ಫೋಲ್ಡ್‌ಸ್ಕೋಪ್ ಕಾರ್ಯಾಗಾರ

7
ಸಸ್ಯಕಾಶಿಯಲ್ಲಿ ಫೋಲ್ಡ್‌ಸ್ಕೊಪ್ ಕಾರ್ಯಾಗಾರ

ಫೋಲ್ಡ್‌ಸ್ಕೋಪ್ ಕಾರ್ಯಾಗಾರ

Published:
Updated:
Deccan Herald

ಮ್ಯಾಗ್ನಿಫಿಕೇಷನ್‌ ವಿಜ್ಞಾನ ಕ್ಷೇತ್ರದಲ್ಲಿ ಸೂಕ್ಷ್ಮದರ್ಶಕದ ಪಾತ್ರ ಅಪಾರ. ಲೀವನ್ಹಾಕ್ ಮೊದಲ ಅತಿಸರಳ ಸೂಕ್ಷ್ಮದರ್ಶಕ ಆವಿಷ್ಕರಿಸಿದ ಹಂತದಿಂದ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದವರೆಗಿನ ಪ್ರಗತಿಯ ಪಥವೇ ಒಂದು ರೋಚಕ ಕಥೆ. ಜೀವ ವಿಜ್ಞಾನ, ರಸಾಯನ ವಿಜ್ಞಾನ ಮತ್ತು ಭೌತ ವಿಜ್ಞಾನ ಅಧ್ಯಯನ, ಸಂಶೋಧನೆಯಲ್ಲಿ ಅತಿ ಮಹತ್ವದ ಪಾತ್ರವಹಿಸುವ ಸೂಕ್ಷ್ಮದರ್ಶಕ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರವೇ ‘ಫೋಲ್ಡ್‌ಸ್ಕೋಪ್’.

ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದ ಹೊಸ ಆವಿಷ್ಕಾರಗಳು ಶಾಲಾ ಮಕ್ಕಳ ಕಲಿಕೆಗೆ, ನಿಸರ್ಗವನ್ನು ಅರಿಯಲು ಹೇಗೆಲ್ಲ ಸಹಕಾರಿಯಾಗಬಲ್ಲದು ಎಂಬುದಕ್ಕೆ ಡಿಸೆಂಬರ್ 10ರ ಮುಂಜಾನೆ ಬೆಂಗಳೂರಿನ ಲಾಲ್‌ಬಾಗ್ ನಲ್ಲಿ ಜರುಗಿದ ‘ಫೋಲ್ಡ್‌ಸ್ಕೋಪ್’ ಕಾರ್ಯಾಗಾರ ಸಾಕ್ಷಿಯಾಯಿತು.

ಬೆಂಗಳೂರಿನ ಪದ್ಮನಾಭನಗರದ ಪಿ. ಎಸ್. ಗೋಯೆಂಕಾ ಮೆಮೋರಿಯಲ್ ಜ್ಞಾನ ವಿಜ್ಞಾನ ವಿದ್ಯಾಪೀಠ ಶಾಲೆಯ ವಿಜ್ಞಾನ ಶಿಕ್ಷಕಿ ಶ್ರೀಮತಿ ಕವಿತಾ ಸೆಬಾಸ್ಟಿಯನ್ ಸಲ್ಲಿಸಿದ್ದ ಫೋಲ್ಡ್‌ಸ್ಕೋಪ್ ಸಂಬಂಧಿ ಶೈಕ್ಷಣಿಕ ಪ್ರಸ್ತಾಪವನ್ನು ಕೇಂದ್ರದ ಬಯೋಟೆಕ್ನಾಜಿ ಇಲಾಖೆ (ಡಿಬಿಟಿ) ಆಯ್ಕೆಮಾಡಿದ್ದು, ಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿಗಳು ಅನೇಕ ವಿಜ್ಞಾನ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಆಯ್ಕೆಗೊಂಡ ಕೆಲವೇ ಕೆಲವು ಶಾಲೆಗಳಲ್ಲಿ ಈ ಶಾಲೆಯೂ ಒಂದು.

ಪರಿಸರ ತಜ್ಞ ಡಾ. ಎ. ಎನ್. ಯಲ್ಲಪ್ಪರೆಡ್ಡಿ ಅವರ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳು ನಡೆಸಿದ ಸಸ್ಯಶಾಸ್ತ್ರಕ್ಕೆ ಸಂಬಧಿಸಿದ ಅನೇಕ ಪ್ರಯೋಗಗಳು ಗಮನಸೆಳೆದವು. ಜೇ.ವಿ.ವಿ.ಪಿ ಶಾಲೆಯ ಪ್ರಾಂಶುಪಾಲೆ ಲಕ್ಷ್ಮಿ ಮೂರ್ತಿ ಅವರ ಪ್ರಾಸ್ತಾವಿಕ ಮಾತಿನೊಂದಿಗೆ ಆರಂಭವಾದ ಕಾರ್ಯಾಗಾರದಲ್ಲಿ ತೋಟಗಾರಿಕಾ ಇಲಾಖೆಯ ಉಪ-ನಿರ್ದೇಶಕರು, ಜಂಟಿ- ನಿರ್ದೇಶಕರು ಮತ್ತು ಇಲಾಖೆಯ ಅಧಿಕಾರಿಗಳು, ಶಾಲೆಯ 15 ವಿದ್ಯಾರ್ಥಿ-ವಿದ್ಯಾರ್ಥಿನಿಯರು, ವಿಜ್ಞಾನ ಶಿಕ್ಷಕಿಯರು, ಎನ್.ಎಂ.ಕೆ.ಆರ್.ವಿ ಮಹಿಳಾ ಕಾಲೇಜಿನ ಸಸ್ಯಶಾಸ್ತ್ರ ಮುಖ್ಯಸ್ಥೆ ಡಾ. ಜಯಶ್ರೀ ಮತ್ತು ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಮರ ಮತ್ತು ಮಾನವನಿಗೆ ಇರುವ ಅವಿನಾಭಾವ ಸಂಬಂಧವನ್ನು ಅನಾವರಣಗೊಳಿಸುವ ‘ಟ್ರೀ ಸಾಂಗ್‌’ ಅನ್ನು ಯಲ್ಲಪ್ಪರೆಡ್ಡಿಯವರೊಂದಿಗೆ ವಿದ್ಯಾರ್ಥಿಗಳೆಲ್ಲ ಮರದ ಕೆಳಗೆ ನಿಂತು ಹಾಡಿದ್ದು ವಿಶೇಷ. ಅನೌಪಚಾರಿಕ ಪ್ರಶ್ನೋತ್ತರದಲ್ಲಿ ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದ ಕ್ಲಿಷ್ಟ ಪ್ರಶ್ನೆಗೆ ಸರಿಯುತ್ತರ ನೀಡಿದ ವಿದ್ಯಾರ್ಥಿನಿಗೆ ಡಾ. ರೆಡ್ಡಿಯವರು ಸ್ಥಳದಲ್ಲೇ ಬಹುಮಾನ ಘೋಷಿಸಿ, ಕೊಟ್ಟಿದ್ದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತ್ತು. ಶಾಲೆಯ ಮಕ್ಕಳು ಫೋಲ್ಡ್‌ಸ್ಕೋಪ್ ಅನ್ನು ಹಂತ ಹಂತವಾಗಿ ಹೇಗೆ ಜೋಡಿಸಬೇಕು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು.

ಎನ್.ಎಂ.ಕೆ.ಆರ್.ವಿ ಕಾಲೇಜಿನ ವಿದ್ಯಾರ್ಥಿನಿಯರ ತಂಡದದೊಂದಿಗೆ ಲಾಲ್‌ಬಾಗ್ ಸುತ್ತಾಡಿ ಅನೇಕ ವಿಧದ ಗಿಡ, ಮರಗಳ ಎಲೆ, ತೊಗಟೆ, ಕಾಂಡ, ಹೂವು ಮುಂತಾದವನ್ನು ಹುಡುಕಿ ತಂದ ಮಕ್ಕಳು ವಿಜ್ಞಾನ ಶಿಕ್ಷಕಿಯರ, ಮುಖ್ಯಸ್ಥರ ಮಾರ್ಗದರ್ಶನದಲ್ಲಿ ವಿವಿಧ ರೀತಿಯ ಪ್ರಯೋಗ, ಚಟುವಟಿಕೆಗಳನ್ನು ಫೋಲ್ಡ್‌ಸ್ಕೋಪ್ ಸಹಾಯದಿಂದ ಮಾಡಿದರು. 

ಡಾ. ಯಲ್ಲಪ್ಪರೆಡ್ಡಿಯವರೊಂದಿಗೆ ಲಾಲ್‌ಬಾಗ್ ತುಂಬೆಲ್ಲ ಹೆಜ್ಜೆ ಹಾಕಿದ ಶಾಲಾ ತಂಡ, ಅಲ್ಲಿನ ಜೀವವೈವಿಧ್ಯ, ಕೆರೆ ಮತ್ತದರ ಮಹತ್ವ, ವಾತಾವರಣ ಮತ್ತು ಆಮ್ಲಜನಕದ ಮಹತ್ವದ ಕುರಿತು ಅರಿತರಲ್ಲದೆ, ಫೋಲ್ಡ್‌ಸ್ಕೋಪ್ ಅನ್ನು ಹೇಗೆಲ್ಲ ಉಪಯೋಗಿಸಬಹುದು ಎಂಬುದರ ಕುರಿತು ತಜ್ಞರೊಂದಿಗೆ ಚರ್ಚಿಸಿದರು.

ಏನಿದು ಫೋಲ್ಡ್‌ಸ್ಕೋಪ್?

ಸ್ಟಾನ್‌ಫರ್ಡ್ ಸ್ಕೂಲ್ ಆಫ್ ಮೆಡಿಸಿನ್ ವಿಭಾಗದ ಸಹಪ್ರಾಧ್ಯಾಪಕ, ಭಾರತೀಯ ಸಂಜಾತ ಡಾ. ಮನು ಪ್ರಕಾಶ್ ಅವರು ಆವಿಷ್ಕರಿಸಿರುವ ಅತಿ ಸರಳ, ಅತಿ ಕಡಿಮೆ ವೆಚ್ಚದ ಮತ್ತು ಕೆಲವೇ ನಿಮಿಷಗಳಲ್ಲಿ ಜೋಡಿಸಬಲ್ಲ ಕಾಗದ ಮತ್ತು ಲೆನ್ಸ್ ಹೊಂದಿರುವ, ಆಪ್ಟಿಕಲ್ ಸೂಕ್ಷ್ಮದರ್ಶಕವೇ ಫೋಲ್ಡ್‌ಸ್ಕೋಪ್. ಕೇವಲ ಒಂದು ಡಾಲರ್ ವೆಚ್ಚದ ಫೋಲ್ಡ್‌ಸ್ಕೊಪ್ 140X - 2000X ವರೆಗಿನ magnification ಹೊಂದಿದೆ. ಇದರ ತೂಕ ಕೇವಲ 8gm. ಭಾರತದಲ್ಲಿ ಫೋಲ್ಡ್‌ಸ್ಕೋಪ್ ಅನ್ನು ಡಿಬಿಟಿ ಪ್ರಚುರಪಡಿಸುತ್ತಿದ್ದು, ಜೀವವಿಜ್ಞಾನವಲ್ಲದೆ, ರಸಾಯನ ವಿಜ್ಞಾನ ಮತ್ತು ಭೌತ ವಿಜ್ಞಾನದಲ್ಲೂ ಅದನ್ನು ಉಪಯೋಗಿಸಬಹುದು.

ಶಾಲೆಯ ಮುಂದಿನ ಯೋಜನೆಗಳು

ಕರ್ನಾಟಕ- ಆಂಧ್ರದ ಗಡಿ ಭಾಗದ ಸರ್ಕಾರಿ ಕನ್ನಡ ಶಾಲೆಯಲ್ಲಿ ಈಗಾಗಲೇ ‘ಫೋಲ್ಡ್‌ಸ್ಕೋಪ್’ ಕಾರ್ಯಾಗಾರ ನಡೆಸಿರುವ ಜೇ.ವಿ.ವಿ.ಪಿ ಶಾಲೆ, ಇತರ ಶಾಲೆಗಳಲ್ಲೂ ಕಾರ್ಯಾಗಾರ, ವಿಜ್ಞಾನ ಚಟುವಟಿಕೆ, ಸೂಕ್ಷ್ಮದರ್ಶಕದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಶಾಲೆ ಈಗಾಗಲೇ ಬೆಂಗಳೂರು ಮತ್ತು ಮೈಸೂರಿನ ಕೆಲ ಶಾಲೆ, ಕಾಲೇಜುಗಳಲ್ಲಿ ಫೋಲ್ಡ್‌ಸ್ಕೋಪ್ ಕುರಿತು ಕಾರ್ಯಾಗಾರ, ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿದೆ. ಬೆಂಗಳೂರಿನ ಸಾರ್ವಜನಿಕರಿಗೂ ಫೋಲ್ಡ್‌ಸ್ಕೋಪ್ ಕುರಿತು ಸಂಕ್ಷಿಪ್ತ ಮಾಹಿತಿ, ಪ್ರಾತ್ಯಕ್ಷಿಕೆ ನೀಡುವ ಯೋಜನೆ ಶಾಲೆಯದ್ದು. ಮಾಹಿತಿಗೆ: 080-26391509 ಮತ್ತು E-mail ವಿಳಾಸ: jvvp2001@gmail.com

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !