ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಟ್ಟು ರಟ್ಟು ಮಾಡುವ ಹೇನು: ಚರಿತ್ರೆ ಹೇಳಿದ ಸೀರಿನಂಟು!

Last Updated 1 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಹೇನು ಕಾಡಿದರೆ ಏನು ಮಾಡುತ್ತೀರಿ? ಛೇ, ಎನ್ನುತ್ತಾ ಕೂದಲಿನಿಂದ ಸೆಳೆದು ಉಗುರಿನ ಮೇಲಿಟ್ಟು, ಇನ್ನೊಂದು ಉಗುರಿನಿಂದ ‘ಚಟಕ್‌’ ಎಂದು ಸದ್ದಾಗುವಂತೆ ಒತ್ತಿ ಕೊಂದುಬಿಡುತ್ತೀರಿ, ಅಲ್ಲವೇ? ಪೀಡೆ ಎನ್ನಿಸಿಕೊಂಡ ಹೇನಿನ ಕಾಟ ಅಷ್ಟಕ್ಕೇ ಮುಗಿಯಲಿಕ್ಕಿಲ್ಲವಂತೆ. ಸಾವಿರಾರು ವರ್ಷಗಳು ಕಳೆದರೂ ನೀವು ಚಿಟಕ್ಕೆಂದು ಕೊಂದ ಆ ಪುಟ್ಟ ಕೀಟ, ನಿಮ್ಮ ಇಡೀ ಚರಿತ್ರೆಯನ್ನು ಜಗತ್ತಿಗೆ ಬಿಟ್ಟು ಕೊಡಬಹುದು ಎನ್ನುತ್ತದೆ, ಮೊನ್ನೆ ಮಾಲೆಕ್ಯುಲಾರ್‌ ಬಯಾಲಜಿ ಅಂಡ್‌ ಎವೊಲ್ಯೂಶನ್‌ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಶೋಧ. ಇಂಗ್ಲೆಂಡಿನ ರೀಡಿಂಗ್‌ ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನಿ ಹಾಗೂ ಜೀವಿವಿಕಾಸ ತಜ್ಞೆ ಅಲೆಹಾಂಡ್ರಾ ಪೆರೋಟ್ಟಿ ಮತ್ತು ಸಂಗಡಿಗರು ಹೀಗೊಂದು ಶೋಧವನ್ನು ಮಾಡಿದ್ದಾರೆ. ಸುಮಾರು ಸಾವಿರದಿಂದ ಎರಡು ಸಾವಿರ ವರ್ಷಗಳಷ್ಟು ಪುರಾತನವಾದ ಹೇನಿನ ಸೀರಿನಿಂದ ಮನುಷ್ಯನ ಡಿಎನ್‌ಎಯನ್ನು ಹೆಕ್ಕಿ ಪರೀಕ್ಷಿಸುವುದು ಸಾಧ್ಯ ಎಂದು ನಿರೂಪಿಸಿದ್ದಾರೆ.

ಮನುಷ್ಯನ ಡಿಎನ್‌ಎಗೂ, ಹೇನಿಗೂ ಸಂಬಂಧವೇನು ಎಂದು ನೀವು ಕೇಳಬಹುದು. ಸುಪ್ರಸಿದ್ಧ ಜುರಾಸಿಕ್‌ ಪಾರ್ಕ್‌ ಸಿನಿಮಾ ನೋಡಿದ್ದವರಿಗೆ ಇದು ಸ್ವಯಂ ವೇದ್ಯ. ಆ ಸಿನಿಮಾದಲ್ಲಿ ಡೈನೊಸಾರಿನ ರಕ್ತ ಕುಡಿದ ಸೊಳ್ಳೆಯೊಂದರ ಹೊಟ್ಟೆಯಿಂದ ಡೈನೊಸಾರಿನ ಡಿಎನ್‌ಎಯನ್ನು ತೆಗೆದು ಅಳಿದು ಹೋದ ಡೈನೊಸಾರನ್ನು ಮತ್ತೆ ಸೃಷ್ಟಿಸಿದ ಅದ್ಭುತ ಕಲ್ಪನೆ ಇದೆ. ಡೈನೊಸಾರ್‌ ಸೃಷ್ಟಿಸಬಹುದೋ ಇಲ್ಲವೋ. ಪ್ರಾಣಿಗಳ ರಕ್ತ ಕುಡಿದ ಕೀಟಗಳಿಂದ ಡಿಎನ್‌ಎ ಹೆಕ್ಕುವುದು ಖಂಡಿತ ಸಾಧ್ಯ. ಸೊಳ್ಳೆಯಂತೆಯೇ ಹೇನೂ ಕೂಡ ಮನುಷ್ಯನ ರಕ್ತವನ್ನು ಹೀರುವುದರಿಂದ, ಹೇನಿನಿಂದ ಡಿಎನ್‌ಎ ಹೆಕ್ಕಿ ಅದು ಕುಡಿದ ರಕ್ತದ ಒಡೆಯ ಅಥವಾ ಒಡತಿಯ ಬಗ್ಗೆ ತಿಳಿದುಕೊಳ್ಳುವ ಜಾಸೂಸಿ ಕೆಲಸ ಇದು.

ಎಂದೋ ಕಣ್ಮರೆಯಾಗಿ ಹೋದವರ ಚರಿತ್ರೆಯನ್ನು ಬೆದಕುವುದು ಹೊಸ ವಿಷಯವೇನಲ್ಲ. ಆದರೆ ಅದಕ್ಕಾಗಿ ನವನವೀನ ಡಿಎನ್‌ಎ ತಂತ್ರವನ್ನು ಬಳಸುವುದು ಹೊಸತು. ಪುರಾತನ ಡಿಎನ್‌ಎ ವಿಶ್ಲೇಷಣೆ ಅಥವಾ ಆರ್ಕಿಯಾಲಾಜಿಕಲ್‌ ಡಿಎನ್‌ಎ ಟೆಕ್ನಾಲಜಿ ಎನ್ನುವ ಈ ತಂತ್ರದಿಂದ ಮಾನವ ಚರಿತ್ರೆಯಲ್ಲಿ ಹಲವು ಹೊಸ ಅಧ್ಯಾಯಗಳನ್ನು ವಿಜ್ಞಾನಿಗಳು ಸೇರಿಸಿದ್ದಾರೆ. ಉದಾಹರಣೆಗೆ, ಎರಡು ದಶಕಗಳ ಹಿಂದೆ ಹರಿಯಾಣದಲ್ಲಿ ರಾಖಿಘಡ ಎಂಬಲ್ಲಿ ದೊರೆತ ಐದು ಸಾವಿರ ವರ್ಷ ಹಳೆಯ ಮಹಿಳೆಯ ಡಿಎನ್‌ಎ, ಆಕೆಯ ವಂಶವಾಹಿ ಭಾರತೀಯರೆಲ್ಲರಲ್ಲೂ ಒಂದಿಷ್ಟು ಇದ್ದೇ ಇದೆ ಎಂದು ತೋರಿಸಿತ್ತು.

ಕೇಶವಾಸಿ, ಶಿರವಾಸಿ ಹೇನಿನ ಜೊತೆಗೆ ಮನುಷ್ಯರ ಸಂಬಂಧ ಬಹಳ ಅನ್ಯೋನ್ಯವಾದದ್ದು. ಮನುಷ್ಯರ ಹೇನು ಬೇರೆ ಯಾವ ಜೀವಿಯಲ್ಲಿಯೂ ಬೆಳೆಯುವುದಿಲ್ಲ. ಮನುಷ್ಯರ ತಲೆಯಲ್ಲಿಯೇ ಹುಟ್ಟಿ, ಅಲ್ಲಿಯೇ ಬೆಳೆದು, ಅಲ್ಲಿಯೇ ಸಾಯುವ ಜೀವಿ ಇದು. ಮೊಟ್ಟೆ ಇಡುವ ಸಮಯದಲ್ಲಿ ಕೂದಲಿನ ಬುಡದತ್ತ ಸರಿದು, ಅಲ್ಲಿ ಕೂದಲಿಗೆ ಭದ್ರವಾಗಿ ಮೊಟ್ಟೆಯನ್ನು ಅಂಟಿಸಿ ಬಿಡುತ್ತದೆ. ಹೇನು ತಲೆಯ ಚರ್ಮದ ಹೊರಪದರವನ್ನೇ ಹರಿದು, ಜೀರ್ಣಿಸಿ ಅಂಟನ್ನು ತಯಾರಿಸುತ್ತದೆ. ಹೀಗೆ ಚರ್ಮದ ಭಾಗವಿರುವ ಮೊಟ್ಟೆಯ ಅಂಟು ಪುರಾತನ ಮಾನವನ ಗುಟ್ಟನ್ನು ಬಿಟ್ಟು ಕೊಡಬಲ್ಲ ಡಿಎನ್‌ಎಯ ಸಮೃದ್ಧ ನಿಧಿಯಾಗಿ ಬಿಡುತ್ತದೆ ಎನ್ನುತ್ತಾರೆ ಅಲೆಹಾಂಡ್ರಾ.

ಅಲೆಹಾಂಡ್ರಾ ಮತ್ತು ಸಂಗಡಿಗರು ದಕ್ಷಿಣ ಅಮೆರಿಕದ ಅರ್ಜೆಂಟೀನಾ ದೇಶದಲ್ಲಿ ದೊರೆತ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯ, ಕಾದಿಟ್ಟ ಶವದ ತಲೆಗೂದಲನ್ನು ಪರೀಕ್ಷಿಸಿದರು. ಈ ಮಮ್ಮಿಯ ಕೂದಲಿನಲ್ಲಿ ಸೀರೂ ಇರಲಿಲ್ಲ, ಹೇನೂ ಇರಲಿಲ್ಲವೆನ್ನಿ. ಆದರೆ ಅವುಗಳು ಮೊಟ್ಟೆಯನ್ನು ಅಂಟಿಸಿಟ್ಟಿದ್ದ ಗೋಂದು ಹೇರಳವಾಗಿತ್ತು. ಇದನ್ನೇ ಸಂಗ್ರಹಿಸಿ, ಅದರಿಂದ ಡಿಎನ್‌ಎಯನ್ನು ಪ್ರತ್ಯೇಕಿಸಿ, ಡಿಎನ್‌ಎಯ ಪ್ರಮಾಣ ಹಾಗೂ ಅದರ ಸ್ವರೂಪವನ್ನು ಅಧ್ಯಯನ ಮಾಡಿದ್ದಾರೆ. ಸೀರಂಟಿನಲ್ಲಿ ಹುಡುಕಾಡಿದಾಗ ಆ ಶವದ ಚರ್ಮದಲ್ಲಿದ್ದಿರಬಹುದಾದ ವೈರಸ್‌ ಒಂದರ ಕುರುಹೂ ಇವರಿಗೆ ಸಿಕ್ಕಿತಂತೆ.

ಡಿಎನ್‌ಎ ಸಿಕ್ಕ ಮೇಲೆ ಇನ್ನೇನು. ಅದರಲ್ಲಿರುವ ರಾಸಾಯನಿಕಗಳನ್ನು ವಿಶ್ಲೇಷಿಸಿದರೆ, ಮನುಷ್ಯನಲ್ಲಿದ್ದ ಗುಣಗಳನ್ನೂ ಪತ್ತೆ ಮಾಡಬಹುದಾದ ತಂತ್ರಗಳು ಈಗಾಗಲೇ ಇವೆ. ಅವನ್ನು ಬಳಸಿಕೊಂಡು ಆ ವ್ಯಕ್ತಿ ಎಲ್ಲಿಯವ, ಅವನ ಸಂಬಂಧಿಗಳು ಯಾರಿರಬಹುದು, ಮುಂತಾದುವನ್ನು ಗಣಿಸಬಹುದು. ಸದ್ಯಕ್ಕೆ ಅಲೆಹಾಂಡ್ರಾ ಅವರು ಸೀರಂಟು ಹೆಕ್ಕಿದ ವ್ಯಕ್ತಿಯ ಮೂಲವನ್ನು ಹುಡುಕಿದ್ದಾರೆ. ಇವರು ಹೆಕ್ಕಿದ ಡಿಎನ್‌ಎ ಆ ವ್ಯಕ್ತಿ ಇದ್ದಲ್ಲಿಂದಲೂ ಸಾಕಷ್ಟು ಉತ್ತರ ಭಾಗದಲ್ಲಿ ಇದ್ದ ವ್ಯಕ್ತಿಗಳ ಡಿಎನ್‌ಎಯಲ್ಲಿನ ಅಂಶಗಳಿಗೆ ಹೋಲಿಕೆ ತೋರಿತ್ತು. ಅರ್ಥಾತ್‌, ಈ ಮನುಷ್ಯ ಅಥವಾ ಅವನ ಪೂರ್ವಜರು ಅಲ್ಲಿಗೆ ಬೇರೆಲ್ಲಿಂದಲೋ ವಲಸೆ ಬಂದು ನೆಲೆಸಿದವರಾಗಿರಬೇಕು. ಇದು ಕೇವಲ ತರ್ಕವಲ್ಲ ಎನ್ನುವುದಕ್ಕೆ ಆ ವ್ಯಕ್ತಿಯ ತಲೆಯಲ್ಲಿದ್ದ ಹೇನಿನ ಡಿಎನ್‌ಎ ಕೂಡ, ಅಲ್ಲಿಗೆ ಉತ್ತರದಲ್ಲಿರುವ ಪ್ರದೇಶದಲ್ಲಿ ಕಾಣಸಿಗುವ ಹೇನಿನಲ್ಲಿಯಷ್ಟೆ ಇರುವ ಡಿಎನ್‌ಎಯಂತೆ ಇತ್ತು!

ಸೀರನ್ನು ಕುಕ್ಕುವ ಮುನ್ನ ಯೋಚಿಸಿ. ಅದು ಸತ್ತರೂ ಅದರ ಅಂಟು ನಿಮ್ಮನ್ನು ಬಿಡದು. ನಿಮ್ಮ ಕುರುಹನ್ನು, ಚರಿತ್ರೆಯನ್ನು ಸಾವಿರಾರು ವರ್ಷಗಳ ಕಾಲ ಕೂಡಿಟ್ಟುಕೊಳ್ಳಬಲ್ಲುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT