ಶುಕ್ರವಾರ, ಜೂನ್ 5, 2020
27 °C

ಅಪರೂಪದ ವಿದ್ಯಮಾನ: ಮೇ 13ರಂದು ದರ್ಶನ ನೀಡಲಿ‌ದೆ 'ಸ್ವಾನ್' ಧೂಮಕೇತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಗಸದಲ್ಲಿ ಬುಧವಾರ (ಮೇ.13) ಬೆಳಿಗ್ಗೆ ಅಪರೂಪದ ವಿದ್ಯಮಾನವೊಂದು ಘಟಿಸಲಿದೆ. ಆಗಸದಿಂದ ಭೂಮಿಯ ಅತಿ ಹತ್ತಿರಕ್ಕೆ ಪ್ರಕಾಶಮಾನವಾದ ಧೂಮಕೇತು ಹಾದು ಹೋಗಲಿದೆ. ಇದಕ್ಕೆ 'ಸ್ವಾನ್' ಎಂದು ಹೆಸರಿಡಲಾಗಿದೆ.

ಯಾವುದೇ ದೂರದರ್ಶಕದ ಸಹಾಯವಿಲ್ಲದೆ ಬರಿಗಣ್ಣಿನಿಂದ ಈ ಧೂಮಕೇತುವನ್ನು ವೀಕ್ಷಿಸಬಹುದಾಗಿದೆ. ಭೂಮಿಯಿಂದ 8.33 ಕೋಟಿ ಕಿ.ಮೀ. ದೂರದಲ್ಲಿ 'ಸ್ವಾನ್' ಹಾದು ಹೋಗಲಿದೆ. ಸೆಕೆಂಡ್‌ಗೆ 40ರಿಂದ 50 ಕಿ.ಮೀ. ವೇಗದಲ್ಲಿ ಇದು ಬರಲಿದೆ. ಈ ರೀತಿ ಭೂ ಸನಿಹಕ್ಕೇ ಬಂದು  ಬರಿಗಣ್ಣಿಗೆ ಗೋಚರಿಸುವ ಧೂಮಕೇತುಗಳು ಬಹಳ ವಿರಳ. ಹೀಗಾಗಿ, 'ಸ್ವಾನ್' ಗೋಚರಿಸುವಿಕೆ ಕುತೂಹಲ ಕೆರಳಿಸಿದೆ ಎನ್ನುತ್ತಾರೆ ವಿಜ್ಞಾನಿಗಳು‌. 

'ಬುಧವಾರ ಬೆಳಿಗ್ಗೆ 4.30ರಿಂದ 5 ಗಂಟೆ ಸಮಯದಲ್ಲಿ ಈ ಧೂಮಕೇತು ಕಾಣಿಸಿಕೊಳ್ಳಲಿದೆ. ಆದರೆ, ಈ ಸಮಯಕ್ಕೆ ಸೂರ್ಯನ ಬೆಳಕು ಕೂಡ ಹರಡುವುದರಿಂದ ಕಣ್ಣಿಗೆ ಸ್ಪಷ್ಟವಾಗಿ ಕಾಣುವುದು ಕಷ್ಟ' ಎನ್ನುತ್ತಾರೆ ಜವಹರಲಾಲ್ ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ್ ಜಿ. ಗಲಗಲಿ.

'ಈ ಧೂಮಕೇತು 5.7 ಪ್ರಕಾಶಮಾನವನ್ನು (ಮ್ಯಾಗ್ನಿಟ್ಯೂಡ್ ) ಹೊಂದಿದೆ. 6ರಷ್ಟು ಕಾಂತಿ ಹೊಂದಿರುವ ಯಾವುದೇ ಆಕಾಶಕಾಯ ಬರಿಗಣ್ಣಿಗೆ ಕಾಣುತ್ತದೆ. ಇದೇ ಧೂಮಕೇತು ರಾತ್ರಿಯ ವೇಳೆ ಸುಳಿದಿದ್ದರೆ ಬರಿಗಣ್ಣಿಗೆ ಕಾಣುತ್ತಿತ್ತು. ಬೆಳಗಿನ ಜಾವ ಆಗಿರುವುದರಿಂದ ಟೆಲಿಸ್ಕೋಪ್ ಬಳಸಿ ನೋಡಬಹುದು. ಆದರೆ, ಊರಿನ ಹೊರಗೆ ಹೋಗಿ ನೋಡುವುದು ಸೂಕ್ತ' ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು