ಅವಧಿಗೆ ಮೊದಲೇ ಜನಿಸುವ ಮಕ್ಕಳು

7

ಅವಧಿಗೆ ಮೊದಲೇ ಜನಿಸುವ ಮಕ್ಕಳು

Published:
Updated:

ನಗರದಲ್ಲಿ ವರ್ಷಕ್ಕೆ ಶೇ 10ರಷ್ಟು ಮಕ್ಕಳು ಅವಧಿಗಿಂತ ಮೊದಲೇ ಜನಿಸುತ್ತಿವೆ. 23 ವಾರಗಳ ಒಳಗೆ ಹುಟ್ಟಿದ ಮಕ್ಕಳು ಬದುಕುವುದು ತೀರಾ ಕಡಿಮೆ. ಬದುಕಿದರೂ ಅವುಗಳ ಭವಿಷ್ಯ ಕಷ್ಟ. 32 ವಾರಗಳ ನಂತರ ಹುಟ್ಟುವ ಮಕ್ಕಳು ಆರೋಗ್ಯವಾಗಿರುತ್ತಾರೆ. 34ರಿಂದ 36 ವಾರಗಳಲ್ಲಿ ಹುಟ್ಟುವುದು ಸರಿಯಾದ ಕ್ರಮ.

ನಗರದ ಜೀವನಶೈಲಿ, ಅತಿಯಾದ ಒತ್ತಡ, ಬೊಜ್ಜು, ರಕ್ತದೊತ್ತಡ, ಮಧುಮೇಹ ಇವೆಲ್ಲ ಕಾರಣಗಳಿಂದ ಒಂಬತ್ತು ತಿಂಗಳು ತುಂಬುವ ಮೊದಲೇ ಹುಟ್ಟುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ನಗರದ ವೈದ್ಯರ ಅಭಿಪ್ರಾಯ.

ಪರಿಹಾರವೇನು?

‘ಸರಳ ಜೀವನ ಶೈಲಿ, ಯಾಂತ್ರಿಕಗೊಳ್ಳದ ಬದುಕು, ದಿನಕ್ಕೆ ಒಂದಿಷ್ಟು ಹೊತ್ತು ವ್ಯಾಯಾಮ. ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಅಂತರವಿರಬೇಕು. ತಾಯಿ ಸದೃಢ ಆರೋಗ್ಯ ಹೊಂದಿರಬೇಕು. ಪೌಷ್ಟಿಕಾಂಶದ ಕೊರತೆ ಇರದಂತೆ ನೋಡಿಕೊಳ್ಳಬೇಕು. ಗರ್ಭಿಣಿಯಾದಾಗಲೇ ಆಕೆಗೆ ಸಮರ್ಪಕ ಆರೈಕೆ ಸಿಕ್ಕರೆ ಇವೆಲ್ಲವನ್ನೂ ತಡೆಯಬಹುದು ಎಂಬುದು ಸಾಬೀತಾಗಿರುವ ಅಂಶಗಳು ಎನ್ನುತ್ತಾರೆ ವೈದ್ಯರು.

‘ಅವಧಿಗೆ ಮೊದಲೇ ಮಕ್ಕಳ ಜನನ ನೈಸರ್ಗಿಕವಾಗಿ ಆಗುವುದಿಲ್ಲ. ತಾಯಿ ಅಥವಾ ಮಗುವಿಗೆ ಗಂಭೀರ ಸಮಸ್ಯೆ ಇದ್ದರೆ ಅಥವಾ ಇಬ್ಬರಲ್ಲಿ ಒಬ್ಬರನ್ನು ಬದುಕಿಸುವ ಸಂದರ್ಭ ಬಂದಾಗ ಮಾತ್ರ ವೈದ್ಯರೇ ಅಸ್ವಾಭಾವಿಕವಾಗಿ ಮಾಡುವ ಹೆರಿಗೆ ಅಥವಾ ಶಸ್ತ್ರಚಿಕಿತ್ಸೆಯಲ್ಲಿ ಅವಧಿಗೆ ಮೊದಲೇ ಮಕ್ಕಳು ಹುಟ್ಟುತ್ತವೆ’ ಎಂದು ಫೋರ್ಟಿಸ್‌ ಲಾ ಫೆಮ್ಮೆ ಆಸ್ಪತ್ರೆ ನಿರ್ದೇಶಕಿ ಡಾ.ಪ್ರತಿಮಾ ರೆಡ್ಡಿ ಹೇಳಿದರು.

‘ತಾಯಿ ಆರೋಗ್ಯವಾಗಿದ್ದರೆ, ಮಗುವಿನ ಜನನದಲ್ಲಿ ಹೆಚ್ಚು ತೊಂದರೆಯಾಗುವುದಿಲ್ಲ. ಆಕೆಯ ಗರ್ಭಕೋಶದಲ್ಲಿ ತೊಂದರೆ ಇದ್ದರೆ, ಮಗು ಅಂಗವಿಕಲತೆ ಹೊಂದಿದ್ದರೆ, ಕೆಲವೊಮ್ಮೆ ಅಸ್ವಾಭಾವಿಕವಾಗಿ ಹೆರಿಗೆ ಮಾಡಿಸಬೇಕಾಗುತ್ತದೆ. ಅವಧಿ ಪೂರ್ವವಾಗಿ ಮಗು ಹುಟ್ಟಿದರೆ ತಾಯಿಗೆ ಮಾನಸಿಕವಾಗಿ ಸ್ವಲ್ಪ ತೊಂದರೆಯಾಗಬಹುದು ಅಷ್ಟೆ. ಆದರೆ ಮಗು ಹೆಚ್ಚು ಅನಾರೋಗ್ಯವನ್ನು ಎದುರಿಸಬೇಕಾಗುತ್ತದೆ. ಅವಧಿಗೆ ಮೊದಲೇ ಜನಿಸುವ ಮಕ್ಕಳಿಗೆ ವಿಶೇಷವಾದ ಆರೈಕೆಯ ಅಗತ್ಯವಿದೆ. ಅವರ ಅಂಗಾಂಗಳು ಸರಿಯಾಗಿ ಬೆಳವಣಿಗೆಯಾಗಿರುವುದಿಲ್ಲ. ಹೃದಯ, ಯಕೃತ್‌ ಬೆಳವಣಿಗೆ ಆಗಿರುವುದಿಲ್ಲ. ಈ ರೀತಿ ಹುಟ್ಟುವ ಮಕ್ಕಳಿಗೆ ಬೇಗನೆ ಸೋಂಕು ತಗುಲುತ್ತದೆ. ಆದ್ದರಿಂದ ಅವರಿಗೆ ವಿಶೇಷ ಕಾಳಜಿ ಅಗತ್ಯ‘ ಎನ್ನುತ್ತಾರೆ.

ಮಕ್ಕಳ ಆರೈಕೆ ಹೇಗೆ?

‘ನಗರದಿಂದ ದೂರ ಇರುವ ಪ್ರದೇಶಗಳು ಹಾಗೂ ಹಳ್ಳಿಗಳಲ್ಲಿ ಅವಧಿಗಿಂತ ಮೊದಲೇ ಜನಿಸುವ ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಅದರ ಜೊತೆಗೆ ಮಕ್ಕಳ ಸಾವಿನ ಪ್ರಮಾಣವೂ ಹೆಚ್ಚಿದೆ. ಇದಕ್ಕೆ ಕಾರಣ ಸಾಕಷ್ಟಿದೆ. ತಾಯಂದಿರಲ್ಲಿ ಹಿಮೋಗ್ಲೋಬಿನ್‌ ಪ್ರಮಾಣ ಕಡಿಮೆ ಇರುವುದು, ಮಗುವಿನ ಬೆಳವಣಿಗೆ ಕುಂಠಿತವಾಗಿರುವುದು, ರಕ್ತದೊತ್ತಡ ಮುಖ್ಯವಾದ ಕಾರಣ’ ಎಂಬುದು ಕೆ.ಸಿ.ಜನರಲ್‌ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಶೀಲಾ ಮಾನೆ ಅವರ ಮಾತು.

ಈ ರೀತಿಯ ಮಕ್ಕಳಿಗೆ ಹುಟ್ಟಿದ ತಕ್ಷಣ ಆಮ್ಲಜನಕ ಸಿಗದಿದ್ದರೆ, ಮಿದುಳಿನಲ್ಲಿ ರಕ್ತಸ್ರಾವವಾಗಿ ಮಗು ಸಾವನ್ನಪ್ಪ ಬಹುದು ಅಥವಾ ಶಾಶ್ವತವಾಗಿ ಮಾನಸಿಕ ಸಮಸ್ಯೆ ಎದುರಿಸಬಹುದು.

'ಗಂಡು, ಹೆಣ್ಣು ಯಾವುದೇ ಇರಲಿ, ಆರೋಗ್ಯವಾದ ಮಗು ಹುಟ್ಟಲಿ’ ಎಂಬುದು ಈಗಿನ ಎಲ್ಲಾ ತಾಯಂದಿರ ಕನಸಾಗಿದೆ.

ನಿಯೋನೇಟಲ್‌ ಕೇರ್‌

ಅವಧಿಗಿಂತ ಮೊದಲೇ ಜನಿಸುವ ಮಕ್ಕಳಿಗೆ ನಿಯೋನೇಟಲ್‌ ಕೇರ್‌ ವ್ಯವಸ್ಥೆ ಇರುವುದು ತುಂಬಾ ಮುಖ್ಯ. ನಗರದಲ್ಲಿರುವ ಕೆ.ಸಿ. ಜನರಲ್‌, ವಾಣಿವಿಲಾಸ, ಬೌರಿಂಗ್‌, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಇದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲೂ ಇದೆ. 

ಆದರೆ ಈ ಜನಸಂಖ್ಯೆಗೆ ಇದು ಸಾಲದು. ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ ₹8ರಿಂದ 10 ಸಾವಿರ ಚಾರ್ಜ್‌ ಮಾಡುತ್ತಾರೆ. ಬಡವರು ಇಂತಹ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ‌ಅವಧಿ ಪೂರ್ಣಗೊಳ್ಳದೇ ಹುಟ್ಟಿದ್ದರೆ, ಕಾಮಾಲೆ ಇದ್ದರೆ ನಿಯೋನೇಟಲ್‌ನಲ್ಲಿ ಮಕ್ಕಳನ್ನು ಇಡಲೇಬೇಕು. ಒಂದು ವಾರ ಈ ಕೇರ್‌ನಲ್ಲಿ ಇದ್ದರೆ ಮಕ್ಕಳ ಆರೋಗ್ಯ ಸುಧಾರಿಸುವ ಸಾಧ್ಯತೆ ಹೆಚ್ಚು. 

ಅವಧಿಗೆ ಮೊದಲೇ ಆಗುವ ಜನನಗಳ ತಡೆ ಹೇಗೆ?

* ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಅಂತರ ಕಾಯ್ದುಕೊಳ್ಳುವುದು

* ತಾಯಿ ಸದೃಢ ಆರೋಗ್ಯ ಕಾಪಾಡಿಕೊಳ್ಳುವುದು

* ಜೀವನಶೈಲಿಯಿಂದ ಬರುವ ಕಾಯಿಲೆಗಳಿಂದ ದೂರ ಉಳಿಯುವುದು

* ಬೊಜ್ಜು, ರಕ್ತದೊತ್ತಡ, ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು

*  ನಿರಂತರ ವ್ಯಾಯಾಮ, ಪೌಷ್ಟಿಕ ಆಹಾರ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !