ಗುರುವಾರ , ಆಗಸ್ಟ್ 13, 2020
24 °C

ಸ್ಯಾಮ್‌ಸಂಗ್ ಪ್ರಿಯರಿಗೆ ಇನ್ನೊಂದು ಫೋನ್

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

ಎಷ್ಟೇ ಬೆಲೆಯಾದರೂ ಸ್ಯಾಮ್‌ಸಂಗ್ ಫೋನನ್ನೇ ಕೊಳ್ಳುವವರು ಕೆಲವರಿದ್ದಾರೆ. ಸ್ಯಾಮ್‌ಸಂಗ್‌ನವರ ಎಸ್ ಶ್ರೇಣಿಯ ಫೋನ್‌ಗಳು ದುಬಾರಿಯಾದರೂ ಉತ್ತಮವಾಗಿವೆ. ಸ್ಯಾಮ್‌ಸಂಗ್‌ನವರು ಕಡಿಮೆ ಅಥವಾ ಮಧ್ಯಮ ಬೆಲೆಯ ಫೋನ್‌ಗಳನ್ನೂ ತಯಾರಿಸುತ್ತಾರೆ. ಮಧ್ಯಮ ಬೆಲೆಯವು ಎ ಶ್ರೇಣಿಯವು ಮತ್ತು ಕಡಿಮೆ ಬೆಲೆಯವು ಜೆ ಶ್ರೇಣಿಯವು. ಜೆ6 ಫೋನಿನ ವಿಮರ್ಶೆಯನ್ನು ಇದೇ ಅಂಕಣದಲ್ಲಿ ಮಾಡಲಾಗಿತ್ತು. ಅದರದೇ ಸ್ವಲ್ಪ ಬದಲಾಯಿಸಿದ ಆವೃತ್ತಿ ನಾವು ಈ ಸಲ ನಾವು ವಿಮರ್ಶೆ ಮಾಡುತ್ತಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ 6+ (Samsung Galaxy J6) ಫೋನ್.

ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಮೂರು ಬಣ್ಣಗಳಲ್ಲಿ ಲಭ್ಯವಿದೆ. ನನಗೆ ವಿಮರ್ಶೆಗೆ ಬಂದುದು ಕಪ್ಪು ಬಣ್ಣದ್ದು. ಹಿಂಭಾಗದ ಕವಚ ತೆಗೆಯಲು ಬರುವುದಿಲ್ಲ. ಈ ಕವಚ ನಯವಾಗಿದೆ. ಆದುದರಿಂದಾಗಿ ಅದು ಕೈಯಿಂದ ಜಾರಿ ಬೀಳುವ ಭಯವಿದೆ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್, ಎಡಭಾಗದಲ್ಲಿ ವಾಲ್ಯೂಮ್ ಬಟನ್‌ಗಳಿವೆ. ಬಲಭಾಗದಲ್ಲಿ ವಾಲ್ಯೂಮ್ ಬಟನ್‌ನ ಮೇಲ್ಭಾಗದಲ್ಲಿ ಚಿಕ್ಕ ಕಿಂಡಿಯಲ್ಲಿ ಸ್ಪೀಕರ್ ಇದೆ. ಇದು ಸ್ಪೀಕರಿಗೆ ಖಂಡಿತವಾಗಿಯೂ ಹೇಳಿದ ಸ್ಥಳವಲ್ಲ. ವಿಡಿಯೊ ನೋಡುವಾಗ ಎಚ್ಚರವಹಿಸದಿದ್ದರೆ ಅದನ್ನು ಬೆರಳು ಮುಚ್ಚಬಹುದು. ಎಡಗಡೆ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇಗಳು ಇವೆ. ಇದರಲ್ಲಿ ಎರಡು ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಹಿಂಭಾಗದಲ್ಲಿ ಮಧ್ಯಭಾಗದಲ್ಲಿ ಸ್ವಲ್ಪ ಮೇಲ್ಗಡೆ ಕ್ಯಾಮೆರಾ ಇದೆ. ಅದರ ಕೆಳಗೆ ಬೆರಳಚ್ಚು ಸ್ಕ್ಯಾನರ್ ಇದೆ. ಈ ಎಲ್ಲ ವಾಕ್ಯಗಳನ್ನು ಸ್ಯಾಮ್‌ಸಂಗ್ ಜೆ6 ಬಗ್ಗೆ ಬರೆದಿದ್ದೆ. ಇಲ್ಲೂ ಅದೇ ವಿನ್ಯಾಸ ಮತ್ತು ರಚನೆ ಇದೆ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸಕ್ಕೆ ಪೂರ್ತಿ ಮಾರ್ಕು ನೀಡಬಹುದು.

ಇದರಲ್ಲಿರುವುದು ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್. ಆದರೆ ಅದು ಸ್ವಲ್ಪ ಹಳೆಯದು ಹಾಗೂ ಕಡಿಮೆ ಶಕ್ತಿಯದ್ದು. ಇತರೆ ಹಲವು ಕಂಪನಿಗಳವರು ಈ ಪ್ರೊಸೆಸರ್ ಅನ್ನು 10 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳಲ್ಲಿ ಬಳಸುತ್ತಿದ್ದಾರೆ. ಅದೂ ಸುಮಾರು ಒಂದು ವರ್ಷದ ಹಿಂದೆಯೇ. ಇದರ ಅಂಟುಟು ಬೆಂಚ್‌ಮಾರ್ಕ್ ಕೇವಲ 35,428 ಇದೆ. ಅಂದರೆ ಕಡಿಮೆ ವೇಗದ್ದು ಎನ್ನಬಹುದು. ಕೆಲವು ಆಟಗಳನ್ನು ಮಾತ್ರ ತೃಪ್ತಿದಾಯಕವಾಗಿ ಆಡಬಹುದು. ಕಡಿಮೆ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನೂ ಆಡಬಹುದು. ಆದರೆ ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು ಆಡಲು ಈ ಫೋನ್ ಹೇಳೀದ್ದಲ್ಲ. ಹಲವು ಸಂದರ್ಭಗಳಲ್ಲಿ ಈ ಫೋನಿನ ಸಂವೇದನೆ ಸ್ವಲ್ಪ ನಿಧಾನ ಎನ್ನುವುದು ಅನುಭವಕ್ಕೆ ಬರುತ್ತದೆ. ವೇಗದ ಫೋನ್ ಬೇಕು ಎನ್ನುವವರಿಗೆ ಇದು ಹೇಳಿದ್ದಲ್ಲ.

13 ಮತ್ತು 5 ಮೆಗಾಪಿಕ್ಸೆಲ್‌ಗಳ ಎರಡು ಪ್ರಾಥಮಿಕ ಕ್ಯಾಮೆರಾಗಳಿವೆ. ಜೊತೆಗೆ ಎಲ್‌ಇಡಿ ಫ್ಲಾಶ್ ಇದೆ. ಇದರ ಕ್ಯಾಮೆರಾದ ಗುಣಮಟ್ಟ ನೀಡುವ ಹಣಕ್ಕೆ ಹೋಲಿಸಿದರೆ ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ ಎನ್ನಬಹುದು. ಕಡಿಮೆ ಬೆಲೆಯ ಹಲವು ಫೋನ್‌ಗಳಂತೆ ಇದು ಕೂಡ ಉತ್ತಮ ಬೆಳಕಿನಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ಅತಿ ಕಡಿಮೆ ಬೆಳಕಿನಲ್ಲಿ ಇದರ ಫಲಿತಾಂಶ ತೃಪ್ತಿದಾಯಕವಾಗಿಲ್ಲ. ಈ ಫೋನಿನಲ್ಲಿ ಅಪ್ಟಿಕಲ್ ಇಮೇಜ್ ಸ್ಟೆಬಿಲೈಜೇಶನ್‌ ಇಲ್ಲ. ಅಂದರೆ ವಿಡಿಯೊ ಚಿತ್ರೀಕರಣ ಮಾಡುವಾಗ ಫೋನ್ ಅಲುಗಾಡಬಾರದು. ಸ್ವಂತೀ ಫಲಿತಾಂಶ ಅಷ್ಟಕ್ಕಷ್ಟೆ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ಹೋಲಿಸಿದರೆ ಕ್ಯಾಮೆರಾಕ್ಕೆ ಪೂರ್ತಿ ಪಾಸು ಮಾರ್ಕು ನೀಡಲು ಮನಸ್ಸು ಬರುತ್ತಿಲ್ಲ.

ಇದರ ಆಡಿಯೊ ಇಂಜಿನ್ ಅಲ್ಲಿಂದಲ್ಲಿಗೆ ತೃಪ್ತಿದಾಯಕವಾಗಿದೆ ಎನ್ನಬಹುದು. ಇಯರ್‌ಬಡ್ ಅಲ್ಲ ಇಯರ್‌ಫೋನ್ ನೀಡಿದ್ದಾರೆ. ಇದರ ಗುಣಮಟ್ಟ ಕೂಡ ಅಲ್ಲಿಂದಲ್ಲಿಗೆ ತೃಪ್ತಿದಾಯಕವಾಗಿದೆ. ನಿಮ್ಮಲ್ಲಿ ಉತ್ತಮ ಹೆಡ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿದರೂ ಅತ್ಯುತ್ತಮ ಸಂಗೀತ ಆಲಿಸುವ ಅನುಭವ ಆಗುವುದಿಲ್ಲ. ಪರದೆಯ ಗುಣಮಟ್ಟ ಚೆನ್ನಾಗಿದೆ. ಹೈಡೆಫಿನಿಶನ್ ವಿಡಿಯೊ ಪ್ಲೇ ಆಗುತ್ತದೆ. ಅದರೆ 4k ವಿಡಿಯೊ ಪ್ಲೇ ಆಗುವುದಿಲ್ಲ. ಎಫ್‌ಎಂ ರೇಡಿಯೊ ನೀಡಿದ್ದಾರೆ.

ಇದರ ಬೆರಳಚ್ಚು ಸ್ಕ್ಯಾನರ್ ಆನ್/ಆಪ್ ಬಟನ್‌ನಲ್ಲೇ ಇದೆ. ಅದರ ಕೆಲಸ ತೃಪ್ತಿದಾಯಕವಾಗಿದೆ. ಮುಖವನ್ನೇ ಪತ್ತೆ ಹಚ್ಚಿ ಅದನ್ನೇ ಪಾಸ್‌ವರ್ಡ್ ಮಾಡಿಟ್ಟುಕೊಳ್ಳುವ ಸವಲತ್ತೂ ಇದೆ. ಬೆರಳಚ್ಚು ಮತ್ತು ಮುಖಚಹರೆ ಪತ್ತೆಹಚ್ಚುವಿಕೆ ಎರಡೂ ತೃಪ್ತಿದಾಯಕವಾಗಿ ಕೆಲಸ ಮಾಡುತ್ತವೆ. ಕನ್ನಡದ ತೋರುವಿಕೆ ಸರಿಯಾಗಿದೆ ಹಾಗೂ ಯೂಸರ್ ಇಂಟರ್‌ಫೇಸ್ ಇದೆ. ಅವರದೇ ಕೀಲಿಮಣೆ ಅಷ್ಟೇನೂ ಚೆನ್ನಾಗಿಲ್ಲ. ನೀವು ಜಸ್ಟ್‌ಕನ್ನಡ ಅಥವಾ ನಿಮಗಿಷ್ಟವಾದ ಯಾವುದಾದರೂ ಕೀಲಿಮಣೆ ಹಾಕಿಕೊಂಡರೆ ಉತ್ತಮ.

ಸ್ಯಾಮ್‌ಸಂಗ್‌ನವರು ತಮ್ಮದೇ ಕೆಲವು ಉಪಯುಕ್ತ ಕಿರುತಂತ್ರಾಂಶಗಳನ್ನು (ಆ್ಯಪ್) ಸೇರಿಸಿದ್ದಾರೆ. ನಡೆಯುವ, ಮೋಟರ್ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವ ಮೋಡ್‌ಗಳಿವೆ. ಇವು ನಿಜಕ್ಕೂ ಚೆನ್ನಾಗಿವೆ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ಆದರೆ ವೇಗವಾಗಿ ಚಾರ್ಜ್ ಮಾಡುವ ಸವಲತ್ತು ಇಲ್ಲ.

ಒಟ್ಟಿನಲ್ಲಿ ನೀಡುವ ಹಣಕ್ಕೆ ತೃಪ್ತಿ ನೀಡುವ ಫೋನ್ ಎನ್ನಲು ಮನಸ್ಸು ಪೂರ್ತಿ ಒಪ್ಪುತ್ತಿಲ್ಲ.

**

ವಾರದ ಆಪ್ (app)
ಈಜು ಕಲಿಯಿರಿ (Swimming Step by Step)

ಈಜು ಕಲಿಯಬೇಕಿದ್ದರೆ ಏನು ಮಾಡಬೇಕು? ನೀರಿಗೆ ಇಳಿಯಬೇಕು ಎನ್ನುತ್ತೀರಿ ತಾನೆ? ಇಳಿದ ನಂತರ ಏನು ಮಾಡಬೇಕು? ನಾವೆಲ್ಲ ಹಳ್ಳ, ಹೊಳೆಗಳಲ್ಲಿ ಅಡ್ಡಾದಿಡ್ಡಿ ಕಲಿತವರು. ಈಗಂತೂ ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಬೇಕು ಎನ್ನುವವರೇ ಜಾಸ್ತಿ. ಈಜನ್ನು ವ್ಯವಸ್ಥಿತವಾಗಿ ಕಲಿಯಬೇಕೇ? ಮೊದಲು ಏನು ಮಾಡಬೇಕು? ನಂತರ ಏನು ಮಾಡಬೇಕು? ಹಂತ ಹಂತವಾಗಿ ಕಲಿಯುವುದಾದರೆ ಏನೇನು ಹಂತಗಳಿವೆ? ಕಲಿಸುವ ವಿಡಿಯೊಗಳಿವೆಯೇ? ಇವುಗಳಿಗೆಲ್ಲ ಉತ್ತರ ರೂಪವಾಗಿ ಗೂಗ್ಲಲ್‌ ಪ್ಲೇ ಸ್ಟೋರಿನಲ್ಲಿ ಹಲವಾರು ಕಿರು ತಂತ್ರಾಂಶಗಳಿವೆ (ಆ್ಯಪ್‌). ಅಂತಹ ಒಂದು ಕಿರುತಂತ್ರಾಂಶ ಬೇಕಿದ್ದರೆ ನೀವು ಪ್ಲೇ ಸ್ಟೋರಿನಲ್ಲಿ Swimming Step by Step ಎಂದು ಹುಡುಕಬೇಕು ಅಥವಾ http://bit.ly/gadegtloka351 ಜಾಲತಾಣಕ್ಕೆ ಭೇಟಿ ನೀಡಬೇಕು. ನೆನಪಿಡಿ. ಯಾವ ಟ್ಯುಟೋರಿಯಲ್ ಓದಿದರೂ ನೀವು ನೀರಿಗಿಳಿದೇ ಈಜು ಕಲಿಯಬೇಕು!

ಗ್ಯಾಜೆಟ್ ಪದ: USB On-The-Go (OTG) = ಓಟಿಜಿ

ಯುಎಸ್‌ಬಿ ಓಟಿಜಿ ಅಥವಾ ಸರಳವಾಗಿ ಓಟಿಜಿ ಎಂಬುದು ಯುಎಸ್‌ಬಿ ಕಿಂಡಿ ಅಥವಾ ಸೂಕ್ತ ಓಟಿಜಿ ಕೇಬಲ್ ಮೂಲಕ ಯುಎಸ್‌ಬಿ ಡ್ರೈವ್‌ಗಳನ್ನು ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ಗಳಿಗೆ ಜೋಡಿಸುವ ವಿಧಾನ. ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಸಂಗ್ರಹ ಮೆಮೊರಿ ಸಾಲದಾಗ ಈ ವಿಧಾನದ ಮೂಲಕ ಅಧಿಕ ಸಂಗ್ರಹ ಪಡೆಯಬಹುದು. ನಿಮ್ಮಲ್ಲಿರುವ ಪೆನ್ ಡ್ರೈವ್ (ಥಂಬ್ ಡ್ರೈವ್) ಅರ್ಥಾತ್ ಯುಎಸ್‌ಬಿ ಸಂಗ್ರಹ ಡ್ರೈವ್ ಅನ್ನು ಈ ಮೂಲಕ ಸ್ಮಾರ್ಟ್‌ಫೋನಿಗೆ ಜೋಡಿಸಿ ಅದರಲ್ಲಿರುವ ಫೈಲುಗಳನ್ನು ಫೋನಿಗೆ ಪ್ರತಿ ಮಾಡಬಹುದು ಅಥವಾ ಫೋನಿನಿಂದ ಡ್ರೈವ್‌ಗೆ ನಕಲಿಸಬಹುದು. ಡ್ರೈವ್‌ನಲ್ಲಿರುವ ಹಾಡು, ಸಿನಿಮಾಗಳನ್ನು ಪ್ಲೇ ಮಾಡಬಹುದು.

**
ಗ್ಯಾಜೆಟ್ ತರ್ಲೆ: ದೊಡ್ಡ ಎಂಟರ್ ಕೀಲಿ

ಕೆಲವೊಮ್ಮೆ ಕಂಪ್ಯೂಟರ್ ಮೇಲೆ ಎಷ್ಟು ಸಿಟ್ಟು ಬಂದಿರುತ್ತೆಂದರೆ ಅದರ ಎಂಟರ್ ಕೀಲಿಯನ್ನು ಧಡ್ ಎಂದು ಗುದ್ದಿರುತ್ತೀರಿ. ಆದರೂ ನಿಮಗೆ ತೃಪ್ತಿಯಾಗಿಲ್ಲವೇ? ಹಾಗಿದ್ದರೆ ನಿಮಗಾಗಿ ದೊಡ್ಡ ಎಂಟರ್ ಕೀಲಿ (Enter key) ಬಂದಿದೆ. ಇದು ನಿಮ್ಮ ಮುಷ್ಟಿಯಷ್ಟೇ ಅಥವಾ ಇನ್ನೂ ಸ್ವಲ್ಪ ದೊಡ್ಡದಿದೆ. ಇದನ್ನು ಪ್ರತ್ಯೇಕ ಕೇಬಲ್ ಮೂಲಕ ಲ್ಯಾಪ್‌ಟಾಪ್ ಅಥವಾ ಗಣಕಕ್ಕೆ ಜೋಡಿಸಬಹುದು. ಇನ್ನು ತಡವೇಕೆ? ಅದನ್ನು ಕೊಳ್ಳಿ ಮತ್ತು ನಿಮ್ಮ ಎಲ್ಲ ಸಿಟ್ಟನ್ನು ಅದರ ಮೇಲೆ ತೋರಿಸಿ!

ಗ್ಯಾಜೆಟ್ ಸಲಹೆ

ಪ್ರತಾಪ ರೆಡ್ಡಿಯವರ ಪ್ರಶ್ನೆ: ನಾನು 2015ರಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರಾಂಡ್ ಮ್ಯಾಕ್ಸ್ ಫೋನನ್ನು ಕೊಂಡುಕೊಂಡಿದ್ದೆ. ಈಗ ಅದರ ಬ್ಯಾಟರಿ ಹಾಳಾಗಿದೆ. ಬ್ಯಾಟರಿ ಖರೀದಿಸಬೇಕೆ? ಅಥವಾ ಇನ್ನೊಂದು ಹೊಸ ಪೋನ್ ಖರೀದಿಸಬೇಕೆ? 

ಉ: ಸ್ಮಾರ್ಟ್‌ಫೋನ್‌ಗಳ (ಯಂತ್ರಾಂಶ ಮತ್ತು ತಂತ್ರಾಂಶ ಸೇರಿಸಿದರೆ) ಆಯಸ್ಸು ಮೂರು ವರ್ಷ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಂಡರೆ ನೀವು ಹೊಸ ಫೋನ್ ಖರೀದಿಸುವುದೇ ಉತ್ತಮ ಎಂದು ನನ್ನ ಅಭಿಪ್ರಾಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು