ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನ ಸಮೀಪಕ್ಕೆ ಧಾವಿಸುತ್ತಿರುವ ಭಾರತದ ಹೆಮ್ಮೆಯ ಗಗನ ನೌಕೆ

Last Updated 21 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ವೈಜ್ಞಾನಿಕ ಸಂಶೋಧನೆಗಾಗಿ ಜುಲೈ 22ರಂದು ಹೊರಟಿರುವ ‘ಚಂದ್ರಯಾನ–2’ ಬಾಹ್ಯಾಕಾಶ ನೌಕೆ ಬುಧವಾರ ಚಂದ್ರನಿಂದ 4,412 ಕಿ.ಮೀ.ದೂರದ ಕಕ್ಷೆಗೆ ಬಂದು ತಲುಪಿದೆ.

ಮಂಗಳವಾರ ಬೆಳಿಗ್ಗೆ 9.30ಕ್ಕೆ ಇದು ಯಶಸ್ವಿಯಾಗಿ ಭೂ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಸೇರಿಕೊಂಡಿತ್ತು. ಬುಧವಾರ ಮಧ್ಯಾಹ್ನ 12.50ಕ್ಕೆ ನೌಕೆಯಲ್ಲಿನ ದ್ರವ ಎಂಜಿನ್‌ ಅನ್ನು ಚಾಲೂಗೊಳಿಸಿ (ಬರ್ನಿಂಗ್‌) ನೌಕೆಯನ್ನು ಚಂದ್ರನ ಸುತ್ತ 118 ಕಿ.ಮೀ 4,412 ಕಿ.ಮೀ.ದೂರದಲ್ಲಿ ಸುತ್ತುವ ಕಕ್ಷೆಗೆ ಸೇರಿಸಲಾಯಿತು.

ನೌಕೆಯ ಕಾರ್ಯಕ್ಷಮತೆ ಎಲ್ಲವೂ ಸಮರ್ಪಕವಾಗಿ ಇದೆ. ಇದೇ 28ರಂದು ಇನ್ನೊಂದು ಹಂತದ ಎಂಜಿನ್‌ ಚಾಲೂಗೊಳಿಸುವ ಪ್ರಕ್ರಿಯೆ ನಡೆದು ನೌಕೆಯನ್ನು ಚಂದ್ರನ ಇನ್ನಷ್ಟು ಸಮೀಪಕ್ಕೆ ಕೊಂಡೊಯ್ಯಲಾಗುತ್ತದೆ. ಆಗಸ್ಟ್‌ 30 ಮತ್ತು ಸೆ.1ರಂದು ಮತ್ತೆ ಎಂಜಿನ್‌ ಚಾಲೂಗೊಳಿಸಿ ನೌಕೆ ಸುತ್ತುವ ಕಕ್ಷೆಯನ್ನು ತಗ್ಗಿಸಿ ಚಂದ್ರನ ಸಮೀಪಕ್ಕೆ ತರಿಸಲಾಗುತ್ತದೆಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಪ್ರಕಟಣೆ ತಿಳಿಸಿದೆ.

ಮಂಗಳವಾರ ಬೆಳಿಗ್ಗೆ 9.02ಕ್ಕೆ ಚಂದ್ರಯಾನ–2 ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ನಿರ್ಗಮಿಸಿತ್ತು. ಆಗ ಅದು ಚಂದ್ರನಿಂದ 18,072 ಕಿ.ಮೀ.ದೂರದಲ್ಲಿತ್ತು.

ಸೆ.2ರಿಂದ ಅಂತಿಮ ಘಟ್ಟ: ‘ಸೆ.2ರಂದು ಚಂದ್ರನಿಂದ 100 ಕಿ.ಮೀ. ಎತ್ತರದ ಕಕ್ಷೆಗೆ ಬರಲಿರುವ ನೌಕೆಯಲ್ಲಿನ ಆರ್ಬಿಟರ್‌ನಿಂದ ಲ್ಯಾಂಡರ್‌ ಬೇರ್ಪಡಲಿದೆ. ಮುಂದಿನ ಐದು ದಿನಗಳಂತೂ ಉಸಿರು ಬಿಗಿಹಿಡಿಯುವ ರೀತಿಯಲ್ಲಿ ಘಟನೆಗಳು ನಡೆಯಲಿದ್ದು, ಸೆ.7ರಂದು ನಸುಕಿನ 1.55ಕ್ಕೆ ಲ್ಯಾಂಡರ್‌ ಚಂದ್ರನ ನೆಲ ಸ್ಪರ್ಶಿಸಲಿದೆ’ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ತಿಳಿಸಿದ್ದಾರೆ.

‘90 ಡಿಗ್ರಿ ಲಂಬವಾದ ಕಕ್ಷೆಯಲ್ಲಿ ನೌಕೆಯನ್ನು ನೆಲೆಗೊಳಿಸಿ, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವುದು ಬಹಳ ಸವಾಲಿನ ಕೆಲಸ. ಇದೇ ಕಾರಣಕ್ಕೆ ಜಗತ್ತಿನ ಯಾವ ರಾಷ್ಟ್ರವೂ ಇಂತಹ ಪ್ರಯತ್ನಕ್ಕೆ ಕೈಹಾಕಿಲ್ಲ. ಚಂದ್ರಯಾನ–2 ಈ ಸಾಧನೆ ಮಾಡಲಿದ್ದು, ಲ್ಯಾಂಡರ್‌ ಮತ್ತು ರೋವರ್‌ 14 ದಿನಗಳ ಕಾಲ ಚಂದ್ರನಲ್ಲಿನ ನೀರು, ಖನಿಜ, ಕಂಪನ, ಮೇಲ್ವೈ ಲಕ್ಷಣ ಸಹಿತ ಹಲವು ವಿಷಯಗಳಲ್ಲಿ ಶೋಧನೆ ನಡೆಸಿ ಭೂಮಿಗೆ ಮಾಹಿತಿ ರವಾನಿಸಲಿದೆ’ ಎಂದು ಅವರು ಹೇಳಿದ್ದಾರೆ.

ಲ್ಯಾಂಡರ್‌ನ ಮೇಲೆ ಗಮನ

ಸೆಪ್ಟೆಂಬರ್ 7ರಂದು ಇಡೀ ಜಗತ್ತೇ ಚಂದ್ರಯಾನ–2 ಬಾಹ್ಯಾಕಾಶ ನೌಕೆಯ ಲ್ಯಾಂಡರ್‌ನ ಮೇಲೆ ಗಮನ
ಕೇಂದ್ರೀಕರಿಸಿರುತ್ತದೆ. ಏಕೆಂದರೆ ಭಾರತದ ಮಹಾನ್‌ ತಾಂತ್ರಿಕ ಶಕ್ತಿ, ಯುಕ್ತಿ ಹಾಗೂ ಭವಿಷ್ಯದ ಕಾರ್ಯತಂತ್ರ
ಗಳಿಗೆ ಆ ದಿನದ ಯಶಸ್ಸು ದಿಕ್ಸೂಚಿಯಾಗಲಿದೆ.‌‌

ಸೆ.7ರಂದು ನಸುಕಿನ 1.40ಕ್ಕೆ100 ಕಿ.ಮೀ. ಎತ್ತರದಲ್ಲಿಆರ್ಬಿಟರ್‌ನಿಂದ ಕಳಚಿಕೊಳ್ಳುವ ಲ್ಯಾಂಡರ್‌ ಮುಂದಿನ 15 ನಿಮಿಷಗಳಲ್ಲಿ ಸುರಕ್ಷಿತವಾಗಿ ಚಂದ್ರನ ಮೇಲೆ ಬಂದು ಸೇರುವ ಹಂತ ಭಾರತದ ಮಟ್ಟಿಗ ಮಹತ್ವದ ವೈಜ್ಞಾನಿಕ ಮೈಲಿಗಲ್ಲಾಗಲಿದೆ.

ಚಂದ್ರನ ದಕ್ಷಿಣ ಧ್ರುವದ ಅಂಗಳದಲ್ಲಿ ಕಲ್ಲಿನಂತಹ ವಸ್ತುಗಳು, ಕೊರಕಲು ಇರಬಹುದು, ಅಂತಲ್ಲಿ ಇಳಿದರೆ ಲ್ಯಾಂಡರ್‌ ಮುಗುಚಿ ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಲ್ಯಾಂಡರ್‌ ನಿಧಾನವಾಗಿ ಇಳಿಯುತ್ತಲೇ ಸುರಕ್ಷಿತವಾಗಿ ಇಳಿಯುವ ತಾಣವನ್ನೂ ಹುಡುಕುತ್ತಿರುತ್ತದೆ. ಅದರ ಮಧ್ಯ ಭಾಗದ ಎಂಜಿನ್‌ ಮಾತ್ರ ಚಾಲೂ ಸ್ಥಿತಿಯಲ್ಲಿ ಇರುತ್ತದೆ. ಹೀಗಾಗಿ ದೂಳು ಹೆಚ್ಚು ಹಾರಾಡದೆ ಲ್ಯಾಂಡರ್‌ಗೆ ಸೂಕ್ತ ಮಾರ್ಗದರ್ಶನ ನೀಡುತ್ತದೆ. ಚಂದ್ರನ ನೆಲ ತಲುಪಿದ 2 ಗಂಟೆಯಲ್ಲಿ ರ‍್ಯಾಂಪ್‌ ತೆರೆದುಕೊಳ್ಳುತ್ತದೆ. ಅದರ ಮೂಲಕ ರೋವರ್‌ ನೆಲ ತಲುಪುತ್ತದೆ. 3 ಗಂಟೆಯಲ್ಲಿ ಸೋಲಾರ್‌ ಪ್ಯಾನಲ್‌ ತೆರೆದುಕೊಳ್ಳುತ್ತದೆ. ಹೀಗಾಗಿ 5 ಗಂಟೆಯೊಳಗೆ ಎಲ್ಲವೂ ಸಹಜ ಸ್ಥಿತಿಗೆ ಬಂದು ರೋವರ್‌ ಶೋಧನೆಗಾಗಿ ಸೆಕೆಂಡಿಗೆ 1 ಸೆಂ.ಮೀ.ನಷ್ಟು ವೇಗದಲ್ಲಿ ಚಲಿಸಲಿದೆ. 14 ದಿನದಲ್ಲಿ 500 ಮೀಟರ್‌ ದೂರ ಚಲಿಸುವ ರೋವರ್‌ ಮಹತ್ವದ ಮಾಹಿತಿಯನ್ನು ಭೂಮಿಗೆ ರವಾನಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT