈಲ್‌ ಪರದೆಯನ್ನು ನೋಡಲು ಸಮಸ್ಯೆ ಆಗುವುದಿಲ್ಲ. ಟಚ್ ರೆಸ್ಪಾನ್ಸ್ ರೇಟ್‌ 240 ಹರ್ಟ್ಸ್‌ ಇದೆ. 195ಗ್ರಾಂ ತೂಕ ಇದೆ. ಸ್ಕ್ರೀನ್‌ನ ಮಧ್ಯಭಾಗದಲ್ಲಿ ಸೆಲ್ಫಿ ಕ್ಯಾಮೆರಾ ಆಳವಡಿಸಲಾಗಿದೆ. ಹಿಂಭಾಗದಲ್ಲಿ ವೃತ್ತಾಕಾರದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪರದೆಯಲ್ಲಿಯೇ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಅಳವಡಿಸುವ ಬದಲಾಗಿ ಪವರ್‌ ಬಟನ್‌ ಜಾಗದಲ್ಲಿ ಇಡಲಾಗಿದೆ; ಇದು ಕಿರಿಕಿರಿ ಉಂಟುಮಾಡುತ್ತದೆ. ಸುಮ್ಮನೆ ಮೊಬೈಲ್‌ ಅನ್ನು ಕೈಯಲ್ಲಿ ಹಿಡಿದುಕೊಂಡರೂ ಮೊಬೈಲ್ ಅನ್‌ಲಾಕ್‌ ಆಗುತ್ತದೆ.

ಮೊಬೈಲ್‌ನ ವಾಲ್ಯುಂ ಬಟನ್‌ ನಂತರ ಸಿಮ್‌ ಸ್ಲಾಟ್‌ ನೀಡಲಾಗಿದೆ. ಒನ್‌ಪ್ಲಸ್‌ನ ಹೆಗ್ಗುರುತು ಎನ್ನಿಸಿಕೊಂಡಿರುವ ‘ಅಲರ್ಟ್‌ ಸ್ಲೈಡರ್‌’ ಬಟನ್‌ ಕೊರತೆ ಕಾಡದೇ ಇರದು. ಅನ್‌ಲಾಕ್‌ ಮಾಡದೇ ಮೊಬೈಲ್‌ ಅನ್ನು ರಿಂಗ್‌, ವೈಬ್ರೆಟ್‌, ಸೈಲೆಂಟ್‌ ಮೋಡ್‌ಗೆ ಇಡಲು ಈ ಬಟನ್‌ ಅನುಕೂಲವಾಗಿದೆ. 3.5 ಎಂಎಂ ಹೆಡ್‌ಫೋನ್‌ ಜಾಕ್ ನೀಡಿರುವುದು ಇದರ ಪ್ಲಸ್‌ ಪಾಯಿಂಟ್‌. ಸ್ಮಾರ್ಟ್‌ ಎಂದಾಕ್ಷಣ ಎಲ್ಲರ ಬಳಿಯೂ ಬ್ಲುಟೂತ್‌ ಹೆಡ್‌ಫೋನ್‌ ಇರಲೇಬೇಕು ಎಂದಲ್ಲ. ಈಗಲೂ ಹಲವರು ಇಯರ್‌ಫೋನ್‌ ಬಳಸುತ್ತಾರೆ. ಹೀಗಾಗಿ ಹೆಡ್‌ಫೋನ್‌ ಜಾಕ್‌ ಪ್ರಯೋಜನಕ್ಕೆ ಬರುತ್ತದೆ. ಡ್ಯುಯಲ್‌ ಸ್ಪೀಕರ್‌ ಹೊಂದಿದೆ.

ಆಂಡ್ರಾಯ್ಡ್‌ 13 ಆಧಾರಿತ ಆಕ್ಸಿಜನ್‌ ಕಾರ್ಯಾಚರಣಾ ವ್ಯವಸ್ಥೆ (ಒಎಸ್‌), ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 695 5ಜಿ ಪ್ರೊಸೆಸರ್‌ ಒಳಗೊಂಡಿದೆ. ಹೆಚ್ಚಿನ ಗ್ರಾಫಿಕ್ಸ್‌ ಇರುವ ಗೇಮ್‌ ಆಡಲು ಮತ್ತು ಹೆಚ್ಚಿನ ರೆಸಲ್ಯೂಷನ್‌ ಹೊಂದಿರುವ ವಿಡಿಯೊ ನೋಡುವಾಗ ಯಾವುದೇ ಸಮಸ್ಯೆ ಆಗುವುದಿಲ್ಲ. 8 ಜಿಬಿವರೆಗೆ ರ‍್ಯಾಮ್‌ ವಿಸ್ತರಣೆ ಸೌಲಭ್ಯ ಇದೆಯಾದರೂ ಫೋನ್‌ ಪ್ರತಿ ಬಾರಿಯೂ ರಿಸ್ಟಾರ್ಟ್‌ ಆಗಬೇಕು. ಈ ಸೌಲಭ್ಯ ಉಪಯುಕ್ತವಾಗಿದ್ದರೂ ಪದೇ ಪದೇ ರಿಸ್ಟಾರ್ಟ್‌ ಆಗುವುದು ಕಿರಿಕಿರಿ ಎನ್ನಿಸುತ್ತದೆ.  ಹೆಚ್ಚಿನ ರೆಸಲ್ಯೂಷನ್‌ ಇರುವ ಗೇಮ್‌  ಆಡಲು ಮತ್ತು ವಿಡಿಯೊ ನೋಡುವಾಗ ಯಾವುದೇ ಸಮಸ್ಯೆ ಆಗಿಲ್ಲ. ಹೈಬ್ರಿಡ್‌ ಸಿಮ್‌ ಸ್ಲಾಟ್‌ ಇದೆ. ಎರಡನೇ ಸಿಮ್‌ ಜಾಗದಲ್ಲಿ ಮೈಕ್ರೊ ಎಸ್‌ಡಿ ಕಾರ್ಡ್‌ ಸ್ಲಾಟ್‌ ನೀಡಿದ್ದು, 1ಟಿಬಿ ವರೆಗೂ ಫೋಟೊ, ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಿ ಇಡಬಹುದು.

ಕ್ಯಾಮೆರಾ: 108+2+2 ಎಂಪಿ... ಹೀಗೆ ಮೂರು ರಿಯರ್‌ ಕ್ಯಾಮೆರಾ ಒಳಗೊಂಡಿದೆ. ಪ್ರಧಾನ ಕ್ಯಾಮೆರಾ 108 ಎಂಪಿ ಇದೆ ಎನ್ನುವುದೇ ಈ ಸ್ಮಾರ್ಟ್‌ಫೋನ್‌ನ ಹೈಲೈಟ್ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಬಹಳಷ್ಟು ಕಡೆ ಅದಕ್ಕೆ ತಕ್ಕಂತೆ ಕೆಲಸ ಮಾಡುವುದಿಲ್ಲ. ಔಟ್‌ಡೋರ್‌ನಲ್ಲಿ ಪ್ರಕೃತಿಯ ಚಿತ್ರಗಳನ್ನು ತೆಗೆಯಲು ಉತ್ತಮ ಮೊಬೈಲ್‌ ಇದಾಗಿದೆ. ಬೇರೆ ಕಂಪನಿಯ ಇದಕ್ಕಿಂತ ಹೆಚ್ಚಿನ ಬೆಲೆಯ ಫೋನ್‌ಗಿಂತಲೂ ಚಿತ್ರದ ಗುಣಮಟ್ಟ, ನೆರಳು ಬೆಳಕಿನ ಸಂಯೋಜನೆ ಮತ್ತು ವಿವರಗಳು ಇದರಲ್ಲಿ ಚೆನ್ನಾಗಿ ದಾಖಲಾಗುತ್ತವೆ. ಆದರೆ ಮನೆಯೊಳಗೆ ಅಥವಾ ಇನ್‌ಡೋರ್‌ನಲ್ಲಿ ಚಿತ್ರದ ಗುಣಮಟ್ಟ, ನೆರಳು ಬೆಳಕಿನ ಸಂಯೋಜನೆ ಯಾವುದೂ ಚೆನ್ನಾಗಿಲ್ಲ. ಸೆಲ್ಫಿಯೂ ಅಷ್ಟೆ, ಮನೆಯೊಳಗೆ ತೆಗೆದ ಸೆಲ್ಫಿ ಚಿತ್ರದ ಗುಣಮಟ್ಟವು ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ಗಿಂತಲೂ ಕಡಿಮೆ ಇದೆ. ಆದರೆ, ಮನೆಯಾಚೆ ತೆಗೆದ ಸೆಲ್ಫಿ ಒಂದು ಹಂತದ ಮಟ್ಟಿಗೆ ಚೆನ್ನಾಗಿದೆ. 3ಎಕ್ಸ್ ಜೂಮ್‌ ಆಯ್ಕೆಯಲ್ಲಿಯೂ ಇದೇ ಸಮಸ್ಯೆ, ಔಟ್‌ಡೋರ್‌ನಲ್ಲಿ ಜೂಮ್‌ ಆಯ್ಕೆ ಚೆನ್ನಾಗಿ ಕೆಲಸ ಮಾಡುತ್ತದೆ. ಮನೆಯೊಳಗೆ ಗುಣಮಟ್ಟದ ಕೊರತೆ ಎದ್ದುಕಾಣುತ್ತದೆ. ಮ್ಯಾಕ್ರೊ ಲೆನ್ಸ್‌ 2ಎಂಪಿ ಇದ್ದು, ಈ ಆಯ್ಕೆಯಲ್ಲಿ ತೆಗೆದ ಚಿತ್ರದಲ್ಲಿ ಗುಣಮಟ್ಟದ ಕೊರತೆ ಇದೆ.

ಬ್ಯಾಟರಿ: 5 ಸಾವಿರ ಎಂಎಎಚ್‌ ಬ್ಯಾಟರಿ ಇದ್ದು, 80 ವಾಟ್‌ ಸೂಪರ್‌ ವಿಒಒಸಿ ಅಲ್ಟ್ರಾ ಫಾಸ್ಟ್‌ ಚಾರ್ಜರ್‌ ನೀಡಲಾಗಿದೆ. ಆದರೆ, ಬೆಂಬಲಿಸುವುದು 67 ವಾಟ್‌ವರೆಗೆ ಮಾತ್ರ. ಹೀಗಿದ್ದರೂ ಶೇ 100ರಷ್ಟು ಚಾರ್ಜ್ ಆಗಲು 50 ನಿಮಿಷ ಬೇಕು. 30 ನಿಮಿಷ ಚಾರ್ಜ್‌ ಮಾಡಿದರೆ ಒಂದು ದಿನ ಬಳಸಬಹುದು ಎನ್ನುವ ಕಂಪನಿಯ ವಾದವನ್ನು ಒಪ್ಪಲು ಆಗುವುದಿಲ್ಲ. ಏಕೆಂದರೆ ಇದು ಕೂಡಾ ವೇಗದ ಚಾರ್ಜಿಂಗ್‌ಗೆ ಸಮ ಅಲ್ಲ, ಬೆಳಿಗ್ಗೆ 9.45ಕ್ಕೆ ಶೇ 100ರಷ್ಟು ಚಾರ್ಜ್‌ ಮಾಡಲಾಗಿತ್ತು. ಮಾರನೇ ದಿನ ಬೆಳಿಗ್ಗೆ 9.25ರ ವೇಳೆಗೆ ಶೇ 25ರಷ್ಟು ಚಾರ್ಜ್‌ ಇನ್ನೂ ಉಳಿದಿತ್ತು. ಇದು ಸ್ವಲ್ಪ ಸಮಾಧಾನದ ಸಂಗತಿ ಆದರೂ  ಮಾರುಕಟ್ಟೆಯ ಈಚಿನ ಮಾಹಿತಿಯ ಪ್ರಕಾರ, ವ್ಯಕ್ತಿಯೊಬ್ಬ ದಿನಕ್ಕೆ ಸರಾಸರಿ 6 ಗಂಟೆ ಮೊಬೈಲ್‌ ಬಳಸುತ್ತಾನೆ. ಈ ಅವಧಿಯಲ್ಲಿ ಒಂದು ಮೂವಿ ನೋಡಿದರೆ ಅಥವಾ ವಿಡಿಯೊಗಳನ್ನು ನೋಡಿದರೆ, ಗೇಮ್‌ ಆಡಿದರೆ ಆಗ 30 ನಿಮಿಷಕ್ಕೆ ಮಾಡಿರುವ ಚಾರ್ಜ್‌ ಸಾಲುವುದಿಲ್ಲ. ಬೆಲೆ: 8+126ಜಿಬಿಗೆ ₹19,999 ಮತ್ತು 8+256ಜಿಬಿಗೆ ₹21,999 ಇದೆ.

ಒನ್‌ಪ್ಲಸ್‌ ನಾರ್ಡ್‌ ಸರಣಿಯಲ್ಲಿ ಈಗಾಗಲೇ ಹೇಳಿರುವಂತೆ ಹಲವು ಪ್ಲಸ್ ಮತ್ತು ಮೈನಸ್‌ ಅಂಶಗಳನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ ಇದಾಗಿದೆ. ವೇಗದ ಕಾರ್ಯಾಚರಣೆ, ಔಟ್‌ಡೋರ್‌ ಫೋಟೊ, ವಿಡಿಯೊ ತೆಗೆಯಲು ಇದನ್ನು ಒಂದು ಆಯ್ಕೆಯಾಗಿ ಪರಿಗಣಿಸಬಹುದು.

ಒನ್‌ಪ್ಲಸ್‌ ನಾರ್ಡ್‌ ಸಿಇ 3 ಲೈಟ್‌ 5ಜಿ
ಒನ್‌ಪ್ಲಸ್‌ ನಾರ್ಡ್‌ ಸಿಇ 3 ಲೈಟ್‌ 5ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT