ಗುರುವಾರ , ಮಾರ್ಚ್ 30, 2023
24 °C

ದೇಶದ 12 ನಗರಗಳಲ್ಲಿ ನೈಟ್ರೋಜನ್ ಡೈಆಕ್ಸೈಡ್ ಹೆಚ್ಚಳ: ಬೆಂಗಳೂರಿನಲ್ಲಿ ಶೇ.90ರಷ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬೆಂಗಳೂರು ಸೇರಿದಂತೆ ದೇಶದ 12 ಪ್ರಮುಖ ನಗರಗಳಲ್ಲಿ ನೈಟ್ರೋಜನ್ ಡೈಆಕ್ಸೈಡ್(NO2) ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ ಎಂದು ಗ್ರೀನ್ ಪೀಸ್ ಇಂಡಿಯಾ ವರದಿ ತಿಳಿಸಿದೆ.

ವಾಯು ಮಾಲಿನ್ಯ ಸೇರಿದಂತೆ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ಹೆಚ್ಚಿರುವ ಬಹುತೇಕ ನಗರಗಳಲ್ಲಿ ಕೋವಿಡ್‌ ಸೋಂಕು ಹೆಚ್ಚಿರುವುದು ಆತಂತಕಕ್ಕೆ ಕಾರಣವಾಗಿದೆ.

ಗ್ರೀನ್‌ ಪೀಸ್‌ ಇಂಡಿಯಾ ಸಂಸ್ಥೆ ಪರಿಸರ ಕುರಿತಾಗಿ ಅಧ್ಯಯನ ಮಾಡುವ ಸಂಸ್ಥೆಯಾಗಿದೆ. ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಗ್ರೀನ್‌ ಪೀಸ್‌ ಅಧ್ಯಯನ ನಡೆಸುತ್ತಿದ್ದು, ಏಪ್ರಿಲ್ 2020ರಿಂದ ಏಪ್ರಿಲ್ 2021ರ ವರೆಗಿನ ದತ್ತಾಂಶಗಳ ಪ್ರಕಾರ ದೇಶದಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗುತ್ತಿರುವುದರ ಜತೆಗೆ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣವು ಹೆಚ್ಚುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬೆಂಗಳೂರಿನಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ಶೇ.90, ಚೆನೈನಲ್ಲಿ ಶೇ.94, ದೆಹಲಿಯಲ್ಲಿ ಶೇ.125, ಮುಂಬೈನಲ್ಲಿ ಶೇ.52, ಹೈದರಾಬಾದ್ನಲ್ಲಿ ಶೇ.69,  ಕೊಲ್ಕತ್ತಾದಲ್ಲಿ ಶೇ.11, ಜೈಪುರದಲ್ಲಿ ಶೇ.47, ಲಖನೌದಲ್ಲಿ ಶೇ.32 ರಷ್ಟು ಹೆಚ್ಚಿದೆ ಎಂದು ಸಮೀಕ್ಷೆ ವರದಿಯಲ್ಲಿ ಹೇಳಲಾಗಿದೆ.

ದೆಹಲಿ, ಬೆಂಗಳೂರು, ಚೆನ್ನೈನಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ಹೆಚ್ಚಿದ್ದರೇ, ಕೊಲ್ಕತ್ತಾ ಮತ್ತು ಲಖನೌದಲ್ಲಿ ಕಡಿಮೆ ಇದೆ ಎಂದು ವರದಿ ತಿಳಿಸಿದೆ.

ನೈಟ್ರೋಜನ್ ಡೈಆಕ್ಸೈಡ್ ಹೆಚ್ಚಲು ಕಾರಣ...

ದೇಶದಲ್ಲಿ ಕೋವಿಡ್‌ ಸೋಂಕಿನ ಪರಿಣಾಮ ಒಂದೆರಡು ತಿಂಗಳುಗಳು ಲಾಕ್‌ಡೌನ್‌ ಮಾಡಲಾಗಿದ್ದರೂ ಮಾಲಿನ್ಯ ಪ್ರಮಾಣ ಕಡಿಮೆಯಾಗಿಲ್ಲ. ಹಾಗೇ ಗಾಳಿಯಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ಹೆಚ್ಚಾಗಿ ಸೇರುತ್ತಿರುವುದು ಪರಿಸರ ತಜ್ಞರ ಆತಂತಕಕ್ಕೆ ಕಾರಣವಾಗಿದೆ.

ವಾಹನಗಳು, ಕೈಗಾರಿಕೆ ಹಾಗೂ ವಿದ್ಯುತ್‌ (ಕಲ್ಲಿದ್ದಲು)ತಯಾರಿಕ ಘಟಕಗಳಲ್ಲಿನ ಹೊಗೆಯೇ ನೈಟ್ರೋಜನ್ ಡೈಆಕ್ಸೈಡ್ ಹೆಚ್ಚಳವಾಗಲು ಕಾರಣ ಎಂದು ಗ್ರೀನ್‌ ಪೀಸ್‌ ಇಂಡಿಯಾ ಸಂಸ್ಥೆ ತಿಳಿಸಿದೆ.

ನೈಟ್ರೋಜನ್ ಡೈಆಕ್ಸೈಡ್‌ನ ಪರಿಣಾಮಗಳು...

ಗಾಳಿಯಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ಹೆಚ್ಚಾಗಿ ಸೇರುವುದರಿಂದ ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರಲ್ಲಿ ಉಸಿರಾಟ ಸಮಸ್ಯೆ ಕಾಡುತ್ತದೆ. ನೈಟ್ರೋಜನ್ ಡೈಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ದೇಹ ಸೇರಿದರೆ ಶ್ವಾಸಕೋಶ ತೀವ್ರವಾಗಿ ಹಾನಿಗೊಳಗಾಗುತ್ತದೆ. ಹಾಗೇ ರಕ್ತದ ಮೂಲಕ ಮೆದುಳು ಸೇರುವ ನೈಟ್ರೋಜನ್ ಡೈಆಕ್ಸೈಡ್ ಮೆದುಳು ಕ್ಯಾನ್ಸರ್‌ಗೂ ಕಾರಣವಾಗಲಿದೆ ಎಂದು ಗ್ರೀನ್‌ ಪೀಸ್‌ ಇಂಡಿಯಾ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು