ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲುಟೂತ್‌ ಕಾಲಿಂಗ್‌ಗೆ ಉತ್ತಮ: ಪಿಟ್ರಾನ್‌ ಫೋರ್ಸ್‌ ಎಕ್ಸ್‌ 11 ಸ್ಮಾರ್ಟ್‌ವಾಚ್‌

Last Updated 13 ಮಾರ್ಚ್ 2022, 1:30 IST
ಅಕ್ಷರ ಗಾತ್ರ

ಪಿಟ್ರಾನ್‌ ಕಂಪನಿಯ ಸ್ಮಾರ್ಟ್‌ ಸಾಧನಗಳಲ್ಲಿ ‘ಫೋರ್ಸ್‌ ಎಕ್ಸ್‌11’ ಸ್ಮಾರ್ಟ್‌ವಾಚ್‌ ಹೆಚ್ಚು ಗಮನ ಸೆಳೆಯುತ್ತದೆ. ಇದರ ಬೆಲೆ ₹ 2,799. ಕೈಗೆಟಕುವು ಬೆಲೆ ಮತ್ತು ಬ್ಲುಟೂತ್ ಕಾಲಿಂಗ್‌ ದೃಷ್ಟಿಯಿಂದ ಈ ಸ್ಮಾರ್ಟ್‌ವಾಚ್‌ ಹೆಚ್ಚು ಉಪಯುಕ್ತ ಎನಿಸಿದೆ.

ಈ ಸ್ಮಾರ್ಟ್‌ವಾಚ್‌ ಚೌಕಾಕಾರದ ಡಯಲ್‌ ಹೊಂದಿದ್ದು, 1.7 ಇಂಚು ಕಲರ್‌ ಡಿಸ್‌ಪ್ಲೇ ಒಳಗೊಂಡಿದೆ. ಬೆಲ್ಟ್‌ ಗುಣಮಟ್ಟ ಚೆನ್ನಾಗಿದೆ. ಕೈಯನ್ನು ಮೇಲಕ್ಕೆ ಎತ್ತಿದರೆ ಡಿಸ್‌ಪ್ಲೇ ಆನ್‌ ಆಗುತ್ತದೆ. DaFit ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ವಾಚ್‌ ಜೊತೆ ಸಂಪರ್ಕಿಸಿದರೆ ಸ್ಮಾರ್ಟ್‌ವಾಚ್‌ನ ಎಲ್ಲಾ ವೈಶಿಷ್ಟ್ಯಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆ ಸುಲಭವಾಗುತ್ತದೆ.

ಹೆಸರಿನಲ್ಲೇ ಹೇಳಿರುವಂತೆ ಇದರ ಪ್ರಮುಖ ವೈಶಿಷ್ಟ್ಯವೇ ಬ್ಲುಟೂತ್ ಕಾಲಿಂಗ್. ಬ್ಲುಟೂತ್ ಮೂಲಕ ಫೋನ್‌ನೊಂದಿಗೆ ಸಂಪರ್ಕ ಸಾಧಿಸಿದರೆ ಸ್ಮಾರ್ಟ್‌ವಾಚ್‌ ಮೂಲಕವೇ ಕರೆ ಮಾಡಲು ಮತ್ತು ಸ್ವೀಕರಿಸಲು ಸಾಧ್ಯ. ಫೋನ್‌ ಕಾಂಟ್ಯಾಕ್ಟ್‌ ಅನ್ನು ವಾಚ್‌ನೊಂದಿಗೆ ಸಿಂಕ್ ಮಾಡಿ ಕಾಲ್‌ ಹಿಸ್ಟರಿ ಪಡೆಯಬಹುದು. ಫೆವರಿಟ್‌ ಕಾಂಟ್ಯಾಕ್ಟ್‌ಗಳನ್ನು ಸಹ ವಾಚ್‌ನಲ್ಲಿ ಸಿದ್ಧಪಡಿಸಿಟ್ಟುಕೊಳ್ಳಬಹುದು. ಇಷ್ಟೇ ಅಲ್ಲದೆ, ಸೇವ್ ಆಗಿಲ್ಲದ ನಂಬರ್‌ಗೂ ಡಯಲ್‌ ಮಾಡಿ ಕಾಲ್‌ ಮಾಡಬಹುದು. ಬಳಕೆ ಬಹಳ ಸುಲಭವಾಗಿರುವುದರಿಂದ ಕರೆ ಮಾಡಲು ಫೋನ್‌ ಅನ್ನೇ ಬಳಸಬೇಕು ಎಂದೇನೂ ಇಲ್ಲ. ಮೈಕ್ರೊಫೋನ್‌ ಮೂಲಕ ಧ್ವನಿಯು ಸ್ಪಷ್ಟವಾಗಿ ಕೇಳಿಸುತ್ತದೆ. ಫೋನಿನ ಇನ್ನೊಂದು ತುದಿಯಲ್ಲಿ ಮಾತನಾಡುವವರಿಗೂ ನನ್ನ ಧ್ವನಿ ಸ್ಪಷ್ಟವಾಗಿ ಕೇಳಿದೆ.

ಆ್ಯಪ್‌ನಲ್ಲಿ ಸ್ಮಾರ್ಟ್‌ ನೋಟಿಫಿಕೇಷನ್‌ ಸಕ್ರಿಯಗೊಳಿಸುವ ಆಯ್ಕೆ ಇದೆ. ಅಲ್ಲಿ ಮೆಸೇಜ್‌, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌... ಹೀಗೆ ಯಾವೆಲ್ಲಾ ಆ್ಯಪ್‌ಗಳ ನೋಟಿಫಿಕೇಷನ್‌ಗಳು ಅಗತ್ಯ ಇದೆ ಎಂದು ಕ್ಲಿಕ್‌ ಮಾಡಿದರೆ ಅವೆಲ್ಲವೂ ಸ್ಮಾರ್ಟ್‌ವಾಚ್‌ ಪರದೆಯಲ್ಲಿ ಕಾಣಿಸುತ್ತವೆ.

ಆರೋಗ್ಯ ಮತ್ತು ಫಿಟ್‌ನೆಸ್ ಮೇಲ್ವಿಚಾರಣೆ ಮಾಡಬಹುದು. ಹೃದಯದ ಬಡಿತ, ರಕ್ತ ಸಂಚಾರ, ಉಸಿರಾಟ, ಎಷ್ಟು ಗಂಟೆ ನಿದ್ದೆ ಮಾಡಿದ್ದೇವೆ, ದಿನಕ್ಕೆ ಎಷ್ಟು ಹೆಜ್ಜೆ ನಡೆದಿದ್ದೇವೆ. ಓಡಿದ್ದೇವೆ ಇತ್ಯಾದಿಗಳನ್ನು ಸುಲಭವಾಗಿ ದಾಖಲಿಸಬಹುದು. ವಾಕಿಂಗ್‌, ರನ್ನಿಂಗ್‌, ಸ್ಕಿಪ್ಪಿಂಗ್‌, ಸೈಕ್ಲಿಂಗ್‌, ಬ್ಯಾಡ್ಮಿಂಟನ್‌, ಫುಟ್‌ಬಾಲ್‌, ಬಾಸ್ಕೆಟ್‌ಬಾಲ್‌ ಮತ್ತು ಸ್ವಿಮ್ಮಿಂಗ್‌ ಮೋಡ್‌ಗಳು ಇದರಲ್ಲಿವೆ. ಇಷ್ಟೇ ಅಲ್ಲದೆ ಬೇರೆ ಸ್ಮಾರ್ಟ್‌ವಾಚ್‌ಗಳಲ್ಲಿ ಇರುವಂತೆಯೇ ಮ್ಯೂಸಿಕ್‌ ಕಂಟ್ರೋಲ್‌ ಮತ್ತು ಕ್ಯಾಮೆರಾ ಶೆಟರ್‌ ಕಂಟ್ರೋಲ್‌ ಸಹ ಇದರಲ್ಲಿ ಇದೆ.

3 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಇದರ ಬ್ಯಾಟರಿ ಬಾಳಿಕೆಯು ಬಳಕೆ ರೀತಿಗೆ ಅನುಗುಣವಾಗಿದೆ. ಆ್ಯಪ್‌ ಜೊತೆ ಸಂಪರ್ಕಿಸಿಟ್ಟುಕೊಂಡಿದ್ದರೆ ಒಮ್ಮೆ ಚಾರ್ಜ್‌ ಮಾಡಿದರೆ ಐದು ದಿನಗಳವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ. ಆ್ಯಪ್‌ ಜೊತೆ ಸಂಪರ್ಕಿಸದೇ ಇದ್ದರೆ ಏಳು ದಿನಗಳವರಗೆ ಚಾರ್ಜ್‌ ನಿಲ್ಲುತ್ತದೆ. ಬ್ಲುಟೂತ್ ಕಾಲಿಂಗ್‌ ಸೌಲಭ್ಯವನ್ನು ಹೆಚ್ಚು ಬಳಕೆ ಮಾಡಿದರೆ ಬ್ಯಾಟರಿಯು ಬೇಗನೆ ಕಾಲಿ ಆಗುತ್ತದೆ. ಐಪಿ68 ವಾಟರ್‌ಪ್ರೂಫ್‌ ಇದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ಒದಗಿಸುತ್ತದೆ.

ಫೋನ್‌ಕಾಲ್‌ ರಿಸೀವ್‌ ಮಾಡಲು ಮತ್ತು ಇನ್ನೊಬ್ಬರಿಗೆ ಕಾಲ್‌ ಮಾಡಲು ಪದೇ ಪದೇ ಮೊಬೈಲ್‌ ಅನ್ನೇ ಬಳಸುವುದನ್ನು ತಪ್ಪಿಸಲು ಈ ಸ್ಮಾರ್ಟ್‌ವಾಚ್‌ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ. ಒಟ್ಟಾರೆಯಾಗಿ, ಬ್ಲುಟೂತ್ ಕಾಲಿಂಗ್‌, ಉತ್ತಮ ಬ್ಯಾಟರಿ ಬಾಳಿಕೆ, ಸುಲಭದ ಬಳಕೆ ದೃಷ್ಟಿಯಿಂದ ₹ 3 ಸಾವಿರದೊಳಗಿನ ಸ್ಮಾರ್ಟ್‌ವಾಚ್‌ಗಳಲ್ಲಿ ಇದನ್ನು ಆದ್ಯತೆಯ ಆಯ್ಕೆಯಾಗಿ ಪರಿಗಣಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT