ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚೀತೆ ಬ್ಯಾಟರಿಗಳ ಬಾಳ ಭಾಗ್ಯ?

durable batteries
Last Updated 31 ಜನವರಿ 2023, 20:30 IST
ಅಕ್ಷರ ಗಾತ್ರ

ಪರಿಸರ ಮಾಲಿನ್ಯದ ಬಗ್ಗೆ ಪ್ರತಿದಿನವೂ ಒಂದಿಲ್ಲೊಂದು ಕಡೆ ಓದುತ್ತೇವೆ, ಕೇಳುತ್ತೇವೆ, ಮಾತಾಡುತ್ತೇವೆ. ಪ್ರಸಕ್ತ ಪರಿಸ್ಥಿತಿಯಲ್ಲಿ, ಮಾಹಿತಿಯ ಕೊರತೆ ಯಾರಿಗೂ ಇಲ್ಲ. ಆದರೆ ಜ್ಞಾನದ, ಅನುಷ್ಠಾನದ ಕೊರತೆ ಎದ್ದುಕಾಣುತ್ತಿದೆ. ಪರಿಸರ ಮಾಲಿನ್ಯ ಎಂದಾಕ್ಷಣ ಪ್ಲಾಸ್ಟಿಕ್‌ನ ವಿಷಯ ಬರಲೇಬೇಕಲ್ಲ!

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ಭಾರತದಲ್ಲಿ ಪ್ರತಿವರ್ಷ ಪ್ಲಾಸ್ಟಿಕ್‌ ತ್ಯಾಜ್ಯದ ಪ್ರಮಾಣವು ಶೇ 3ರಷ್ಟು ಏರಿಕೆಯಾಗುತ್ತಿದೆಯಂತೆ. ಆದರೆ, ಇದನ್ನೂ ಮೀರಿ ಏರಿಕೆಯಾಗುತ್ತಿರುವುದು ಯಾವುದರಲ್ಲಿ ಗೊತ್ತೇ? ಇ-ವೇಸ್ಟ್‌ ಅಥವಾ ವಿದ್ಯುನ್ಮಾನ (ಎಲೆಕ್ಟ್ರಾನಿಕ್‌) ತ್ಯಾಜ್ಯದಲ್ಲಿ. ನಮ್ಮ ದೇಶದಲ್ಲಿ ವಾರ್ಷಿಕವಾಗಿ ವಿದ್ಯುನ್ಮಾನ ತ್ಯಾಜ್ಯದ ಪ್ರಮಾಣದಲ್ಲಿ ಶೇ 31ರಷ್ಟು ಏರಿಕೆ ಕಂಡುಬರುತ್ತಿದೆಯಂತೆ! ಅಬ್ಬ!! ಊಹಿಸಿಕೊಂಡರೂ ಭಯವಾಗುತ್ತದೆ. ಆದರೆ, ಇದು ಅಚ್ಚರಿಯ ಫಲಿತಾಂಶವೇನಲ್ಲ. ತಿಂಗಳಿಗೊಂದು ಫೋನು ಬದಲಾಯಿಸುವವರ, ಮನೆಯಲ್ಲಿ ಎಲ್ಲಕ್ಕೂ ರಿಮೋಟು ಬೇಕೆನ್ನುವವರ, ಇತರ ವಸ್ತುಗಳಾಗಲೀ, ವಿದ್ಯುನ್ಮಾನ ಸಾಧನವಾಗಲೀ ಬಳಸಿ ಬಿಸಾಡುವ ಸಂಸ್ಕೃತಿ ಬೆಳೆಸಿಕೊಂಡ ತಲೆಮಾರಿನ ಅನಿವಾರ್ಯ ಕರ್ಮವಿದು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು, ಸ್ವಯಂಸೇವಾ ಸಂಸ್ಥೆಗಳು, ಸರ್ಕಾರೇತರ ಪರಿಸರ ಸಂಸ್ಥೆಗಳು ಅನೇಕ ಕಾರ್ಯಕ್ರಮಗಳ, ಯೋಜನೆಗಳ ಮೂಲಕ ಜನಸಾಮಾನ್ಯರಲ್ಲಿ ಇ-ವೇಸ್ಟಿನ ಬಗ್ಗೆ ಅರಿವು ಮೂಡಿಸುವ ಕೆಲಸಗಳನ್ನು ಮಾಡುತ್ತಲೇ ಇದ್ದಾರೆ. ಆದರೆ, ನಿಜವಾಗಿಯೂ ಅರಿವು ಮೂಡಿದ್ದರೆ, ಸಾವಿರಾರು ಟನ್‌ಗಳಷ್ಟು ಬ್ಯಾಟರಿಗಳು ಭೂಮಿಯ ಒಡಲನ್ನು ಸೇರುತ್ತಿರಲಿಲ್ಲ; ಜಗತ್ತಿನ ಮೂರು ಅತಿಹೆಚ್ಚು ಇ-ತ್ಯಾಜ್ಯ ಉತ್ಪಾದಕ ದೇಶಗಳಲ್ಲಿ ಚೀನಾ, ಅಮೆರಿಕಾದ ಜೊತೆಗೆ ನಾವೂ ಸೇರಿದ್ದೇವೆ. ವಿದ್ಯುನ್ಮಾನ ತ್ಯಾಜ್ಯವು ಭೂಮಿಯ ಒಡಲನ್ನು ಸೇರಬಾರದೆಂದರೆ, ಅದನ್ನು ಮರುಬಳಕೆ ಮಾಡಬೇಕು ತಾನೆ? ನಿಜವೇ! ಆದರೆ, ಅದಕ್ಕೂ ಸಿಕ್ಕಾಪಟ್ಟೆ ಖರ್ಚಾಗುತ್ತದಲ್ಲ ಸ್ವಾಮಿ? ಹಣ ಮಾತ್ರವಲ್ಲ ಅಪಾರ ಪ್ರಮಾಣದ ಶಕ್ತಿಯೂ ಬೇಕಲ್ಲ! ಸರಿ, ಹಾಗಾದರೆ, ಇ–ತ್ಯಾಜ್ಯವನ್ನು ಬಿಸಾಡುವುದೇ ಬೇಡ ಎಂದರೆ? ಅಯ್ಯೋ! ಬಿಸಾಡದೇ ಇದ್ದರೆ, ಇ-ತ್ಯಾಜ್ಯದ ಪರ್ವತವೇ ಸೃಷ್ಟಿಯಾಗುತ್ತಲ್ಲ! ಅದೂ, ವರ್ಷಕ್ಕೆ ಶೇ 31ರಷ್ಟು ಬೆಳೆಯುವ ಪರ್ವತ ಬೇರೆ! ಎಂದು ಯೋಚಿಸುತ್ತಿದ್ದೀರಾ? ನಮ್ಮ ವಿಜ್ಞಾನಿಗಳು ಇದಕ್ಕೂ ಉತ್ತರ ಕಂಡುಕೊಂಡಿದ್ದಾರೆ.

ಗಡಿಯಾರ, ರಿಮೋಟ್‌ಗಳು, ಲ್ಯಾಪ್ಟಾಪ್‌, ಫೋನ್‌ನಂತಹ ಸಾಧನಗಳಲ್ಲಿ ಬಳಸುವ ಬ್ಯಾಟರಿಗಳ ಆಯುಷ್ಯವನ್ನು ಹೆಚ್ಚಿಸುತ್ತಿದ್ದಾರೆ ಸಂಶೋಧಕರು. ಅದೇನು, ಒಂದೆರಡು ವರ್ಷಗಳಲ್ಲ, ರೀಚಾರ್ಜ್‌ ಮಾಡಿ ಬಳಸುವ ಬ್ಯಾಟರಿಗಳ ಬಗ್ಗೆಯೂ ಇಲ್ಲಿ ಮಾತಾಡುತ್ತಿಲ್ಲ. ಬ್ಯಾಟರಿಯ ಬಾಳಿಕೆಯನ್ನು ಹೆಚ್ಚಿಸುವ ಬಗ್ಗೆ ಮತ್ತು ಅವು ಇ-ತ್ಯಾಜ್ಯವಾಗಿ ಮರುಬಳಕೆ ಕೇಂದ್ರ ಅಥವಾ ಕಸದ ರಾಶಿ ಸೇರುವುದನ್ನು ತಡೆಗಟ್ಟುವ ಬಗ್ಗೆ ಜಗತ್ತಿನ ಅನೇಕ ಪ್ರಯೋಗಾಲಯಗಳಲ್ಲಿ ಭೌತರಸಾಯನವಿಜ್ಞಾನಿಗಳು, ತಂತ್ರಜ್ಞಾನ ತಜ್ಞರು ಕಾರ್ಯನಿರತರಾಗಿದ್ದಾರೆ. ಅದೇ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದ ಆಸ್ಟ್ರೇಲಿಯಾದ ಸಂಶೋಧಕ ಲೆಸ್ಲಿ ಯಿಯೋ ಮತ್ತು ತಂಡದವರು ಒಂದು ವಿನೂತನ ಪ್ರಯೋಗ ಮಾಡಿ ಯಶಸ್ಸನ್ನು ಕಂಡಿದ್ದಾರೆ. ಇವರು ಬ್ಯಾಟರಿಗಳನ್ನು ದೀರ್ಘಾಯುಷಿ ಮಾಡುತ್ತಿಲ್ಲ, ಬ್ಯಾಟರಿಗಳನ್ನು ಅಮರವಾಗಿಸುತ್ತಿದ್ದಾರೆ. ಅದು ಹೇಗೆ ಸಾಧ್ಯ? ಅಂದರೆ, ಒಮ್ಮೆ ಕೊಂಡುಕೊಂಡ ಬ್ಯಾಟರಿ ಜೀವಮಾನಪರ್ಯಂತ ಸಾಕೇ ಎಂದಿರಾ? ಈ ತಜ್ಞರ ಪ್ರಕಾರ, ಹೌದು. ಸಾಮಾನ್ಯ ಬ್ಯಾಟರಿಗಳಲ್ಲಿ ಬಳಕೆಯಾಗುವ ಪ್ರಬಲ ಆಮ್ಲ(ಆಸಿಡ್‌) ಅಥವಾ ಕ್ಷಾರ(ಆಲ್ಕಲಿ)ದಂತಹ ರಾಸಾಯನಿಕಗಳಿವೆಯಲ್ಲ? ಅವು ಕಾಲಕ್ರಮೇಣ, ಬ್ಯಾಟರಿಗಳಲ್ಲಿನ ಲೋಹಗಳೊಂದಿಗೆ ರಾಸಾಯಾನಿಕ ಪ್ರಕ್ರಿಯೆ ನಡೆಸಿ, ಅವುಗಳು ಕಿಲುಬು ಹಿಡಿಯುವಂತೆ, ಅವುಗಳ ಮೂಲ ಗುಣವಿಶೇಷಗಳನ್ನು ಕಳೆದುಕೊಂಡು ಸೋರುವಂತೆ ಮಾಡುತ್ತವೆ. ಹಳೆಯ ಟ್ರಾನ್ಸಿಸ್ಟರ್‌ ರೇಡಿಯೋಗಳನ್ನೋ, ಗಡಿಯಾರದ ಹಿಂಬದಿಯನ್ನೋ ತೆರೆದು ನೋಡಿದ್ದರೆ ಕಂದುಬಣ್ಣದ ದ್ರವವು ಹೊರಬಂದ ಬ್ಯಾಟರಿಗಳನ್ನು ನೀವು ನೋಡಿರಬಹುದು. ಅಥವಾ, ಮರೆತು ಕಪಾಟಿನ ಮೂಲೆ ಸೇರಿ, ಮತ್ತೆಂದೋ ಸಿಕ್ಕ ಸೆಲ್‌ನ ಸುತ್ತ ಸೋರಿದ ಕಂದುಬಣ್ಣದ ದ್ರವವನ್ನು ಕಂಡಿರಬಹುದು. ಇದು ಸಾಮಾನ್ಯವಾಗಿ ಎಲ್ಲಾ ಬ್ಯಾಟರಿಗಳೂ ಒಂದಿಲ್ಲೊಂದು ದಿನ ಅನುಭವಿಸುವ ಸಮಸ್ಯೆಯೇ. ಇದರಿಂದಲೇ ಅವುಗಳ ಆಯುಷ್ಯ ನೀಗಿ, ಅವು ಮರುಬಳಕೆಯ ಕೇಂದ್ರಕ್ಕೋ, ಕಸದ ರಾಶಿಗೋ ಹೋಗುತ್ತವೆ. ಇದನ್ನು ತಡೆಯಲು ಈಗಾಗಲೇ ಅನೇಕ ರಾಸಾಯನಿಕ ಕ್ರಮಗಳಿವೆ. ಈ ತುಕ್ಕು ಹಿಡಿಯುವಂತಹ ರಾಸಾಯನಿಕ ಪ್ರಕ್ರಿಯೆಯನ್ನು ತಪ್ಪಿಸಲು ತುಕ್ಕು-ನಿರೋಧಕ ಗ್ರೀಸ್‌ ಮತ್ತು ದ್ರಾವಣಗಳು ದೊರೆಯುತ್ತವೆ. ನಮ್ಮ ಆರೋಗ್ಯಕ್ಕೆ ಮಾತ್ರ ಮನೆಮದ್ದು ಸಾಕೇ? ನಮ್ಮ ಬ್ಯಾಟರಿಗಳ ಆರೋಗ್ಯಕ್ಕೂ ಮನೆಮದ್ದು ಬಳಸಬಹುದು ಎಂದು ಕೆಲವರು ವ್ಯಾಸೆಲೀನ್‌ನಂತಹ ಪೆಟ್ರೋಲಿಯಮ್‌ ಜೆಲ್ಲಿಯನ್ನೋ ಅಡುಗೆಸೋಡಾವನ್ನೋ ಬ್ಯಾಟರಿಗಳಿಗೆ ಸವರುತ್ತಾರೆ. ಆದರೆ, ಅದರ ಬಗ್ಗೆ ತಿಳಿವಳಿಕೆ ಇಲ್ಲದೆ ಇಂತಹ ಪ್ರಕ್ರಿಯೆಗಳಲ್ಲಿ ತೊಡಗಿದರೆ, ಅನುಕೂಲಕ್ಕಿಂತಲೂ ಅನನುಕೂಲ, ಅಪಾಯವೇ ಎದುರಾಗುವುದು ಹೆಚ್ಚು. ಇಂತಹ ರಾಸಾಯನಿಕ ಲೇಪನಗಳು ದೀರ್ಘಾವಧಿ ಫಲಿತಾಂಶಗಳನ್ನು ನೀಡುವುದಿಲ್ಲ ಮತ್ತು ಬ್ಯಾಟರಿಯ ವಿದ್ಯುದ್ವಾಹಕತೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ, ಇದಕ್ಕೊಂದು ಪರ್ಯಾಯ ಹುಡುಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದ ಆಸ್ಟ್ರೇಲಿಯಾದ ನ್ಯಾನೋತಜ್ಞರು ‘ಎಂಕ್ಸೀನ್‌’ ಎಂಬ ಹೊಸ ನ್ಯಾನೋಸಾಮಗ್ರಿಯನ್ನು ಬಳಸಿ ಬ್ಯಾಟರಿ ತಯಾರಿಸುತ್ತಿದ್ದಾರೆ.

ಈಗಾಗಲೇ ಬಳಕೆಯಲ್ಲಿರುವ ಗ್ರಫೀನ್‌ಗಿಂತಲೂ ಹೆಚ್ಚು ಸುಲಭವಾಗಿ ಬಳಸಬಲ್ಲ, ಹೆಚ್ಚು ದಕ್ಷವೆನಿಸಿದ್ದ ಎಂಕ್ಸೀನ್‌ಗೆ ಇದ್ದ ಒಂದೇ ಸಮಸ್ಯೆಯೆಂದರೆ ಅದು ಬೇಗ ತುಕ್ಕು ಹಿಡಿಯುತ್ತಿತ್ತು. ಅದನ್ನು ತಪ್ಪಿಸಲು, ಹಿಡಿದ ತುಕ್ಕನ್ನು ತೆಗೆಯಲು ಈ ತಜ್ಞರು ಏನು ಮಾಡಿದ್ದಾರೆ ಗೊತ್ತೇ? ಧ್ವನಿತರಂಗಗಳ ಮೊರೆಹೋಗಿದ್ದಾರಂತೆ! ಎಂಕ್ಸೀನ್‌ನಂತಹ ನ್ಯಾನೋಸಾಮಗ್ರಿಯನ್ನು ಬಳಸಿ ತಯಾರಿಸಿದ ಬ್ಯಾಟರಿಗಳಲ್ಲಿ ಸೃಷ್ಟಿಯಾಗುವ ತುಕ್ಕು, ಒಂದು ಕೂದಲಿಗಿಂತಲೂ ಅತ್ಯಂತ ತೆಳ್ಳಗಿರುತ್ತದೆ. ಅದರ ನಿವಾರಣೆ ಕಡುಕಷ್ಟ. ಅಂತಹ ತುಕ್ಕು ಹಿಡಿದ ಎಂಕ್ಸೀನ್‌ ಬ್ಯಾಟರಿಯನ್ನು ಹೆಚ್ಚಿನ ಆವರ್ತನದ ನ್ಯಾನೊಮಟ್ಟದ ಎಲೆಕ್ಟ್ರೋಮೆಕಾನಿಕಲ್ ಕಂಪನಕ್ಕೆ ಒಡ್ಡಿದರೆ, ತುಕ್ಕು ಮಂಗಮಾಯ! ಇಂತಹ ಹೆಚ್ಚಿನ ಆವರ್ತನದ ಧ್ವನಿತರಂಗಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬಳಸಿ, ಇತರ ಬಗೆಯ ಬ್ಯಾಟರಿಗಳಲ್ಲೂ ತುಕ್ಕುನಿರೋಧಕತೆಯನ್ನೂ ತುಕ್ಕುನಿರ್ಮೂಲನೆಯನ್ನೂ ಸಾಧ್ಯವಾಗಿಸಿದ್ದಾರೆ, ಈ ಸಂಶೋಧಕರು. ಇದನ್ನು ದೊಡ್ಡ ಪ್ರಮಾಣದಲ್ಲಿ ಸಾಧ್ಯವಾಗಿಸಲು ಹೂಡಿಕೆದಾರರನ್ನು, ಸರ್ಕಾರದ ನಿಯಮಾವಳಿಗಳನ್ನು ಎದುರು ನೋಡುತ್ತಿರುವ ತಜ್ಞರು, ಬ್ಯಾಟರಿಗಳ ಭವಿಷ್ಯವನ್ನು, ಇ-ತ್ಯಾಜ್ಯದ ಹಣೆಬರಹವನ್ನು ಬದಲಾಯಿಸಲು ಹೊರಟಿದ್ದಾರೆ. ಅಲ್ಲಿಯವರೆಗೂ, ಇ-ತ್ಯಾಜ್ಯದ ಜವಾಬ್ದಾರಿಯುತ ನಿರ್ವಹಣೆಯನ್ನು ಮಾಡುವ ಹೊಣೆ ನಮ್ಮದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT