ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Aditya L1 Launch: 14.85 ಕೋಟಿ ಕಿ.ಮೀ. ದೂರದಿಂದಲೇ ಸೂರ್ಯದರ್ಶನ !

Published 1 ಸೆಪ್ಟೆಂಬರ್ 2023, 7:09 IST
Last Updated 1 ಸೆಪ್ಟೆಂಬರ್ 2023, 7:09 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಮೊದಲ ಸೂರ್ಯ ಅಧ್ಯಯನ ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಜ್ಜಾಗುತ್ತಿದ್ದು, ಸೆ. 2ರಂದು ಭಾಸ್ಕರನ ಅಧ್ಯಯನಕ್ಕೆ ಸಿದ್ಧಗೊಂಡ ಉಪಗ್ರಹ ಹೊತ್ತು ಎಕ್ಸ್‌ಎಲ್‌–ಪಿಎಸ್‌ಎಲ್‌ವಿ ರಾಕೇಟ್‌ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿದೆ.

ಅಲ್ಲಿಂದ 120 ದಿನಗಳ ನಂತರ ಅಂದರೆ 2024ರ ಜನವರಿಯಲ್ಲಿ ಬಾಹ್ಯಾಕಾಶದ ನಿರ್ವಾತ ಕಕ್ಷೆಯಲ್ಲಿರುವ ಎಲ್‌1, ಎಲ್‌2 ಹಾಗೂ ಎಲ್‌3 ಎಂಬ ಕಕ್ಷೆಯಲ್ಲಿ ಆದಿತ್ಯ–ಎಲ್‌1 ಮೊದಲ ಕಕ್ಷೆಯನ್ನು ತಲುಪಲಿದೆ. ಈ ಎಲ್‌–1 ಕಕ್ಷೆಯು ಭೂಮಿ ಹಾಗೂ ಸೂರ್ಯನ ನಡುವೆ ಇರುವ ಕಾಲ್ಪನಿಕ ಗೆರೆಯಾಗಿದೆ. ಇದು ಭೂಮಿಯಿಂದ 15 ಲಕ್ಷ ಕಿಲೋ ಮೀಟರ್ ದೂರದಲ್ಲಿದೆ.

ಆದಿತ್ಯ–ಎಲ್1 ಯಶಸ್ಸಿಗಾಗಿ ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಅವರು ಆಂಧ್ರಪ್ರದೇಶದ ಸೂಳ್ಳೂರುಪೇಟದಲ್ಲಿರುವ ಚಂಗಾಲಮ್ಮ ಪರಮೇಶ್ವರಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಆದಿತ್ಯ ಎಲ್‌1 ಅನ್ನು ಲ್ಯಾಗ್ರಾಂಜ್ ಬಿಂದುವಿನಲ್ಲಿಡುತ್ತಿರುವುದೇಕೆ?

ಬೃಹತ್‌ ವಸ್ತುವಿನ ಗುರುತ್ವಾಕ್ಷಣ ಶಕ್ತಿಯನ್ನೇ ಬಳಸಿಕೊಂಡು ಬಾಹ್ಯಾಕಾಶ ನೌಕೆಯು ಸಂಚರಿಸಲಿದೆ. ಇದರಿಂದ ಇಂಧನವನ್ನು ಉಳಿಸಲು ಹೆಚ್ಚು ಅನುಕೂಲವಾಗಲಿದೆ. ಜತೆಗೆ ನಿರ್ದಿಷ್ಟ ಸ್ಥಳದಲ್ಲಿರುವಂತೆ ಮಾಡುವಲ್ಲೂ ಸಾಧ್ಯವಾಗಲಿದೆ. ಹೀಗಾಗಿ ಆದಿತ್ಯ–ಎಲ್‌1 ಅನ್ನು ಎಲ್‌1 ಸುತ್ತಲಿನ ನಿರ್ವಾತ ಕಕ್ಷೆಯಲ್ಲಿ ಇರಿಸಲಾಗುತ್ತದೆ. ಇದರಿಂದ ಯೋಜನೆಯುದ್ದಕ್ಕೂ ಸೂರ್ಯನನ್ನು ಯಾವುದೇ ಅಡೆತಡೆ ಇಲ್ಲದೆ ವೀಕ್ಷಿಸಬಹುದು. ಏಕೆಂದರೆ ಯಾವುದೇ ಗ್ರಹಣ ಅಥವಾ ನಿಗೂಢತೆಗಳು ಸಂಭವಿಸುವುದಿಲ್ಲ.

ಗ್ರಹಗಳ ಬೆಳಕು ಇನ್ನಿತರ ಬಾಹ್ಯಾಕಾಶ ವಸ್ತುವಿನಿಂದ ಸಂಪೂರ್ಣ ಅಡಚಣೆಗೆ ಒಳಗಾಗುತ್ತದೆ. ಸೂರ್ಯಗ್ರಹಣದಲ್ಲಿ, ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬರುತ್ತಾನೆ. ಹಾಗೆಯೇ ಚಂದ್ರಗ್ರಹಣ ಸಂದರ್ಭದಲ್ಲಿ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ. ಹೀಗಾಗಿ ಎಲ್ಲಾ ಸಂಪೂರ್ಣ ಗ್ರಹಣಗಳು ಒಂದು ವಸ್ತುವನ್ನು ಮರೆಮಾಚುವಿಕೆಯೇ ಆದರೆ, ಎಲ್ಲಾ ಮರೆಮಾಚುವಿಕೆಗಳೂ ಗ್ರಹಣಗಳಲ್ಲ ಎಂಬುದನ್ನು ಖಗೋಳ ವಿಜ್ಞಾನಿಗಳು ಹೇಳುತ್ತಾರೆ.

ಲ್ಯಾಗ್ರಾಂಜ್ ಬಿಂದುವು ಗ್ರಹಣಗಳು ಅಥವಾ ನಿಗೂಢತೆಗಳನ್ನು ಹೊಂದಿರದ ಕಾರಣ, ಆದಿತ್ಯ ಎಲ್‌1 ಯಾವುದೇ ಅಡೆತಡೆಗಳಿಲ್ಲದೆ ಐದು ವರ್ಷಗಳ ಕಾಲ ನಿರಂತರವಾಗಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವ ಸಾಮರ್ಥ್ಯ ಹೊಂದಿದೆ.

ಉಪಗ್ರಹವನ್ನು 15 ಲಕ್ಷ ಕಿ.ಮೀ. ದೂರದಲ್ಲಿಡುವ ಮಹತ್ವವೇನು?

ಸೂರ್ಯ ಮತ್ತು ಭೂಮಿಯ ನಡುವಿನ ಅಂತರವು ಸುಮಾರು 15 ಕೋಟಿ ಕಿಲೋ ಮೀಟರ್ ಅಂತರವಿದೆ. ಹಾಗೆಯೇ ಆದಿತ್ಯ –ಎಲ್‌1 ಸೇರುವ ಕಕ್ಷೆಗೂ ಮತ್ತು ಭೂಮಿ ನಡುವಿನ ಅಂತರ 15 ಲಕ್ಷ ಕಿ.ಮೀ.ರಷ್ಟಿದೆ. ಈ ಲ್ಯಾಗ್ರಾಂಜ್ ಬಿಂದುವನ್ನು ಆಯ್ಕೆ ಮಾಡಿರುವ ಇಸ್ರೊ, ಆ ಮೂಲಕ ಸೂರ್ಯನ ನಿರಂತರ ವೀಕ್ಷಣೆಗೆ ಅನುಕೂಲವಾಗುವಂತೆ ಯೋಜನೆ ರೂಪಿಸಿದೆ. ಆದಿತ್ಯ–ಎಲ್1 ಇರುವ ಕಕ್ಷೆಯಿಂದ ಸೂರ್ಯ ನಡುವಿನ ಅಂತರ 14.85 ಕೋಟಿ ಕಿ.ಮೀ.ಯಾಗಿದೆ.

ಎಲ್‌1 ನ ಎರಡನೇ ಪ್ರಯೋಜನವೇನೆಂದರೆ ಅದು ಭೂಮಿ ಮತ್ತು ಸೂರ್ಯನ ನಡುವಿನ ವಿಶಿಷ್ಟವಾದ ಗುರುತ್ವಾಕರ್ಷಣೆಯ ಸಮತೋಲನವನ್ನು ನೀಡುತ್ತದೆ. ಭೂಮಿ ಹಾಗೂ ಸೂರ್ಯನ ಗುರುತ್ವಾಕ್ಷಣೆಯ ಬಲಗಳು ಪರಸ್ಪರ ಶೂನ್ಯವಾಗುವ ಕೇಂದ್ರವಿದು. ಆದಿತ್ಯ–ಎಲ್‌1 ಕಡಿಮೆ ಖರ್ಚಿನಲ್ಲಿ ಸಿದ್ಧಗೊಂಡಿದ್ದರಿಂದ ಗುರುತ್ವಾಕರ್ಷಣ ಬಲದಿಂದಲೇ ಸ್ಥಿರ ಸ್ಥಾನವನ್ನು ಕಾಪಾಡಿಕೊಳ್ಳಲು ಈ ಬಿಂದು ನೆರವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Aditya L1 Launch: 14.85 ಕೋಟಿ ಕಿ.ಮೀ. ದೂರದಿಂದಲೇ ಸೂರ್ಯದರ್ಶನ !

ಇಸ್ರೊ ಎಕ್ಸ್‌ ಚಿತ್ರ

ಸೂರ್ಯನಿಂದ ಆದಿತ್ಯ–ಎಲ್‌1 ಅಂತರವು ಬಾಹ್ಯಾಕಾಶ ನೌಕೆ ಮತ್ತು ಭೂಮಿ ನಡುವಿನ ಅಂತರಕ್ಕೆ ಹೋಲಿಸಿದರೆ ಸಾಕಷ್ಟು ದೂರದಲ್ಲಿದೆ. ಇದರ ಹೊರತಾಗಿಯೂ ಆದಿತ್ಯ-ಎಲ್‌1 ನ ಸುಧಾರಿತ ಉಪಕರಣಗಳು ಸೂರ್ಯನಿಂದ ಹೊರಸೂಸುವ ವಿಕಿರಣಗಳು, ನೇರಳಾತೀತ ಮತ್ತು ಕ್ಷ–ಕಿರಣ ತರಂಗಾಂತರಗಳಲ್ಲಿನ ವಿಕಿರಣಗಳನ್ನು ಅಧ್ಯಯನ ನಡೆಸುವ ಉಪಕರಣಗಳನ್ನು ಹೊಂದಿದೆ. ಸೂರ್ಯನ ವಾತಾವರಣದ ವಿವಿಧ ಪದರಗಳು ಮತ್ತು ಅವುಗಳಲ್ಲಿನ ಸಂಕೀರ್ಣ ಪ್ರಕ್ರಿಯೆಗಳ ಒಳನೋಟಗಳ ಮಾಹಿತಿ ಪಡೆಯಲು ಅನುವು ಮಾಡಿಕೊಡುತ್ತದೆ.

ಸೂರ್ಯನಿಂದ ಹೊರಸೂಸಲ್ಪಟ್ಟ ಹೆಚ್ಚಿನ ಶಕ್ತಿಯ ಕಣಗಳಲ್ಲಿ ಪ್ರೊಟಾನ್‌ ಮತ್ತು ಎಲೆಕ್ಟ್ರಾನ್‌ಗಳು ಇವೆ. ಇವುಗಳೇ ಸೂರ್ಯನ ಅಧ್ಯಯನಕ್ಕೆ ಅಗತ್ಯವಿರುವ ಮಾಹಿತಿ ನೀಡಲಿವೆ. ಇದರಿಂದ ಸೃಷ್ಟಿಯ ರಹಸ್ಯ ಅರಿಯುವ ಮಾಹಿತಿಯ ಜತೆಗೆ ಹವಾಮಾನ ಬದಲಾವಣೆ ಕುರಿತ ಮಾಹಿತಿಯನ್ನೂ ತಿಳಿಯಲೂ ಸಾಧ್ಯವಿದೆ ಎಂದೆನ್ನಲಾಗಿದೆ.

ನೌಕೆಯು ಏನೇನನ್ನು ಹೊತ್ತೊಯ್ಯಲಿದೆ?

ಆದಿತ್ಯ–ಎಲ್‌1 ಒಟ್ಟು ಏಳು ಪೇಲೋಡ್‌ಗಳನ್ನು ಹೊತ್ತು ಸಾಗಲಿದೆ. ಇದರಲ್ಲಿ ಎರಡು ಬಗೆ ಇವೆ. ದೂರಸಂವೇದಿಯ ನಾಲ್ಕು ಉಪಕರಣಗಳು ಹಾಗೂ ಉಳಿದವು ಇನ್‌–ಸಿಟು ಪೇಲೋಡ್‌ ಆಗಿವೆ.

ದೂರಸಂವೇದಿ ಸಾಧನಗಳಲ್ಲಿ ವಿಸಿಬಲ್ ಎಮಿಷನ್ ಲೈನ್ ಕೊರೊನೊಗ್ರಫಿ, ಸೂರ್ಯನ ಅತಿನೇರಳೆ ಕಿರಣಗಳ ವಿಶ್ಲೇಷಿಸುವ ದೂರದರ್ಶಕ, ಕಡಿಮೆ ಸಾಮರ್ಥ್ಯದ ಕ್ಷ–ಕಿರಣ ಸ್ಪೆಕ್ಟ್ರೋಮೀಟರ್‌, ಹೆಚ್ಚಿನ ಸಾಮರ್ಥ್ಯದ ಕ್ಷ–ಕಿರಣ ಸಾಧನಗಳು ಇರಲಿವೆ. ಇನ್‌–ಸೈಟು ಪೇಲೋಡ್ಸ್‌ನಲ್ಲಿ ಸೂರ್ಯನ ವಲಯದ ಗಾಳಿಯ ಕಣಗಳನ್ನು ಪ್ರಯೋಗಕ್ಕೆ ಒಳಪಡಿಸುವ ಸಾಧನ, ಪ್ಲಾಸ್ಮಾ ವಿಶ್ಲೇಷಕ ಹಾಗೂ ಅತ್ಯಾಧುನಿಕ ಟ್ರೈ ಆಕ್ಸೈಲ್‌ ಹೈ ರೆಸಲೂಷನ್‌ ಡಿಜಿಟಲ್ ಮ್ಯಾಗ್ನೊಮೀಟರ್‌ಗಳನ್ನು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT