ಮಂಗಳವಾರ, ಜೂನ್ 2, 2020
27 °C

‘ಅಂಬಾನಿ‘ಗೆ ಅಮೆರಿಕದಿಂದ ಗಗನಯಾತ್ರಿಗಳು: ಮೇ 27ರಂದು SpaceX ರಾಕೆಟ್ ಉಡಾವಣೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲು ಸಿದ್ಧತೆಯಲ್ಲಿರುವ ಗಗನಯಾತ್ರಿಗಳು

ವಾಷಿಂಗ್ಟನ್‌: ಸ್ಪೇಸ್‌ಎಕ್ಸ್‌ ರಾಕೆಟ್‌ ಮೂಲಕ ಅಮೆರಿಕದ ಇಬ್ಬರು ಗಗನಯಾತ್ರಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಅಂಬಾನಿ) ಕಳುಹಿಸಲು ಸಿದ್ಧತೆ ನಡೆಸಿದ್ದು, ಮೇ 27ರಂದು ರಾಕೆಟ್‌ ಉಡಾವಣೆಯಾಗಲಿದೆ ಎಂದು ನಾಸಾ ಶುಕ್ರವಾರ ಪ್ರಕಟಿಸಿದೆ. 

ಸುಮಾರು ಹತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದಿಂದ ಗಗನಯಾತ್ರಿಗಳನ್ನು ಹೊತ್ತು ರಾಕೆಟ್‌ ಅಂ.ಬಾ ನಿಲ್ದಾಣದತ್ತ ಸಾಗಲಿದೆ. 'ಮೇ 27ರಂದು ಅಮೆರಿಕದ ಗಗನಯಾತ್ರಿಗಳು ಅಮೆರಿಕದ ರಾಕೆಟ್‌ ಮೂಲಕ ಅಮೆರಿಕದ ನೆಲದಿಂದ ಪ್ರಯಾಣಿಸಲಿದ್ದಾರೆ' ಎಂದು ನಾಸಾ ಮುಖ್ಯಸ್ಥ ಜಿಮ್‌ ಬ್ರಿಡೆನ್‌ಸ್ಟೈನ್‌ ಟ್ವೀಟ್‌ ಮಾಡಿದ್ದಾರೆ. 

2011ರ ಜುಲೈನಿಂದ ಅಮೆರಿಕದ ಗಗನಯಾತ್ರಿಗಳನ್ನು ಅಂಬಾನಿಗೆ ತಲುಪಿಸಲು ರಷ್ಯಾದ ಸುಯುಜ್‌ ರಾಕೆಟ್‌ಗಳ ಮೇಲೆ ಅಮೆರಿಕ ಅವಲಂಬಿತವಾಗಿದೆ. 

ಜಗತ್ತಿನಾದ್ಯಂತ ಕೊರೊನಾ ವೈರಸ್‌ ಸಾಂಕ್ರಾಮಿಕದ ನಡುವೆಯೂ ಅಮೆರಿಕ ಹಿಂದೆ ಯೋಜಿಸಿದಂತೆ ಮೇನಲ್ಲಿ ಗಗನಯಾತ್ರಿಗಳನ್ನು ಅಂ.ಬಾ ನಿಲ್ದಾಣಕ್ಕೆ ಕಳುಹಿಸುವ ಮಿಷನ್‌ ಕೈಗೊಳ್ಳಲು ನಿರ್ಧರಿಸಿದೆ. ಗಗನಯಾತ್ರಿಗಳಾದ ರಾಬರ್ಟ್‌ ಬೆನ್‌ಕೆನ್‌ ಮತ್ತು ಡೌಗ್ಲಾಸ್‌ ಹರ್ಲೆ ಸ್ಪೇಸ್‌ಎಕ್ಸ್‌ನ 'ಫಾಲ್‌ಕನ್‌ 9' ರಾಕೆಟ್‌ ಮೂಲಕ ಅಂ.ಬಾ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ. ಎಲಾನ್‌ ಮಸ್ಕ್‌ ಸ್ಥಾಪಿಸಿರುವ ಸ್ಪೇಸ್‌ಎಕ್ಸ್‌ ಗಗನಯಾತ್ರಿಗಳನ್ನು ಹೊತ್ತೊಯ್ಯಲು 'ಕ್ರೂ ಡ್ರ್ಯಾಗನ್‌' ಗಗನನೌಕೆಯನ್ನು ಸಿದ್ಧಪಡಿಸಿದೆ. ಫಾಲ್‌ಕನ್‌ ರಾಕೆಟ್‌ ಮುಂಭಾಗದ ತುದಿಗೆ ಡ್ರ್ಯಾಗನ್‌ ಗಗನನೌಕೆ ಅಳವಡಿಸಿರಲಾಗುತ್ತದೆ. 

ಫ್ಲೋರಿಡಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ಮೇ 27ರಂದು ಸಂಜೆ 4:32ಕ್ಕೆ ರಾಕೆಟ್‌ ಉಡಾವಣೆಯಾಗಲಿದೆ. ಐತಿಹಾಸಿಕ ಅಪೋಲೊ ಮತ್ತು ಸ್ಪೇಸ್‌ ಶಟಲ್‌ ಮಿಷನ್‌ಗಳಲ್ಲಿ ಬಳಸಲಾಗಿರುವ 39ಎ ಉಡಾವಣಾ ನೆಲೆಯಿಂದ ಉದ್ದೇಶಿತ ರಾಕೆಟ್‌ ಉಡಾವಣೆಗೆ ಸಜ್ಜುಗೊಳಿಸಲಾಗುತ್ತಿದೆ ಎಂದು ನಾಸಾ ಹೇಳಿದೆ. 

2012ರಿಂದ ಅಂ.ಬಾ ನಿಲ್ದಾಣಕ್ಕೆ ಪ್ರಯಾಣಿಸಲು ಬಳಸಲಾಗುತ್ತಿರುವ ಡ್ರ್ಯಾಗನ್‌ ಕ್ಯಾಪ್ಸೂಲ್‌ನ ಪರಿಷ್ಕೃತ ಆವೃತ್ತಿ ಕ್ರೂ ಡ್ರ್ಯಾಗನ್‌. ಬೆನ್‌ಕೆನ್‌ ಮತ್ತು ಹರ್ಲೆ ವರ್ಷದಿಂದ ಈ ಮಿಷನ್‌ಗಾಗಿ ತರಬೇತಿ ಪಡೆಯುತ್ತಿದ್ದಾರೆ. ರಾಕೆಟ್‌ ಉಡಾವಣೆಯಾಗಿ 24 ಗಂಟೆಗಳಲ್ಲಿ ಗಗನಯಾತ್ರಿಗಳು ಅಂ.ಬಾ ನಿಲ್ದಾಣ ತಲುಪಲಿದ್ದಾರೆ. ಅಂ.ಬಾ ನಿಲ್ದಾಣದಲ್ಲಿ ಕಾರ್ಯಾಚರಿಸುವ ಸಮಯದ ಬಗ್ಗೆ ಇನ್ನೂ ನಿಗದಿಯಾಗಿಲ್ಲ. ಈಗಾಗಲೇ ಅಲ್ಲಿ ರಷ್ಯಾದ ಇಬ್ಬರು ಹಾಗೂ ಅಮೆರಿಕದ ಒಬ್ಬ ಗಗನಯಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. 

2012ರಿಂದ ಈವರೆಗೆ ಸ್ಪೇಸ್‌ಎಕ್ಸ್‌ 15 ಬಾರಿ ಅಂ.ಬಾ ನಿಲ್ದಾಣ ತಲುಪಿ ಬಂದಿದೆ. ಆದರೆ, ಅಂ.ಬಾ ನಿಲ್ದಾಣಕ್ಕೆ ಇಂಧನ ಪೂರೈಸುವ ಕಾರ್ಯವನ್ನಷ್ಟೇ ನಿರ್ವಹಿಸಿದೆ. ಅಂ.ಬಾ ನಿಲ್ದಾಣ ಭೂಮಿಯಿಂದ ಸುಮಾರು 400 ಕಿ.ಮೀ ದೂರದಲ್ಲಿ ಸುತ್ತುತ್ತಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು