ಇವರು ಲಲಿತಾಂಬಿಕೆ: ಬಾಹ್ಯಾಕಾಶಕ್ಕೆ ಮಾನವಯಾನ ಯೋಜನೆಯ ಚುಕ್ಕಾಣಿ ಹಿಡಿದಾಕೆ

7
ಮದುವೆಗಾಗಿ ಐಐಟಿ ಸೇರುವ ಆಸೆ ಬಿಟ್ಟಿದ್ದರೂ ಇವರಿಂದು ಇಸ್ರೊದ ಅಗ್ರ ಎಂಜಿನಿಯರ್!

ಇವರು ಲಲಿತಾಂಬಿಕೆ: ಬಾಹ್ಯಾಕಾಶಕ್ಕೆ ಮಾನವಯಾನ ಯೋಜನೆಯ ಚುಕ್ಕಾಣಿ ಹಿಡಿದಾಕೆ

Published:
Updated:

ಭಾರತವು 2022ರಲ್ಲಿ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಘೋಷಿಸಿದರು. ಇದಾದ ಕೆಲವೇ ಗಂಟೆಗಳಲ್ಲಿ ಯೋಜನೆಯ ನಿರ್ದೇಶಕರಾಗಿ ವಿ.ಆರ್. ಲಲಿತಾಂಬಿಕಾ ಅವರ ಹೆಸರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಕೆ. ಶಿವನ್ ಘೋಷಿಸಿದರು.

ದೇಶ ಹಮ್ಮಿಕೊಂಡಿರುವ ಮಹತ್ವದ ಯೋಜನೆಯ ನೇತೃತ್ವವನ್ನು ಲಲಿತಾಂಬಿಕಾ ಅವರಿಗೇ ವಹಿಸಲು ಕಾರಣವೇನು? ಅವರ ಹಿನ್ನೆಲೆ, ಸಾಮರ್ಥ್ಯ, ಇಸ್ರೊದಲ್ಲಿ ಅವರ ಸಾಧನೆಗಳೇ ಮಾನವಸಹಿತ ಬಾಹ್ಯಾಕಾಶ ಯಾನದ ಹೊಣೆಗಾರಿಕೆ ಅವರ ಹೆಗಲೇರುವಂತೆ ಮಾಡಿತೇ? ಹೌದು.

ರಾಕೆಟ್‌ಗಳನ್ನು ನೋಡುತ್ತಲೇ ಮೊಳೆತ ಆಸಕ್ತಿ

ಲಲಿತಾಂಬಿಕಾ ಅವರು ಕೇರಳದ ತಿರುವನಂತಪುರದಲ್ಲಿ ಜನಿಸಿದವರು. ಎಂಜಿನಿಯರ್‌ಗಳ ತಂಡದ ಸುತ್ತಲೇ ಬೆಳೆದವರು. ಅವರ ಅಪ್ಪ, ಚಿಕ್ಕಪ್ಪ ಎಂಜಿನಿಯರ್‌ಗಳು. ಅಜ್ಜ ಗಣಿತಶಾಸ್ತ್ರಜ್ಞ. ಮುಂದೆ ಅವರು ವಿವಾಹವಾದದ್ದೂ ಎಂಜಿನಿಯರ್‌ನನ್ನೇ. ಹೀಗಾಗಿ ಸಹಜವಾಗಿಯೇ ಅವರು ಎಂಜಿನಿಯರಿಂಗ್‌ ಕ್ಷೇತ್ರದತ್ತ ಆಕರ್ಷಿತರಾದರು. ಅದರಲ್ಲೂ ವಿಜ್ಞಾನ ಕ್ಷೇತ್ರದೆಡೆಗಿನ ಅತೀವ ಆಕರ್ಷಣೆಗೆ ಅಜ್ಜನೇ ಕಾರಣ ಎನ್ನುತ್ತಾರವರು.

ಬಾಲ್ಯದಲ್ಲಿ ಅಜ್ಜನ ಜತೆಗೆ ಮನೆಯಂಗಳದಿಂದಲೇ ‘ತುಂಬಾ ಈಕ್ವಟೋರಿಯಲ್ ರಾಕೆಟ್ ಲಾಂಚಿಂಗ್ ಸ್ಟೇಷನ್’ನಿಂದ ಪ್ರಾಯೋಗಿಕವಾಗಿ ರಾಕೆಟ್‌ ಉಡಾವಣೆ ಮಾಡುತ್ತಿದ್ದುದನ್ನು ನೋಡಿದ್ದು ಅವರ ಮನದಲ್ಲಿ ಈಗಲೂ ಹಸಿರಾಗಿದೆಯಂತೆ. ಅದನ್ನು ನೋಡನೋಡುತ್ತಲೇ ಲಲಿತಾಂಬಿಕಾ ಅವರಲ್ಲಿ ರಾಕೆಟ್, ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಆಸಕ್ತಿ ಮೊಳೆಯಿತು.

ಮದುವೆಗಾಗಿ ಐಐಟಿ ಆಸೆ ಬಿಟ್ಟರೂ ಛಲಬಿಡದ ಸಾಧನೆ!

ತಿರುವನಂತಪುರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ಪದವಿ ಪಡೆದ ಲಲಿತಾಂಬಿಕಾ ಐಐಟಿ ಅಥವಾ ಐಐಎಸ್‌ಸಿನಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕೆಂಬ ಇಚ್ಛೆಯಿಂದ ಗೇಟ್ ಪರೀಕ್ಷೆ ಬರೆದು ತೇರ್ಗೆಡಯಾದರು. ಆ ಸಂದರ್ಭದಲ್ಲಿ ಹೆತ್ತವರಿಗೆ ಮತ್ತು ಅಜ್ಜಿಗೆ ಅವರ ಮದುವೆಯನ್ನು ಕಾಣಬೇಕೆಂಬ ಆಸೆ. ಒಬ್ಬಳೇ ಮಗಳಾಗಿರುವುದರಿಂದ ಅವರ ಬಯಕೆಯನ್ನು ತಿರಸ್ಕರಿಸುವಂತೆಯೂ ಇಲ್ಲ. ಹೀಗಾಗಿ ಎಂಜಿನಿಯರಿಂಗ್ ಪೂರ್ಣಗೊಂಡ ಕೂಡಲೇ ಐಐಟಿ ಸೇರದೆ ವಿವಾಹವಾದರು.

ಆದರೆ, ಕಲಿಯುವ ಹಂಬಲವನ್ನು ಕೊನೆಗಾಣಿಸಲಿಲ್ಲ. ಎಂಜಿನಿಯರಿಂಗ್ ಶಿಕ್ಷಣ ಪಡೆದ ಅದೇ ಕಾಲೇಜಿನಲ್ಲಿ ಎಂ.ಟೆಕ್ ಪದವಿಯನ್ನೂ ಪಡೆದರು. ಆ ವೇಳೆ ಆವರು ಒಬ್ಬ ಮಗಳ ತಾಯಿ! ಮಗಳ ಲಾಲನೆ ಪೋಷಣೆ ಮಾಡುತ್ತ ಕಾಲೇಜಿಗೆ 41 ದಿನ ರಜೆ ಮಾಡಿದ್ದು, ಸ್ನೇಹಿತೆಯ ಸಹಾಯದಿಂದ ಓದಿ ಎಂ.ಟೆಕ್ ಪೂರೈಸಿದ್ದು ಇತ್ಯಾದಿಗಳು ಅವರ ನೆನಪಿನ ಬತ್ತಳಿಕೆಯಲ್ಲಿ ಈಗಲೂ ಹಸಿರಾಗಿದೆ.

ವೈಫಲ್ಯ ಮತ್ತು ಯಶಸ್ಸಿನ ಸುತ್ತ...

1988ರಲ್ಲಿ, ತಮ್ಮ 26ನೇ ವಯಸ್ಸಿನಲ್ಲಿ ತಿರುವನಂತಪುರದ ವಿಕ್ರಂ ಸರಾಭಾಯಿ ಬಾಹ್ಯಾಕಾಶ ಕೇಂದ್ರವನ್ನು ಸೇರಿದರು ಲಲಿತಾಂಬಿಕಾ.

ಆಗಷ್ಟೇ ಸಂಸ್ಥೆಯ ಎಂಜಿನಿಯರ್‌ಗಳು ಮೊತ್ತಮೊದಲ ದೇಶಿ ಉಪಗ್ರಹ ಉಡಾವಣೆ ರಾಕೆಟ್‌ ಎಎಸ್‌ಎಲ್‌ವಿ (ಆಗ್ಯುಮೆಂಟೆಡ್ ಸೆಟಲೈಟ್ ಲಾಂಚ್ ವೆಹಿಕಲ್) ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದರು. ವೃತ್ತಿಜೀವನದ ಮೂರನೇ ತಿಂಗಳಿನಲ್ಲಿಯೇ ಲಲಿತಾಂಬಿಕಾ ಮೊದಲ ವೈಫಲ್ಯ ಕಂಡರು. ನಿಯಂತ್ರಣ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಮೊದಲ ದೇಶಿ ರಾಕೆಟ್ ಉಡಾವಣೆ ವಿಫಲವಾಗಿತ್ತು.

‘ವೃತ್ತಿಜೀವನದ ಆರಂಭದಲ್ಲಿ ಎಲ್ಲವೂ ಸವಾಲೇ ಆಗಿದ್ದವು. ಎಲ್ಲವೂ ಹೊಸತೇ ಆಗಿದ್ದವು. ಹೀಗಾಗಿ ನಮಗೆ ಮಾಹಿತಿ ನೀಡುವವರು ಯಾರೂ ಇರಲಿಲ್ಲ. ಆಕರವೂ ಇರಲಿಲ್ಲ. ನಾವು ಹಣವನ್ನು ಪೋಲು ಮಾಡುತ್ತಿದ್ದೇವೆ ಎಂದು ಪತ್ರಿಕೆಗಳು ಟೀಕಿಸುತ್ತಿದ್ದವು’ ಎಂದು ವೃತ್ತಿಜೀವನದ ಆರಂಭದ ಕಠಿಣ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಲಲಿತಾಂಬಿಕಾ.

ಪಿಎಸ್‌ಎಲ್‌ವಿ ಮೂಲಕ ಇಸ್ರೊ ಯಾನ

ಪಿಎಸ್‌ಎಲ್‌ವಿ (ಪೋಲಾರ್ ಸೆಟಲೈಟ್ ಲಾಂಚಿಂಗ್ ವೆಹಿಕಲ್) ಉಡಾವಣೆಯ ಮಹತ್ವದ ಯೋಜನೆಯೊಂದಿಗೆ ಲಲಿತಾಂಬಿಕಾ ಅವರ ಇಸ್ರೊ ಯಾನ ಆರಂಭಗೊಂಡಿತು. ಚಿಕ್ಕ ಮಗುವಿನ ತಾಯಿಯಾಗಿದ್ದುಕೊಂಡು ಹೆಚ್ಚು ಗಂಟೆಗಳ ಕಾಲ ಮಹತ್ವದ ಯೋಜನೆಯ ಕೆಲಸದಲ್ಲಿ ತೊಡಗಿಸಿಕೊಳ್ಳುವುದೂ ಅವರಿಗೆ ಸವಾಲಾಗಿತ್ತು. ಇಷ್ಟಾದರೂ ಮೊದಲ ಪಿಎಸ್‌ಎಲ್‌ವಿ ಉಡಾವಣೆ 1993ರಲ್ಲಿ ವಿಫಲವಾಯಿತು. ನಂತರದ ಉಡಾವಣೆಗೆ ಇದ್ದ ಸಮಯಾವಕಾಶ ಕೇವಲ 13 ತಿಂಗಳು! ಆದರೂ ಎದೆಗುಂದದ ಅವರು ಉಳಿದ ಎಂಜಿನಿಯರ್‌ಗಳ ಜತೆ ಕಾರ್ಯತತ್ಪರರಾದರು.

‘ನಮ್ಮ ತಪ್ಪುಗಳಿಂದಲೇ ನಾವು ಪಾಠ ಕಲಿಯಬೇಕಿತ್ತು. ಅಂದು ನಾವು ಮಾಡಿದಂತಹ ಕೆಲಸವನ್ನು ನೀವು ಊಹಿಸುವುದೂ ಸಾಧ್ಯವಿಲ್ಲ’ ಎಂದು ತಮ್ಮ ಗತಕಾಲದ ಕಾರ್ಯವೈಖರಿಯನ್ನು ಈಗ ತಮ್ಮ 56ನೇ ವಯಸ್ಸಿನಲ್ಲಿಯೂ ನೆನಪಿಸಿಕೊಳ್ಳುತ್ತಾರೆ ಲಲಿತಾಂಬಿಕಾ.

ಎರಡನೇ ಬಾರಿ ಪಿಎಸ್‌ಎಲ್‌ವಿ ಉಡಾವಣೆ ಯಶಸ್ವಿಯಾದದ್ದನ್ನು ರೋಮಾಂಚಕಾರಿ ಅನುಭವ ಎಂದು ಬಣ್ಣಿಸುತ್ತಾರವರು. ನಂತರ ಇಸ್ರೊ ಉಡಾವಣೆ ಮಾಡಿದ ಎಲ್ಲ ಪಿಎಸ್‌ಎಸ್‌ಲ್‌ವಿ ರಾಕೆಟ್‌ಗಳ ಯಶಸ್ಸಿನ ಹಿಂದೆಯೂ ಲಲಿತಾಂಬಿಕಾರ ಶ್ರಮವಿದೆ.

‘ಎಲ್ಲರೂ ಯಶಸ್ಸಿಗೆ ಕಾರಣ’

ಪ್ರತಿಯೊಂದು ಯೋಜನೆಯ ಯಶಸ್ಸಿನ ಹಿಂದೆಯೂ ಎಲ್ಲರ ಶ್ರಮವಿದೆ ಎಂಬುದು ಲಲಿತಾಂಬಿಕಾ ಅವರ ಪ್ರತಿಪಾದನೆ. ‘ಕೆಲಸ ಮಾಡುವ ಸಂಸ್ಥೆ, ಸಹೋದ್ಯೋಗಿಗಳು, ಕುಟುಂಬದವರಿಂದ ಬೆಂಬಲ ದೊರೆಯದಿದ್ದರೆ ಏನೂ ಮಾಡಲಾಗದು. ಒಂದು ಉಡಾವಣೆ ನಿಗದಿಯಾಯಿತೆಂದರೆ ನಾವು ಅದರ ಕೆಲಸಕ್ಕೇ ಅಂಟಿಕೊಂಡಿರಬೇಕಾಗುತ್ತದೆ. ಕೆಲವೊಂದು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಅದೂ ಪ್ರೀತಿಯಿಂದ’ ಎನ್ನುತ್ತಾರವರು. ಇಸ್ರೊದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ವಹಿಸುವ ಕಾಳಜಿ ಬಗ್ಗೆಯೂ ಅವರಿಗೆ ಮೆಚ್ಚುಗೆಯಿದೆ.

ಇಷ್ಟಾಗಿಯೂ ತಮ್ಮನ್ನು ‘ಯಶಸ್ವಿ ವ್ಯಕ್ತಿ’ ಎಂದು ಕರೆದುಕೊಳ್ಳುವುದು ಅವರಿಗೆ ಇಷ್ಟವಿಲ್ಲ. ಜನರ ಬೆಳವಣಿಗೆಗೆ ಸದಾ ಪ್ರೋತ್ಸಾಹಿಸಿ ಧೈರ್ಯ ನೀಡುವಂತಹ ಉತ್ತಮ ವಾತಾವರಣ ಹೊಂದಿರುವ ಇಸ್ರೊದಂತಹ ಸಂಸ್ಥೆಯಲ್ಲಿ ಕೆಲಸ ಮಾಡುವುದೇ ಅದೃಷ್ಟ ಎಂಬುದು ಅವರ ಅಭಿಮತ.

ಮಾನವಸಹಿತ ಬಾಹ್ಯಾಕಾಶ ಬಗ್ಗೆ ಏನಂತಾರೆ?

ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿರುವ ಇಸ್ರೊದ ಪ್ರಧಾನ ಕಚೇರಿಗೆ ವರ್ಗವಾಗಿರುವ ಲಲಿತಾಂಬಿಕಾ ಅವರ ಹೆಗಲ ಮೇಲೀಗ ಮಹತ್ವದ ಜವಾಬ್ದಾರಿಯಿದೆ.

‘ಮಾನವಸಹಿತ ಬಾಹ್ಯಾಕಾಶ ಯಾನ ಈ ಹಿಂದಿನ ಎಲ್ಲ ಯೋಜನೆಗಳಿಗಿಂತ ಭಿನ್ನವಾದದ್ದು. ಆದರೆ, ಮೂಲ ತತ್ವಗಳು ಒಂದೇ ಆಗಿವೆ. ಹಿಂದಿನ ಯೋಜನೆಗಳಲ್ಲೆಲ್ಲ ವಿಫಲರಾದರೆ ಒಂದು ವಸ್ತುವನ್ನಷ್ಟೇ ಕಳೆದುಕೊಳ್ಳುತ್ತಿದ್ದೆವು. ಆದರೆ ಈ ಯೋಜನೆಯಲ್ಲಿ ಹಾಗಲ್ಲ. ವಿಫಲವಾದರೆ ಪರಿಸರಕ್ಕೆ ಗಂಭೀರ ಹಾನಿಯಾಗುವುದಲ್ಲದೆ, ಜೀವವನ್ನೂ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಯೋಜನೆಯ ಗಂಭೀರತೆಯ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

‘ನಾವೀಗ ಯೋಜನೆಯ ನೀತಿ ರೂಪಿಸುವ ಆರಂಭದ ಹಂತದಲ್ಲಿದ್ದೇವಷ್ಟೆ. ಯೋಜನೆ ಬಗ್ಗೆ ರಾಷ್ಟ್ರಮಟ್ಟದಲ್ಲಿ ಭಾರಿ ಕುತೂಹಲ ಇದೆ ಎಂಬುದೂ ತಿಳಿದಿದೆ. ಜನರ ಕುತೂಹಲ ಇಸ್ರೊದ ಕಾರ್ಯವೈಖರಿ ಮೇಲೆ ಹೆಚ್ಚು ಪರಿಣಾಮ ಬೀರದು’ ಎಂಬುದು ಅವರ ಅಂಬೋಣ.

(ಆಧಾರ: ದಿ ಪ್ರಿಂಟ್‌ ಸುದ್ದಿತಾಣದ ‘ನಂದಿತಾ ಜಯರಾಜ್’ ಅವರು ನಡೆಸಿದ ಸಂದರ್ಶನ ಮತ್ತು ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ)

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !