ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖನಿಜ ಸಂಪತ್ತು ಹುಡುಕಲು ಗ್ರಹಗಳತ್ತ ವಿಜ್ಞಾನಿಗಳ ಕಣ್ಣು

Last Updated 14 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ನೈಸರ್ಗಿಕ ಸಂಪನ್ಮೂಲಗಳ ಬಗೆಗಿನ ಇತ್ತೀಚಿನ ಅಧ್ಯಯನ ವರದಿಯೊಂದು ಮುಂಬರುವ ‘ಲೋಹದ ಕೊರತೆ’ ದಿನಗಳ ಟೀಸರ್ ಎನಿಸುವಂತಿದೆ. ಮುಂದಿನ ಕೆಲವೇ ಕೆಲವು ವರ್ಷಗಳಲ್ಲಿ ಹಲವು ಖನಿಜಗಳು ಈ ಭೂಮಿಯಿಂದ ಕಣ್ಮರೆಯಾಗಲಿವೆ ಎನ್ನುತ್ತದೆ ಈ ವರದಿ. ಪ್ರಸಕ್ತವಾಗಿ ಲಭ್ಯವಿರುವ ಗಣಿಗಳಷ್ಟೇ ಉಳಿದು ಇದೇ ಗತಿಯಲ್ಲಿ ಬೇಡಿಕೆ ಉಳಿದುಕೊಂಡರೆ 2030ರಷ್ಟರಲ್ಲಿ ಬಂಗಾರ, 2035ರಷ್ಟರಲ್ಲಿ ಬೆಳ್ಳಿ ಮತ್ತು ಸತು, 2050ರಷ್ಟರಲ್ಲಿ ತಾಮ್ರದ ನಿಕ್ಷೇಪವಿಲ್ಲದೆ ಭೂಮಿಯ ಒಡಲು ಬರಿದಾಗಲಿದೆ ಅಥವಾ ಇವುಗಳ ಗಣಿಗಾರಿಕೆಗೆ ಭಗೀರಥ ಪ್ರಯತ್ನ ಮಾಡಿದರೂ ಯಶಸ್ಸು ಸಿಗುವುದು ದುರ್ಲಭವಾಗುತ್ತದೆ.

ಹಾಗೆ ನೋಡಿದರೆ ಈ ನೈಸರ್ಗಿಕ ಸಂಪನ್ಮೂಲಗಳ ಸಂಚಿತ ಠೇವಣಿ ಒಂದಲ್ಲ ಒಂದುದಿನ ಬರಿದಾಗಲಿದೆ ಎಂಬುದು ನಿರೀಕ್ಷಿತವೇ. ಆದರೆ ಇಷ್ಟು ಬೇಗ ಇವುಗಳ ನಿಕ್ಷೇಪಕ್ಕೆ ಅಂತ್ಯ ಬರಲಿದೆಯೆಂದು ಯಾರೂ ಅಂದುಕೊಂಡಿರಲಿಲ್ಲ. ಖನಿಜಗಳು ಇಷ್ಟು ಬೇಗ ಖಾಲಿ ಆಗುತ್ತಿರುವುದಕ್ಕೆ ಜನಸಂಖ್ಯಾ ಸ್ಫೋಟವೇ ಮುಖ್ಯ ಕಾರಣ. 1800ರಲ್ಲಿ ನೂರು ಕೋಟಿಯಷ್ಟಿದ್ದ ವಿಶ್ವದ ಜನಸಂಖ್ಯೆ 2011ರಲ್ಲಿ ಏಳು ನೂರು ಕೋಟಿಯನ್ನು ದಾಟಿದೆ. ಆಗ ಪ್ರತಿಗಂಟೆಗೆ 5,650 ಟೆರ್ರಾವಾಟ್ ವಿದ್ಯುತ್ತು ಜಾಗತಿಕವಾಗಿ ಬಳಕೆಯಾಗುತ್ತಿದ್ದರೆ ಈಗ ಆ ಪ್ರಮಾಣ 1.50 ಲಕ್ಷ ಟೆರ್ರಾವಾಟ್‌ಗೆ ಬಂದು ನಿಂತಿದೆ. ಈ ಶತಮಾನದ ಕೊನೆಯ ಹೊತ್ತಿಗೆ ಜನಸಂಖ್ಯೆ ಸಾವಿರದ ನೂರು ಕೋಟಿಗೆ ತಲುಪಲಿದ್ದು, ಅವರಿಗೆಲ್ಲ ಸೌಲಭ್ಯ ಕಲ್ಪಿಸಲು ಎಲ್ಲಿದೆ ನೈಸರ್ಗಿಕ ಸಂಪನ್ಮೂಲ ಎನ್ನುವುದು ಮುಂದಿರುವ ಮುಖ್ಯ ಪ್ರಶ್ನೆ.

ಮುಂದೇನು?

ಭೂಮಿಯನ್ನು ಖಾಲಿ ಮಾಡಿದ ನಂತರ ಮುಂಬರುವ ಪೀಳಿಗೆಗೆ ಸಂಪನ್ಮೂಲ ಒದಗಿಸುವ ಹೊಸ ಸಾಧ್ಯತೆಗಳನ್ನು ಶೋಧಿಸಲು ವಿಜ್ಞಾನಿಗಳ ಕಣ್ಣು ಇದೀಗ ಕ್ಷುದ್ರಗ್ರಹಗಳ ಮೇಲೆ ನೆಟ್ಟಿದೆ. ಬಾಹ್ಯಾಕಾಶದಲ್ಲಿ ಸುಖಾಸುಮ್ಮನೆ ಓಡಾಡಿಕೊಂಡಿರುವ ಕ್ಷುದ್ರಗ್ರಹಗಳಿಗೇನೂ ಕಮ್ಮಿಯಿಲ್ಲ. ಪರಿಣಿತರ ಪ್ರಕಾರ ಸೌರಮಂಡಲದಲ್ಲಿ ನೂರು ಮೀಟರ್‌ಗಿಂತ ಹೆಚ್ಚು ವ್ಯಾಸದ 15 ಕೋಟಿ ಕ್ಷುದ್ರಗ್ರಹಗಳಿವೆಯಂತೆ. ಈ ಸೌರಮಂಡಲದ ರಚನೆಯ ನಂತರ ಅಳಿದುಳಿದಿರುವ ವಸ್ತುಗಳಿಂದ ರಚಿತವಾಗಿರುವ ಈ ಕ್ಷುದ್ರಗ್ರಹಗಳು ಭೂಮಿಯಲ್ಲಿ ಸಿಗುವಂತಹ ಕೆಲವು ಸಂಪನ್ಮೂಲಗಳ ಖಜಾನೆಯನ್ನೇ ಹೊಂದಿವೆ. ಇಂತಹ ಗ್ರಹಗಳನ್ನು ಅವುಗಳ ರಚನೆಯ ಆಧಾರದ ಮೇಲೆ ಪಟ್ಟಿಮಾಡಿ ವಿಂಗಡಿಸಲಾಗಿದ್ದು, ಶೇಕಡ ರಷ್ಟು ಕ್ಷುದ್ರಗ್ರಹಗಳಲ್ಲಿ ಪ್ಲಾಟಿನಂ, ಬಂಗಾರ, ಬೆಳ್ಳಿ, ತಾಮ್ರಗಳಂತಹ ಅತ್ಯಮೂಲ್ಯ ಖನಿಜಗಳ ಸಂಪತ್ತು ಕಂಡುಬಂದಿದ್ದು ಅನ್ವೇಷಕರಲ್ಲಿ ಹೊಸ ಆಸೆಯನ್ನು ಮೂಡಿಸಿದೆ.

ಈ ಕ್ಷುದ್ರಗ್ರಹಗಳ ಸಂಪನ್ಮೂಲಗಳನ್ನು ಭೂಮಿಗೆ ತರುವುದು ಹೇಗೆ? ಅದು ನಿಜಕ್ಕೂ ಆರ್ಥಿಕವಾಗಿ ಕೈಗೆಟಕಬಲ್ಲದೇ ಎಂಬುದು ಇಲ್ಲಿ ಉದ್ಭವಿಸುವ ಪ್ರಶ್ನೆ. ಒಂದಂತೂ ಹೌದು, ಈ ಭೂಮಿಯಲ್ಲಿ ನಡೆಸುವ ಗಣಿಗಾರಿಕೆಗೂ ಬಾಹ್ಯಾಕಾಶದ ಗಣಿಗಾರಿಕೆಗೂ ತಾಂತ್ರಿಕತೆ, ಸಾಗಾಟ, ಖರ್ಚಿನ ಬಾಬತ್ತಿನಲ್ಲಿ ಭೂಮಿ ಆಗಸದಷ್ಟು ಅಂತರ. ಆದರೆ ಬರಿದಾಗುತ್ತಿರುವ ಸಂಪನ್ಮೂಲಗಳ ಕಾರಣಕ್ಕೆ ಮುಂಬರುವ ದಿನಗಳಲ್ಲಿ ಉಂಟಾಗುವ ಬೇಡಿಕೆ ಮತ್ತು ಪೂರೈಕೆಗಳ ಅಂತರದ ದೃಷ್ಟಿಯಿಂದ ಅದು ಅಷ್ಟೇ ಅನಿವಾರ್ಯ ಕೂಡ. ವಿಜ್ಞಾನಿಗಳು ಹೇಳುವಂತೆ ಭೂಮಿಯಲ್ಲಿ ಗಣಿಗಾರಿಕೆ ಹೆಚ್ಚಿದಂತೆ ಭೂ ಸವಕಳಿ, ಮಾಲಿನ್ಯ, ಅರಣ್ಯನಾಶ ಹೀಗೆ ಹತ್ತು ಹಲವು ತೊಂದರೆಗಳನ್ನು ನಾವು ಎದುರಿಸಬೇಕು. ಗಣಿಗಾರಿಕೆಯನ್ನು ಬಾಹ್ಯಾಕಾಶದಲ್ಲಿ ನಡೆಸುವುದರಿಂದ ಈ ತೊಂದರೆಗಳಿಂದ ಮುಕ್ತಿ ಪಡೆಯಬಹುದು.

ಕ್ಷುದ್ರಗ್ರಹಗಳ ಮೇಲಿನ ಗಣಿಗಾರಿಕೆಯತ್ತ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈಗಾಗಲೇ ಮುಂದಡಿ ಇಟ್ಟಿದೆ. ಈ ನಿಟ್ಟಿನಲ್ಲಿ ಹಲವು ಸಂಶೋಧನೆಗಳನ್ನು ನಡೆಸಿ ಕ್ರಿಯಾ ಯೋಜನೆಯೊಂದನ್ನು ರೂಪಿಸಿದೆ. ಮೊದಲ ಹಂತದ ಯೋಜನೆಯಂತೆ ಬಾಹ್ಯಾಕಾಶದಲ್ಲಿ ಭೂಮಿಯ ಅತಿ ಸಮೀಪದಲ್ಲಿ ಬಾಹ್ಯಾಕಾಶ ನಿಲ್ದಾಣವೊಂದನ್ನು ನಿರ್ಮಿಸಿ ಗಣಿಗಾರಿಕೆಗೆ ಬೇಕಾದ ಪರಿಕರಗಳನ್ನು ಅಲ್ಲೇ ತಯಾರಿಸಿ ದುರಸ್ತಿ ಮಾಡುವ ವ್ಯವಸ್ಥೆ ಸಹ ರೂಪಿಸಲಾಗುತ್ತದೆ. ಕ್ಷುದ್ರಗ್ರಹಗಳ ಮೇಲೆ ಗಣಿಗಾರಿಕೆ ನಡೆಸಿದ ಮೇಲೆ ಆ ಅದಿರನ್ನು ಆ ನಿಲ್ದಾಣದಲ್ಲೇ ಪ್ರಾಥಮಿಕವಾಗಿ ಸೋಸಿ ಗುಣಮಟ್ಟದ ಖನಿಜವನ್ನಷ್ಟೇ ಭೂಮಿಗೆ ಕಳಿಸಲಾಗುವುದು. ಈ ಪೂರ್ತಿ ಕಾರ್ಯಾಚರಣೆಯಲ್ಲಿ ಉಪಯೋಗಿಸಲಾಗುವ ಯಂತ್ರ ಮತ್ತು ಉಪಕರಣಗಳು ಸಂಪೂರ್ಣವಾಗಿ ಸೌರಶಕ್ತಿ ಮತ್ತು ಕ್ಷುದ್ರಗ್ರಹಗಳಲ್ಲಿ ಲಭ್ಯವಿರುವ ಇಂಧನಗಳನ್ನೇ ಉಪಯೋಗಿಸಿ ಕಾರ್ಯನಿರ್ವಹಿಸಲಿದ್ದು, ಇದರಿಂದ ಒಟ್ಟು ವೆಚ್ಚವನ್ನು ಕಡಿತಮಾಡಲು ವಿನ್ಯಾಸಕರು ಯೋಚಿಸಿದ್ದಾರೆ.

ನಾಸಾದ ಈ ಯೋಜನೆಯನ್ನು ಜಗತ್ತಿನಾದ್ಯಂತ ಹಲವು ಕೈಗಾರಿಕೋದ್ಯಮಿಗಳು ಸ್ವಾಗತಿಸಿದ್ದಾರೆ. ಭವಿಷ್ಯದ ದಿನಗಳಲ್ಲಿ ಸಂಪನ್ಮೂಲಗಳ ಅಗತ್ಯವನ್ನು ತಲುಪಲು ಇದೊಂದೇ ಮಾರ್ಗ ಎನ್ನಲಾಗಿದೆ. ಇದರಲ್ಲಿ ವ್ಯಾವಹಾರಿಕ ಅವಕಾಶವನ್ನು ಕಂಡು ಹಲವು ಉದ್ಯಮಿಗಳುಇ ಬಂಡವಾಳ ಹೂಡಲು ಉತ್ಸುಕರಾಗಿದ್ದಾರೆ. ಪರಿಣಿತರು ಹೇಳುವಂತೆ ಈ ಯೋಜನೆಯಲ್ಲಿ ಆರಂಭಿಕ ಮೂಲಸೌಕರ್ಯಗಳಿಗೆ ಹೆಚ್ಚು ವೆಚ್ಚ ತಗಲಿದರೂ ಮುಂದೆ ಇನ್ನಷ್ಟು ತಾಂತ್ರಿಕ ಪರಿಣಿತಿಯಿಂದ ಗಣಿ ಮತ್ತು ಸಾಗಾಣಿಕಾ ವೆಚ್ಚವನ್ನು ಕುಗ್ಗುವ ಸಾಧ್ಯತೆ ಇದೆ. ಈ ಲಕ್ಷಣಗಳನ್ನೆಲ್ಲ ನೋಡಿದರೆ ‘ಮೇಡ್ ಇನ್ ಸ್ಪೇಸ್‌’ ಸಾಮಗ್ರಿಗಳನ್ನು ಬಳಸುವ ದಿನಗಳು ಹೆಚ್ಚು ದೂರವಿಲ್ಲ.

ಕ್ಷುದ್ರಗ್ರಹಗಳ ಪ್ರವರ

ಸುಮಾರು 460 ಕೋಟಿ ವರ್ಷಗಳ ಹಿಂದೊಂದು ದೊಡ್ಡ ದೂಳು ಮತ್ತು ಅನಿಲದ ಮೋಡವೊಂದು ಕುಸಿಯಿತು. ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದ ವಸ್ತುಗಳು ಮಧ್ಯಭಾಗದಲ್ಲಿ ಸೇರಿಕೊಂಡು ಸೂರ್ಯ ಹುಟ್ಟಿದ. ಈ ನಡುವೆ ಅಲ್ಲಲ್ಲಿ ಈ ದೂಳು ಸೇರಿಕೊಂಡು ಒಂದೊಂದು ಗ್ರಹಗಳಾದವು ಹೀಗೆ ನಮ್ಮ ಸೌರಮಂಡಲದ ರಚನೆಯಾಯಿತು. ಈ ಪ್ರಕ್ರಿಯೆಯಲ್ಲಿ ಇದೇ ರೀತಿ ಅಲ್ಲಲ್ಲಿ ಸೇರಿಕೊಂಡ ದೂಳಿನ ಗುಂಪು ಇವ್ಯಾವ ಗ್ರಹಗಳ ಜೊತೆಗೂ ಸೇರಿಕೊಳ್ಳಲಾಗದೆ ಅಲ್ಲಲ್ಲೇ ಉಳಿದುಕೊಂಡವು. ಅವೇ ಈ ಕ್ಷುದ್ರಗ್ರಹಗಳು.

ಕ್ಷುದ್ರಗ್ರಹಗಳ ರಚನೆ, ವಿನ್ಯಾಸ, ಆಕಾರ ಒಂದೇ ತರಹ ಇರದೆ ಹಲವು ವೈವಿಧ್ಯಗಳು ಅವುಗಳಲ್ಲಿ ಕಂಡುಬರುತ್ತವೆ. ಇವುಗಳ ಹುಟ್ಟು ಸೌರಮಂಡಲದ ಸಮಯದ್ದೇ ಆಗಿರುವುದರಿಂದ ಅವು ಗ್ರಹಗಳ ರಚನೆಯ ಬಗ್ಗೆ ಹಲವು ಮಾಹಿತಿಗಳನ್ನು ನೀಡುತ್ತವೆ. ಇತರ ಗ್ರಹಗಳಂತೆಯೇ ಈ ಕ್ಷುದ್ರಗ್ರಹಗಳೂ ಸೂರ್ಯನ ಸುತ್ತ ಸುತ್ತುತ್ತಿರುತ್ತವೆ. ಕೆಲವೊಮ್ಮೆ ಇವು ಭೂಮಿಯ ತೀರ ಹತ್ತಿರ ಬಂದು ವಾಯುಮಂಡಲದ ಸಂಪರ್ಕಕ್ಕೆ ಬಂದು ಘರ್ಷಣೆಯಿಂದ ಹೊತ್ತಿಕೊಂಡು ಉರಿದು ಹೋಗುತ್ತವೆ. ಇವುಗಳನ್ನೇ ನಾವು ಉಲ್ಕೆಯೆಂದು ಕರೆಯುತ್ತೇವೆ. ಹೆಚ್ಚಿನ ಕ್ಷುದ್ರಗ್ರಹಗಳು ಬುಧ ಮತ್ತು ಶುಕ್ರಗ್ರಹಗಳ ನಡುವೆ ಸ್ಥಿತವಾಗಿವೆ.

ಕ್ಷುದ್ರಗ್ರಹಗಳಂತೆಯೇ ಹಿಮ ಮತ್ತು ದೂಳಿನಿಂದ ರಚಿತವಾಗಿರುವ ಗ್ರಹಗಳೂ ಇವೆ. ಅವುಗಳು ಸೂರ್ಯನ ಸುತ್ತ ಸುತ್ತುತ್ತಿರುತ್ತವೆ. ಆದರೆ ಸೂರ್ಯನ ತೀರ ಹತ್ತಿರ ಬಂದಂತೆಯೇ ಶಾಖದಿಂದ ಹಿಮ ಕರಗಿ ಆವಿಯಾಗಿ ಬಾಲದಂತೆ ಕಂಡುಬರುತ್ತವೆ. ಅವುಗಳೇ ಧೂಮಕೇತುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT