ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಾ ಬೊಗಸೆ ಮಣ್ಣಿಗಾಗಿ...

Last Updated 20 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಇದು ಸುಮಾರು ಹತ್ತರಿಂದ ಹನ್ನೆರಡು ಸಾವಿರ ಕೋಟಿ ಖರ್ಚುಮಾಡಿ ‘ಮಣ್ಣು’ ತರುವ ಮಹತ್ವಾಕಾಂಕ್ಷಿ ಯೋಜನೆ! ಲೋಡ್‌ಗಟ್ಟಲೇ ಅಲ್ಲ; ಬರಿ ಕೆಲವೇ ಕೆಲವು ಗ್ರಾಂ ಮಾತ್ರ! ಆದರೆ, ಆ ಮಣ್ಣು - ಕೋಟಿ ಕೋಟಿ ಕಿ.ಮೀ ದೂರದ ಮಂಗಳ ಗ್ರಹದ್ದು. ಕಣ ಕಣವೂ ಮಂಗಳ ಗ್ರಹದ ಚರಿತ್ರೆಯನ್ನು ಬಿಡಿಸಿ ಹೇಳಬಹುದು ಎನ್ನುವ ನಿರೀಕ್ಷೆ. ಅನ್ಯ ಗ್ರಹವೊಂದರಿಂದ ದ್ರವ್ಯರಾಶಿ ತರುವ ಈ ಮೊದಲ ಪ್ರಯತ್ನವೇ ಮಾರ್ಸ್ -2020 ಯೋಜನೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಈ ಅತಿ ದುಬಾರಿಯ ಅಭಿಯಾನ ಯಶಸ್ವಿಯಾದರೆ 2031ರ ಮೊದಲು ಮಂಗಳನ ಹೊನ್ನಿನಂತಹ ಮಣ್ಣ ಕಣಗಳನ್ನು ಭೂಮಿಯಲ್ಲಿ ಕಾಣುವ ಸೌಭಾಗ್ಯ ನಮ್ಮದು. ಜುಲೈ 2020ರ ಅಂತ್ಯದಲ್ಲಿ ಉಪಗ್ರಹ ನೌಕೆಯನ್ನು ಸ್ವಸ್ತಿವಾಚನ ಹೇಳಿ ಮಂಗಳನೆಡೆಗೆ ಕಳುಹಿಸಲಾಗಿತ್ತು. ನೌಕೆಯು ಮೊನ್ನೆಯಷ್ಟೇ (ಫೆ. 18) ಮನುಕುಲದ ರಾಯಭಾರಿಯಾಗಿ ಮಂಗಳನ ಅಂಗಳದಲ್ಲಿ ಇಳಿದಿದೆ.
2021ರ ಫೆಬ್ರುವರಿ ಮೂರನೇ ವಾರದಲ್ಲಿ ಮನುಕುಲದ ರಾಯಭಾರಿಯಾಗಿ ನೌಕೆ ಮಂಗಳಗ್ರಹದ ನೆಲವನ್ನು ಸ್ಪರ್ಶಿಸುವ ಸಾಧ್ಯತೆ ಇದೆ.

ಮಾರ್ಸ್ - 2020 ಯೋಜನೆಯಲ್ಲಿ ಅತ್ಯಾಧುನಿಕ ಪ್ರಯೋಗಾಲಯವಿರುವ ‘ಪೆರ್ಸಿವರೆನ್ಸ್’ ಹೆಸರಿನ ರೋವರ್ ಮತ್ತು ‘ಇಂಜೆನಿಯುಟಿ’ ಹೆಸರಿನ ಸಣ್ಣ ಹೆಲಿಕಾಪ್ಟರ್ ಇವೆ. ರೋವರ್ ಗಾತ್ರದಲ್ಲಿ ಸುಮಾರಾಗಿ ದೊಡ್ಡ ಜೀಪಿನಷ್ಟಿದೆ. ಗ್ರಹದ ಮೇಲೆ ಚಲಿಸಲು, ಮಾದರಿಗಳನ್ನು ಸಂಗ್ರಹಿಸಲು ರೋವರ್ ಅನ್ನು ಬಳಸಲಾಗುವುದು. ಪ್ರಮುಖ ವೈಜ್ಞಾನಿಕ ಉಪಕರಣಗಳನ್ನು ಹೊಂದಿದ್ದು ಎಲ್ಲಾ ಮಹತ್ವದ ಸಂಶೋಧನೆಗಳು ನಡೆಯುವುದು ಇಲ್ಲಿಯೇ. ಪ್ರಯೋಗಾರ್ಥವಾಗಿ ಒಂದು ಸಣ್ಣ ಹೆಲಿಕಾಪ್ಟರ್ ಅನ್ನು ಮೊದಲ ಬಾರಿ ಕಳುಹಿಸಲಾಗಿದೆ. ಅತ್ಯಂತ ತೆಳುವಾದ ವಾತಾವರಣದ ಪದರ ಹೊಂದಿರುವ ಮಂಗಳ ಗ್ರಹದಲ್ಲಿ ಹೆಲಿಕಾಪ್ಟರ್ ಪ್ರಯೋಗ ಯಶಸ್ವಿಯಾದರೆ ಮುಂದಿನ ಯೋಜನೆಗಳಲ್ಲಿ (ರಸ್ತೆಗಳಿಲ್ಲದ!) ಆ ಗ್ರಹದೊಳಗಿನ ಓಡಾಟಕ್ಕೆ ಹೆಲಿಕಾಪ್ಟರ್‌ ಅನ್ನೇ ಪ್ರಮುಖ ವಾಹನವಾಗಿ ಬಳಸಲು ಚಿಂತಿಸಲಾಗಿದೆ.

ಇದು ಮೂರು ಅಭಿಯಾನಗಳ ಒಂದು ದಶಕದ ಕಾಲಾವಧಿಯ ದೀರ್ಘಕಾಲದ ಯೋಜನೆ. ಮೊದಲ ಭಾಗ ಮಾರ್ಸ್- 2020 ಅಭಿಯಾನ. ಈ ಅಭಿಯಾನದಲ್ಲಿ ಮಂಗಳ ಗ್ರಹದ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷಿಸಲಾಗುವುದು. ವಿಶೇಷವೆನಿಸಿದರೆ ಅಂತಹ ಮಾದರಿಗಳನ್ನು ಭೂಮಿಯಲ್ಲಿ, ಅತ್ಯುನ್ನತ ತಂತ್ರಜ್ಞಾನ ಬಳಸಿ ಹೆಚ್ಚಿನ ಸಂಶೋಧನೆ ನಡೆಸಲು ಜೋಪಾನವಾಗಿ ಶೇಖರಿಸಿಡಲಾಗುವುದು. ಎಲ್ಲಾ ಯೋಜಿತ ಪ್ರಯೋಗಗಳು ಮುಗಿಯುವ ವೇಳೆಗೆ ಮತ್ತೊಂದು ರೋವರ್‌ ಅನ್ನು ಭೂಮಿಯಿಂದ ಮಂಗಳ ಗ್ರಹಕ್ಕೆ ಕಳುಹಿಸಲಾಗುವುದು. ಎರಡನೇ ಅಭಿಯಾನದಲ್ಲಿ ಜೋಪಾನವಾಗಿಟ್ಟ ಮಾದರಿಗಳನ್ನು ಮಂಗಳ ಗ್ರಹದ ಕಕ್ಷೆಗೆ ತರಲಾಗುವುದು ಮತ್ತು ಮೂರನೇ ಅಭಿಯಾನದಲ್ಲಿ ಮಂಗಳ ಗ್ರಹದ ಕಕ್ಷೆಯಿಂದ ಸುರಕ್ಷಿತವಾಗಿ ಮಣ್ಣ ಕಣಗಳನ್ನು ಭೂಮಿಗೆ ರವಾನಿಸಲಾಗುವುದು.

ಮಾರ್ಸ್ 2020 - ಮಂಗಳನೆಡೆಗಿನ ಮೊದಲ ಯೋಜನೆಯೇನಲ್ಲ. 1960ರಿಂದ ಆರಂಭವಾಗಿ ಸುದೀರ್ಘ 60 ವರ್ಷಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಉಪಗ್ರಹಗಳನ್ನು ಮಂಗಳನೆಡೆಗೆ ಹಾರಿ ಬಿಡಲಾಗಿದೆ. 2013ರ ನಮ್ಮ ಹೆಮ್ಮೆಯ ಭಾರತದ ಮಂಗಳಯಾನವನ್ನು ಒಳಗೊಂಡಂತೆ ಹಲವು ಉಪಗ್ರಹ ನೌಕೆಗಳು ಆಗಲೇ ಮಂಗಳ ಗ್ರಹವನ್ನು ಕೂಲಂಕಷವಾಗಿ ಅಭ್ಯಸಿಸಿ ವೈಜ್ಞಾನಿಕ ಮಾಹಿತಿಯ ಕಣಜವನ್ನು ಶ್ರೀಮಂತಗೊಳಿಸಿವೆ. ಮಂಗಳ ಗ್ರಹವನ್ನು ಸುತ್ತುತ್ತಿರುವ ಉಪಗ್ರಹಗಳು ರವಾನಿಸಿದ ಚಿತ್ರಗಳಿಂದ ಸಂಪೂರ್ಣ ನಕ್ಷೆ - ಜೊತೆಗೆ ಆ ಗ್ರಹದ ಇಂಚಿಂಚೂ ಮಾಹಿತಿ ಲಭ್ಯವಿದೆ. ಹೀಗಿರುವಾಗ ಮತ್ತೆ ಮತ್ತೆ ಮಂಗಳ ಗ್ರಹ ಸೂಜಿಗಲ್ಲಿನಂತೆ ಸೆಳೆಯುತ್ತಿರುವುದೆಂದರೆ ಮತ್ತೇನೋ ವಿಶೇಷ ಇರಲೇಬೇಕಲ್ಲವೇ?

ಮಂಗಳ ಗ್ರಹದ ಉಪಗ್ರಹ ಚಿತ್ರಗಳನ್ನು ಗಮನಿಸಿದರೆ ನಮ್ಮ ಭೂಗ್ರಹದ ಮರುಭೂಮಿ ಪ್ರದೇಶವನ್ನೋ ಇಲ್ಲವೇ ಯಾವುದೋ ಬರಡು ಬಂಜರು ಭೂಮಿಯನ್ನೋ ನೋಡಿದಂತಾಗುವುದು. ಹಾಗಿದ್ದರೆ ಮಂಗಳಗ್ರಹದಲ್ಲಿ ಜೀವಿಗಳಿವೆಯೇ? ಜೀವಿಗಳನ್ನು ಸಲಹುವಂತಹ ವಾತಾವರಣವೇನಾದರೂ ಇದೆಯೇ? ನಿರಂತರ ಸಂಶೋಧನೆಗಳಿಂದ ಇಂದು ಸ್ಪಷ್ಟವಾಗಿ ಈ ಎಲ್ಲಾ ಪ್ರಶ್ನೆಗಳಿಗೆ ‘ಇಲ್ಲ’ ಎನ್ನುವ ಉತ್ತರ ನಮ್ಮಲ್ಲಿದೆ. ಆದರೆ, ಈಗ ಖಚಿತತೆ ಇಲ್ಲದೆ ನಾವು ಹುಡುಕುತ್ತಿರುವುದು, ಈ ಹೊತ್ತು ನಮ್ಮನ್ನು ಕಾಡುತ್ತಿರುವುದು ಪೂರ್ವದಲ್ಲಿ ಯಾವುದಾದರೂ ರೂಪದಲ್ಲಿ ಅ ಗ್ರಹದಲ್ಲಿ ಜೀವಿಗಳಿದ್ದವೇ ಎಂಬುದನ್ನು.

ಶ್ರೇಷ್ಠ ಖಾದ್ಯದ ಘಮಘಮಿಸುವ ಪರಿಮಳವನ್ನು ಆಘ್ರಾಣಿಸಿದ ಮೇಲೆ ರುಚಿಯನ್ನು ತವಕಿಸಿ ಆಸ್ವಾದಿಸಲು ಹಾತೊರೆಯುವುದು ಮನುಷ್ಯ ಸಹಜವಲ್ಲವೇ? ಉಪಗ್ರಹ ಅಧಾರಿತ ಚಿತ್ರಗಳಲ್ಲಿ ಮಂಗಳ ಗ್ರಹದ ಮೇಲ್ಮೈ ಮೇಲೆ ನೈಸರ್ಗಿಕವಾಗಿ ಮೂಡಿರುವ ನಾಲೆ - ಕಾಲುವೆಯಂತಹ ರಚನೆಗಳನ್ನು ಗಮನಿಸಿದರೆ ನದಿಯೊಂದು ಬಹುಹಿಂದೆ ಹರಿದಿತ್ತು ಎಂಬುದು ಸುಸ್ಪಷ್ಟ. ನದಿ ಪಾತ್ರದ ಸನಿಹದಲ್ಲಿರುವ ದೊಡ್ಡ ಗುಂಡಿಯಲ್ಲಿ ಕಾಣಸಿಗುವ ಭೌಗೋಳಿಕ ಪದರಗಳನ್ನು ಉಪಗ್ರಹ ಚಿತ್ರಗಳ ಮೂಲಕ ಗಮನಿಸಿದರೆ, ನದಿಯ ದ್ರಾವಣ ಕಾಲುವೆಯ ಎಲ್ಲೆಯನ್ನು ಮೀರಿ ಉಕ್ಕಿ ಹರಿದು ಈ ಗುಂಡಿಯನ್ನು ತುಂಬಿ ಸರೋವರವೊಂದರ ರಚನೆಯಾಗಿತ್ತು ಎಂಬುದು ತಜ್ಞರ ಅಭಿಪ್ರಾಯ. ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಈ ದೊಡ್ಡ ಗುಂಡಿಯ ಉತ್ತರ ಮತ್ತು ಪಶ್ಚಿಮ ದಿಕ್ಕಿನ ನಡುವೆ ಹರಿಯುವ ನದಿಯಿಂದ ಮಾತ್ರ ರಚಿಸಲು ಸಾಧ್ಯವಿರುವ ಮುಖಜ ಭೂಮಿಯೊಂದು ಸಹ ಉಪಗ್ರಹ ಚಿತ್ರಗಳಲ್ಲಿ ಕಂಡು ಬಂದಿದೆ.

ಸಹಜವಾಗಿ ಮೂಡುವ ಪ್ರಶ್ನೆ ಆ ನದಿಯಲ್ಲಿ ಹರಿದ ದ್ರಾವಣವಾದರೂ ಯಾವುದು? ನೀರೇ? ಉಪಗ್ರಹಗಳು ಕಂಡಂತೆ - ಈ ಮುಖಜ ಭೂಮಿಯಲ್ಲಿರುವುದು ಜೇಡಿ ಮಣ್ಣು! ನೀರಿಲ್ಲದೆ ಜೇಡಿಮಣ್ಣಿನ ರಚನೆ ಸಾಧ್ಯವಿಲ್ಲ. ಹೀಗೆಂದ ಮೇಲೆ ನದಿಯಲ್ಲಿ ಹರಿದ ಆ ದ್ರಾವಣ ನೀರು ಮಾತ್ರವೇ ಆಗಿರಲು ಸಾಧ್ಯ. ನೀರೆಂದ ಮೇಲೆ ಜೀವಿಗಳು ಇರಬಹುದಾದ ಸಾಧ್ಯತೆಯೂ ದಟ್ಟ ಅಲ್ಲವೇ? ಇಷ್ಟೆಲ್ಲಾ ಮಾಹಿತಿ ನೀಡಿ ಉಪಗ್ರಹ ಚಿತ್ರಗಳು ಕುತೂಹಲವನ್ನು ನೂರ್ಮಡಿ ಹೆಚ್ಚಿಸಿದ ಮೇಲೆ ಸುಮ್ಮನಿರಲು ಮನುಷ್ಯನಿಗೆ ಸಾಧ್ಯವೇ? ಸ್ವತಃ ಹೋಗಿ ಪರೀಕ್ಷಿಸಬೇಕೆನಿಸುವ ಉತ್ಕಟ ಇಚ್ಛೆ ಚಿಗುರೊಡೆಯುವುದು ಸಹಜವಲ್ಲವೇ? ಅದಕ್ಕಾಗಿಯೇ ರೂಪುಗೊಂಡಿರುವುದು ಮಾರ್ಸ್ - 2020 ಯೋಜನೆ. ನೌಕೆಯನ್ನು ಇಳಿಸಬೇಕೆಂದಿರುವ, ಕೂತೂಹಲಗಳ ಆಗರವಾಗಿರುವ ಈ ಸ್ಥಳವೇ ಸುಮಾರು 45 ಕಿ.ಮೀ ವ್ಯಾಪಿಸಿರುವ ಒಂದು ದೊಡ್ಡ ಗುಂಡಿ - ಜೆಝೆರೊ ಗುಂಡಿ.

ಜೆಝೆರೊ ಗುಂಡಿಯಲ್ಲಿ ಕಂಡಂತಹ ಜೇಡಿಮಣ್ಣನ್ನು ಹೋಲುವಂತಹ ಮಣ್ಣನ್ನು ಅಮೆರಿಕದ ಮಿಸ್ಸಿಸಿಪ್ಪಿ ನದಿಯ ಮುಖಜ ಭೂಮಿಯಲ್ಲೂ ಭೂವಿಜ್ಞಾನಿಗಳು ಕಂಡಿದ್ದಾರೆ. ಮಿಸ್ಸಿಸಿಪ್ಪಿ ನದಿಯ ಜೇಡಿಮಣ್ಣಿನ ಮುಖಜ ಭೂಮಿಯ ಕಲ್ಲುಗಳಲ್ಲಿ, ಕಲ್ಲಿನ ಭಾಗವಾಗಿಯೇ ಇರುವಂತಹ ಸೂಕ್ಷ್ಮ ಜೀವಿಗಳನ್ನು ಸಹ ಗುರುತಿಸಲಾಗಿದೆ. ಬಹಳಷ್ಟು ಹೋಲಿಕೆಗಳಿರುವುದರಿಂದ ಮಂಗಳಗ್ರಹದ ಜೆಝೆರೊ ಗುಂಡಿಯ ಮುಖಜ ಭೂಮಿಯ ಕಲ್ಲುಗಳಲ್ಲೂ ಸೂಕ್ಷ್ಮ ಜೀವಿಗಳು ಎಂದೋ ಗತಕಾಲದಲ್ಲಿ ಇದ್ದಿರಬಹುದಾದ ಕುರುಹು ಸಿಗಬಹುದೇನೋ ಎಂಬುದು ಎಲ್ಲರ ನಿರೀಕ್ಷೆ.

ಈ ಮೊದಲು ಮಂಗಳ ಗ್ರಹಕ್ಕೆ ಕಳುಹಿಸಿದ ವಿವಿಧ ಬಗೆಯ ವಿಶೇಷ ವೈಜ್ಞಾನಿಕ ಉಪಕರಣಗಳಿರುವ ಸ್ಪಿರಿಟ್, ಆಪರ್ಚುನಿಟಿ, ಕ್ಯೂರಿಯಾಸಿಟಿ - 3 – ರೋವರ್‌ಗಳು ಮಂಗಳನ ಅಂಗಳದಲ್ಲಿ ಆಗಲೇ ಸಂಶೋಧನೆಯ ಕಾರ್ಯವನ್ನು ನಿರ್ವಹಿಸುತ್ತಿವೆ. ಮತ್ತೆ ಈ ಯೋಜನೆ 3ರ ನಂತರ ನಾಲ್ಕನೆಯದೇ? ಖಂಡಿತಾ ಅಲ್ಲ! ಪೆರ್ಸಿವರೆನ್ಸ್‌ ರೋವರ್‌ನ ಒಡಲಿನಲ್ಲಿ - ಮಂಗಳ ಗ್ರಹದ ಮಾದರಿಗಳನ್ನು ಸಂಗ್ರಹಿಸಲು ಮತ್ತು ವರ್ಷಗಳ ಕಾಲ ಕಾಣದ ನೆಲದಲ್ಲಿ ಯಾವುದೇ ಬಗೆಯ ಬಾಹ್ಯ ಬಲಗಳ ಪ್ರಭಾವ ಬೀಳದಂತೆ, ಮಾದರಿಯನ್ನು ಮೂಲರೂಪದಲ್ಲಿಯೇ ಅಚ್ಚಳಿಯದಂತೆ ಜೋಪಾನವಾಗಿ ಶೇಖರಿಸಲು ಅತ್ಯುನ್ನತ ತಂತ್ರಜ್ಞಾನದಿಂದ ಕೂಡಿದ ಅಸಾಧಾರಣ ವ್ಯವಸ್ಥೆಯೊಂದಿದೆ. ಇದೇ ಈ ಯೋಜನೆಯನ್ನು ವಿಭಿನ್ನವಾಗಿರಿಸಿರುವುದು.

ಪ್ರಯೋಗಾಲಯಗಳಲ್ಲಿ ಬಳಸುವಂತಹ ಪ್ರಣಾಳಗಳನ್ನು ಹೋಲುವಂತಹ, ಆದರೆ ಗಾಜಿನ ಬದಲು ದುಬಾರಿ ಟೈಟಾನಿಯಮ್‌ನಿಂದ ನಿರ್ಮಿಸಲಾದ 43 ವಿಶೇಷ ಪ್ರಣಾಳಗಳನ್ನು ಈ ಯೋಜನೆಗೆ ಬಳಸಲಾಗಿದೆ. 43 ರಲ್ಲಿ 38 ಪ್ರಣಾಳಗಳನ್ನು ಅಲ್ಲಿಯ ಕಲ್ಲು, ಮಣ್ಣು, ದೂಳಿನ ಮಾದರಿಗಳನ್ನು ಸಂಗ್ರಹಿಸಲು ಬಳಸಲಾಗುವುದು. ಉಳಿದ ಐದನ್ನು - ಮಾದರಿ ಸಂಗ್ರಹಿಸಿದ ಜಾಗದ ವಾತಾವರಣವನ್ನು ದಾಖಲಿಸಲು ಸಹಕಾರಿಯಾಗುವಂತೆ, ಅಗತ್ಯ ವಸ್ತುಗಳನ್ನು ತುಂಬಿ ರೂಪಿಸಲಾಗಿದೆ.

ಹುಡುಕುತ್ತಿರುವುದು ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳಿಗಾಗಿ. ಅದು ಮಂಗಳ ಗ್ರಹದಲ್ಲಿ. ಯೋಜನೆ ಯಶಸ್ವಿಯಾಗಿ ಏನಾದರೂ ಸೂಕ್ಷ್ಮ ಜೀವಿಗಳು ದೊರೆತರೆ ಅವು ಮಂಗಳ ಗ್ರಹದ್ದೇ ಎಂದು ಖಚಿತವಾಗಿ ಹೇಳುವುದು ಹೇಗೆ? ಬಲು ಜಟಿಲವಾದ ಪ್ರಶ್ನೆ. ಸೂಕ್ಷ್ಮ ಜೀವಿಗಳು ಭೂಮಿಯಲ್ಲಿ ಸರ್ವಾಂತರ್ಯಾಮಿ. ಅವು ಇಲ್ಲದ ಜಾಗವೇ ಇಲ್ಲ. ಉಪಗ್ರಹದ ಮೇಲೂ, ಉಪಕರಣಗಳ ಮೇಲೂ, ಅಷ್ಟೇ ಏಕೆ, ಪ್ರಣಾಳಗಳಲ್ಲಿ ಮೊದಲೇ ಸೂಕ್ಷ್ಮ ಜೀವಿಗಳಿದ್ದು, ಅವೇ ಮಂಗಳ ಗ್ರಹಕ್ಕೆ ಹೋಗಿ ಅಲ್ಲಿನ ಮಾದರಿಗಳ ಜೊತೆ ಸೇರಿ ಪುನಃ ಭೂಮಿಗೆ ಮರಳಿದರೆ ಸಂಪೂರ್ಣ ಯೋಜನೆ ವಿಫಲವಾದಂತೆಯೇ ಸರಿ. ಅಲ್ಲವೇ? ತಿಳಿಯುವುದು ಹೇಗೆ? ಕಬ್ಬಿಣದ ಕಡಲೆ!

ಮೊದಲು ಪರಿಶುದ್ಧತೆಯಲ್ಲಿ ಅತೀ ಪರಿಶುದ್ಧ! 24 ಕ್ಯಾರೆಟ್ ಚಿನ್ನಕ್ಕಿಂತಲೂ 1000 ಪಾಲು ಶುದ್ಧವಿರುವ ಪ್ರಣಾಳಗಳು ಬೇಕು. ಸಾಮಾನ್ಯವಾಗಿ ಸ್ವಚ್ಛಗೊಳಿಸಿದ ನಂತರವೂ ನಮ್ಮ ಹೆಬ್ಬೆರಳಿನಲ್ಲಿ 45,000 ನ್ಯಾನೊ ಗ್ರಾಮ್‌ನಷ್ಟು ಜೈವಿಕ ಕಣಗಳು ಇರುತ್ತವೆಯಂತೆ. ಇವುಗಳನ್ನು ಬೇರ್ಪಡಿಸುವುದು ಅತಿ ಸಂಕೀರ್ಣವಾದ ಕೆಲಸ. ಕೈ ತೊಳೆದರೆ ಸಾಲದು!

ಈ ಯೋಜನೆಗೆ ಒಂದು ಪ್ರಣಾಳದಲ್ಲಿನ ಜೈವಿಕ ಕಣಗಳ ಸಂಖ್ಯೆಯನ್ನು 150 ನ್ಯಾನೊ ಗ್ರಾಮ್ ಅಥವಾ ಅದಕ್ಕಿಂತ ಕೆಳಗಿನ ಸಂಖ್ಯೆಗೆ ತರಬೇಕು. ಇದಕ್ಕೆಂದು ಪರಿಶುದ್ಧತೆಯ ಹೊಸ ಭಾಷೆಯನ್ನು ನಾಸಾ ವಿಜ್ಞಾನಿಗಳು ಬರೆದಿದ್ದಾರೆ. ಅವರ ಪ್ರಕಾರ ಈ ಯೋಜನೆಗೆ ಬಳಸಿರುವ ಒಂದು ಪ್ರಣಾಳ ಎಲ್ಲಾ ಸ್ವಚ್ಛತಾ ಹಂತಗಳನ್ನು ದಾಟಿ ಯೋಗ್ಯವೆನಿಸುವಷ್ಟರಲ್ಲಿ ಕಡಿಮೆ ಎಂದರೂ 250 ಪುಟಗಳಷ್ಟು ಮಾಹಿತಿ ರಚಿತವಾಗುವುದಂತೆ. ಅಷ್ಟೊಂದು ಸ್ವಚ್ಛತಾ ಕಾರ್ಯಗಳು ಮತ್ತು ಸಂಬಂಧಿತ ಪರೀಕ್ಷೆಗಳು!

ಪ್ರಣಾಳಗಳನ್ನೇನೋ ಶುಭ್ರಗೊಳಿಸಬಹುದು. ಆದರೆ ಇತರೆ ಉಪಕರಣ, ಸಂಪೂರ್ಣ ಉಪಗ್ರಹವನ್ನು? ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಮೇಲೆ ಹೇಳಿದ 5 ವಿಶೇಷ ಪ್ರಣಾಳಗಳು ಉಪಯೋಗಕ್ಕೆ ಬರುವವು. ಏನಾದರೂ ಭೂಮಿಯ ಜೈವಿಕ ಕಣಗಳು ಮಾದರಿ ಸಂಗ್ರಹಿಸುವ ಪೂರ್ವದಲ್ಲಿ ಕಂಡು ಬಂದರೆ ಅವುಗಳನ್ನು ದಾಖಲಿಸಿ ತಪ್ಪು ತಿಳಿವಳಿಕೆ ಮೂಡದಂತೆ ತಡೆಯುವವು, ಎಚ್ಚರಿಸುವವು.

ಎಲ್ಲ ಹಂತಗಳನ್ನು ದಾಟಿ ಕೊರೊನಾ ವಕ್ರದೃಷ್ಟಿಯ ನಡುವೆಯೂ ನಿಗದಿಯಂತೆ ಸಾಗಿ ಮಾರ್ಸ್ 2020 ಉಪಗ್ರಹ ಮಂಗಳನ ಅಂಗಳವನ್ನು ತಲುಪಿದೆ. ಮಾದರಿಗಳನ್ನು ಸಂಗ್ರಹಿಸುವುದು ಮತ್ತು ಭೂಮಿಗೆ ಮರಳಿ ತರುವುದು ಮುಖ್ಯ ಉದ್ದೇಶವಾದರೂ, ಇತರೆ ವೈಜ್ಞಾನಿಕ ಉಪಕರಣಗಳಾದ PIXL, RIMFAX, MEDA, MOXIE, MASTCAM-Z, SHERLOC ಅನ್ನು ಸಹ ವಿವಿಧ ಬಗೆಯ ಸಂಶೋಧನೆಗಳಿಗೆಂದು ಜೊತೆಗೆ ಹೊತ್ತೈದಿದೆ. ಇವುಗಳಿಂದ ಒದಗುವ ಮಾಹಿತಿ ಭವಿಷ್ಯದ ಮಂಗಳ ಗ್ರಹದ ಯೋಜನೆಗಳಿಗೆ ದಾರಿ ದೀಪವಾಗುವುದರಲ್ಲಿ ಎರಡು ಮಾತಿಲ್ಲ. ಬಾಹ್ಯಾಕಾಶ ಕ್ಷೇತ್ರದಲ್ಲಿ ತಪ್ಪಿಗೆ ಅವಕಾಶವಿಲ್ಲ. ಸಣ್ಣ ಅಜಾಗರೂಕತೆಯೂ ಭಾರಿಯಾಗಿ ಸಂಭವಿಸುವುದು. ಸಣ್ಣ ಲೋಪದಿಂದ ವೈಫಲ್ಯ ಕಂಡರೆ - ತಜ್ಞರ ದಶಕಗಳ ಪರಿಶ್ರಮಕ್ಕೆ ತಣ್ಣೀರು ಎರಚಿದಂತಾಗುವುದು. ದೀರ್ಘಕಾಲದ ಈ ಯೋಜನೆ ಸಫಲವಾಗಲಿ, ಸಂಗ್ರಹಿಸಿದ ಮಾದರಿಗಳು ಭೂಮಿಯನ್ನು ತಲುಪಲಿ. ಹೆಚ್ಚಿನ ವೈಜ್ಞಾನಿಕ ಮಾಹಿತಿ ಹೊರಬರಲಿ. ಸಫಲತೆಯ, ಸಂತೃಪ್ತಿಯ ನಗೆ ಮೂಡಲಿ ಎಂಬುದೇ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT