ಜ್ಞಾನಭಾರತಿಯಲ್ಲಿ ಸೌರ ವಿದ್ಯುತ್‌ ಉತ್ಪಾದನೆ

7

ಜ್ಞಾನಭಾರತಿಯಲ್ಲಿ ಸೌರ ವಿದ್ಯುತ್‌ ಉತ್ಪಾದನೆ

Published:
Updated:

ಸೌರಶಕ್ತಿ ಬಳಕೆಗೆ ಒತ್ತು ನೀಡಲು ಮುಂದಾಗಿರುವ ಬೆಂಗಳೂರು ವಿಶ್ವವಿದ್ಯಾಲಯವು ಜ್ಞಾನಭಾರತಿ ಆವರಣದ ಕಟ್ಟಡಗಳಲ್ಲಿ ಸೌರ ವಿದ್ಯುತ್‌ ಉತ್ಪಾದನೆಗೆ ಮುಂದಾಗಿದೆ. ಈ ವರ್ಷದ ನವೆಂಬರ್ ತಿಂಗಳಿಂದ ಇಲ್ಲಿ ಸೌರ ವಿದ್ಯುತ್‌ ಉತ್ಪಾದನೆಗೆ ಚಾಲನೆ ದೊರೆಯಲಿದೆ.

ಸೌರ ವಿದ್ಯುತ್‌ ಉತ್ಪಾದನೆಗೆ ಅಗತ್ಯವಿರುವ ಸಲಕರಣೆಗಳ ಅಳವಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಇಲಾಖೆ ಅಂತಿಮಗೊಳಿಸಿರುವ ಎರಡು ಕಂಪನಿಗಳೊಂದಿಗೆ ವಿಶ್ವವಿದ್ಯಾಲಯ ಒಪ್ಪಂದ ಮಾಡಿಕೊಂಡಿದೆ.

‘ವಿ.ವಿಗೆ ಸೌರ ವಿದ್ಯುತ್‌ ಫಲಕ ಮತ್ತು ಉಪಕರಣಗಳನ್ನು ಕೇಂದ್ರ ಸರ್ಕಾರವೇ ಉಚಿತವಾಗಿ ನೀಡುತ್ತದೆ. ಅವುಗಳನ್ನು ನಿಗದಿತ ಕಂಪನಿ ಉಚಿತವಾಗಿ ಅಳವಡಿಸಿ, ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಅಲ್ಲದೆ 25 ವರ್ಷಗಳವರೆಗೆ ಅವುಗಳ ನಿರ್ವಹಣಾ ಜವಾಬ್ದಾರಿಯೂ ಸಂಬಂಧಿಸಿದ ಕಂಪನಿಯದ್ದೇ ಆಗಿರುತ್ತದೆ’ ಎಂದು ವಿ.ವಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸೌರ ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಕೇಂದ್ರ ಸರ್ಕಾರ ಉತ್ತೇಜಿಸುತ್ತಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ಸೌರ ವಿದ್ಯುತ್‌ ಉತ್ಪಾದನೆ ಮತ್ತು ಬಳಕೆಗೆ ಒತ್ತು ನೀಡಬೇಕು ಎಂದು ಮಾನವ ಸಂಪನ್ಮೂಲ ಸಚಿವಾಲಯ (ಎಚ್‌ಆರ್‌ಡಿ) ಈಗಾಗಲೇ ಸೂಚಿಸಿದೆ. ಈ ನಿಟ್ಟಿನಲ್ಲಿ ಅಗತ್ಯ ನೆರವು ನೀಡುವಂತೆ ಎಚ್‌ಆರ್‌ಡಿ ನವೀಕರಿಸಬಹುದಾದ ಇಂಧನ ಇಲಾಖೆಗೆ ತಿಳಿಸಿದೆ. ಅದನ್ನು ಆಧರಿಸಿ ವಿ.ವಿ ಈ ಕ್ರಮ ತೆಗೆದುಕೊಂಡಿದೆ.

ಸುಮಾರು 1000 ಎಕರೆ ವಿಸ್ತೀರ್ಣವಿರುವ ಜ್ಞಾನಭಾರತಿ ಆವರಣದಲ್ಲಿ 50ಕ್ಕೂ ಹೆಚ್ಚು ವಿಭಾಗಗಳ ಕಟ್ಟಡಗಳಿವೆ. ಅವುಗಳಲ್ಲಿ ಆಡಳಿತಾತ್ಮಕ ಕಚೇರಿ ಕಟ್ಟಡ, ವಿದ್ಯಾರ್ಥಿ ನಿಲಯ, ಗ್ರಂಥಾಲಯ, ವಿವಿಧ ಪ್ರಯೋಗಾಲಯ ಕಟ್ಟಡಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಲು ವಿ.ವಿ ಒಪ್ಪಿಗೆ ಸೂಚಿಸಿದೆ. ಅಲ್ಲದೆ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗ ಕಟ್ಟಡದ ತಾರಸಿಯ ಮೇಲೆ ಫಲಕಗಳನ್ನು ಅಳವಡಿಸಲು ವಿ.ವಿ ನಿರ್ಧರಿಸಿದೆ.

ವಿ.ವಿಯಲ್ಲಿ ಉತ್ಪಾದನೆಯಾಗುವ ಸೌರ ವಿದ್ಯುತ್‌ ಅನ್ನು ವಿದ್ಯುತ್‌ ಗ್ರಿಡ್‌ಗೆ ಹರಿಸಲಾಗುತ್ತದೆ. ಇದರಿಂದ ವಿ.ವಿಗೆ ತಾನು ಪಾವತಿಸುವ ವಿದ್ಯುತ್‌ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ದೊರೆಯಲಿದೆ.

ವಿದ್ಯುತ್‌ ಶುಲ್ಕದ ಹೊರೆ ಕಡಿಮೆ

ಜ್ಞಾನಭಾರತಿ ಆವರಣದ ವಿವಿಧ ಕಟ್ಟಡಗಳಿಂದ 80 ಲಕ್ಷ ರೂಪಾಯಿ ವಿದ್ಯುತ್‌ ಶುಲ್ಕವನ್ನು ವಿ.ವಿ ಭರಿಸುತ್ತಿದೆ. ಇದರಲ್ಲಿ ಶೇ 50ರಷ್ಟು ಅಂದರೆ 40 ಲಕ್ಷ ರೂಪಾಯಿ ಉಳಿತಾಯವಾಗಲಿದೆ.

ವಿ.ವಿ ಆವರಣದ ಕಟ್ಟಡಗಳೇ ಅಲ್ಲದೆ ಯುವಿಸಿಇ ಆವರಣದ ಕಟ್ಟಡಗಳು ಮತ್ತು ವಿದ್ಯಾರ್ಥಿ ನಿಲಯಗಳ ಮೇಲ್ಛಾವಣಿ ಮೇಲೆ ಸೌರ ವಿದ್ಯುತ್‌ ಉತ್ಪಾದನಾ ಫಲಕಗಳನ್ನು ಅಕ್ಟೋಬರ್‌ ಅಂತ್ಯದೊಳಗೆ ಅಳವಡಿಸಲಾಗುತ್ತದೆ. ನವೆಂಬರ್‌ನಲ್ಲಿ ಸೌರ ವಿದ್ಯುತ್‌ ಉತ್ಪಾದನೆಗೆ ಚಾಲನೆ ದೊರೆಯಲಿದೆ ಎಂದು ಬೆಂ.ವಿ.ವಿ ಕುಲಪತಿ ಪ್ರೊ. ಕೆ.ಆರ್‌.ವೇಣುಗೋಪಾಲ್‌ ಮಾಹಿತಿ ನೀಡುತ್ತಾರೆ.

ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಸೌರ ವಿದ್ಯುತ್‌ ಉತ್ಪಾದನೆ ಮೂಲಕ ಪರ್ಯಾಯ ಇಂಧನ ಉತ್ಪಾದನೆಗೆ ಮುಂದಾದರೆ ದೇಶದ ವಿದ್ಯುತ್‌ ಕೊರತೆ ನಿವಾರಣೆಯಾಗುತ್ತದೆ ಎನ್ನುತ್ತಾರೆ ಅವರು. 

ಆದಾಯದ ಸದ್ವಿನಿಯೋಗಕ್ಕೆ ಒತ್ತು

ಬೆಂಗಳೂರು ವಿಶ್ವವಿದ್ಯಾಲಯದ ತ್ರಿವಿಭಜನೆಯಿಂದಾಗಿ ಮೂಲ ವಿಶ್ವವಿದ್ಯಾಲಯದ ಆದಾಯವೂ ಕಡಿಮೆಯಾಗಿದೆ. ಬೆಂಗಳೂರು ನಗರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಬಹುತೇಕ ಕಾಲೇಜುಗಳು ಹೊಸ ಎರಡು ವಿ.ವಿಗಳ ವ್ಯಾಪ್ತಿಗೆ ಸೇರಿವೆ. ಬೆಂಗಳೂರು ನಗರದ ಕೆಲ ಭಾಗದ ಕಾಲೇಜುಗಳು ಹಾಗೂ ಸಮೀಪದ ರಾಮನಗರ ಜಿಲ್ಲೆಯ ಕಾಲೇಜುಗಳು ಜ್ಞಾನಭಾರತಿ ಆವರಣದಲ್ಲಿನ ಬೆಂ.ವಿ.ವಿ ವ್ಯಾಪ್ತಿಯಲ್ಲಿವೆ. ಹೀಗಾಗಿ ಲಭ್ಯವಿರುವ ಅಲ್ಪ ಆದಾಯದ ಸದ್ವಿನಿಯೋಗಕ್ಕೆ ವಿ.ವಿ ಕಂಡುಕೊಂಡಿರುವ ಹಲವು ಮಾರ್ಗಗಳಲ್ಲಿ ಸೌರ ವಿದ್ಯುತ್‌ ಉತ್ಪಾದನೆಯೂ ಒಂದು. ಇದರಿಂದ ವಿ.ವಿ ಪಾವತಿಸುವ ವಿದ್ಯುತ್‌ ಶುಲ್ಕದ ಮೇಲೆ ಶೇ 50ರಷ್ಟು ರಿಯಾಯಿತಿ ದೊರೆಯುತ್ತದೆ. ಈ ಮೂಲಕ ಖರ್ಚು ಸ್ವಲ್ಪ ಕಡಿಮೆಯಾಗುತ್ತದೆ.
***

ಜ್ಞಾನಭಾರತಿ ಆವರಣದಲ್ಲಿ 600 ಕಿಲೊ ವಾಟ್‌ ಹಾಗೂ ಯುವಿಸಿಇ ಆವರಣದಲ್ಲಿ 140 ಕಿಲೊ ವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಸೌರ ಫಲಕಗಳನ್ನು ಅಳವಡಿಸಲಾಗುತ್ತದೆ
-ಪ್ರೊ.ಕೆ.ಆರ್‌. ವೇಣುಗೋಪಾಲ್‌, ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !