ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರಿಗೆ ಆಡಿಯೊ ಗೈಡ್‌ ಲಾಲ್‌ಬಾಗ್‌ ಮರಗಳಿಗೆ ಕ್ಯೂಆರ್‌ ಕೋಡ್‌

Last Updated 10 ಜೂನ್ 2019, 19:45 IST
ಅಕ್ಷರ ಗಾತ್ರ

240 ಎಕರೆಗಳಷ್ಟು ಹರಡಿಕೊಂಡಿರುವ ಲಾಲ್‌ಬಾಗ್‌ಗೆ ಮುನ್ನೂರು ವರ್ಷಗಳ ಭವ್ಯ ಇತಿಹಾಸವಿದೆ. ಇದು ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್‌ ಖಾಸಗಿ ಉದ್ಯಾನವಾಗಿತ್ತು. ನಗರದ ನೈಸರ್ಗಿಕ ಶ್ವಾಸಕೋಶದಂತಿರುವ ಈ ಸಸ್ಯಕಾಶಿಗೆ 1856ರಲ್ಲಿ ಸರ್ಕಾರಿ ಜೈವಿಕ ಉದ್ಯಾನದ ಮಾನ್ಯತೆ ದೊರೆತ ನಂತರ ಡಾ. ಎಂ.ಎಚ್‌. ಮರೀಗೌಡ ಹೊಸ ರೂಪ ನೀಡಿದರು. ಇದೀಗ ಮತ್ತೊಮ್ಮೆ ಗಿಡ, ಮರ ಮತ್ತು ಪಕ್ಷಿಗಳ ಸಂರಕ್ಷಣೆ ಕೆಲಸ ಶುರುವಾಗಿದೆ. ಆಡಿಯೊ ಗೈಡ್‌, ಸಿಸಿಟಿವಿ ಕ್ಯಾಮೆರಾ, ಪ್ರವಾಸಿಗರಿಗೆ ಬ್ಯಾಟರಿ ಚಾಲಿತ ವಾಹನ, ಪ್ಲಾಸ್ಟಿಕ್‌ ಮುಕ್ತ ಪರಿಸರ, ಮರಗಳಿಗೆ ಕ್ಯೂಆರ್‌ ಕೋಡ್‌... ಪರಿಚಯಿಸಲಾಗುತ್ತಿದೆ.

ಜೀವಮಾನವಿಡಿ ಒಂದೇ ಒಂದು ಹೂವು ಬಿಡದೆ ಬೆಳೆಯುವ ತಾಳೆ ಮರದ ತುದಿಯಲ್ಲಿಸರಿಯಾಗಿ ನೂರು ವರ್ಷದ ನಂತರ ದೈತ್ಯಾಕಾರದ ಹೂವೊಂದು ಛತ್ರಿ ಆಕಾರದಲ್ಲಿ ಅರಳಿ ನಿಲ್ಲುತ್ತದೆ. ಒಂದೇ ಒಂದು ಹೂವಿನ ಹೆರಿಗೆ ನಂತರ ಶತಾಯುಷಿ ತಾಳೆ ಮರ ಅವಸಾನಗೊಳ್ಳುತ್ತದೆ. ಆಡುಭಾಷೆಯಲ್ಲಿ ‘ಸೆಂಚುರಿ ಪಾಮ್‌’ ಎಂದು ಕರೆಯಲಾಗುವ ಶ್ರೀಲಂಕಾ ಮೂಲದ ಕೋರಿಫಾ ಅಂಬಾಕುಲಿಫೆರಾ ಪ್ರಭೇದಕ್ಕೆ ಸೇರಿದ ಅಪರೂಪದ ತಾಳೆ ಮರದ ಜೀವನಚಕ್ರ ಸಸ್ಯಲೋಕದ ವಿಸ್ಮಯಗಳಲ್ಲೊಂದು. ಶತಮಾನಕ್ಕೊಮ್ಮೆ ಸಿಗುವ ಪ್ರಕೃತಿಯ ಈ ಅಪರೂಪದ ಸೊಬಗನ್ನು ಕಣ್ತುಂಬಿಕೊಳ್ಳುವುದೇಒಂದು ಸೊಗಸು.

* * *

ಭೂಮಿಯ ಮೇಲಿನ ಅತ್ಯಂತ ದೀರ್ಘಾಯುಷಿ ಹೆಮ್ಮರ ಎಂಬ ಹೆಗ್ಗಳಿಕೆ ಹೊಂದಿರುವ ಬುಬಾಬಾ ಗಿಡದ ಗಜಗಾತ್ರದ ಕಾಂಡದಲ್ಲಿ ಸದಾ 1,250 ಲೀಟರ್‌ ನೀರಿನ ಸಂಗ್ರಹ ಇರುತ್ತದೆ. ಸಾವಿರಾರು ವರ್ಷ ಬದುಕುವ ಈ ಮರ ಮೂಲತಃ ಆಫ್ರಿಕಾದ ಕಾಡುಗಳಲ್ಲಿ ಬೆಳೆಯುತ್ತದೆ. ಅಡಿನ್‌ ಸೋನಿಯಾ ಡಿಜಿಟಾಟಾ ಎಂಬ ವೈಜ್ಞಾನಿಕ ಹೆಸರಿನ ಮರ ಆಫ್ರಿಕಾ ದಟ್ಟ ಅರಣ್ಯಗಳಲ್ಲಿ ವಾಸಿಸುವ ಆದಿವಾಸಿಗಳ ಬಾಯಾರಿಕೆ ತಣಿಸುತ್ತದೆ.

* * *

ಬೆಂಗಳೂರಿನ ಹೃದಯ ಭಾಗದಲ್ಲಿರುವ ಸಸ್ಯಕಾಶಿ ಲಾಲ್‌ಬಾಗ್‌ನ ಒಡಲಿನಲ್ಲಿ ಇಂತಹ ಅನೇಕ ಅಪರೂಪದ ಪ್ರಭೇದಗಳಿದ್ದು, ಸಸ್ಯಲೋಕದಲ್ಲಿ ಅಪರೂಪಕ್ಕೊಮ್ಮೆ ಸಂಭವಿಸುವ ಹಲವು ವಿಸ್ಮಯಗಳಿಗೆ ಸಾಕ್ಷಿಯಾಗಿದೆ. ಇಂತಹ ಅನೇಕ ಸೃಷ್ಟಿಯ ವೈಚಿತ್ರ್ಯಗಳು ಹೊರ ಪ್ರಪಂಚದ ಗಮನಕ್ಕೆ ಬಾರದೆ ಸದ್ದಿಲ್ಲದೆ ಸತ್ತು ಹೋಗುತ್ತವೆ.

ಕಳೆದ ವರ್ಷವಷ್ಟೇ ಲಾಲ್‌ಬಾಗನಲ್ಲಿದ್ದ ತಾಳೆ ಮರವೊಂದು ಹೂ ಹೆರಿಗೆ ನಂತರ ಸಾವನ್ನಪ್ಪಿತು. ಇನ್ನೂ ಸಾವಿರಾರು ವರ್ಷ ಬಾಳಿ ಬದುಕಬೇಕಾದ 175 ವರ್ಷದ ಬುಬಾಬಾ ಮರವೂ ಇಲ್ಲಿದೆ. ಕಳೆದ ವರ್ಷ ಇನ್ನೂ ಐದು ಬುಬಾಬಾ ಸಸಿಗಳನ್ನು ನೆಡಲಾಗಿದೆ.

ಸಸ್ಯಕಾಶಿಯಲ್ಲಿರುವ ಇಂತಹ ಅದೆಷ್ಟೋ ವಿಸ್ಮಯಗಳನ್ನು ಹೊರ ಪ್ರಪಂಚಕ್ಕೆ ತಿಳಿಸುವ ಪ್ರಯತ್ನಕ್ಕೆ ಲಾಲ್‌ಬಾಗ್‌ ತೋಟಗಾರಿಕೆ ಇಲಾಖೆ ಮುಂದಾಗಿದೆ. ತಂತ್ರಜ್ಞಾನದ ನೆರವು ಪಡೆದು ಈ ತೋಟವನ್ನು ಹೆಚ್ಚು ಜನಸ್ನೇಹಿಯನ್ನಾಗಿಸುವ ಯೋಜನೆಗಳನ್ನು ರೂಪಿಸಿದೆ.

ಏನಿದು ಕ್ಯೂಆರ್ ಕೋಡ್‌?

ಇನ್ನು ಮುಂದೆ ಲಾಲ್‌ಬಾಗ್‌ಗೆ ಭೇಟಿ ನೀಡುವ ಜನರುಗಿಡಗಳ ಎದುರು ನಿಂತು ತಮ್ಮ ಮೊಬೈಲ್‌ನಲ್ಲಿ ಕ್ಯೂಆರ್ ಕೋಡ್‌(QR code -ಕ್ವಿಕ್‌ ರೆಸ್ಪಾನ್ಸ್‌ ಕೋಡ್‌) ಸ್ಕ್ಯಾನ್‌ ಮಾಡಿದರೆ ಸಾಕು. ಆ ಗಿಡದ ಉಗಮ ಸ್ಥಾನ, ಜಾತಿ, ಪ್ರಭೇದ, ವೈಜ್ಞಾನಿಕ ಹೆಸರು, ಸ್ಥಳೀಯ ಹೆಸರು, ಹೂವು–ಹಣ್ಣು ಬಿಡುವ ಕಾಲ ಮತ್ತು ಇತರ ವಿಶೇಷತೆಗಳ ಜಾತಕ ತೆರೆದುಕೊಳ್ಳುತ್ತದೆ. ಅದಕ್ಕಾಗಿ ಯಾರ ಬಳಿಯೂ ತಡಕಾಡಬೇಕಿಲ್ಲ. ಸಸ್ಯ ವಿಜ್ಞಾನಿಗಳ ಮೊರೆ ಹೋಗುವ ಅಗತ್ಯವಿಲ್ಲ.

ಲಾಲ್‌ಬಾಗ್‌ನಲ್ಲಿರುವ ಪ್ರಮುಖ ಗಿಡ, ಕಂಟೆ, ಮರ, ಬಳ್ಳಿಗಳಿಗೆ ಕ್ಯೂಆರ್‌ ಕೋಡ್‌ ಅಳವಡಿಸುವ ಕಾರ್ಯ ಆರಂಭವಾಗಿದೆ. ಇದಕ್ಕಾಗಿ

ಎಂ.ಜಗದೀಶ್
ಎಂ.ಜಗದೀಶ್

ಐ.ಟಿ ಸೇವೆ ಒದಗಿಸುವ ಸಂಸ್ಥೆ ಮತ್ತು ದಕ್ಷಿಣ ಭಾರತದ ಪ್ರಸಿದ್ಧ ಸಸ್ಯಶಾಸ್ತ್ರಜ್ಞರ ನೆರವು ಪಡೆಯಲಾಗುತ್ತಿದೆ. ಪ್ರೊ. ರವಿ ಕುಮಾರ್‌ ನೇತೃತ್ವದ ಮೂವರು ಸಸ್ಯಶಾಸ್ತ್ರಜ್ಞರ ತಂಡ ಇದಕ್ಕಾಗಿ ಎಲ್ಲ ಸಸ್ಯ ಪ್ರಭೇದಗಳ ಸಮೀಕ್ಷೆ ಮಾಡುತ್ತಿದೆ.

ಲಾಲ್‌ಬಾಗ್‌ನಲ್ಲಿ 79 ಕುಟುಂಬಗಳಿಗೆ 650 ಜಾತಿಯ ಸುಮಾರು 2,750 ಸಸ್ಯ ಪ್ರಬೇಧಗಳಿವೆ.40 ವರ್ಷಗಳ ಹಿಂದೆ ಡಾ. ಎಂ.ಎಚ್‌. ಮರೀಗೌಡ ಅವರು ಲಾಲ್‌ಬಾಗ್‌ ಸಸ್ಯ ಸಂಪತ್ತು ಕುರಿತು ಶಾಸ್ತ್ರೀಯ ಅಧ್ಯಯನ ಮತ್ತು ವರ್ಗೀಕರಣ ಮಾಡಿದ್ದರು. ಅದಾದ ನಂತರ ಅಂತಹ ಕಾರ್ಯಗಳಾಗಿರಲಿಲ್ಲ. ನಾಲ್ಕು ದಶಕಗಳಲ್ಲಿ 225 ಜಾತಿಯ ಮರಗಳು ಬಿದ್ದು ಹೋಗಿವೆ. ಇದಕ್ಕೆ ಬದಲಾಗಿ ದೇಶ, ವಿದೇಶದ ನೂರಕ್ಕೂ ಹೆಚ್ಚು ಹೊಸ ಪ್ರಬೇಧದ ಸಸ್ಯಗಳು ಲಾಲ್‌ಬಾಗ್‌ಗೆ ಬರಲಿವೆ.

ಈ ನಡುವೆ ಸಸ್ಯಲೋಕದಲ್ಲಿ ಅನೇಕ ಬದಲಾವಣೆಗಳಾಗಿವೆ. ಕೆಲವು ಸಸ್ಯಗಳಿಗೆ ಹೊಸ ವೈಜ್ಞಾನಿಕ ಹೆಸರು ಬಂದಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಟ್ಯಾಕ್ಸಾನಾಮಿಸ್ಟ್‌ (ಸಸ್ಯ ಪ್ರಭೇದಗಳ ವರ್ಗೀಕರಣ ತಜ್ಞ) ಪ್ರೊ. ರವಿಕುಮಾರ್‌ ನೇತೃತ್ವದ ತಂಡ ಆರು ತಿಂಗಳಿಂದ ಸಸ್ಯಗಳ ವರ್ಗೀಕರಣ ಕಾರ್ಯ ಆರಂಭಿಸಿದೆ. ಇನ್ನೂ ಆರು ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ.

ಜಿಪಿಎಸ್‌ ನೆರವು

ಜಿಪಿಎಸ್‌ ಅಳವಡಿಸಲು ಐ.ಟಿ ತಂತ್ರಜ್ಞಾನ ಸಂಸ್ಥೆ ಎಲ್ಲ ಮರಗಳ ಚಿತ್ರ ತೆಗೆಯುತ್ತಿದ್ದು, ಲಾಲ್‌ಬಾಗ್‌ನ ಯಾವ ದಿಕ್ಕಿಗೆ ಮತ್ತು ಎಷ್ಟು ದೂರದಲ್ಲಿ ಯಾವ, ಯಾವ ಮರಗಳಿವೆ ಎಂಬ ಸಚಿತ್ರ ಮಾಹಿತಿ ನೀಡಲಿದೆ. ಇದಕ್ಕೆ ಜಿಪಿಎಸ್‌ ತಂತ್ರಜ್ಞಾನ ಅಳವಡಿಸಲಾಗುವುದು. ಎಲ್ಲ ಗಿಡ, ಮರ, ಬಳ್ಳಿಗಳಿಗೂ ಹೊಸದಾಗಿ ಕನ್ನಡ, ಇಂಗ್ಲಿಷ್‌ನಲ್ಲಿ ನಾಮಫಲಕ ಅಳವಡಿಸಲಾಗುವುದು.

ಜಿಪಿಎಸ್‌ ಆಧಾರಿತ ಮರಗಳ ಸಮೀಕ್ಷೆ ಕಾರ್ಯ ಮುಗಿದ ಕೂಡಲೇ ಇಲ್ಲಿಗೆ ಭೇಟಿ ನೀಡುವವರಿಗೆ ಸಮಗ್ರ ಮಾಹಿತಿ ನೀಡಲು ಆಡಿಯೊ ಗೈಡ್‌ ಸಿದ್ಧಪಡಿಸಲಾಗುತ್ತಿದೆ. ಸಸ್ಯಕಾಶಿಯಲ್ಲಿರುವ ವಿಶೇಷ ಮರಗಳ ಬಗ್ಗೆ ಆಡಿಯೊ ಗೈಡ್‌ನಲ್ಲಿ ಮಾಹಿತಿ ದೊರೆಯಲಿದೆ. ಪ್ರವಾಸಿಗರು ಹಣ ಪಾವತಿಸಿ ಆಡಿಯೊ ಗೈಡ್‌ ಖರೀದಿಸಿ ಕಿವಿಗೆ ಸಿಕ್ಕಿಸಿಕೊಂಡರೆ ಸಾಕು. ಎಲ್ಲ ಮಾಹಿತಿಯೂ ದೊರೆಯುತ್ತದೆ.

* ಈಗಾಗಲೇ ಲಾಲ್‌ಬಾಗ್‌ನಲ್ಲಿರುವ 250–300ಮರಗಳ ಮಾಹಿತಿ ಕಲೆ ಹಾಕಲಾಗಿದ್ದು ಆರು ತಿಂಗಳಲ್ಲಿ ಎಲ್ಲ ಮರಗಳಿಗೂ ಕ್ಯೂಆರ್‌ ಕೋಡ್‌ ಅಳವಡಿಸಲಾಗುವುದು. ಇಲ್ಲಿಗೆ ಭೇಟಿ ನೀಡುವವರಿಗಾಗಿ ಸಚಿತ್ರ ಕೈಪಿಡಿ, ಮಾಹಿತಿ ಪುಸ್ತಕ ಸಿದ್ಧವಾಗಲಿದೆ.
-ಡಾ. ಎಂ. ಜಗದೀಶ,ಜಂಟಿ ನಿರ್ದೇಶಕ, ತೋಟಗಾರಿಕಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT