ಚಿಂಪಾಂಜಿ ಪರಿಚಯದ ಅಷ್ಟ ಪ್ರಶ್ನೆಗಳು

7
ವಿಜ್ಞಾನ ವಿಶೇಷ

ಚಿಂಪಾಂಜಿ ಪರಿಚಯದ ಅಷ್ಟ ಪ್ರಶ್ನೆಗಳು

Published:
Updated:

1. ಚಿಂಪಾಂಜಿ - ಅದೆಂಥ ಪ್ರಾಣಿ?
ಚಿಂಪಾಂಜಿ (ಚಿತ್ರ-1) - ಅದೊಂದು ‘ವಾನರ’ (ಏಪ್). ಸ್ತನಿ ವರ್ಗದ, ಪ್ರೈಮೇಟ್ ಸಂಕುಲದ ‘ಹೋಮಿನಿಡೇ’ ಕುಟುಂಬಕ್ಕೆ ಚಿಂಪಾಂಜಿ ಸೇರಿದೆ. ಗೊರಿಲ್ಲ, ಒರಾಂಗೊಟಾನ್ ಮತ್ತು ಮನುಷ್ಯರದೂ ಇದೇ ಕುಟುಂಬ. ಚಿಂಪಾಂಜಿಗಳಲ್ಲಿ ಎರಡು ಪ್ರಭೇದಗಳಿವೆ: ‘ಪಾನ್ ಟ್ರೋಗ್ಲೋಡೈಟ್ಸ್’ (ಕಾಮನ್ ಚಿಂಪಾಂಜಿ) ಮತ್ತು ‘ಪಾನ್ ಪಾನಿಸ್ಕಸ್ (ಬೋನೋಬೋ)’. ಪಾನ್ ಟ್ರೋಗ್ಲೋಡೈಟ್ಸ್‌ನಲ್ಲಿ ನಾಲ್ಕು ಉಪ ಪ್ರಭೇದಗಳಿವೆ ಕೂಡ.

ತುಂಬ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಚಿಂಪಾಂಜಿ ನಮ್ಮ ದಾಯಾದಿ (ಕಸಿನ್)! ಹಾಗಾಗಿ ಧರೆಯ ಇಡೀ ಪ್ರಾಣಿ ಸಾಮ್ರಾಜ್ಯದಲ್ಲಿ ಚಿಂಪಾಂಜಿಯೇ ಜೈವಿಕವಾಗಿ ನಮ್ಮ ಅತ್ಯಂತ ನಿಕಟ ಸಂಬಂಧಿ. ಎಷ್ಟೆಂದರೆ, ಮನುಷ್ಯರ ಮತ್ತು ಚಿಂಪಾಂಜಿಗಳ ವಂಶವಾಹಿಗಳ (ಜೀನ್ಸ್) ನಡುವೆ ಶೇಕಡ 98ರಷ್ಟು ಸಾಮ್ಯ ಇದೆ!

2. ಚಿಂಪಾಂಜಿಗಳು ಎಷ್ಟು ಕಾಲದಿಂದ ಧರೆಯಲ್ಲಿವೆ?
ಈಗ್ಗೆ ಸಮೀಪ ಹತ್ತರಿಂದ ಹನ್ನೆರಡು ದಶಲಕ್ಷ ವರ್ಷಗಳ ಹಿಂದೆ ಧರೆಯಲ್ಲಿದ್ದ ಮೂಲ ವಾನರರಾದ ‘ನಕಲಿಪಿತೀಕಸ್’ ಮತ್ತು ಆ ನಂತರದ ‘ಔರೆನೋಪಿತೀಕಸ್’ ಮತ್ತು ‘ಸಹಲಾಂಥ್ರೋಪಸ್’ಗಳಿಂದ ಮುನ್ನಡೆದ ಜೀವ ವಿಕಾಸದ ಹಾದಿಯಲ್ಲಿ ‘ಹೋಮಿನಿಡ್’ ಕುಟುಂಬ ಕವಲೊಡೆಯಿತು. ಆ ಕುಟುಂಬದಲ್ಲಿ ಈಗ್ಗೆ ಸುಮಾರು ಐದೂವರೆ ದಶಲಕ್ಷ ವರ್ಷಗಳ ಹಿಂದೆ ಚಿಂಪಾಂಜಿಗಳ ವಂಶ ‘ಪಾನ್’ ಬೇರ್ಪಟ್ಟು ಪ್ರತ್ಯೇಕ ಅಸ್ತಿತ್ವ ಪಡೆಯಿತು. ಹಾಗೆಂದರೆ ಚಿಂಪಾಂಜಿಗಳು ಆದಿ ಮಾನವರಿಗೂ, ಎಂದರೆ, ನಮ್ಮ ಮೂಲ ಪಿತಾಮಹರಿಗೂ, ಬಹುಕಾಲ ಮೊದಲಿಂದಲೇ ಭೂಮಿಯಲ್ಲಿವೆ ಎಂಬುದು ಸ್ಪಷ್ಟ.

3. ಚಿಂಪಾಂಜಿಗಳ ವಿಶೇಷ ಲಕ್ಷಣಗಳೇನು?
ತುಂಬ ಸ್ಥೂಲವಾಗಿ ಗಮನಿಸಿದರೆ ಚಿಂಪಾಂಜಿಗಳಲ್ಲಿ ಮನುಷ್ಯರನ್ನು ಹೋಲುವ ಲಕ್ಷಣಗಳು ಬಹಳ ಇವೆ (ಚಿತ್ರಗಳಲ್ಲಿ ಗಮನಿಸಿ). ವಯಸ್ಕ ಗಂಡು ಚಿಂಪಾಂಜಿಗಳದು ನಾಲ್ಕು ಅಡಿ ಎತ್ತರ; 40 ರಿಂದ 60 ಕೆ.ಜಿ. ತೂಕ. ಹೆಣ್ಣುಗಳದು 27ರಿಂದ 50 ಕೆ.ಜಿ ತೂಕ. ರೋಮಮಯ ಶರೀರವಾದರೂ ಮುಖ, ಹಸ್ತ, ಪಾದ ಮತ್ತು ಬೆರಳುಗಳು ರೋಮರಹಿತ. ಕಾಲುಗಳಿಗಿಂತ ಉದ್ದವಾದ ತೋಳುಗಳು. ವೃಕ್ಷಗಳನ್ನು ಲೀಲಾಜಾಲವಾಗಿ ಹತ್ತಲು - ಇಳಿಯಲು ಸೂಕ್ತವಾದ ಹಸ್ತ-ಪಾದ ವಿನ್ಯಾಸ (ಚಿತ್ರ-2); ನೆಲದ ಮೇಲೆ ಕೈಗಳ ಬೆರಳುಗಳನ್ನು ಮಡಿಸಿ ‘ನಾಲ್ಕು ಕಾಲುಗಳ’ ನಡೆದಾಟ - ಓಡಾಟ. ಹತ್ತರಿಂದ ಹದಿಮೂರು ವರ್ಷ ವಯಸ್ಸಿನ ವೇಳೆಗೆ ಚಿಂಪಾಂಜಿಗಳು ಪ್ರೌಢವಾಗುತ್ತವೆ. ಈ ವಾನರರ ಮೆದುಳಿನದು ಮನುಷ್ಯರ ಮೆದುಳಿನ ಮೂರರ ಒಂದಂಶದಷ್ಟು ಗಾತ್ರ; ಆದರೂ, ಅವುಗಳದು ಅತ್ಯಂತ ಕುತೂಹಲದ, ಅನ್ವೇಷಣಾ ಆಸಕ್ತಿಯ ಪ್ರವೃತ್ತಿ. ಚಿಂಪಾಂಜಿಗಳದು ತುಂಬ ಒರಟು ನಡವಳಿಕೆ; ತೀರಾ ದುಷ್ಟ ಸ್ವಭಾವ; ಬಹುಬೇಗ ಕೆರಳುವ, ಕೋಪಗೊಳ್ಳುವ, ಕಲಹಕ್ಕಿಳಿಯುವ ಮನೋಭಾವ! ಈ ವಾನರರ ಸರಾಸರಿ ಆಯುಷ್ಯ ಐವತ್ತು ವರ್ಷ.

4. ಧರೆಯಲ್ಲಿ ಚಿಂಪಾಂಜಿಗಳ ನೈಸರ್ಗಿಕ ವಾಸಕ್ಷೇತ್ರ ಯಾವುದು?
ಪೃಥ್ವಿಯಲ್ಲಿ ಚಿಂಪಾಂಜಿಗಳದು ತುಂಬ ಸೀಮಿತ ವಾಸ ಕ್ಷೇತ್ರ. ಆಫ್ರಿಕಾ ಖಂಡದಲ್ಲಿ ಮಾತ್ರ (ಚಿತ್ರ-3) ಅವುಗಳ ಅಸ್ತಿತ್ವ. ಅಲ್ಲೂ ಸಮಭಾಜಕದ ಆಸುಪಾಸಿನ ರಾಷ್ಟ್ರಗಳ ವೃಷ್ಟಿವನ ಮತ್ತು ಸವನ್ನಾ ಹುಲ್ಲುಬಯಲಿನ ಪ್ರದೇಶಗಳಲ್ಲಷ್ಟೇ ಚಿಂಪಾಂಜಿಗಳ ನೈಸರ್ಗಿಕ ವಾಸ್ತವ್ಯ. ಕ್ಯಾಮರೂನ್, ಕಾಂಗೊ, ಸೆನೆಗಲ್, ಮಾಲಿ, ಲೈಬೀರಿಯಾ, ಐವರಿ ಕೋಸ್ಟ್, ಘಾನಾ, ನೈಜೀರಿಯಾ, ಉಗಾಂಡಾ, ರುವಾಂಡ, ಜಾಂಬಿಯಾ, ತಾಂಜಾನಿಯಾ ಇತ್ಯಾದಿ ರಾಷ್ಟ್ರಗಳಲ್ಲಿ ಚಿಂಪಾಂಜಿಗಳು ಪ್ರಸ್ತುತ ನೆಲೆಗೊಂಡಿವೆ.

5. ಚಿಂಪಾಂಜಿಗಳ ಆಹಾರ ಕ್ರಮ ಏನು?
ಚಿಂಪಾಂಜಿಗಳು ವಾಸ್ತವವಾಗಿ ಮಿಶ್ರಾಹಾರಿಗಳು. ಆದರೂ ಅವುಗಳದು ಪ್ರಧಾನವಾಗಿ ಸಸ್ಯಾಹಾರ. ಈ ವಾನರರು ಅಂದಾಜು ಮುನ್ನೂರು ಬಗೆಗಳ ಸಸ್ಯಾಹಾರಗಳನ್ನು ಸೇವಿಸುತ್ತವೆ: ಬಗೆ ಬಗೆಯ ಸೊಪ್ಪುಗಳು, ಹೂವುಗಳು, ಕಾಯಿಗಳು, ಹಣ್ಣುಗಳು, ಬೀಜಗಳು... ಇತ್ಯಾದಿ. ಇವುಗಳ ಜೊತೆ ಚಿಂಪಾಂಜಿಗಳು ಹಕ್ಕಿಗಳ ಮೊಟ್ಟೆಗಳನ್ನು ಹೀರುತ್ತವೆ; ಕೀಟಗಳನ್ನು ಜಗಿಯುತ್ತವೆ; ಗುಂಪುಗೂಡಿ ‘ಕೊಲೋಬಸ್’ಗಳಂತಹ (ಚಿತ್ರ-12) ಪುಟ್ಟ ಮಂಗಗಳು, ಬುಶ್ ಬೇಬಿಗಳು ಮುಂತಾದ ಚಿಕ್ಕ ಗಾತ್ರದ ಪ್ರಾಣಿಗಳನ್ನು ಬೇಟೆಯಾಡಿ ಹಿಡಿದು ಜೀವಂತ ಹರಿದು ತಿಂದು ಹಾಕುತ್ತವೆ (ಚಿತ್ರ-6).

6. ಚಿಂಪಾಂಜಿಗಳ ಜೀವನ ಕ್ರಮ ಹೇಗೆ?
ಚಿಂಪಾಂಜಿಗಳದು ಸಾಂಘಿಕ ಜೀವನ ಕ್ರಮ. ಕೌಟುಂಬಿಕ ಗುಂಪುಗಳಲ್ಲಿ ಅವು ಬದುಕು ನಡೆಸುತ್ತವೆ. ವಯಸ್ಕ ಗಂಡು, ಹೆಣ್ಣು ಮತ್ತು ಶಿಶು ಚಿಂಪಾಂಜಿಗಳು ಎಲ್ಲ ಸೇರಿ ಪ್ರತಿ ಗುಂಪಿನ ಸದಸ್ಯರ ಸಂಖ್ಯೆ ಕನಿಷ್ಠ 10ರಿಂದ ಗರಿಷ್ಠ 150ರವರೆಗೂ ಇರುತ್ತದೆ. ಪ್ರತಿ ಗುಂಪಿಗೂ ಒಬ್ಬ ಯಜಮಾನ. ಯಜಮಾನನಾಗಿರಲು ದೇಹಬಲಕ್ಕಿಂತ ಬುದ್ಧಿಬಲಕ್ಕೇ ಹೆಚ್ಚು ಪ್ರಾಶಸ್ತ್ಯ! ಗುಂಪಿನ ಎಲ್ಲ ಪ್ರೌಢ ಹೆಣ್ಣುಗಳು ಒಪ್ಪುವ, ಇತರ ಗಂಡುಗಳ ಬಹುಮತ ಬೆಂಬಲ ಇರುವ, ಅತ್ಯಂತ ಬುದ್ಧಿವಂತ ಗಂಡು ಚಿಂಪಾಂಜಿಯೇ ಗುಂಪಿನ ಮುಂದಾಳು! ಹೊಸ ಹೊಸ ಆಹಾರ ಸಮೃದ್ಧ ತಾಣಗಳನ್ನು ಹುಡುಕಬಲ್ಲ, ಇಡಿ ಗುಂಪಿನ ಕ್ಷೇಮಕ್ಕೆ ಅತ್ಯಂತ ಸೂಕ್ತ ಉಪಾಯಗಳನ್ನು ರೂಪಿಸಬಲ್ಲ, ಗುಂಪಲ್ಲಿ ಆಗಾಗ ತಲೆದೋರುತ್ತಲೇ ಇರುವ ಜಗಳ-ಹೊಡೆದಾಟಗಳನ್ನು ಕ್ಷಿಪ್ರವಾಗಿ ಬಗೆಹರಿಸಬಲ್ಲ, ಬೇಟೆಯಾಡಲು ಯಶಸ್ವೀ ತಂತ್ರಗಳನ್ನು ಯೋಜಿಸಬಲ್ಲ... ಇಂಥವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ಚಾಣಾಕ್ಷನಷ್ಟೇ ಯಜಮಾನ. ಅಸಮರ್ಥನಾದೊಡನೆ ಪದಚ್ಯುತನಾಗಿ, ನಿವೃತ್ತನಾಗುವುದು ಅನಿವಾರ್ಯ!

ಚಿಂಪಾಂಜಿಗಳಲ್ಲಿ ತಾಯಿ-ಮಗು ಸಂಬಂಧ ತುಂಬ ಆತ್ಮೀಯ; ಶಿಶು ಪಾಲನೆಯಂತೂ ಮನುಷ್ಯರಲ್ಲಿರುವಂತೆಯೇ ಬಹು ದೀರ್ಘ. ಎಂಟು ತಿಂಗಳ ಗರ್ಭವಾಸದ ನಂತರ ಮರಿ ಜನಿಸುತ್ತದೆ. ಅವಳಿಗಳು ಅತ್ಯಪರೂಪ. ಹುಟ್ಟಿದಾಗ ಮಾನವ ಶಿಶುಗಳಂತೆಯೇ ಅತ್ಯಂತ ಅಸಹಾಯಕವಾಗಿರುವ ಮರಿ ಐದು ವರ್ಷಗಳವರೆಗೆ ತಾಯಿಯನ್ನೇ ಆಶ್ರಯಿಸಿ, ತಾಯಿಯ ಹಾಲನ್ನೇ ಕುಡಿದು, ತಾಯಿಯನ್ನೇ ಗಮನಿಸಿ ಅನುಕರಿಸಿ ಜೀವನ ತಂತ್ರಗಳನ್ನೆಲ್ಲ ಕಲಿಯುತ್ತದೆ (ಚಿತ್ರ- 9, 11).

ದಿನದ ಬಹುಭಾಗವನ್ನು ಚಿಂಪಾಂಜಿಗಳು ವೃಕ್ಷಗಳ ಮೇಲೆಯೇ ಕಳೆಯುತ್ತವೆ. ಆದರೂ, ನೆಲದ ಮೇಲೂ ಅವುಗಳ ಚಟುವಟಿಕೆ ಸಾಮಾನ್ಯ. ಎಂಟು-ಹತ್ತು ಸದಸ್ಯರು ಗುಂಪಾಗಿ, ವೃತ್ತ ಸರಪಳಿಯಾಗಿ ಕುಳಿತು ಹೇನು ಹೆಕ್ಕುತ್ತ ಒಂದರೊಡನೊಂದು ಹೆಚ್ಚು ಹೆಚ್ಚು ಆತ್ಮೀಯವಾಗುತ್ತವೆ. ಪ್ರತಿ ರಾತ್ರಿಯೂ ಎತ್ತರದ ವೃಕ್ಷಗಳ ಮೇಲೆ ರೆಂಬೆಗಳನ್ನೇ ಬಾಗಿಸಿ, ಜೋಡಿಸಿ ತಾವೇ ರಚಿಸಿಕೊಳ್ಳುವ ಎಲೆಗಳ ಹಾಸಿಗೆಯ ಮೇಲೆ ಮಲಗಿ ನಿದ್ರಿಸುವುದು ಚಿಂಪಾಂಜಿಗಳ ಮಲಗುವ ಕ್ರಮ.

7. ಪ್ರಾಣಿ ಪ್ರಪಂಚದಲ್ಲಿ ಚಿಂಪಾಂಜಿಗಳ ವೈಶಿಷ್ಟ್ಯಗಳು ಏನು?

ಚಿಂಪಾಂಜಿಗಳ ಜೊತೆ ಸ್ನೇಹ ಬೆಳೆಸಿ, ಅವುಗಳ ನೈಸರ್ಗಿಕ ಪರಿಸರದಲ್ಲೇ ಜೊತೆ ಜೊತೆಗೇ ವಾಸಿಸಿ, ವರ್ಷಗಳ ಕಾಲ ಅಭ್ಯಸಿಸಿ ಬಂದಿರುವ ವಿಜ್ಞಾನಿಗಳು ಮತ್ತು ಸಂಶೋಧಕರು ಅವುಗಳ ಹತ್ತಾರು ಅನನ್ಯ ಗುಣಗಳನ್ನು, ಸಾಮರ್ಥ್ಯಗಳನ್ನು, ನಡವಳಿಕೆಗಳನ್ನು ಪತ್ತೆಹಚ್ಚಿದ್ದಾರೆ. ಅಂಥವರಲ್ಲಿ ಅಗ್ರಮಾನ್ಯ, ಜಗದ್ವಿಖ್ಯಾತ ವಿಜ್ಞಾನಿ ಡಾ. ಜೇನ್ ಗುಡ್ಡಾಲ್. ಅವರಂತಹ ತಜ್ಞರು ನಡೆಸಿದ ಹಲವು ದಶಕಗಳ ನಿರಂತರ ಗಾಢ-ವಿಸ್ತೃತ ಅಧ್ಯಯನಗಳು ಸ್ಪಷ್ಟಪಡಿಸಿರುವ ಚಿಂಪಾಂಜಿ ವೈಶಿಷ್ಟ್ಯಗಳು ಹಲವಾರು. ಅವುಗಳಿಂದ ಆಯ್ದ ಕೆಲ ಪ್ರಮುಖ ಅಂಶಗಳು:

*ಮನದಲ್ಲೇಳುವ ಭಾವನೆಗಳನ್ನು - ಅಂದರೆ, ಕೋಪ, ದ್ವೇಷ, ಭಯ, ಚಿಂತೆ, ಸಂತಸ, ಸ್ನೇಹ, ಕುತೂಹಲ, ಕರುಣೆ, ಪ್ರೀತಿ, ಶರಣಾಗತಿ ಇತ್ಯಾದಿಗಳನ್ನು - ಚಿಂಪಾಂಜಿಗಳು ಅತ್ಯಂತ ಸ್ಪಷ್ಟ ಸಂಜ್ಞೆಗಳ ಮತ್ತು ಮುಖ ಭಾವಗಳ ಮೂಲಕ ಅಭಿವ್ಯಕ್ತಿಸುತ್ತವೆ (ಚಿತ್ರ-7, 8, 10, 13).

*ಹಲವು ಮಾನುಷ ಭಾವಗಳು ಮತ್ತು ನಡವಳಿಕೆಗಳು ಚಿಂಪಾಂಜಿಗಳಲ್ಲಿ ಗಾಢವಾಗಿ ಪ್ರಕಟಗೊಳ್ಳುತ್ತಲೇ ಇರುತ್ತವೆ. ಮುದಿ ಹೆಣ್ಣು ಚಿಂಪಾಂಜಿಯೊಂದು ಮೂರು ಅನಾಥ ಮರಿಗಳನ್ನು ದತ್ತು ಸ್ವೀಕರಿಸಿದ್ದು, ವೃದ್ಧ ಚಿಂಪಾಂಜಿಯೊಂದನ್ನು ಅದರ ಹಳೆಯ ಮಿತ್ರರೇ ಕಗ್ಗೊಲೆಗೈದಿದ್ದು, ತನ್ನ ತಾಯಿಯ ಸಾವಿನ ಶೋಕವನ್ನು ಭರಿಸಲಾರದೆ ಮರಿಯೊಂದು ಪ್ರಾಣ ಬಿಟ್ಟಿದ್ದು, ಎದುರಾಳಿ ತಂಡವೊಂದನ್ನು ಚಿಂಪಾಂಜಿ ಗುಂಪೊಂದು ಬಗ್ಗು ಬಡಿದು ಅವನ್ನೆಲ್ಲ ಕೊಂದು ತಿಂದು ‘ಸ್ವಜನ ಭಕ್ಷಣೆ’ಯ ಭೀಕರತೆಯನ್ನು ಪ್ರದರ್ಶಿಸಿದ್ದು, ಮರಿಯೊಂದನ್ನು ಒತ್ತೆಯಾಳನ್ನಾಗಿ ಹಿಡಿದು ಅದರ ತಾಯಿಯನ್ನು ಶರಣಾಗಿಸಿಕೊಂಡಿದ್ದು, ಮೈದುಂಬಿ ಧುಮುಕುತ್ತಿದ್ದ ಜಲಪಾತವನ್ನು ಕಂಡು ಅಚ್ಚರಿ ತುಂಬಿದ ಸಂತಸವನ್ನು ವ್ಯಕ್ತಪಡಿಸಿದ್ದು... ಇಂಥ ಹಲವಾರು ಅಚ್ಚರಿಗಳನ್ನು ಜೇನ್ ಗುಡ್ಡಾಲ್ ವರದಿ ಮಾಡಿದ್ದಾರೆ!

*ಉಪಕರಣಗಳನ್ನು ಬಳಸುವುದರಲ್ಲೂ, ತಾವೇ ರೂಪಿಸುವುದರಲ್ಲೂ ಈ ವಾನರರು ಅದ್ಭುತ ಕೌಶಲ್ಯ ಪಡೆದಿವೆ. ಶತ್ರುಗಳನ್ನು ಬೆದರಿಸಲು ಚಿಂಪಾಂಜಿಗಳು ಕಲ್ಲುಗಳನ್ನು ಎಸೆಯುತ್ತವೆ; ಕೋಲು ಹಿಡಿದು ಅಟ್ಟಿಸುತ್ತವೆ! ಮನುಷ್ಯರನ್ನು ಬಿಟ್ಟು ಬೇರಾವ ಪ್ರಾಣಿಗೂ ತಿಳಿಯದ ಇಂಥ ತಂತ್ರಗಳು ಎಂಥ ಬಲಿಷ್ಠ ದಾಳಿಕೋರರನ್ನೂ ಹೆದರಿಸಿ, ಹಿಮ್ಮೆಟ್ಟಿಸುತ್ತವೆ.

*ಗಟ್ಟಿ ಕಾಯಿಗಳೊಳಗಿನ ಬೀಜ ಬಿಡಿಸಲು ಚಿಂಪಾಂಜಿಗಳು ಕಲ್ಲಿನಿಂದ ಕುಟ್ಟುತ್ತವೆ; ವೃಕ್ಷ ಪೊಟರೆಗಳಲ್ಲಿ ಕೈಗೆಟುಕದಷ್ಟು ಆಳಗಳಲ್ಲಿ ಸಂಗ್ರಹವಾದ ನೀರನ್ನು ಎಲೆಗಳಿಂದ ಕೂಡಿದ ಉದ್ದ ರೆಂಬೆಗಳನ್ನು ಅದ್ದಿ ಮೇಲೆತ್ತಿ ಕುಡಿಯುತ್ತವೆ! ಗುಂಪಾಗಿ ಹಾರಾಡುವ ಕೀಟಗಳನ್ನು ಕೈ ಚಾಚಿ ಹಿಡಿಯುವುದು (ಚಿತ್ರ-5), ಹುತ್ತದೊಳಗಿನ ಗೆದ್ದಲುಗಳಿಗೆ ಉದ್ದದ ಕಡ್ಡಿಯ ಗಾಳ ಹಾಕಿ ಹಿಡಿದು ತಿನ್ನುವುದು (ಚಿತ್ರ-4) ಈ ವಾನರರ ಪರಮ ಪ್ರಿಯ ಹವ್ಯಾಸ.

*ಮುಳ್ಳು ತುಂಬಿದ ಪ್ರದೇಶಗಳಲ್ಲಿ ಚಿಂಪಾಂಜಿಗಳು ಎಲೆ ಸಹಿತ ಸಸ್ಯ ರೆಂಬೆಗಳನ್ನು ಚಪ್ಪಲಿಗಳಂತೆ ಪಾದಗಳಲ್ಲಿ ಹಿಡಿದು ನಡೆದಾಡುತ್ತವೆ! ಹೊಟ್ಟೆ ನೋವಿಗೆ, ಅಜೀರ್ಣಕ್ಕೆ ‘ಔಷಧ’ವಾಗಿ ಕೆಲವು ನಿರ್ದಿಷ್ಟ ಗಿಡ-ಮರಗಳ ಎಲೆ-ತೊಗಟೆ-ಬೇರುಗಳನ್ನು ಸೇವಿಸುತ್ತವೆ!

*ಗುಂಪಿನಿಂದ ಗುಂಪಿಗೆ ವಯಸ್ಕ ಹೆಣ್ಣುಗಳು ವಿನಿಮಯಗೊಳ್ಳುವುದು ಚಿಂಪಾಂಜಿ ಕುಟುಂಬಗಳಲ್ಲಿ ಸರ್ವೇ ಸಾಮಾನ್ಯ. ಹಾಗಾದಾಗಲೆಲ್ಲ ಹೊಸದಾಗಿ ಸೇರ್ಪಡೆಯಾದ ಹೆಣ್ಣಿನಿಂದ ಅದರ ಹಿಂದಿನ ತಂಡದ ಎಲ್ಲ ಹೊಸ ತಂತ್ರ - ಶೋಧಗಳನ್ನೂ ಸ್ವಲ್ಪ ಕಾಲದಲ್ಲೇ ಹೊಸ ತಂಡದ ಎಲ್ಲ ಸದಸ್ಯರೂ ಕಲಿತುಬಿಡುತ್ತವೆ!

*ತರಬೇತು ನೀಡಿದರಂತೂ ಚಿಂಪಾಂಜಿಗಳು ಮನುಷ್ಯರ ಕೌಶಲ್ಯಗಳನ್ನೂ, ‘ಭಾಷೆ’ಗಳನ್ನೂ ಅಷ್ಟಿಷ್ಟು ಕಲಿಯಬಲ್ಲವು. ಕಿವುಡ-ಮೂಗರ ಸಂಜ್ಞಾ ಭಾಷೆಯ 132 ಸಂಕೇತಗಳನ್ನು ಲೀಲಾಜಾಲವಾಗಿ ಕಲಿತ ಚಿಂಪಾಂಜಿ ‘ವಾಷೋ’, ನಾಲ್ಕೈದು ಪದಗಳನ್ನು ಉಚ್ಚರಿಸಲು ಕಲಿತ ‘ಕೋಕೋ’ ಅಂಥ ಎರಡು ನಿದರ್ಶನಗಳು!

8. ಪ್ರಸ್ತುತ ಚಿಂಪಾಂಜಿಗಳ ಸಂಖ್ಯೆ ಎಷ್ಟಿದೆ? ಅವುಗಳ ಪ್ರಸ್ತುತ ಪರಿಸ್ಥಿತಿ ಹೇಗಿದೆ?

ತಮ್ಮ ನೈಸರ್ಗಿಕ ನೆಲೆಗಳಲ್ಲಿ ಹಿಂದೆ ಭಾರೀ ಸಂಖ್ಯೆಯಲ್ಲಿ ಸಮೃದ್ಧವಾಗಿದ್ದು ನೆಮ್ಮದಿಯ ಬಾಳುವೆ ನಡೆಸುತ್ತಿದ್ದ ಈ ವಾನರರ ಸಂಖ್ಯೆ ಕಳೆದ ಕೆಲವು ದಶಕಗಳಿಂದ ಕ್ಷಿಪ್ರವಾಗಿ ಕ್ಷೀಣಿಸುತ್ತಿದೆ. ತಜ್ಞರ ಗಣತಿಗಳ ಪ್ರಕಾರ ಚಿಂಪಾಂಜಿಗಳ ಈಗಿನ ಒಟ್ಟು ಸಂಖ್ಯೆ ಕನಿಷ್ಠ ಒಂದೂವರೆ ಲಕ್ಷ ಮತ್ತು ಗರಿಷ್ಠ ಮೂರು ಲಕ್ಷದಷ್ಟಿದೆ, ಅಷ್ಟೆ. ಹಾಗಾಗಿ ಅವು ಅಳಿವ ಅಪಾಯದಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿವೆ. ಚಿಂಪಾಂಜಿಗಳಿರುವ ಪ್ರದೇಶಗಳಲ್ಲಿ ನಡೆದಿರುವ ಅರಣ್ಯ ನಾಶ, ‘ವನ್ಯ ಮಾಂಸ’ಕ್ಕಾಗಿ ವ್ಯಾಪಕವಾಗಿರುವ ಕಳ್ಳ ಬೇಟೆ ಮುಂತಾದ ದುಷ್ಟ ವಿಕೃತ ಮಾನವ ಚಟುವಟಿಕೆಗಳು ಚಿಂಪಾಂಜಿಗಳನ್ನು ವಿನಾಶದ ಅಂಚಿಗೆ ತಂದಿವೆ. ಎಂಥ ದುರಂತ! ಅಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !