ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ14: ಬಜೆಟ್ ಶ್ರೇಣಿಯಲ್ಲಿ ಉತ್ತಮ ಬ್ಯಾಟರಿ, ಕಾರ್ಯಾಚರಣೆ

Published 6 ಮೇ 2023, 13:09 IST
Last Updated 6 ಮೇ 2023, 13:09 IST
ಅಕ್ಷರ ಗಾತ್ರ

ಯುವಜನರನ್ನೇ ಗುರಿಯಾಗಿರಿಸಿ ಮಾರುಕಟ್ಟೆಗೆ ಬಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ ಸರಣಿಯಲ್ಲಿ ಹೊಸದಾಗಿ ಬಂದಿರುವುದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ14 5ಜಿ ಸ್ಮಾರ್ಟ್‌ಫೋನ್. 5ಜಿ ಫೋನ್‌ಗಳ ಈ ಸ್ಫರ್ಧಾತ್ಮಕ ಕಾಲದಲ್ಲಿ ₹15 ಸಾವಿರದೊಳಗಿನ ಈ ಫೋನ್ ಪ್ರಜಾವಾಣಿಗೆ ರಿವ್ಯೂಗೆ ದೊರೆತಿದ್ದು, ಈ ಸಾಧನ ಹೇಗಿದೆ, ವೈಶಿಷ್ಟ್ಯಗಳೇನು? ಎಂಬ ಕುರಿತು ಒಂದಷ್ಟು ಒಳನೋಟಗಳು ಇಲ್ಲಿವೆ.

ವಿನ್ಯಾಸ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ14 ಸಾಮಾನ್ಯ ವಿನ್ಯಾಸ ಹೊಂದಿದೆಯಾದರೂ, ಇದರ ಪ್ರಧಾನ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಮೂರು ಲೆನ್ಸ್‌ಗಳನ್ನು ಅಳವಡಿಸಿರುವುದು ಪ್ರೀಮಿಯಂ ವೈಶಿಷ್ಟ್ಯದಂತೆ ಗೋಚರಿಸುತ್ತಿರುವುದು ವಿಶೇಷ. ಸ್ಯಾಮ್‌ಸಂಗ್ ಹೊರತರುತ್ತಿರುವ ಹೊಸ ಸ್ಮಾರ್ಟ್ ಫೋನ್‌ಗಳಲ್ಲೆಲ್ಲ ಈ ವಿನ್ಯಾಸವಿದೆ ಎಂಬುದು ಗಮನಿಸಬೇಕಾದ ಅಂಶ. ಗ್ಯಾಲಕ್ಸಿ ಎಂ14ರಲ್ಲಿ ಮುಂಭಾಗದ ಸ್ಕ್ರೀನ್‌ನ ಮಧ್ಯ ಮೇಲ್ಭಾಗದಲ್ಲಿ ಟಿಯರ್-ಡ್ರಾಪ್ ನಾಚ್ ಇದ್ದು, 13 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಸ್ಥಿತವಾಗಿದೆ. ಫೋನ್‌ನ ಮೇಲ್ಮೈ ಕೊಳೆ ನಿರೋಧಕವಲ್ಲ ಎಂಬುದು ಬಿಟ್ಟರೆ ಒಟ್ಟಾರೆ ವಿನ್ಯಾಸ ಆಕರ್ಷಕವಾಗಿದೆ.

6.6 ಇಂಚಿನ ಎಲ್‌ಸಿಡಿ ಎಫ್‌ಎಚ್‌ಡಿ ಪ್ಲಸ್ ರೆಸೊಲ್ಯುಶನ್ ಇರುವ ಸ್ಕ್ರೀನ್‌ನಲ್ಲಿ 90Hz ರಿಫ್ರೆಶ್ ರೇಟ್ ಸಾಮರ್ಥ್ಯವಿದೆ. ಹೀಗಾಗಿ, ಚಿತ್ರ-ವಿಡಿಯೊಗಳು, ಗೇಮ್‌ಗಳು ಉತ್ತಮವಾಗಿ ಪ್ರದರ್ಶನಗೊಳ್ಳುತ್ತವೆ, ವೇಗದ ನ್ಯಾವಿಗೇಶನ್ ಕೂಡ ಸಾಧ್ಯವಾಗುತ್ತದೆ. ಗೊರಿಲ್ಲಾ ಗಾಜಿನ ರಕ್ಷಣೆ ಇದೆ. ಡಿಸ್‌ಪ್ಲೇ ಸುತ್ತಲೂ ಬೆಝೆಲ್ (ಕಪ್ಪನೆಯ ಖಾಲಿ ಭಾಗ) ತುಸು ಹೆಚ್ಚಿದೆ ಅನಿಸುವುದರಿಂದ, ಪೂರ್ಣ ಪರದೆಯಲ್ಲಿ ಚಿತ್ರ, ವಿಡಿಯೊ ವೀಕ್ಷಣೆಗೆ ಅಡ್ಡಿಯಂತೆ ತೋರುತ್ತದೆ. ಸ್ಕ್ರೀನ್ ಕೆಳಭಾಗದಲ್ಲಿ ಯುಎಸ್‌ಬಿ ಟೈಪ್ ಸಿ ಪೋರ್ಟ್, ಒಂದು ಸ್ಪೀಕರ್ ಹಾಗೂ 3.5 ಮಿಮೀ ಆಡಿಯೋ ಜಾಕ್, ಪವರ್ ಬಟನ್‌ನಲ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಇದೆ. ಸಿಮ್ ಟ್ರೇಯಲ್ಲಿ ಎರಡು ಸಿಮ್ ಕಾರ್ಡ್ ಹಾಗೂ ಒಂದು ಮೈಕ್ರೋಎಸ್‌ಡಿ ಕಾರ್ಡ್ ಅಳವಡಿಸಬಹುದು. 9.4 ಮಿಮೀ ದಪ್ಪ ಇರುವ ಫೋನ್‌ನ ನಾಲ್ಕೂ ಮೂಲೆಗಳು ದುಂಡಗಿದ್ದು, ಒಟ್ಟಾರೆ ಫೋನ್ ಉತ್ತಮ ಗ್ರಿಪ್ ಹೊಂದಿದೆ.

ಬಿಸಿಲಿನಲ್ಲಿರುವಾಗಲೂ ಸ್ಕ್ರೀನ್ ಸರಿಯಾಗಿ ಕಾಣಿಸುವಂತಾಗಲು, ಸೆಟ್ಟಿಂಗ್ ಡಿಸ್‌ಪ್ಲೇ ಮೆನುವಿನಲ್ಲಿ, ಅಡಾಪ್ಟಿವ್ ಬ್ರೈಟ್‌ನೆಸ್ ವೈಶಿಷ್ಟ್ಯವನ್ನು ಆನ್ ಮಾಡಿಕೊಳ್ಳಬೇಕಾಗುತ್ತದೆ. ಡಿಸ್‌ಪ್ಲೇಯಲ್ಲಿ ಬಣ್ಣಗಳು ಸಹಜವಾಗಿ ಗೋಚರಿಸುತ್ತವೆ.

ಕಾರ್ಯಾಚರಣೆ

ಎಕ್ಸಿನೋಸ್ 1330 5nm ಪ್ರೊಸೆಸರ್ ಇರುವ, ಆಂಡ್ರಾಯ್ಡ್ 13 ಆಧಾರಿತ ಒನ್‌ಯುಐ5 ಆವೃತ್ತಿಯ ಕಾರ್ಯಾಚರಣೆ ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ14 5ಜಿ ಫೋನ್, ಗೇಮಿಂಗ್ ಪ್ರಿಯರಿಗೆ ಬಜೆಟ್ ದರದಲ್ಲಿ ಲಭ್ಯವಿರುವ ಉತ್ತಮ ಫೋನ್ ಅನಿಸುತ್ತದೆ. ರಿವ್ಯೂಗೆ ದೊರೆತಿದ್ದು 6ಜಿಬಿ/128 ಜಿಬಿ ಸಾಮರ್ಥ್ಯದ ಫೋನ್ ಆಗಿದ್ದು, RAM ಪ್ಲಸ್ ಎಂಬ ವೈಶಿಷ್ಟ್ಯದ ಮೂಲಕ 12ಜಿಬಿ ವರೆಗೆ RAM ಹೆಚ್ಚಿಸಬಹುದು. ಹೀಗಾಗಿ ಗೇಮಿಂಗ್ ಪ್ರಿಯರಿಗಿದು ಖುಷಿ ತರುವ ವಿಚಾರ. ವಿಳಂಬ (ಲೇಟೆನ್ಸಿ) ಸಮಸ್ಯೆಯನ್ನು ಇದು ತಡೆಯುತ್ತದೆ. ಮೈಕ್ರೋಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ 1ಟಿಬಿ ವರೆಗೂ ಹೆಚ್ಚಿಸಬಹುದು.

ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬ್ಯಾಟರಿ. 6000mAh ಸಾಮರ್ಥ್ಯದ ಬ್ಯಾಟರಿ ಇದ್ದು, ಬ್ಯಾಟರಿ ಬಾಳಿಕೆಗೆ ಎಕ್ಸಿನೋಸ್ ಪ್ರೊಸೆಸರ್ ಸೂಕ್ತ ಸಹಯೋಗ ನೀಡುವುದರಿಂದ, ಸಾಮಾನ್ಯ ಬಳಕೆಯಲ್ಲಿ ಎರಡು ದಿನಗಳಿಗೆ ಚಾರ್ಜ್ ಮಾಡುವ ಚಿಂತೆ ಇಲ್ಲ. 25W ಸೂಪರ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತಿದ್ದು, ಶೂನ್ಯದಿಂದ ಶೇ.100ರಷ್ಟು ಚಾರ್ಜ್ ಆಗಲು 1 ಗಂಟೆ 40 ನಿಮಿಷ ತೆಗೆದುಕೊಂಡಿತು. ಅರ್ಧ ಗಂಟೆಯಲ್ಲಿ ಶೇ.40ರಷ್ಟು ಜಾರ್ಜ್ ಆಗಿದೆ ಎಂಬುದು ಗಮನಾರ್ಹ.

ಎರಡು ವರ್ಷ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆ ಹಾಗೂ ನಾಲ್ಕು ವರ್ಷಗಳ ಸುರಕ್ಷತಾ ವ್ಯವಸ್ಥೆಯ ಅಪ್‌ಡೇಟ್‌ಗಳು ದೊರೆಯುತ್ತವೆ ಎಂದು ಸ್ಯಾಮ್‌ಸಂಗ್ ಹೇಳಿದೆ. ನಾಕ್ಸ್ (Knox) ಸುರಕ್ಷತಾ ವ್ಯವಸ್ಥೆಯಡಿ, ಫೋಲ್ಡರ್ ರಕ್ಷಣೆಗೆ ಅವಕಾಶವಿದೆ. ಅದೇ ರೀತಿ, ಯಾವೆಲ್ಲ ಆ್ಯಪ್‌ಗಳು ಫೋನ್‌ನಲ್ಲಿ ಯಾವೆಲ್ಲ ಅನುಮತಿಗಳನ್ನು ಪಡೆದುಕೊಂಡು ಕೆಲಸ ಮಾಡುತ್ತಿವೆ ಎಂಬುದನ್ನು ಡ್ಯಾಶ್‌ಬೋರ್ಡ್‌ನಲ್ಲಿ ನೋಡಬಹುದು. ಇದು ಪ್ರೈವೆಸಿ (ಖಾಸಗಿತನ) ಕುರಿತು ಕಾಳಜಿ ಇರುವವರಿಗೆ ಸೂಕ್ತ.

ಗಮನಿಸಿದ ಮತ್ತೊಂದು ಅಂಶವೆಂದರೆ, ವಾಯ್ಸ್ ಫೋಕಸ್ ವೈಶಿಷ್ಟ್ಯ. ಎಂದರೆ, ನಾವು ಗದ್ದಲದ ವಾತಾವರಣದಲ್ಲಿರುವಾಗ, ಯಾರ ಜೊತೆಗಾದರೂ ಮಾತನಾಡುತ್ತಿದ್ದರೆ, ಅವರಿಗೆ ನಮ್ಮ ಮಾತುಗಳು ಸ್ಪಷ್ಟವಾಗಿ ಕೇಳಿಸುವುದಿಲ್ಲ. ಈ ಸಂದರ್ಭದಲ್ಲಿ ನೆರವಿಗೆ ಬರುವುದು ವಾಯ್ಸ್ ಫೋಕಸ್. ಸುತ್ತಮುತ್ತಲಿನ ಧ್ವನಿಯನ್ನು ಫಿಲ್ಟರ್ ಮಾಡಿ, ದೂರವಾಣಿಯಲ್ಲಿ ಅತ್ತಕಡೆಯಿಂದ ಮಾತನಾಡುವವರಿಗೆ ನಮ್ಮ ಮಾತುಗಳನ್ನು ಸ್ಪಷ್ಟವಾಗಿ ಕೇಳಿಸುವಂತೆ ಮಾಡುವ ವೈಶಿಷ್ಟ್ಯವಿದು.

ಕ್ಯಾಮೆರಾ

ಹಿಂಭಾಗದ ಪ್ರಧಾನ ಕ್ಯಾಮೆರಾ ಮಾಡ್ಯೂಲ್‌ನಲ್ಲಿ 50 ಮೆಗಾಪಿಕ್ಸೆಲ್ ಲೆನ್ಸ್ ಇದ್ದು, ಇದನ್ನು ಸಕ್ರಿಯಗೊಳಿಸಿ ಫೋಟೊ, ವಿಡಿಯೊ ತೆಗೆದರೆ, ಗುಣಮಟ್ಟವೂ ಹೆಚ್ಚಿರುವುದರಿಂದ ಸ್ಟೋರೇಜ್ ಹೆಚ್ಚು ಬೇಕಾಗುತ್ತದೆ. ಇದನ್ನು ತೀರಾ ಅಗತ್ಯವೆಂದಾದರೆ ಬಳಸಿ, ಸ್ಟೋರೇಜ್ ಜಾಗ ಉಳಿತಾಯ ಮಾಡಬಹುದು. ಉಳಿದಂತೆ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಹಾಗೂ 2 ಮೆಗಾಪಿಕ್ಸೆಲ್‌ನ ಮ್ಯಾಕ್ರೊ ಸೆನ್ಸರ್ ಲೆನ್ಸ್‌ಗಳಿವೆ. ಒಳ್ಳೆಯ ಬೆಳಕಿರುವಲ್ಲಿ ಉತ್ತಮ ಮತ್ತು ಸ್ಪಷ್ಟವಾದ ಚಿತ್ರ, ವಿಡಿಯೊಗಳು ಸೆರೆಯಾಗಿವೆ. ಒಳಾಂಗಣದಲ್ಲಿ ಕೂಡ ಬೆಳಕು ತೀರಾ ಮಂದವಾಗಿದ್ದಾಗ ಮಾತ್ರವೇ ಗುಣಮಟ್ಟ ಕಡಿಮೆ ಇರುತ್ತದೆ. ಈಗಿನ ಯುವಕರ ವಿಡಿಯೊ, ಫೋಟೊ ಕ್ರೇಜ್‌ಗೆ ಇದು ಬಜೆಟ್ ವಿಭಾಗದಲ್ಲಿ ಉತ್ತಮ ಆಯ್ಕೆಯಾಗಬಲ್ಲುದು. 13 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾದಲ್ಲಿ ಬೊಕೆ (ಪೋರ್ಟ್ರೇಟ್) ವೈಶಿಷ್ಟ್ಯ ಚೆನ್ನಾಗಿದೆ. ಸೂಕ್ತ ಬೆಳಕಿರುವಲ್ಲಿ ಬಣ್ಣ ಮತ್ತು ಕಾಂಟ್ರಾಸ್ಟ್ ಉತ್ತಮವಾಗಿ ಮೂಡಿಬರುತ್ತವೆ. ತೀರಾ ಹತ್ತಿರದಿಂದ ಚಿತ್ರಗಳನ್ನು ಸೆರೆಹಿಡಿಯುವಲ್ಲಿ ಮ್ಯಾಕ್ರೊ ಲೆನ್ಸ್ ಉತ್ತಮ ಕೆಲಸ ಮಾಡುತ್ತದೆ.

ಒಟ್ಟಾರೆ ಹೇಗಿದೆ?

ಕ್ಯಾಮೆರಾ, ಬ್ಯಾಟರಿ ಮತ್ತು ಕಾರ್ಯಾಚರಣೆ ಕುರಿತು ₹15 ಸಾವಿರದೊಳಗಿನ ಈ ಮೊಬೈಲ್ ಫೋನ್ ಬಗ್ಗೆ ತೀರಾ ದೂರುವ ಅಂಶಗಳಿಲ್ಲ. ಆದರೂ ಮೊಬೈಲ್ ಜೊತೆಗೆ ಒಂದು ಜಾರ್ಜಿಂಗ್ ಅಡಾಪ್ಟರ್ ನೀಡಬೇಕಿತ್ತು ಎಂಬ ಬೇಡಿಕೆ ಇರುವುದು ಸುಳ್ಳಲ್ಲ. ಜೊತೆಗೆ ಅಲ್ಟ್ರಾವೈಡ್ ಲೆನ್ಸ್ ಇದ್ದಿದ್ದರೆ ಫೋಟೊಗ್ರಫಿ-ಪ್ರಿಯರಿಗೆ ಇಷ್ಟವಾಗಬಹುದಿತ್ತು. ಸಿಲ್ವರ್ ಹಾಗೂ ಬ್ಲೂ ಬಣ್ಣಗಳಲ್ಲಿ ಹಾಗೂ 128GB ಸ್ಟೋರೇಜ್‌ನ 4ಜಿಬಿ ಮತ್ತು 6ಜಿಬಿ - ಹೀಗೆ ಎರಡು ಮಾದರಿಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ14 5ಜಿ ದೊರೆಯುತ್ತಿದೆ. ಬೆಲೆ ಅನುಕ್ರಮವಾಗಿ ₹13,999 ಹಾಗೂ ₹14,999 (ಕೊಡುಗೆಗಳ ಹೊರತಾಗಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT