ರೋಬೋಗಳು ಎಂದರೆ ಥಟ್ಟನೆ ನೆನಪಿಗೆ ಬರುವುದು ನಿಧಾನವಾಗಿ ಕಾಲೆತ್ತಿ ಮುಂದೆ ಚಲಿಸುವ ಯಂತ್ರ; ಇಲ್ಲವೇ ಹೋಟೆಲುಗಳಲ್ಲಿ ಕಾಫಿ, ತಿಂಡಿ ಪರಿಚರಿಸುವ ಮಾಣಿ ರೋಬೋಗಳು. ನಡೆಯುವಾಗ ಇವು ನೇರವಾಗಿಯೇ ನಡೆಯಬೇಕು; ಮರಳಿ ಬಂದ ಹಾದಿಯಲ್ಲಿಯೇ ಹೋಗಬೇಕು ಎಂದರೂ ನಿಧಾನವಾಗಿ ಬಲಕ್ಕೋ ಎಡಕ್ಕೋ ತಿರುಗಿ, ಮತ್ತೆ ಬಲಕ್ಕೋ ಎಡಕ್ಕೋ ತಿರುಗಿ ನಡೆಯಬೇಕು. ಇದೋ ಇಂತಹ ರೋಬೋಗಳು ನಿಂತಲ್ಲೇ ರೊಯ್ಯನೆ ‘ಯೂ ಟರ್ನ್’ ತೆಗೆದುಕೊಳ್ಳುವಂತೆ ಮಾಡುವ ಚಕ್ರಗಳು ಬಂದಿವೆಯಂತೆ. ಗಾಳಿ ಬೀಸಿದಾಗ ಉರುಳಿಕೊಂಡು ಹೋಗುವ ‘ಟಂಬಲ್ವೀಡ್’ ಎನ್ನುವ ಪುರುಳೆ ಉಂಡೆಗಳಿಂದ ಪ್ರೇರಣೆ ಪಡೆದು ಎಲ್ಲ ದಿಕ್ಕುಗಳಲ್ಲಿಯೂ ಚಲಿಸಬಲ್ಲಂತಹ ‘ಟ್ವಿರ್ಲ್ಬಾಟ್’ ಎನ್ನುವ ಉರುಳೆಚಕ್ರ ಅಥವಾ ಗಾಲಿಗಳನ್ನು ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಲಾಸ್ ಏಂಜೆಲೀಸ್ನ ಮೆಕ್ಯಾನಿಕಲ್ ಎಂಜಿನಿಯರ್ ಶಿಮಿನ್ ಹಾ ಮತ್ತು ಸಂಗಡಿಗರು ರೂಪಿಸಿದ್ದಾರೆ.

‘ಟಂಬಲ್ವೀಡ್’ ಎನ್ನುವುದು ಹುಲ್ಲುಗಾವಲುಗಳಲ್ಲಿ ಬೆಳೆಯುವ ಹಲವು ಕುರುಚಲುಗಿಡಗಳಿಂದ ಹುಟ್ಟಿದ ವಸ್ತು. ಅಮೆರಿಕಖಂಡದಲ್ಲಿ ಇದು ಸಾಮಾನ್ಯ. ವರ್ಷದಲ್ಲಿ ಒಂದು ಋತುವಿನಲ್ಲಿಯಷ್ಟೆ ಬೆಳೆದು ಹೂತಳೆಯುವ ಈ ಗಿಡಗಳು ನಂತರ ಒಣಗಿಹೋಗುತ್ತವೆ. ಹೀಗೆ ಒಣಗಿದ ಪುರುಳೆ ದುಂಡಗಿನ ಉಂಡೆಯಂತಾಗಿ, ಗಾಳಿ ಬೀಸಿದತ್ತ ಉರುಳುತ್ತ ಸಾಗುತ್ತವೆ. ಹಾದಿಯಲ್ಲಿ ತಮ್ಮ ಮೈಯಲ್ಲಿ ಅಡಗಿರುವ ಬೀಜಗಳನ್ನು ಬಿತ್ತುತ್ತವೆ. ಗಿಡಗಳ ಬೀಜಪ್ರಸಾರ ಹೀಗೆ ಆಗುತ್ತದೆ. ಈ ಪುರುಲೆ ಉಂಡೆಗಳು ಗಾಳಿ ಎತ್ತ ಬೀಸುತ್ತದೆಯೋ ಅತ್ತ ಉರುಳಬಲ್ಲವು. ಹೀಗಾಗಿ ನೆಲೆಯಿಂದ ಬಲು ದೂರ ಇವು ಸಾಗಬಲ್ಲವು. ಹಗುರವಾಗಿರುವುದರಿಂದ ಮೆಲುಗಾಳಿಯೂ ಇವನ್ನು ದೂಡಬಲ್ಲುದು. ಭಾರದಿಂದಾಗಿ ನೆಲ ಮುಟ್ಟುವ ತಳ ಒತ್ತಿ ಸಪಾಟಾದರೂ, ತುಸು ಸರಿದೊಡನೆ ಮರಳಿ ದುಂಡಗಾಗುತ್ತವೆ. ದುಂಡಗಿನ ಆಕಾರವನ್ನು ಹೀಗೆ ಕಾಯ್ದುಕೊಳ್ಳುವುದರಿಂದ ಎತ್ತ ಬೇಕಿದ್ದರೂ ಇವು ಚಲಿಸಬಲ್ಲುವು. ಇದೇ ತಂತ್ರವನ್ನು ಬಳಸಿ ಉರುಳುವ ರೋಬೋಗಳನ್ನು ಸಿದ್ಧಪಡಿಸಬಹುದಲ್ಲ ಎನ್ನುವುದು ಶಿಮಿನ್ ಹಾ ತಂಡದ ಯೋಚನೆ.

ಪುರುಳೆ ಉಂಡೆಯನ್ನು ದೂಡಲು ಗಾಳಿ ಬೇಕು. ಉರುಳು ರೋಬೋ ತನ್ನದೇ ಬಲದಿಂದ ಚಲಿಸುವಂತೆ ಮಾಡಬೇಕು – ಎನ್ನುವುದು ಶಿಮಿನ್ ಹಾ ಯೋಚನೆ. ಇದಕ್ಕಾಗಿ ಇವರು ಮಾಡಿದ ಉಪಾಯ ಇದು. ಶಾಖಕ್ಕೋ ಬೆಳಕಿಗೋ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸುವ ವಸ್ತುಗಳನ್ನು ಜೋಡಿಸಿ, ಅವು ಬಾಗುವಂತೆ ಮಾಡಬಹುದು. ‘ಲಿಕ್ವಿಡ್ ಕ್ರಿಸ್ಟಲ್ ಪಾಲಿಮರ್ಗಳು’ ಎನ್ನುವ ವಸ್ತುಗಳು ಹೀಗೆ ಆಕಾರ ಬದಲಿಸಬಲ್ಲುವು. ಬೆಳಕಿಗೆ ಸ್ಪಂದಿಸುವ ಇಂತಹ ವಸ್ತುವಿನ ತೆಳುಪಟ್ಟಿಗಳನ್ನು ಮಾಡಿ, ಅವುಗಳಿಂದ ಟಂಬಲ್ ವೀಡಿನಂತಹ ಉಂಡೆಗಳನ್ನು ಹೆಣೆದರೆ, ಬೆಳಕು ಬಿದ್ದಾಗ ಅವು ಅತ್ತ ಬಾಗಬಹುದಲ್ಲವೇ? ಹೆಣಿಗೆ ಸರಿಯಾಗಿದ್ದರೆ, ಬೆಳಕು ಬಿದ್ದು ಬಾಗಿದ ಕಡೆ ಭಾರ ಹೆಚ್ಚಾಗಿ ಇವು ಉರುಳಬಹುದು. ಹೀಗೆ ಉರುಳುತ್ತ ಸಾಗಬಹುದು. ಇದು ತರ್ಕ; ಕಲ್ಪನೆ.

ಈ ಕಲ್ಪನೆಯನ್ನು ಸಾಕಾರಗೊಳಿಸಲು ಶಿಮಿನ್ ಹಾ ತಂಡ ವಿಶೇಷವಾದೊಂದು ಲಿಕ್ವಿಡ್ ಕ್ರಿಸ್ಟಲಿನ ಪಟ್ಟಿಯನ್ನು ತಯಾರಿಸಿತು. ವಾಸ್ತವದಲ್ಲಿ ಇದು ಎರಡು ತೆಳುಪಟ್ಟಿಗಳನ್ನು ಅಂಟಿಸಿ ಮಾಡಿದ ವಸ್ತು. ಒಂದು ಪಟ್ಟಿ ಬೆಳಕಿಗೆ ಸ್ಪಂದಿಸಿ ಕುಗ್ಗುತ್ತಿತ್ತು. ಇನ್ನೊಂದು ಹಿಗ್ಗುತ್ತಿತ್ತು. ಕುಗ್ಗುವ ಪಟ್ಟಿಯನ್ನು ‘ಆರ್ಎಂ 257’ ಎನ್ನುವ ಪಾಲಿಮರಿನ ಜೊತೆಗೆ ಮೇಣದ ಬತ್ತಿಯಿಂದ ಹೆಕ್ಕಿದ ಮಸಿಯ ಪುಡಿಯನ್ನು ಬೆರೆಸಿ ತಯಾರಿಸಿದ್ದರು. ಮತ್ತೊಂದು ಪಾಲಿಮರ್ ‘ಪಿಡಿಎಂಎಸ್’ ಎನ್ನುವ ವಸ್ತು. ಇವೆರಡನ್ನೂ ಭದ್ರವಾಗಿ ಅಂಟಿಸಿದ್ದರು. ಹೀಗೆ ತಯಾರಾದ ಇಬ್ಬಂದಿ ವಸ್ತುವನ್ನು ತೆಳುವಾದ ರಿಬ್ಬನುಗಳಾಗಿ ಕತ್ತರಿಸಿದರು. ಆರು ಇಂತಹ ರಿಬ್ಬನುಗಳನ್ನು, ಬಿದಿರಿನ ಬುಟ್ಟಿಯನ್ನು ಹೆಣೆಯುವಂತೆ, ಹೆಣೆದು ಎರಡು ಸೆಂಟಿಮೀಟರ್ ವ್ಯಾಸದ ಚೆಂಡನ್ನು ರೂಪಿಸಿದರು. ಚೆಂಡಿನ ಬುಡದಲ್ಲಿ ಲೇಸರಿನಿಂದ ಹಾದಿಯೊಂದನ್ನು ಬೆಳಗಿದಾಗ, ಚೆಂಡು ಆ ಹಾದಿಗುಂಟ ಉರುಳುತ್ತ ಸಾಗಿತು. ಚೆಂಡನ್ನು ತಯಾರಿಸಲು ಬೇಕಾದ ಮಸಿಯ ಕಣಗಳ ಗಾತ್ರ, ಪಾಲಿಮರ್ಗಳ ರಚನೆ, ಉಷ್ಣತೆ, ಅದು ಉರುಳುವುದಕ್ಕೆ ತಕ್ಕುದಾದ ಲೇಸರಿನ ಪ್ರಖರತೆಯನ್ನೆಲ್ಲ ಇವರು ನಿಶ್ಚಯಿಸಿದ್ದಾರೆ. ‘ನೂರಾರು ಬಾರಿ ಉರುಳಿದರೂ, ಉರುಳೆ ರೋಬೋಗಳ ಆಕಾರ ಕೆಡಲಿಲ್ಲ’ ಎಂದು ಹಾ ವರದಿ ಮಾಡಿದ್ದಾರೆ.

ಅಷ್ಟೇ ಅಲ್ಲ, ಸರಳವಾದ ವಸ್ತುಗಳಿಂದಲೂ ಈ ಬಗೆಯ ವಿನ್ಯಾಸ ತಯಾರಿಸಬಹುದು ಎಂದು ಸಾಧಾರಣ ಸೆಲ್ಲೋಟೇಪು, ಕಾಗದ ಹಾಗೂ ವೈಟ್ ಬೋರ್ಡಿನ ಮೇಲೆ ಬರೆಯಲು ಬಳಸುವ ಕಪ್ಪುಶಾಯಿಯ ಪೆನ್ನನ್ನು ಬಳಸಿ ಉರುಳೆ ರೋಬೋಗಳನ್ನು ರೂಪಿಸಿದ್ದಾರೆ. ಇದರತ್ತ ಅರವತ್ತು ಡಿಗ್ರಿ ಶಾಖದ ಬಿಸಿ ತಗುಲಿದರೆ ಸಾಕು, ಉರುಳುತ್ತಾ ಸಾಗುತ್ತದೆ. ಈ ಉರುಳೆಗಳು ಏರುಗಳಲ್ಲಿ, ಮಣ್ಣಿನಂತಹ ಉಬ್ಬು ತಗ್ಗಿರುವ ಮೇಲ್ಮೈ ಮೇಲೆ, ಗಾಜಿನಂತಹ ನಯವಾದ ಜಾಗದಲ್ಲಿಯೂ ಯಾವುದೇ ಅಡೆತಡೆ ಇಲ್ಲದೆ ಉರುಳುತ್ತವೆ ಎಂದು ಹಾ ನಿರೂಪಿಸಿದ್ದಾರೆ. ಟಂಬಲ್ ವೀಡಿಯಂತೆಯೇ ಈ ಉರುಳೆ ರೋಬೋನೊಳಗೆ ಬೀಜಗಳನ್ನು ತುಂಬಿ, ಬಿಸಿಲಿಗೆ ಇಟ್ಟಿದ್ದಾರೆ. ಟ್ವಿರ್ಲ್ಬಾಟುಗಳು ತಮ್ಮಂತಾವೇ ಉರುಳುತ್ತ ಸಾಗಿ ಬೀಜಗಳನ್ನು ಬಿತ್ತಿವೆ. ಬೆಳಕು ಒಂದೆಡೆಯಿಂದ ಮತ್ತೊಂದೆಡೆಗೆ ಚಲಿಸುವಂತೆ ಮಾಡಿ, ಈ ಉರುಳೆಗಳು ಮರಳಿ ತಮ್ಮ ಸ್ವಸ್ಥಾನಕ್ಕೆ ಬರುವಂತೆಯೂ ಮಾಡಿ ತೋರಿಸಿದ್ದಾರೆ. ಅಂದರೆ ಸೂರ್ಯೋದಯದ ಸಮಯದಲ್ಲಿ ಉರುಳಲು ಆರಂಭಿಸಿದ ರೋಬೋಗಳು ಬೀಜಗಳನ್ನು ಬಿತ್ತಿ, ಸೂರ್ಯಾಸ್ತದ ಸಮಯದಲ್ಲಿ ಮರಳಿ ತಮ್ಮ ನೆಲೆಗೆ ತೆರಳಬಲ್ಲುವು ಎಂಬುದು ಇವರ ಆಶಯ.

ಈ ವಿನ್ಯಾಸವನ್ನೇ ಬಳಸಿ, ಇನ್ನೂ ಕಿರಿದಾದ, ತೆಳುವಾದ ಪಟ್ಟಿಗಳಿಂದ ದೊಡ್ಡದಾದ ಉರುಳೆಗಳನ್ನು ತಯಾರಿಸಬಹುದು. ಅವುಗಳಿಂದ ಟಂಬಲ್ವೀಡಿನಂತೆಯೇ ಹಲವು ಕೆಲಸಗಳನ್ನು ಮಾಡಿಸಬಹುದು ಎನ್ನುವುದು ಹಾ ಅವರ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.