ಬನ್ನಿ ಗ್ರಹಣ ನೋಡೋಣ!

7
Chandra grahana

ಬನ್ನಿ ಗ್ರಹಣ ನೋಡೋಣ!

Published:
Updated:

ಶತಮಾನದ ದೀರ್ಘಕಾಲೀನ ಖಗೋಳ ವಿಸ್ಮಯ ಚಂದ್ರಗ್ರಹಣ ಜುಲೈ 27,28ರಂದು ಸಂಭವಿಸಲಿದ್ದು, ನಗರದ ವಿದ್ಯಾರ್ಥಿಗಳು, ವಿಜ್ಞಾನಿಗಳು ಮತ್ತು ಆಸಕ್ತರು ಕೆಂಪು ಚಂದಿರನನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದರೆ, ಮತ್ತೊಂದೆಡೆ ಜ್ಯೋತಿಷ, ಸಂಪ್ರದಾಯದ ಹೆಸರಿನಲ್ಲಿ ಗ್ರಹಣದ ಪರಿಣಾಮಗಳ ಕುರಿತು ಚರ್ಚೆಗಳು ನಡೆಯುತ್ತಿವೆ.

ಈಗಾಗಲೇ ವಾಟ್ಸ್ಆ್ಯಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಗ್ರಹಣದ ಕುರಿತು ಸಂದೇಶಗಳು ಹರಿದಾಡುತ್ತಿವೆ. ನಗರದ ಕೆಲ ವಿಚಾರವಾದಿಗಳು, ಸಂಘಟನೆಗಳು ಜನರಲ್ಲಿ ವೈಚಾರಿಕ ಜಾಗೃತಿ ಮೂಡಿಸುವ ಸಲುವಾಗಿ ಅಲ್ಲಲ್ಲಿ ಗ್ರಹಣ ವೀಕ್ಷಣೆ, ಚರ್ಚೆ, ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.

ಚಂದ್ರಗ್ರಹಣ ವೀಕ್ಷಣೆ ಕುರಿತು ಮಾನವ ಬಂಧುತ್ವ ವೇದಿಕೆ, ಅಖಿಲ ಕರ್ನಾಟಕ ವಿಚಾರವಾದಿಗಳ ಸಂಘ, ಕರ್ನಾಟಕ ಜ್ಞಾನ–ವಿಜ್ಞಾನ ಸಮಿತಿ, ಕಾಡು ಮಲ್ಲೇಶ್ವರ ಗೆಳೆಯರ ಬಳಗ ಸೇರಿದಂತೆ ಇತರ ಪ್ರಗತಿಪರ ಸಂಘಟನೆಗಳು ಒಟ್ಟಾಗಿ ಟೌನ್‌ಹಾಲ್‌ನಲ್ಲಿ ಜುಲೈ 27ರಂದು ಸಾಮೂಹಿಕ ಚಂದ್ರಗ್ರಹಣ ವೀಕ್ಷಣೆ ಮತ್ತು ಜನಜಾಗೃತಿ ಕಾರ್ಯಕ್ರಮ ಆಯೋಜಿಸಿವೆ. ಅಂದು ರಾತ್ರಿ 11.54ರಿಂದ 1.43ರ ತನಕ ಕುಟುಂಬ ಸಮೇತ ಚಂದ್ರಗ್ರಹಣ ವೀಕ್ಷಿಸಲು ಆಯೋಜಕರು ಸಿದ್ಧತೆ ನಡೆಸಿದ್ದಾರೆ.

‘ಸೂರ್ಯ ಮತ್ತು ಚಂದ್ರಗ್ರಹಣ ಖಗೋಳ ಲೋಕದ ವಿಸ್ಮಯಗಳು. ಇಂಥ ವಿಸ್ಮಯವನ್ನು ಜನರು ಆಸಕ್ತಿಯಿಂದ ವೀಕ್ಷಿಸಬೇಕು. ಮೂಢನಂಬಿಕೆಗೆ ಬಲಿಯಾಗಬಾರದು. ಭಾರತೀಯ ಪರಂಪರೆಯಲ್ಲಿ ಆರ್ಯಭಟ, ಭಾಸ್ಕರ–1, ಭಾಸ್ಕರ–2, ವರಾಹಮಿಹಿರ ಖಗೋಳದ ಕುರಿತು ವೈಜ್ಞಾನಿಕವಾಗಿ ಚಿಂತಿಸಿದರು. ಆದರೆ, ರಾಹುಕೇತುಗಳು ಸೂರ್ಯ–ಚಂದ್ರರನ್ನು ನುಂಗುವ ಕಾರಣದಿಂದ ಗ್ರಹಣದಂಥ ವಿದ್ಯಮಾನಗಳು ಸಂಭವಿಸುತ್ತವೆ ಎಂಬ ಮೂಢನಂಬಿಕೆಯನ್ನೂ ಜನರಲ್ಲಿ ಬಿತ್ತಲಾಗಿದೆ. ಇಂಥ ಆಧಾರರಹಿತ ಮೂಢನಂಬಿಕೆ ನಿವಾರಣೆಗೆ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎನ್ನುತ್ತಾರೆ ಮಾನವ ಬಂಧುತ್ವ ವೇದಿಕೆಯ ಬೆಂಗಳೂರು ಘಟಕದ ಪ್ರಧಾನ ಸಂಚಾಲಕ ಹುಲಿಹೈದರ್ ಕನಕಾಚಲ.

‘ಗ್ರಹಣ ಒಂದು ನೈಸರ್ಗಿಕ ಕ್ರಿಯೆ. ಆದರೆ, ವೈಜ್ಞಾನಿಕವಾಗಿ ಗ್ರಹಣದ ಬಗ್ಗೆ ಅರಿಯದ ಕೆಲವರು ಜನರಲ್ಲಿ ಗ್ರಹಣಗಳ ಬಗ್ಗೆ ಇಲ್ಲಸಲ್ಲದ ಅಭಿಪ್ರಾಯಗಳನ್ನು ರೂಪಿಸಿ ದೃಶ್ಯಮಾಧ್ಯಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಢನಂಬಿಕೆ ಹೋಗಲಾಡಿಸಿ, ಜನರಲ್ಲಿ ವೈಜ್ಞಾನಿಕ ಜಾಗೃತಿ ಮೂಡಿಸಲು ಗ್ರಹಣ ವೀಕ್ಷಣೆ ಕಾರ್ಯಕ್ರಮ ಆಯೋಜಿಸಿದ್ದೇವೆ. ಅಂದಿನ ಕಾರ್ಯಕ್ರಮದಲ್ಲಿ ಡಾ.ಎಸ್.ಚಟರ್ಜಿ, ಖಭೌತ ವಿಜ್ಞಾನಿ ಡಾ.ರವೀಂದ್ರ ಬನ್ಯಾಲ್ ಹಾಗೂ ಪ್ರೊ.ಪ್ರಜ್ವಲ್ ಶಾಸ್ತ್ರಿ ಭಾಗವಹಿಸುತ್ತಾರೆ. ಅಂದು ಖಗೋಳ ವಿಜ್ಞಾನ ಕುರಿತಂತೆ ಜನರ ಪ್ರಶ್ನೆಗಳಿಗೆ ವಿಜ್ಞಾನಿಗಳು ಉತ್ತರ ನೀಡಲಿದ್ದಾರೆ. ವಿಜ್ಞಾನದ ಜತೆಗೆ ವಿಚಾರವೂ ಇರಲಿದೆ. ಜವಾಹರ ಲಾಲ್ ನೆಹರೂ ತಾರಾಲಯದವರು ಅಂದು ದೂರದರ್ಶಕಗಳ ಮೂಲಕ ಚಂದ್ರಗ್ರಹಣ ವೀಕ್ಷಿಸಲು ಅನುವು ಮಾಡಿಕೊಡಲಿದ್ದಾರೆ. ಜನರು ವಿಚಾರವಂತರಾಗಿ ಖಗೋಳ ವಿಸ್ಮಯ ವೀಕ್ಷಿಸಬೇಕು.’ ಎಂದು ವಿವರಿಸುತ್ತಾರೆ ಕರ್ನಾಟಕ ಜ್ಞಾನವಿಜ್ಞಾನ ಸಮಿತಿಯ ಕಾರ್ಯದರ್ಶಿ ಇ. ಬಸವರಾಜ.‌‌

ಶಾಲಾ–ಕಾಲೇಜು ವಿದ್ಯಾರ್ಥಿಗಳು ಗ್ರಹಣದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಸಜ್ಜಾಗಿದ್ದು, ಜವಾಹರ ಲಾಲ್ ನೆಹರು ತಾರಾಲಯ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ.

ತಾರಾಲಯದಲ್ಲಿ ಉಪನ್ಯಾಸ

ಜವಾಹರ್ ಲಾಲ್ ನೆಹರು ತಾರಾಲಯವು ಜನಸಾಮಾನ್ಯರಿಗಾಗಿ ಜುಲೈ 26, 27ರಂದು ‘ಗ್ರಹಣ’ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಮಾದರಿಗಳು ಮತ್ತು ಪ್ರಯೋಗಗಳ ಮೂಲಕ ಗ್ರಹಣದ ಕುರಿತು ಚರ್ಚಿಸಲಾಗುತ್ತದೆ. 40 ಮಂದಿಗೆ ಮಾತ್ರ ಅವಕಾಶವಿದ್ದು, ಆಸಕ್ತರು ₹ 20 ಶುಲ್ಕ ಪಾವತಿಸಿ ಪ್ರವೇಶ ಪಡೆಯಬಹುದು. ಮೊದಲನೇ ತಂಡ ಮಧ್ಯಾಹ್ನ 1.15ರಿಂದ 1.30, ಎರಡನೇ ತಂಡ ಮಧ್ಯಾಹ್ನ 3.15ರಿಂದ 3.30. ಸ್ಥಳ: ನೆಲಮಾಳಿಗೆ, ನೆಹರು ತಾರಾಲಯ. ಟಿ.ಚೌಡಯ್ಯ ರಸ್ತೆ, ಹೈಗ್ರೌಂಡ್ಸ್‌

ತಾರಾಲಯದಲ್ಲಿ ಇದೇ 27ರ ರಾತ್ರಿ 11.54ರಿಂದ 28ರ ಮುಂಜಾನೆ 3.30ರ ತನಕ ಚಂದ್ರಗ್ರಹಣ ವೀಕ್ಷಣೆಗಾಗಿ ದೂರದರ್ಶಕಗಳನ್ನು  ಸಿದ್ಧ ಮಾಡಿಟ್ಟುಕೊಂಡಿದೆ. ಚಂದ್ರಗ್ರಹಣವನ್ನು ಬರಿಗಣ್ಣಿನಿಂದಲೂ ವೀಕ್ಷಿಸಬಹುದಾಗಿದ್ದು, ಸಾರ್ವಜನಿಕರು ತಮ್ಮ ಮನೆಯ ಮಾಳಿಗೆಯಿಂದಲೂ ಈ ವಿದ್ಯಮಾನವನ್ನು ನೋಡಬಹುದು ಎಂದು ತಾರಾಲಯದ ಪ್ರಕಟಣೆ ತಿಳಿಸಿದೆ.

ಚಂದ್ರಗ್ರಹಣದ ವಿವಿಧ ಹಂತ

* ಯಾವತ್ತು?: ಜುಲೈ 27 ರಾತ್ರಿ ಮತ್ತು 28ರ ಬೆಳಿಗ್ಗೆ

* ಒಟ್ಟು ಅವಧಿ: 3ಗಂಟೆ 48 ನಿಮಿಷ,

* ಆರಂಭ: 27ರ ರಾತ್ರಿ 11.54

* ಗರಿಷ್ಠ ಘಟ್ಟ: ಮಧ್ಯರಾತ್ರಿ1.51

* ಸಂಪೂರ್ಣ ಅಂತ್ಯ: 28ರ ಬೆಳಿಗಿನ ಜಾವ 3.48

* ಎಲ್ಲೆಲ್ಲಿ ಗ್ರಹಣ?: ರಷ್ಯಾದ ಉತ್ತರ ಭಾಗ ಹೊರತುಪಡಿಸಿ, ಭಾರತ, ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೆರಿಕದ ಪೂರ್ವಭಾಗ, ಅಂಟಾರ್ಟಿಕ ಮತ್ತು ಏಷ್ಯಾದ ಖಂಡದ ಇತರ ದೇಶಗಳು.

***

ಮೂಢನಂಬಿಕೆ ಬಿಡಿ...
ಸಂಪ್ರದಾಯವಾದಿಗಳು ಸೂರ್ಯಗ್ರಹಣವಷ್ಟೇ ಅಲ್ಲ ಚಂದ್ರಗ್ರಹಣವೂ ಒಳ್ಳೆಯದಲ್ಲ ಎನ್ನುತ್ತಾರೆ. ಇಂತಿಂಥ ರಾಶಿಗೆ ಅಪಾಯವಿದೆ ಎಂದೂ ಜ್ಯೋತಿಷಿಗಳು ಹೇಳುತ್ತಾರೆ. ಆದರೆ, ಇದೆಲ್ಲಾ ನಿಜವಲ್ಲ. ನಂಬುವಂಥವರು ನಂಬುತ್ತಾರೆ. ಆದರೆ, ಚಂದ್ರಗ್ರಹಣದಿಂದ ಯಾವ ತೊಂದರೆಯೂ ಇಲ್ಲ. ಸೂರ್ಯಗ್ರಹಣವನ್ನು ಬರೀ ಕಣ್ಣಿನಿಂದ ನೋಡಬಾರದು.

ಜ್ಯೋತಿಷಿಗಳು ಹೇಳುವುದು ಸತ್ಯವಲ್ಲ. ಪ್ರತಿವರ್ಷವೂ ಹೇಳುತ್ತಲೇ ಬಂದಿದ್ದಾರೆ. ಅವರು ಹೇಳಿದಂತೆ ಒಂದೂ ನಡೆದಿಲ್ಲ. ಈ ರೀತಿ ಹೇಳುವುದರಲ್ಲಿ ಅವರಿಗೆ ಲಾಭವಿದೆಯೋ ಹೊರತು ಜನಸಾಮಾನ್ಯರಿಗಲ್ಲ. ಜ್ಯೋತಿಷ್ಯ ಹೇಳುವ ಕುಟುಂಬದಿಂದಲೇ ನಾನು ಬಂದವನು. 60ರ ದಶಕದಿಂದಲೂ ಜ್ಯೋತಿಷ ಅಧ್ಯಯನ ಮಾಡುತ್ತಿದ್ದೇನೆ. ನನಗೂ ಜ್ಯೋತಿಷ್ಯ ಗೊತ್ತು. 8–10ಸಾವಿರ ಜಾತಕ ಮಾಡಿದ್ದೇನೆ. ಚರ್ಚೆಗಳಲ್ಲೂ ಭಾಗವಹಿಸಿದ್ದೇನೆ.ಜ್ಯೋತಿಷದಲ್ಲಿ ನಂಬಿಕೆ ಇದ್ದವರನ್ನು ಜ್ಯೋತಿಷಿಗಳು ಹೆದರಿಸುತ್ತಾರಷ್ಟೇ.

ಜುಲೈ 27ರಂದು ನಿರ್ಭೀತಿಯಿಂದ ಚಂದ್ರಗ್ರಹಣ ವೀಕ್ಷಿಸಿ. ಬರಿಗಣ್ಣಿನಿಂದಲೇ ನೋಡಿ ಏನೂ ತೊಂದರೆ ಇಲ್ಲ. ಈ ಹಿಂದೆಯೂ ಸೂರ್ಯಗ್ರಹಣ, ಚಂದ್ರಗ್ರಹಣದ ಕಾಲದಲ್ಲಿ ನಾನು ಆಹಾರ ಸೇವಿಸಿದ್ದೇನೆ. ರಸ್ತೆಗಳಲ್ಲಿ ಆರಾಮವಾಗಿ ಓಡಾಡಿದ್ದೇನೆ. ಇಷ್ಟು ವಯಸ್ಸಾದರೂ ನನಗೆ ಗ್ರಹಣದಿಂದ ಏನೂ ಆಗಿಲ್ಲ. ನನಗಿಂತ ಉದಾಹರಣೆ ಬೇಕೆ? ಜನರು ಮೂಢನಂಬಿಕೆ ಬಿಟ್ಟು, ಖಗೋಳ ವಿಸ್ಮಯವನ್ನು ಆನಂದಿಸಬೇಕು.

-ಎ.ಎಸ್. ನಟರಾಜ್, ಅಧ್ಯಕ್ಷ, ಅಖಿಲ ಕರ್ನಾಟಕ ವಿಚಾರವಾದಿಗಳ ಸಂಘ
***

ಖಗೋಳ ವಿಸ್ಮಯ ಆನಂದಿಸಿ...

ಚಂದ್ರಗ್ರಹಣ ಅನ್ನೋದು ಖಗೋಳ ವಿಸ್ಮಯ. ಅದನ್ನು ನೋಡಿ ಆನಂದ ಅನುಭವಿಸಬೇಕು. ಯಾವುದೇ ಗ್ರಹಣದಿಂದ ಮನುಷ್ಯನಾಗಲಿ, ಪ್ರಾಣಿ–ಪಕ್ಷಿಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗಿರುವುದು ಇದುವರೆಗೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಹಾಗಾಗಿ, ಚಂದ್ರಗ್ರಹಣದ ದಿನದಂದು ನಿರಾಂತಕವಾಗಿ ಗ್ರಹಣ ವೀಕ್ಷಿಸಬಹುದು. ಆಹಾರ ಸೇವಿಸಬಹುದು. ವಿಜ್ಞಾನ ನೀಡಿರುವ ಟಿ.ವಿ. ಮೊಬೈಲ್, ಕಂಪ್ಯೂಟರ್‌ನಂಥ ಸಲಕರಣೆಗಳನ್ನು ಬಳಸುವ ಜನರು ವೈಜ್ಞಾನಿಕ ದೃಷ್ಟಿಕೋನದಿಂದ ವಿದ್ಯಮಾನ ಅರಿಯಬೇಕು.

ಗ್ರಹಣದಂದು ಮನೆಯಲ್ಲಿರುವ ನೀರು ವಿಷವಾಗುತ್ತದೆ ಎನ್ನುವುದು ಸುಳ್ಳು. ನದಿ, ಹಳ್ಳ–ಕೊಳ್ಳ, ಸರೋವರ, ಸಮುದ್ರದ ನೀರು ಎಲ್ಲವೂ ತೆರೆದ ಸ್ಥಿತಿಯಲ್ಲಿಯೇ ಇರುತ್ತವೆ. ಗ್ರಹಣದ ಕಿರಣ ಅವುಗಳ ಮೇಲೆ ಬಿದ್ದಾಗಲೂ ಯಾವುದೇ ಪರಿಣಾಮವಾಗದು ಅಂದ ಮೇಲೆ ಮನೆಯಲ್ಲಿನ ನೀರು ಹೇಗೆ ಕಲುಷಿತವಾಗುತ್ತದೆ? ಗರ್ಭಿಣಿ, ಬಾಣಂತಿಯರು ನಿರಾಂತಕವಾಗಿ ಆಹಾರ ಸೇವಿಸಬಹುದು. ಗ್ರಹಣ ಅನ್ನುವುದು ವೈಜ್ಞಾನಿಕವಾಗಿ ನಡೆಯುವ ಸಹಜ ವಿದ್ಯಮಾನ. ಈ ಬಾರಿಯ ಚಂದ್ರಗ್ರಹಣವಂತೂ ವಿಶೇಷವಾಗಿದೆ. ಅದನ್ನು ಜಗತ್ತಿನಾದ್ಯಂತ ಕಣ್ತುಂಬಿಕೊಳ್ಳಲು ಎಷ್ಟೋ ವಿಜ್ಞಾನಿಗಳು ಸೇರಿದಂತೆ ಜನಸಾಮಾನ್ಯರೂ ಕಾತುರದಿಂದ ಕಾಯುತ್ತಿದ್ದಾರೆ. ಇದು ಜೀವಮಾನದಲ್ಲಿ ಜರುಗುವ ಅಪರೂಪದ ವಿದ್ಯಮಾನ. ಎಷ್ಟೋ ಮಂದಿಗೆ ಇದನ್ನು ನೋಡಲು ಅವಕಾಶವೂ ಸಿಗದು. ಖಗೋಳ ವಿಸ್ಮಯ ಚಂದ್ರಗ್ರಹಣದ ಸೌಂದರ್ಯವನ್ನು ನಿರಾಂತಕವಾಗಿ ಕಣ್ತುಂಬಿಕೊಳ್ಳಿ, ಆನಂದಿಸಿ.

–ಡಾ.ವಸುಂಧರಾ ಭೂಪತಿ. ವಿಜ್ಞಾನ ಲೇಖಕಿ

 

 

 

 

ಬರಹ ಇಷ್ಟವಾಯಿತೆ?

 • 15

  Happy
 • 1

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !