ಬಂತು ರೋಬೊಟಿಕ್ ದೂರದರ್ಶಕ

7

ಬಂತು ರೋಬೊಟಿಕ್ ದೂರದರ್ಶಕ

Published:
Updated:
ರೋಬೊಟಿಕ್ ದೂರದರ್ಶಕ

ಇಂದು 20ಕ್ಕೂ ಹೆಚ್ಚು ದೇಶಗಳು ರೋಬೊಟಿಕ್ ದೂರದರ್ಶಕಗಳನ್ನು ಬಳಸುತ್ತಿವೆ. ಈಗ ಭಾರತವೂ ಈ ಸಾಲಿಗೆ ಸೇರಿರುವ 21ನೇ ದೇಶವಾಗಿದೆ ಎಂದರೆ ನಮಗೆ ಹೆಮ್ಮೆಯಲ್ಲವೇ? ಬೆಂಗಳೂರಿನಲ್ಲಿರುವ ಐಐಎ (ಇಂಡಿಯನ್ ಇನ್ಸ್‌ಟಿಟ್ಯೂಟ್‌ ಆಫ್ ಆಸ್ಟ್ರೋಫಿಸಿಕ್ಸ್) ನೆರವಿನೊಂದಿಗೆ ಲಡಾಖ್‌ನಲ್ಲಿ ಪ್ರಥಮ ರೋಬೊಟಿಕ್ ದೂರದರ್ಶಕವನ್ನು ತಯಾರಿಸಿ ಇಡಲಾಗಿದೆ.

ಲಡಾಖ್‌ನ ಹನ್ಲೆ ಪ್ರದೇಶದಲ್ಲಿ ಇಡಲಾಗಿರುವ ಈ ದೂರದರ್ಶಕವು ‘ಗ್ರೋತ್’ ಎಂಬ ಜಾಗತಿಕ ದೂರದರ್ಶಕ ನೆಟ್‌‌ವರ್ಕ್‌ನ ಒಂದು ಭಾಗ. ಈ ರೀತಿಯ ನೆಟ್‌ವರ್ಕ್‌ ಬಳಸುವುದರ ಮೂಲಕ ನಿರಂತರವಾಗಿ ಅಧ್ಯಯನ ಮಾಡಬಹುದು.

ಬಾಹ್ಯಾಕಾಶದಲ್ಲಿನ ವಾತಾವಾರಣದ ಸ್ಥಿತಿಗೆ ಅನುಗುಣವಾಗಿ ಡೋಮ್ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಆದರೆ ಸಾಮಾನ್ಯ ದೂರದರ್ಶಕಗಳು ಈ ರೀತಿ ಕಾರ್ಯ ನಿರ್ವಹಿಸುವುದಿಲ್ಲ. ನಾವು ಇಲ್ಲಿಯವೆರೆಗೂ ತಯಾರಿಸಿ ಉಪಯೋಗಿಸುತ್ತಿದ್ದ ದೂರದರ್ಶಕಗಳು ಸಂಪೂರ್ಣವಾಗಿ ಮ್ಯಾನ್ಯುವಲ್.

ರೋಬೊಟಿಕ್ ದೂರದರ್ಶಕಗಳು, ತಮ್ಮ ಕಾರ್ಯ ಮುಗಿದ ಮೇಲೆ ತಮ್ಮಷ್ಟಕ್ಕೆ ತಾವೇ ಕಾರ್ಯಚರಣೆ ಸ್ಥಗಿತಗೊಳಿಸುತ್ತವೆ. ROBO-AO ಎಂಬ ದೂರದರ್ಶಕವು ಸ್ವಯಂ ಕಾರ್ಯ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡಿದೆ. ಈ ದೂರದರ್ಶಕವು 1ರಿಂದ 3 ಮೀ. ಉದ್ದವಿದ್ದು, ಈಗ ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಚ್‌ಎಸ್‌ಟಿಗಿಂತಲೂ (ಹಬಲ್ ಸ್ಪೇಸ್ ಟೆಲಿಸ್ಕೋಪ್)  ಹೆಚ್ಚು ಫೋಟೋ, ಇಮೇಜ್‌ಗಳನ್ನು ಸೆರೆಹಿಡಿದು ಭೂಮಿಗೆ ಕಳುಹಿಸುವ ನೈಪುಣ್ಯತೆ ಹೊಂದಿದೆ.

ರೋಬೊಟಿಕ್ ದೂರದರ್ಶಕದ ಮೂಲಕ ಯಾವುದೇ ಗ್ರಹದ ಸ್ಥಾನ, ಆ ಗ್ರಹದ ಸುತ್ತಳತೆ, ಗ್ರಹದ ಸುತ್ತಲೂ ಸುತ್ತುತ್ತಿರುವ ಉಪಗ್ರಹಗಳನ್ನು ಸುಲಭವಾಗಿ ವೀಕ್ಷಿಸಬಹುದು. ಗ್ರಹದ ಭ್ರಮಣೆ ಮತ್ತು ಪರಿಭ್ರಮಣೆ ಅವಧಿಯನ್ನೂ ಈ ದೂರದರ್ಶಕದಿಂದ ತಿಳಿಯಬಹುದು. ಈ ಎಲ್ಲ ವಿವರಗಳನ್ನು ಉತ್ತರ ಕರೋಲಿನಾದ ಪ್ರೊ.ನಿಕೋಲಾಸ್ ಲಾ ತಿಳಿಸಿದ್ದಾರೆ. ಸಂಶೋಧಕರು ಈ ದೂರದರ್ಶಕದ ಮೂಲಕ 400ಕ್ಕೂ ಹೆಚ್ಚು ಹೊಸ ಆಕಾಶಕಾಯಗಳನ್ನು ಪತ್ತೆಹಚ್ಚಿದ್ದಾರೆ.

ಮಾನವನ ಸಹಕಾರವಿಲ್ಲದೆ ಈ ದೂರದರ್ಶಕವು ತನ್ನ ಸುತ್ತಮುತ್ತಲಿನ ಸನ್ನಿವೇಶಗಳನ್ನು ಸೆರೆಹಿಡಿಯುವ CCD ಕ್ಯಾಮೆರಾಗಳನ್ನು ಒಳಗೊಂಡಿದೆ. ದೂರದರ್ಶಕವನ್ನು ನಿಯಂತ್ರಿಸುವ ರಿಮೋಟ್‌ಗಳನ್ನೂ ಅಳವಡಿಸಲಾಗಿದೆ. ಈ ದೂರದರ್ಶಕದಲ್ಲಿ OPEN LOOP SYSTEM ಮತ್ತು CLOSED LOOP SYSTEM ಎಂಬ ಎರಡು ರೀತಿಯ ಸಂಜ್ಞೆಗಳನ್ನು ನೀಡುವ ಸೂಚಕಗಳಿವೆ. ಎಲ್ಲ ರೀತಿಯ ಮಾಹಿತಿಗಳನ್ನು ಸ್ವೀಕರಿಸಿ ಸ್ವಯಂ ಮೌಲ್ಯಮಾಪನ ಮಾಡಿ ನಿರ್ಧಾರಕ್ಕೆ ಬರುತ್ತದೆ.

ಇದೊಂದು ದುಬಾರಿ ದೂರದರ್ಶಕವಾಗಿದ್ದು, ಇತಿಹಾಸದಲ್ಲಿಯೇ ಅತ್ಯಾಧುನಿಕ ದೂರದರ್ಶಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1998ರಿಂದಲೇ ಈ ರೀತಿಯ ರೋಬೊಟಿಕ್ ದೂರದರ್ಶಕಗಳನ್ನು ತಯಾರಿಸಲಾಗಿದ್ದು, 2003ರ ಹೊತ್ತಿಗೆ ಇಂತಹ ದೂರದರ್ಶಕಗಳು ಬಳಕೆಗೆ ಬಂದವು. ಈಗ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿರುವುದರಿಂದ ಭವಿಷ್ಯದಲ್ಲಿ ಜನ ಸಾಮಾನ್ಯರೂ ಕೊಂಡು ಆಕಾಶಕಾಯಗಳನ್ನು ನೋಡಿ ಮಾಹಿತಿ ಪಡೆಯುವ ಕಾಲ ಸನ್ನಿಹಿತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !